ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಸಿನಿಮಾದಲ್ಲಿ ಮೋಹನ್‌ಲಾಲ್‌, ಪ್ರಣವ್‌

Last Updated 28 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

‘ಒಡಿಯನ್‌’ ಯಶಸ್ಸು, ‘ಲೂಸಿಫರ್‌’ ಟ್ರೇಲರ್‌ ಕಾತರ ಹೆಚ್ಚಿಸಿರುವ ಬೆನ್ನಲ್ಲೇ ನಟ ಮೋಹನ್‌ಲಾಲ್‌ ಅವರು ‘ಮರಕ್ಕರ್‌: ಅರಬಿ ಕಡಲಿಂಟೆ ಸಿಂಹಮ್‌‘ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಮಗ ಪ್ರಣವ್‌ ಮೋಹನ್‌ಲಾಲ್‌ ಜೊತೆ ಮೋಹನ್‌ಲಾಲ್‌ ಈ ತೆರೆ ಹಂಚಿಕೊಂಡಿರುವುದು ವಿಶೇಷ.

ನಾಯಕ ಮರಕ್ಕರ್‌ ಪಾತ್ರದಲ್ಲಿ ಮೋಹನ್‌ಲಾಲ್‌, ಕಾಮಿಡಿ ಪಾತ್ರದಲ್ಲಿ ಪ್ರಣವ್‌ ಅಭಿನಯಿಸುತ್ತಿದ್ದಾರೆ. ಮಲಯಾಳಂ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟ ಸಿದ್ದಿಕಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.

ಪ್ರಿಯದರ್ಶನ್‌ ನಿರ್ದೇಶನದ ‘ಮರಕ್ಕರ್‘ಐತಿಹಾಸಿಕ ಕಥಾ ವಸ್ತುವನ್ನೊಳಗೊಂಡಿದೆ. ಮೆಗಾ ಬಜೆಟ್‌ನ ಚಿತ್ರಗಳ ಸರದಾರ ಆ್ಯಂಟನಿ ಪೆರುಂಬವೂರ್‌ ಅವರ ಆಶೀರ್ವಾದ್‌ ಫಿಲ್ಮ್ಸ್‌, ಸಂತೋಷ್‌ ಟಿ. ಕುರುವಿಲ್ಲ ಮತ್ತು ರಾಯ್‌ ಸಿ.ಜೆ ಅವರು ಬಂಡವಾಳ ಹೂಡಿದ್ದಾರೆ. ಇದೂ ಅದ್ದೂರಿ ಚಿತ್ರವಾಗಿ ಮೂಡಿಬರಲಿದೆ. ಸದ್ಯದ ಮಾಹಿತಿ ಪ್ರಕಾರ, ಬರೋಬ್ಬರಿ ₹100 ಕೋಟಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ.

ಮರಕ್ಕರ್‌ ಬಗ್ಗೆ

ಹದಿನಾರನೇ ಶತಮಾನದಲ್ಲಿ, ಕಲ್ಲಿಕೋಟೆಯ ಹಿಂದೂ ರಾಜನ ಸಾಮ್ರಾಜ್ಯದಲ್ಲಿ ಕಲ್ಲಿಕೋಟೆಯಲ್ಲಿ ನೌಕಾ ಪಡೆಯ ಮುಖ್ಯಸ್ಥನಾಗಿದ್ದ ಪ್ರಭಾವಿ ಮುಸಲ್ಮಾನ ಕುಂಞಾಲಿ (ಕುಂಜಾಲಿ ಎಂಬ ಬಳಕೆಯೂ ಇದೆ) ಮರಕ್ಕರ್‌. ಮಲಬಾರ್‌ ಪ್ರಾಂತ್ಯದಲ್ಲಿ ಜಮೋರಿನ್‌ ಆಫ್‌ ಕ್ಯಾಲಿಕಟ್‌ ಹಾಗೂ ಸಮೂತ್ತಿರಿ ಆಫ್‌ ಕೋಯಿಕ್ಕೋಡ್‌ ಎಂದೇ ಇತಿಹಾಸದಲ್ಲಿ ಇದು ದಾಖಲಾಗಿದೆ.

ಅರಬ್ಬಿ ಸಮುದ್ರ ಭಾಗದಲ್ಲಿ 1507ರಿಂದ 1600ರವರೆಗೂ ಪೋರ್ಚುಗೀಸರೊಂದಿಗೆ ನಡೆದ ಭೀಕರ ಕಾಳಗದಲ್ಲಿ ಈ ಪಡೆ ಪ್ರಮುಖ ಪಾತ್ರ ವಹಿಸಿತ್ತು. ಮಲಬಾರ್‌ ಪ್ರಾಂತ್ಯದಲ್ಲಿ ನಾಲ್ವರು ಕುಂಞಾಲಿಗಳ ಹೆಸರು ದಾಖಲಾಗಿದೆ. ಈ ಪೈಕಿ ಒಬ್ಬ ಕುಂಞಾಲಿಯಾಗಿ ಮೋಹನ್‌ಲಾಲ್‌ ಕಾಣಿಸಿಕೊಂಡರೆ, ಕಿರಿಯ ಮರಕ್ಕರ್‌ ಆಗಿ ಪ್ರಣವ್‌ ನಟಿಸುತ್ತಿದ್ದಾರೆ ಎನ್ನಲಾಗಿದೆ.

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕಲಾ ನಿರ್ದೇಶಕ ಸಾಬು ಸಿರಿಲ್‌, ಚಿತ್ರಕತೆಗೆ ಪೂರಕವಾಗಿ ಹೈದರಾಬಾದ್‌ನ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ವಿನ್ಯಾಸಗೊಳಿಸಿರುವ ಅದ್ದೂರಿ ಸೆಟ್‌ನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ.

ನಿರ್ದೇಶಕ ಪ್ರಿಯದರ್ಶನ್‌ ಅವರ ಮಗಳು ಕಲ್ಯಾಣಿ ಕೂಡಾ ‘ಮರಕ್ಕರ್‌’ನಲ್ಲಿ ಸಣ್ಣ ಪಾತ್ರವೊಂದನ್ನು ಮಾಡಲಿದ್ದಾರೆ. ಉಳಿದಂತೆ ಪ್ರಭು, ಸುನಿಲ್‌ ಶೆಟ್ಟಿ, ಮಂಜು ವಾರಿಯರ್‌, ಮುಖೇಶ್‌, ಕೀರ್ತಿ ಸುರೇಶ್‌ ಪ್ರಮುಖ ತಾರಾ ಗಣದಲ್ಲಿದ್ದಾರೆ. ಮುಂದಿನ ವರ್ಷ ಚಿತ್ರೀಕರಣ ಮುಗಿಸಿ 2020ರಲ್ಲಿ ಬಿಡುಗಡೆ ಮಾಡುವ ಲೆಕ್ಕಾಚಾರ ಚಿತ್ರತಂಡದ್ದು. ಒಟ್ಟಿನಲ್ಲಿ, ಅಪರೂಪದ ಕಥಾವಸ್ತುವನ್ನು ತೆರೆಯ ಮೇಲೆ ಕಾಣುವ ಅವಕಾಶ ಸಿನಿಪ್ರಿಯರಿಗೆ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT