ಸೋಮವಾರ, ಜನವರಿ 17, 2022
27 °C

ಒಳ್ಳೆ ಹುಡುಗ ಅಲ್ಲ... ಪ್ರಥಮ್‌ ನಟ ಭಯಂಕರ!

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

Prajavani

ರಾಜ್‌ಕುಮಾರ್‌ ಇಂಟರ್‌ನ್ಯಾಷನಲ್‌ ಹೋಟೆಲ್‌ ಹಾಗೂ ಕಲರ್ಸ್‌ ಕನ್ನಡ ವಾಹಿನಿಯ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡಿದ್ದ ಹುಡುಗ ಪ್ರಥಮ್‌, ರಾಜ್‌ ಕುಟುಂಬದವರನ್ನೇ ತಾರಾಬಳಗದಲ್ಲಿ ಹೊಂದಿ ಚಿತ್ರ ನಿರ್ದೇಶನ ಮಾಡುವ ಮಟ್ಟಕ್ಕೆ ಏರಿದವರು. ಮೂರು ಚಿತ್ರಗಳನ್ನು ತೆರೆಗೆ ತರಲು ಸಿದ್ಧರಾದ ಅವರ ಜೊತೆ ಒಂದಿಷ್ಟು ಮಾತುಕತೆ...

ಪ್ರಥಮ್‌ ಯಾರು? ಬರಿ ಒಳ್ಳೆ ಹುಡುಗನಾ ಅಥವಾ....?
ನೀವು ಇದುವರೆಗೆ ಏನಾದರೂ ಅಭಿಪ್ರಾಯ ಹೊಂದಿದ್ದರೆ ಅದನ್ನು ಬದಲಿಸುವುದಿಲ್ಲ. ನಾನು ಸಾಮಾನ್ಯರಲ್ಲಿ ಸಾಮಾನ್ಯ ಅಷ್ಟೆ. ಸೆಲೆಬ್ರಿಟಿ ಸ್ಟೇಟಸ್‌ ಕೂಡಾ ನನಗಿಲ್ಲ. ಜನವರಿ ವೇಳೆಗೆ ‘ನಟ ಭಯಂಕರ’ ಚಿತ್ರ ಬಂದಮೇಲೆ ನೀವೇ ಹೇಳಬೇಕು. ‘ನಾವು ಇದುವರೆಗೆ ನೋಡಿದ ಪ್ರಥಮ್‌ ಅಲ್ಲ. ಇವನು ಬೇರೆಯೇ ಥರ’ ಅನ್ನುತ್ತೀರಿ. ಅದು ನನಗೆ ಬೇಕು. ನಾನು ಏನು ಎಂಬುದನ್ನು ತೋರಿಸಿಕೊಳ್ಳಲು ಅವಕಾಶ ಸಿಕ್ಕಿದೆ.  

ಈ ಬಿಗ್‌ಬಾಸ್‌ ವಿಜೇತ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರಲ್ಲ?
ನಮ್ಮದು ಕೃಷಿ ಬದುಕಿನ ಕುಟುಂಬ. ಹೌದು ಬಿಗ್ ಬಾಸ್‌ನಲ್ಲಿ ಹಣ ಬಂತು. ಕಾರು, ಐಷಾರಾಮಿ ವಸ್ತುಗಳನ್ನು ಖರೀದಿಸಿ ನನಗೆ
ಒತ್ತಡ ಮಾಡಿಕೊಳ್ಳುವುದು ಬೇಡವಾಗಿತ್ತು. ಐದಾರು ಕೋಟಿ ಜನರಲ್ಲಿ ಸಾವಿರಾರು ಜನರ ಪ್ರೀತಿ ಸಿಕ್ಕಿದೆ. ಇನ್ನು ಮೂರು ವರ್ಷ ಆದ ಬಳಿಕ ನನ್ನಲ್ಲಿ ಇಷ್ಟೊಂದು ಶಕ್ತಿ ಇರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಕೈ ನಡೆಯುವಾಗ ಏನಾದರೂ ಮಾಡಬೇಕು. ಇದೆಲ್ಲಾ ತೋರ್ಪಡಿಕೆಗೆ ಅಲ್ಲ. ನಾವು ಮಾಡಿರುವುದನ್ನು ನೋಡಿ ಇನ್ಯಾರಾದರೂ ಕನಿಷ್ಠ 100 ಜನರಿಗೆ ಸ್ಫೂರ್ತಿಯಾಗಿ ಅವರು ಒಂದಷ್ಟು ಜನರಿಗೆ ನೆರವಾದರೆ ಸಂತೋಷ ಅಲ್ವಾ?

ಕರ್ನಾಟಕದ ಅಳಿಯ ಮತ್ತು ಡಾ.ರಾಜ್‌ಕುಮಾರ್‌ ಕುಟುಂಬದ ನಡುವಿನ ನಂಟು ಏನು?
ಇದರಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ಅವರನ್ನು ಶಕ್ತಿಶಾಲಿಯಾಗಿ ತೋರಿಸಿದ್ದೇವೆ. ಇದನ್ನು ನೋಡಿ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರೇ ಖುಷಿಪಟ್ಟಿದ್ದರು. ‘ರಾಘವೇಂದ್ರ ರಾಜ್‌ಕುಮಾರ್‌ ಅವರನ್ನು ಈ ಎನರ್ಜಿಯಲ್ಲಿ ತೋರಿಸಿದವರು ಯಾರೂ ಇಲ್ಲ’ ಎಂದು ಅಪ್ಪು ಮೆಚ್ಚಿಕೊಂಡಿದ್ದರು. ಹೀಗೆ ‘ಕರ್ನಾಟಕದ ಅಳಿಯ’ದಲ್ಲಿ ರಾಜ್‌ ನಂಟು, ನನ್ನ ನಿರ್ದೇಶನ, ರಾಜ್‌ ಕುಟುಂಬದ ಮಾರ್ಗದರ್ಶನ ನಿರಂತರವಾಗಿದೆ. 

ಸಿನಿಮಾಕ್ಕೆ ಬರಬೇಕಾದರೆ ಸಿದ್ಧತೆ ಬೇಕಿತ್ತಲ್ಲಾ?
ಹೌದು ಬೆಂಗಳೂರಿಗೆ ಬಂದು ಪದವಿ ಓದುತ್ತಿದ್ದೆ. ಅದೇ ವೇಳೆಗೆ ನಿರ್ದೇಶನ ಕೋರ್ಸ್‌ ಸೇರಿದೆ. ಪದವಿ ಪೂರ್ಣವಾಗಲಿಲ್ಲ. ಆದರೆ, ಆಗಲೇ ‘ಸಿಲ್ಲಿಲಲ್ಲಿ’, ‘ಪರಮಪದ’ ಧಾರಾವಾಹಿಗಳಲ್ಲಿ ಕೆಲಸ ಮಾಡಲು ಶುರು ಮಾಡಿದೆ. ಆಗಲೂ ಸೆಕ್ಯುರಿಟಿ ಗಾರ್ಡ್‌ ಆಗಿದ್ದ ಕಾರಣ ಹಗಲೆಲ್ಲಾ ಸಿಕ್ಕಾಪಟ್ಟೆ ನಿದ್ದೆ ಬರುತ್ತಿತ್ತು. ಆದರೂ ಅದ್ಹೇಗೋ ಚಿತ್ರ ನಿರ್ದೇಶನದ ಪಟ್ಟುಗಳನ್ನು ಅರಗಿಸಿಕೊಂಡೆ. ಆಗ ಗೆಳೆಯರಾಗಿದ್ದ ಶ್ರೀಕಾಂತ್‌, ಅಕುಲ್‌ ಬಾಲಾಜಿ ಇವರೆಲ್ಲಾ ಸೇರಿ ಕಲರ್ಸ್‌ ಕನ್ನಡದ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್‌ ಅವರಿಗೆ ಪರಿಚಯಿಸಿದರು. ಅವರೂ ಸಾಕಷ್ಟು ಅಳೆದು ತೂಗಿದ ಬಳಿಕವಷ್ಟೇ ಬಿಗ್‌ ಬಾಸ್‌ನಲ್ಲಿ ಭಾಗವಹಿಸಲು ಅವಕಾಶ ಕೊಟ್ಟರು. ಮತ್ತೆ ಹಿಂದಿರುಗಿ ನೋಡಲಿಲ್ಲ. 

ಸಿನಿಮಾಗಳಲ್ಲಿ ಕಾಶಿನಾಥ್‌ ಶೈಲಿ ಅನುಸರಿಸುತ್ತೀರಂತೆ ಹೌದಾ?
ಹೌದು, ಪ್ರತಿ ನಾಯಕನಿಗೂ ಅವರದ್ದೇ ಆದ ಪ್ರೇಕ್ಷಕರು ಇರುತ್ತಾರೆ. ಮಾಸ್‌, ಕ್ಲಾಸ್‌, ರೊಮ್ಯಾನ್ಸ್‌... ಹೀಗೆ ಹಲವಾರು ಪ್ರಕಾರಗಳಿವೆ. ಹೀಗೆ ನನ್ನದೇ ಆದ ಶೈಲಿಯನ್ನು ರೂಪಿಸಬೇಕು. ಹಾಗಾಗಿ ಜನರನ್ನು ನಗಿಸುವುದು ನನಗೆ ಇಷ್ಟ. ಪ್ರೇಕ್ಷಕರು ಖುಷಿಯಾಗಿರಬೇಕು.

ಏನಿದು ನಟ ಭಯಂಕರ?
ಇಲ್ಲಿ ನಾನು ನಾಯಕ ಅಲ್ಲ. ಗಟ್ಟಿ ಕಥೆ, ಆ್ಯಕ್ಷನ್‌, ತಾಂತ್ರಿಕತೆ, ನವಿರಾದ ನಿರೂಪಣೆ, ಹೈ ವೋಲ್ಟೇಜ್‌ ಗ್ರಾಫಿಕ್ಸ್‌, ಹಾರರ್‌, ತಿಳಿ ಹಾಸ್ಯ ಈ ಚಿತ್ರದ ಹೀರೊಗಳು. 

‘ಡ್ರೋಣ್‌ ಪ್ರಥಮ್‌’, ‘ಕರ್ನಾಟಕದ ಅಳಿಯ’ ಏನಿದೆಲ್ಲಾ?
ಮೊದಲು ‘ಡ್ರೋಣ್ ಪ್ರಥಮ್‌’ ಬರುತ್ತೆ. ಕರ್ನಾಟಕದಲ್ಲಿ 2020ರಲ್ಲಿ ನಡೆದ ದೊಡ್ಡ ಹಗರಣದ ಸುತ್ತ ಕಥೆ ಇದೆ. ಉದಾಹರಣೆಗೆ ಅನಂತ್‌ನಾಗ್‌ ಅವರ ‘ಗೌರಿಗಣೇಶ’, ‘ಉಂಡೂ ಹೋದ ಕೊಂಡೂ ಹೋದ’ ಈ ಶೈಲಿಯ ಚಿತ್ರಗಳನ್ನು ನೋಡಿದ್ದೀರಲ್ಲಾ. ಹೆಚ್ಚೂ ಕಡಿಮೆ ಅದೇ ರೀತಿ ಈ ಕಥೆಯೂ ಇದೆ. ‘ಡ್ರೋಣ್‌ ಪ್ರಥಮ್‌’ ದೊಡ್ಡವರಿಗೆಲ್ಲಾ ಟೋಪಿ ಹಾಕಿದ್ದಾನೆ. ಯಾರಿಗೆಲ್ಲಾ ಅಂದರೆ ಹಿರಿಯ ಪೊಲೀಸ್‌ ಅಧಿಕಾರಿಗಳನ್ನೂ ಬಿಟ್ಟಿಲ್ಲ. ಇದಕ್ಕಿಂತ ಅದ್ಭುತ ಕಥೆ ಬೇಕಾ ಹೇಳಿ. ಒಬ್ಬ ವ್ಯಕ್ತಿ ತನ್ನ ಮಾತಿನಿಂದ ಇಡೀ ಪ್ರಪಂಚವನ್ನೇ ನಂಬಿಸಿಬಿಟ್ಟನಲ್ಲಾ ನೋಡಿ. 

‘ಕರ್ನಾಟಕದ ಅಳಿಯ’ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರು ಉಳಿಸುವ ಚಿತ್ರವಾಗಿ ಉಳಿಯಲಿದೆ. ಚಿತ್ರೀಕರಣದ ಪ್ರತಿ ಹಂತದಲ್ಲೂ ಪುನೀತ್‌ ಫೋನ್‌ ಮಾಡುತ್ತಿದ್ದರು. ರಾಘವೇಂದ್ರ ರಾಜ್‌ಕುಮಾರ್‌ ಅವರ ಬಗ್ಗೆ ತುಂಬಾ ಕಾಳಜಿ ವಹಿಸಿದ್ದರು. ಈ ಚಿತ್ರದಲ್ಲಿ ವಾಮಾಚಾರದ ಸುತ್ತ ಕತೆ ಸಾಗುತ್ತದೆ. 

ಮುಂದಿನ ಕನಸು?
ಏನು ಅಂದುಕೊಂಡಿದ್ದೇನೋ ಅದನ್ನು ಮುಗಿಸುತ್ತೇನೆ. ದೀರ್ಘ ಭವಿಷ್ಯದ ಕನಸು ಇಟ್ಟುಕೊಂಡಿಲ್ಲ. ಒಳ್ಳೆಯ ಸಿನಿಮಾಗಳನ್ನು ಕೊಡುತ್ತೇನೆ. ಮುಂದೆ ಊರಿಗೆ (ಕೊಳ್ಳೇಗಾಲದ ಸಮೀಪ ಹಲಗಾಪುರ) ವಾಪಸಾಗಿ ಅದೇ ಗ್ರಾಮದಲ್ಲಿ ಬದುಕು ಕಟ್ಟಿಕೊಳ್ಳುತ್ತೇನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು