ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾವದಿಂದ ಈ ಪ್ರಶಸ್ತಿ ಪಡೆಯುವುದು ಅಸಾಧ್ಯ: ನಟ ಸುಂದರ್‌ರಾಜ್‌

Published 27 ಮೇ 2023, 0:46 IST
Last Updated 27 ಮೇ 2023, 0:46 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರ ನೀಡುವ ಚಲನಚಿತ್ರ ಪ್ರಶಸ್ತಿಗಳಲ್ಲಿ ಕೆಲವೊಮ್ಮೆ ಪ್ರಭಾವ ಕೆಲಸ ಮಾಡಬಹುದು. ಆದರೆ ‘ಪ್ರಜಾವಾಣಿ ಸಿನಿ ಸಮ್ಮಾನ’ ಅತ್ಯಂತ ಪಾರದರ್ಶಕವಾಗಿದ್ದು, ಈ ಪ್ರಶಸ್ತಿಯನ್ನು ಪ್ರಭಾವ ಬಳಸಿ ಪಡೆಯಲು ಸಾಧ್ಯವಿಲ್ಲ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಹಾಗೂ ಹಿರಿಯ ನಟ ಸುಂದರ್‌ರಾಜ್‌ ಹೇಳಿದರು.

ನಗರದ ಮಲಬಾರ್‌ ಚಿನ್ನಾಭರಣ ಮಳಿಗೆಯಲ್ಲಿ ಶುಕ್ರವಾರ ನಡೆದ ‘ಪ್ರಜಾವಾಣಿ ಸಿನಿಸಮ್ಮಾನ’ದ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಪ್ರಜಾವಾಣಿ ಪತ್ರಿಕೆಗೆ 75 ವರ್ಷವಾಗಿದೆ. ನಾನು 1960ರಿಂದ ಈ ಪತ್ರಿಕೆಯ ಓದುಗ. ಕನ್ನಡದ ಮನೆ, ಮನಸ್ಸುಗಳನ್ನು ತಲುಪಿರುವ ಪತ್ರಿಕೆಯಿದು. ಯಾವ ಉತ್ಪನ್ನ ಖರೀದಿಸಬೇಕಿದ್ದರೂ ಅದರ ಜೀವಿತಾವಧಿ, ಬ್ರ್ಯಾಂಡ್‌ ನೇಮ್‌ ನೋಡುತ್ತೇವೆ. ಹಾಗೆಯೇ ಪ್ರಜಾವಾಣಿ ಇವತ್ತು ಒಂದು ಬ್ರ್ಯಾಂಡ್‌. ಇಂತಹ ಪತ್ರಿಕೆ ನೀಡುವ ಪ್ರಶಸ್ತಿ ಅತ್ಯಂತ ಮೌಲ್ಯಯುತವಾಗಿದ್ದು, ಇಲ್ಲಿ ಯಾರ ಪ್ರಭಾವವೂ ನಡೆಯುವುದಿಲ್ಲ’ ಎಂದರು.

‘ಬಡವನಿಂದ ಹಿಡಿದು ಮಹಾರಾಜನವರೆಗೆ ಎಲ್ಲರೂ ಸಿನಿಮಾ ನೋಡುತ್ತಾರೆ. ವಿಶ್ವದಲ್ಲಿ ಅತ್ಯಂತ ಅಗ್ಗವಾಗಿ ಸಿಗುವ ಮನರಂಜನೆಯೆಂದರೆ ಸಿನಿಮಾ. ಇಂದು ಸಿನಿಮಾ ಜಗತ್ತು 75 ಎಂಎಂ ನಿಂದ 7 ಇಂಚಿನ ಮೊಬೈಲ್‌ಗೆ ಬಂದು ನಿಂತಿದೆ. ಇಂತಹ ಕ್ಷೇತ್ರದ ಪ್ರತಿಭೆಗಳನ್ನು ಗೌರವಿಸುವ ಪ್ರಜಾವಾಣಿಯ ಹೆಜ್ಜೆ, ಅದಕ್ಕೆ ಮಲಬಾರ್‌ ಗೋಲ್ಡ್‌ ಕೈಜೋಡಿಸಿರುವುದು ಅತ್ಯಂತ ಶ್ಲಾಘನೀಯ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ಕಾರ್ಯದ ಜೊತೆಗಿರುತ್ತದೆ’ ಎಂದು ಸುಂದರ್‌ರಾಜ್‌ ಆಶ್ವಾಸನೆ ನೀಡಿದರು.

ಗೋಲ್ಡ್‌ ಜೊತೆಗೆ ಪ್ಲಾಟಿನಂ‌: ಕಾರ್ಯಕ್ರಮದಲ್ಲಿ ಮಾತನಾಡಿದ ‘ಪ್ರಜಾವಾಣಿ’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ‘ಮಲಬಾರ್‌ನಲ್ಲಿ ಗೋಲ್ಡ್‌ ಮತ್ತು ಡೈಮಂಡ್‌ ಇದೆ. ಪ್ರಜಾವಾಣಿಗೆ 75ರ ಸಂಭ್ರಮ. ಹೀಗಾಗಿ ಮಲಬಾರ್‌ ಜೊತೆ ನಮ್ಮ ಪ್ಲಾಟಿನಂ ಸೇರಿ ಈ ಸಿನಿಮಾ ಸಮ್ಮಾನ ಯಶಸ್ವಿಯಾಗಲಿದೆ. ಕನ್ನಡ ಚಿತ್ರೋದ್ಯಮಕ್ಕೆ ಗಂಭೀರವಾದ ಪ್ರಶಸ್ತಿ ನೀಡುವ ಅಮೃತ ಗಳಿಗೆಯಿದು’ ಎಂದರು.

ಮಲಬಾರ್‌ ಗೋಲ್ಡ್‌ನ ಪ್ರಾದೇಶಿಕ ಮುಖ್ಯಸ್ಥ ಫಿಲ್ಸರ್‌ ಬಾಬು ಮಾತನಾಡಿ, ‘ಸಿನಿ ಸಮ್ಮಾನದ ಭಾಗವಾಗಲು ಸಂತಸವಾಗುತ್ತಿದೆ. ಮೂರು ದಶಕಗಳಿಂದ ನಮ್ಮ ಸಂಸ್ಥೆ ಉದ್ಯಮದಲ್ಲಿದ್ದು, ಪ್ರಜಾವಾಣಿಯಂತಹ ಪತ್ರಿಕೆ ಜೊತೆಗಿನ ನಮ್ಮ ಒಡನಾಟ ಸುದೀರ್ಘವಾದುದು. ನಮ್ಮ 34 ಮಳಿಗೆಗಳ ಎಲ್ಲ ಗ್ರಾಹಕರಿಗೂ ಪ್ರಶಸ್ತಿಯ ವಿಷಯ ತಲುಪಿದೆ’ ಎಂದು ಹೇಳಿದರು.

‘ಪ್ರಜಾವಾಣಿ ಸಿನಿಸಮ್ಮಾನ’ದ ಮುಖ್ಯ ತೀರ್ಪುಗಾರರಲ್ಲಿ ಒಬ್ಬರಾಗಿರುವ ಶ್ರುತಿ ಹರಿಹರನ್‌, ಚಿತ್ರನಟಿ ಭಾವನಾರಾವ್‌ ಹಾಗೂ ಮಲಬಾರ್‌ ಗೋಲ್ಡ್‌ನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮಹತ್ವದ ಜವಾಬ್ದಾರಿ

‘ಪ್ರಜಾವಾಣಿ ಪತ್ರಿಕೆ ಕಲಾವಿದೆಯಾಗಿ ನನ್ನನ್ನು ಸದಾ ಪ್ರೋತ್ಸಾಹಿಸಿದೆ. ವೈಯಕ್ತಿಕ ಬದುಕಿನ ಭಾಗವೂ ಆಗಿದೆ. ಮೊದಲಿನಿಂದ ಪತ್ರಿಕೆಗೊಂದು ಮೌಲ್ಯವಿದೆ. ಇಂತಹ ಪತ್ರಿಕೆ ನಡೆಸುತ್ತಿರುವ ಸಿನಿ ಸಮ್ಮಾನದ ತೀರ್ಪುಗಾರರ ಸಮಿತಿಯ ಭಾಗವಾಗಿರುವುದು ಅತ್ಯಂತ ಸಂತಸದ ಸಂಗತಿ. ಕನ್ನಡದಲ್ಲಿ ಇವತ್ತು ಹಲವು ಅತ್ಯುತ್ತಮ ಚಿತ್ರಗಳು ಬರುತ್ತಿವೆ. ಇದರ ನಡುವೆ ಪ್ರಶಸ್ತಿಗಾಗಿ ಕೆಲ ಸಿನಿಮಾಗಳನ್ನು, ಪ್ರತಿಭೆಗಳನ್ನು ಆಯ್ಕೆ ಮಾಡುವುದು ಸವಾಲು ಮತ್ತು ಮಹತ್ವದ ಜವಬ್ದಾರಿಯಾಗಿತ್ತು. ಈ ಕಾರ್ಯಕ್ರಮಕ್ಕಾಗಿ ಕಾಯುತ್ತಿದ್ದೇನೆ’ ಎಂದು ‘ಪ್ರಜಾವಾಣಿ ಸಿನಿಸಮ್ಮಾನ’ದ ಮುಖ್ಯ ತೀರ್ಪುಗಾರ ಮಂಡಳಿ ಸದಸ್ಯೆ ಶ್ರುತಿ ಹರಿಹರನ್‌ ಹೇಳಿದರು. 

ಅತ್ಯಂತ ಸೂಕ್ತ ಹೆಜ್ಜೆ

‘ಸಮಾಜದ ಎಲ್ಲ ಸ್ತರದವರನ್ನು ತಲುಪುವ, ಸ್ಫೂರ್ತಿ ನೀಡುವ, ಮನರಂಜಿಸುವ, ಒಟ್ಟಾಗಿಸುವ ಶಕ್ತಿ ಸಿನಿಮಾಕ್ಕಿದ್ದು, ಇಂತಹ ಮಾಧ್ಯಮವನ್ನು ಪ್ರಶಸ್ತಿ ಮೂಲಕ ಸಂಭ್ರಮಿಸುವುದು ಅತ್ಯಂತ ಸೂಕ್ತ ಹೆಜ್ಜೆ. ‘ಪ್ರಜಾವಾಣಿ ಸಿನಿ ಸಮ್ಮಾನ’ದ ಭಾಗವಾಗಿ ಬೆಳೆಯುತ್ತಿರುವ ಪ್ರತಿಭೆಗಳನ್ನು ಗೌರವಿಸುವುದು ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌ ಕುಟುಂಬಕ್ಕೆ ಒಂದು ಅತ್ಯದ್ಭುತ ಅನುಭವ. ಪ್ರಾಯೋಜಕತ್ವದ ಹೊರತಾಗಿ ಚಂದನವನದ ಸಿನಿಮಾಗಳೊಂದಿಗಿನ  ಸಹಭಾಗಿತ್ವವು ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಬೆಳೆಸುವಲ್ಲಿ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಸಂಸ್ಥೆಯ ಅಧ್ಯಕ್ಷನಾಗಿ ಕಲಾವಿದರನ್ನು ಗೌರವಿಸಲು ಹೆಮ್ಮೆ ಎನಿಸುತ್ತಿದೆ’ ಎಂದು ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌ನ ಅಧ್ಯಕ್ಷ ಎಂ.ಪಿ.ಅಹಮ್ಮದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT