ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾಗಳಲ್ಲಿ ಕನ್ನಡ ನೆಲದ ಅಸ್ಮಿತೆ ಇಲ್ಲ: ಗಿರೀಶ್‌ ಕಾಸರವಳ್ಳಿ ಬೇಸರ

Last Updated 21 ಆಗಸ್ಟ್ 2021, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡದಲ್ಲಿ ಪ್ರಸ್ತುತ ಬರುತ್ತಿರುವ ಹೊಸ ರೀತಿಯ ಸಿನಿಮಾಗಳಲ್ಲೂ ಆರಿಸಿಕೊಳ್ಳುತ್ತಿರುವ ವಸ್ತು ಕನ್ನಡ ನೆಲದಿಂದ ಹುಟ್ಟುತ್ತಿಲ್ಲ. ಕನ್ನಡ ನೆಲದ ಅಸ್ಮಿತೆಯನ್ನು ನಿರ್ದೇಶಕರು ಕೈಗೆತ್ತಿಕೊಳ್ಳುತ್ತಿಲ್ಲ. ಇದು ಕನ್ನಡ ಚಿತ್ರೋದ್ಯಮಕ್ಕೆ ತಟ್ಟಿರುವ ದೊಡ್ಡ ಶಾಪ’.

– ಹೀಗೆಂದು ‘ಪ್ರಜಾವಾಣಿ ಸೆಲೆಬ್ರಿಟಿ ಲೈವ್‌’ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು ಹಿರಿಯ ನಿರ್ದೇಶಕ ಗಿರೀಶ್‌ ಕಾಸರವಳ್ಳಿ. ರಾಜ್ಯದಲ್ಲಿ ದಲಿತ ಹಾಗೂ ರೈತ ಚಳವಳಿ, ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಹೋರಾಟ ಹೀಗೆ ಸಮಾಜದಲ್ಲಿ ಹಲವು ಘಟನೆಗಳು ನಡೆದರೂ ಈ ಕುರಿತು ಪ್ರಬಲವಾದ ಸಿನಿಮಾಗಳು ಏಕೆ ಬರಲಿಲ್ಲ ಎನ್ನುವ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.

‘ಯಾವಾಗ ನಮ್ಮ ಕನ್ನಡ ಚಿತ್ರರಂಗ ರಿಮೇಕ್‌, ಡಬ್ಬಿಂಗ್‌ಗೆ ಒಗ್ಗುತ್ತಾ ಹೋಯಿತೋ ಆವಾಗಿನಿಂದ ಈ ರೀತಿಯ ಹುಡುಕಾಟ ಬಿಟ್ಟುಬಿಟ್ಟಿದ್ದಾರೆ. ರಿಮೇಕ್‌ ಮಾಡುವವರು ಯಾವುದು ಹೆಚ್ಚು ಹಣವನ್ನು ತರಬಲ್ಲದು ಎಂದು ನೋಡುತ್ತಾರೆಯೇ ಹೊರತು ನಮ್ಮ ನೆಲದ ಕಥೆ ಏನಿದೆ, ನಮ್ಮ ಪರಿಸರದಲ್ಲಿ ಏನಾಗುತ್ತಿದೆ ಎಂದು ಹುಡುಕಲು ಹೋಗುವುದಿಲ್ಲ. ತಮಿಳು, ತೆಲುಗಿನಲ್ಲಿ ಏನಾಗುತ್ತಿದೆ ಎಂದು ನೋಡಿಕೊಂಡು ಅದನ್ನು ಅನುಸರಿಸುತ್ತಿದ್ದೇವೆಯೇ ಹೊರತು ನಮ್ಮ ನೆಲದಲ್ಲಿ, ಸಮಾಜದಲ್ಲಿ ಏನಾಗುತ್ತಿದೆ ಎಂದು ನೋಡಿಕೊಂಡು ಸಿನಿಮಾ ಮಾಡುತ್ತಿಲ್ಲ’ ಎಂದರು.

‘ಕನ್ನಡ ಚಿತ್ರಗಳಲ್ಲಿ ಕನ್ನಡ ಅಸ್ಮಿತೆ ಎತ್ತಿಕೊಂಡು ಸಿನಿಮಾ ಮಾಡಿದ್ದರೆ ಅದು ಕನ್ನಡಕ್ಕೆ ಮನ್ನಣೆ ತರುವ ನಡೆ ಆಗುತ್ತಿತ್ತು. ಮರಾಠಿ, ತಮಿಳಿನಲ್ಲಿನ ಬೇರೆ ಬೇರೆ ರೀತಿಯ ಪ್ರಯತ್ನಗಳು ನಮಗೆ ಉತ್ತೇಜನವಾಗಬೇಕು’ ಎಂದು ಆಶಿಸಿದರು.

‘ಸಿನಿಮಾ ನೇರವಾಗಿ ರಾಜಕೀಯವನ್ನು ಎತ್ತಿಹಿಡಿದರಷ್ಟೇ ರಾಜಕೀಯ ಸಿನಿಮಾ ಎನ್ನುವ ತಪ್ಪುಕಲ್ಪನೆ ಇದೆ. ಇದು ಅಲ್ಲವೇ ಅಲ್ಲ. ರಾಜಕೀಯ ಎನ್ನುವುದು ಸೈದ್ಧಾಂತಿಕ ನಿಲುವು ಆಗಿರಬಹುದು, ರಾಜಕೀಯ ವ್ಯವಸ್ಥೆ ಆಗಿರಬಹುದು ಅಥವಾ ನಮ್ಮ ದೈನಂದಿನ ವ್ಯವಹಾರದಲ್ಲೂ ರಾಜಕೀಯವಿದೆ. ಇದು ಗಮನಕೊಡಬೇಕಾದ ಅಂಶಗಳು. ಸತ್ಯಜಿತ್‌ ರೇ ಅವರ ಸಿನಿಮಾಗಳಲ್ಲಿ ಘೋಷಿತ ಯಾವುದೇ ರಾಜಕೀಯ ಹೇಳಿಕೆ ನೀಡದೇ ಇದ್ದರೂ ಅಂತರಾತ್ಮದಲ್ಲಿ ಹೆಚ್ಚು ರಾಜಕೀಯವಾಗಿರುತ್ತದೆ. ಇದು ನನಗೆ ಸ್ಫೂರ್ತಿ ಹಾಗೂ ಮಾದರಿ. ನನಗೆ ಈ ರೀತಿ ಕಥೆ ಕಟ್ಟುವುದನ್ನು ಕಲಿಸಿಕೊಟ್ಟಿರುವುದೇ ನಾನು ಕಲಿತ ಪುಣೆಯ ಫಿಲ್ಮ್‌ ಇನ್‌ಸ್ಟಿಟ್ಯೂಟ್‌, ನೋಡಿದ ಜಾಗತಿಕ ಸಿನಿಮಾಗಳು ಹಾಗೂ ಅನೇಕ ಸಾಹಿತ್ಯ ಕೃತಿಗಳು’ ಎಂದರು ಕಾಸರವಳ್ಳಿ.

ಮೊದಲ ಸಿನಿಮಾ ನೆನಪು: ‘ಘಟಶ್ರಾದ್ಧ’ ಸಿನಿಮಾ ಮಾಡುವಾಗ ಇದೊಂದು ಮುಖ್ಯವಾದ ಸಿನಿಮಾ ಆಗುತ್ತದೆ ಎನ್ನುವ ಕಲ್ಪನೆ ಇರಲಿಲ್ಲ. ಇದು ಭಾಗ್ಯದ ಬಾಗಿಲು ತೆರೆದ ಸಿನಿಮಾ ಎನ್ನಬಹುದು. ಅತಿ ಕಡಿಮೆ ಬಜೆಟ್‌ನಲ್ಲಿ ಮಾಡಿದ ಸಿನಿಮಾ ರಾಜ್ಯದ ಐದು ಕೇಂದ್ರಗಳಲ್ಲಿ 50 ದಿನ ಓಡಿತ್ತು. ಬೆಂಗಳೂರಿನಲ್ಲೇ 75 ದಿನ ಚಿತ್ರ ಓಡಿತ್ತು. ಈಗ ಚಿತ್ರ ಎಷ್ಟು ಕೋಟಿ ಹಣ ಮಾಡಿತು ಎನ್ನುವುದು ಚಿತ್ರದ ಯಶಸ್ಸಿನ ಮಾನದಂಡವಾಗಿದ್ದರೆ, ಆ ಕಾಲದಲ್ಲಿ ಎಷ್ಟು ಜನರನ್ನು ಚಿತ್ರ ತಲುಪಿತು ಎನ್ನುವುದು ಚಿತ್ರದ ಯಶಸ್ಸಿನ ಮಾನದಂಡವಾಗಿತ್ತು. ನಾನು ಧೈರ್ಯವಾಗಿ ಹೇಳುತ್ತೇನೆ. ನನ್ನೆಲ್ಲ ಚಿತ್ರಗಳಲ್ಲಿ ನಿರ್ಮಾಪಕರು ಹಾಕಿದ ದುಡ್ಡು ಅವರಿಗೆ ವಾಪಸ್‌ ಬಂದಿದೆ ಎಂದು ನೆನಪಿಸಿಕೊಂಡರು ಗಿರೀಶ್‌ ಕಾಸರವಳ್ಳಿ.

‘ಸದ್ಯಕ್ಕೆ ಎರಡು ಮೂರು ಕಥೆ ಇಟ್ಟುಕೊಂಡಿದ್ದೇನೆ. ಕೋವಿಡ್‌ನ ಈ ಸ್ಥಿತಿಯಲ್ಲಿ ಚಿತ್ರ ಮಾಡಿದರೂ ಮುಂದೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಆತ್ಮಕತೆ ಬರೆಯುವ ಯೋಚನೆ ಇಲ್ಲ. ಪ್ರತಿಯೊಂದು ಸಿನಿಮಾದ ಹಿಂದಿನ ಶ್ರಮ, ಆಲೋಚನಾ ಪ್ರಕ್ರಿಯೆಗಳನ್ನು ಸಿನಿಮಾಗ್ರಫಿ ಬರೆಯಬೇಕು ಎಂದುಕೊಂಡಿದ್ದೇನೆ’ ಎಂದರು. ಸಂದರ್ಶನದ ವೇಳೆ ನಿರ್ಮಾಪಕ ಸದಾನಂದ ಸುವರ್ಣ, ಛಾಯಾಗ್ರಾಹಕ ಎಸ್‌.ರಾಮಚಂದ್ರ ಹಾಗೂ ನಿರ್ದೇಶಕ ಬಿ.ವಿ.ಕಾರಂತರ ಜೊತೆಗಿನ ಒಡನಾಟವನ್ನೂ ಕಾಸರವಳ್ಳಿಯವರು ಸ್ಮರಿಸಿದರು.

ಗಂಟಲುಬ್ಬಿಸಿದ ವೈಶಾಲಿ ನೆನಪು

‘ಘಟಶ್ರಾದ್ಧ’ ಸಿನಿಮಾ ಆಗುವಾಗ ನಾನಿನ್ನೂ ಮದುವೆ ಆಗಿರಲಿಲ್ಲ. ನಂತರದ ಎಲ್ಲ ಸಿನಿಮಾಗಳಲ್ಲೂ ವೈಶಾಲಿ ಒಂದಲ್ಲ ಒಂದು ರೀತಿಯಲ್ಲಿ ಭಾಗವಾಗಿದ್ದಳು. ಒಂದು ಚಿತ್ರಕಥೆ ಬರೆದ ಮೇಲೆ ಅದನ್ನು ಮೊದಲು ಓದುತ್ತಿದ್ದುದು ವೈಶಾಲಿಯೇ. ಆಕೆಯ ಪ್ರತಿಕ್ರಿಯೆಗೆ ಮಾನ್ಯತೆ ಕೊಡುತ್ತಿದ್ದೆ. ಏಕೆಂದರೆ ಅವಳಿಗೆ ಆ ಸಿನಿಮಾ ಕೃತಿಯಾಗಿ ರುಚಿಸುತ್ತದೆಯೇ ಇಲ್ಲವೇ ಎನ್ನುವುದು ಅರ್ಥವಾಗುತ್ತಿತ್ತು. ಜೊತೆಗೆ ಸಿನಿಮಾದ ರಾಜಕೀಯ ಅವಳಿಗೆ ತಿಳಿಯುತ್ತಿತ್ತು. ಈ ಕಾರಣಕ್ಕೆ ಚಿತ್ರಕಥೆಯ ಹಂತದಲ್ಲಿ ಮುಖ್ಯ ಪಾತ್ರವನ್ನು ಆಕೆ ವಹಿಸುತ್ತಿದ್ದಳು. ನನ್ನ ಬಹುತೇಕ ಸಿನಿಮಾದ ವಸ್ತ್ರವಿನ್ಯಾಸಕಿಯಾಗಿದ್ದಳು. ಒಂದೆರಡು ಸಿನಿಮಾಗಳಲ್ಲಿ ಸಹ ನಿರ್ದೇಶಕಿಯಾಗಿಯೂ ಆಗಿ ಕಾರ್ಯನಿರ್ವಹಿಸಿದ್ದಳು. ‘ಕೂರ್ಮಾವತಾರ’ ಮಾಡುವಷ್ಟರ ಹೊತ್ತಿಗೆ ಆಕೆ ಇರಲಿಲ್ಲ ಎಂದು ಗದ್ಗದಿತರಾದರು ಗಿರೀಶ್‌ ಕಾಸರವಳ್ಳಿ.

ಪೂರ್ಣ ಸಂದರ್ಶನ: https://bit.ly/2UAoeaq

https://bit.ly/3sCa715

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT