ಸಿನಿಮಾವೊಂದರ ಹಾಡು ವಿವಾದ ಸೃಷ್ಟಿಸಿ, ಚಿತ್ರ ತೆರೆಕಂಡ ಮೇಲೆ ಆ ಗೀತೆಯೇ ಮಾಯವಾದ ವಿದ್ಯಮಾನವೊಂದಕ್ಕೆ ನಾವು ಸಾಕ್ಷಿಯಾದೆವು. ಅಂತಹ ಸಂದರ್ಭವನ್ನು ಕನ್ನಡದ ನಿರ್ದೇಶಕ ಪ್ರೇಮ್ ಒದಗಿಸಿಕೊಟ್ಟರು. ‘ಕೆ.ಡಿ: ದಿ ಡೆವಿಲ್’ ಚಿತ್ರದ ಸರ್ಸೆ ಸರ್ಸೇ ಗೀತೆಯು ದೇಶದಾದ್ಯಂತ ವಿವಾದಕ್ಕೆ ಆಸ್ಪದ ನೀಡಿತು. ರಾಷ್ಟ್ರೀಯ ಮಹಿಳಾ ಆಯೋಗವು ದೂರು ದಾಖಲಿಸಿಕೊಂಡು, ಆ ಹಾಡಿನ ನೃತ್ಯದಲ್ಲಿ ಕಾಣಿಸಿಕೊಂಡಿದ್ದ ನಟ ಸಂಜಯ್ ದತ್ ಹಾಗೂ ನಟಿ ನೋರಾ ಫತೇಹಿ ಅವರನ್ನು ವಿಚಾರಣೆಗೂ ಆಹ್ವಾನಿಸಿತ್ತು. ಕಳೆದ ತಿಂಗಳು ಸಂಜಯ್ ವಿಚಾರಣೆಗೆ ಹಾಜರಾಗಿ, 50 ಬುಡಕಟ್ಟು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವುದಾಗಿ ಅಭಯಹಸ್ತ ನೀಡಿದರು. ಅಂತಹ ವಿವಾದಾತ್ಮಕ ಸಾಲುಗಳಿದ್ದ ಸಾಹಿತ್ಯದ ಗೀತೆಯ ಭಾಗವಾದುದಕ್ಕೆ ಕ್ಷಮೆ ಕೋರಿದರು.

ವಿದೇಶದಲ್ಲಿದ್ದ ನೋರಾ ಅವರೂ ದೇಶಕ್ಕೆ ಮರಳಿದ ಮೇಲೆ ಆಯೋಗದ ಎದುರು ಇತ್ತೀಚೆಗಷ್ಟೇ ವಿಚಾರಣೆ ಎದುರಿಸಿದರು. ಅವರೂ ಕ್ಷಮೆಯಾಚಿಸಿದರು. ಅಲ್ಲದೆ ಹೆಣ್ಣುಮಕ್ಕಳ ನೆರವಿಗೆ ತಮ್ಮ ಕೈಲಾದ ಸಹಾಯ ಮಾಡುವ ಅಭಯವಿತ್ತರು.

ತಮಾಷೆ ಎಂದರೆ, ಇಷ್ಟೆಲ್ಲ ವಿರೋಧ ಎದುರಿಸಿದ ಹಾಡೇ ‘ಕೆ.ಡಿ.’ ಚಿತ್ರದಲ್ಲಿ ಈಗ ಇಲ್ಲ. ಹಿಂದೊಮ್ಮೆ ಅದರ ಸಾಹಿತ್ಯ ಬದಲಿಸಿ, ಮರು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ಪ್ರೇಮ್, ಆಮೇಲೆ ಅದರ ಗೊಡವೆಗೆ ಹೋಗಲೇ ಇಲ್ಲ. ನೋರಾ ಅವರಿಗೆ ಕೋಟಿಗಟ್ಟಲೆ ಸಂಭಾವನೆ ನೀಡಿ, ವರ್ಷಗಳ ಹಿಂದೆ ಚಿತ್ರೀಕರಣ ನಡೆಸಿದ್ದು ಅಗ್ಗದ ಪ್ರಚಾರದ ಭಾಗ ಎಂದಷ್ಟೇ ಎನಿಸಿಕೊಂಡಿತು.

ತಾವು ಕನ್ನಡ ಸಿನಿಮಾದಲ್ಲಿ ಮಾತ್ರ ಅಭಿನಯಿಸಿದ್ದು. ಹಿಂದಿ ಆವೃತ್ತಿಗೆ ಹಾಡಿನ ಸಾಹಿತ್ಯ ಅನುವಾದಗೊಳ್ಳುವ ವಿಷಯವೇ ಗೊತ್ತಿರಲಿಲ್ಲ ಎಂದು ಈ ಹಿಂದೆ ನೋರಾ ಹೇಳಿದ್ದರು. ಸಾಹಿತ್ಯ ಅಷ್ಟು ಅಶ್ಲೀಲವಾಗಿದೆ ಎಂಬ ಅರಿವೂ ತಮಗೆ ಇರಲಿಲ್ಲವೆಂದು ಕೂಡ ಅರುಹಿದ್ದರು. ಅವರ ಆ ಪ್ರತಿಕ್ರಿಯೆ ಕೇಳಿ ಪ್ರೇಮ್ ಅಚ್ಚರಿ ವ್ಯಕ್ತಪಡಿಸಿ ನಕ್ಕಿದ್ದರು. ಮುಂದೆ ಒಂದು ಚಿತ್ರದಲ್ಲಿ ನೋರಾ ಅವರನ್ನು ನಾಯಕಿಯ ಪಾತ್ರಕ್ಕೆ ಪರಿಗಣಿಸುವುದಾಗಿ ಹೇಳಿದ್ದ ಪ್ರೇಮ್ ತಲೆಯಲ್ಲಿ ಈಗ ಬೇರೆಯದೇ ಯೋಚನೆ ಇದೆ. ಒಂದು ಹಾಡು ಇಷ್ಟೊಂದು ದುಬಾರಿ ಆಗುವುದನ್ನು ಯಾವ ನಿರ್ಮಾಪಕರು ತಾನೆ ಸಹಿಸಿಯಾರು?

ಇನ್ನು ‘ನೋರಾ ಕನ್ನಡ ಚಿತ್ರವೆಂದರೆ ಮಾರು ದೂರ’ ಎಂಬ ತಮಾಷೆ ನುಡಿಯೂ ಈಗ ಚಾಲ್ತಿಗೆ ಬಂದಿದೆ.

‘ಧುರಂಧರ್ ಸರಪಳಿ ಇನ್ನೂ ಇದೆ’

‘ಧುರಂಧರ್’ ಹಿಂದಿ ಸಿನಿಮಾ ಎರಡು ಭಾಗಗಳಿಂದ ಏನಿಲ್ಲವೆಂದರೂ ಮೂರೂವರೆ ಸಾವಿರ ಕೋಟಿಯಷ್ಟು ವಹಿವಾಟು ನಡೆಸುವ ಎಲ್ಲ ಸಾಧ್ಯತೆಗಳೂ ಕಾಣಿಸಿರುವ ಹೊತ್ತಿನಲ್ಲಿ ಮುಂದೆ ಪೈಪ್ಲೈನ್ನಲ್ಲಿ ಇನ್ನೇನು ಬಾಕಿ ಇದೆ ಎಂಬ ಪ್ರಶ್ನೆ ಮೂಡಿದೆ.

‘ಧುರಂಧರ್’ ಅಧ್ಯಾಯಗಳು ಇನ್ನೂ ಮುಗಿದಿಲ್ಲ ಎಂಬ ಸಣ್ಣ ಸುಳಿವನ್ನು ಆ ಸಿನಿಮಾದ ಸಹ ನಿರ್ಮಾಪಕಿ ಜ್ಯೋತಿ ದೇಶಪಾಂಡೆ ಇತ್ತೀಚೆಗೆ ಕೊಟ್ಟರು.

ಆದಿತ್ಯ ಧರ್ ನಿರ್ದೇಶನದ ಹಿಂದಿ ಚಿತ್ರವು ಸೊರಗಿದ್ದ ಬಾಲಿವುಡ್ಗೆ ದೊಡ್ಡ ಜೀವಾನಿಲವಾಗಿ ಪರಿಣಮಿಸಿತು. ಅಷ್ಟೇ ಅಲ್ಲದೆ, ದಕ್ಷಿಣ ಭಾರತದ ಚಿತ್ರಗಳ ಪ್ರಾಬಲ್ಯದ ಸರಪಣಿಯನ್ನೂ ಮೀರಿದ ಯಶಸ್ಸನ್ನು ದಕ್ಕಿಸಿಕೊಟ್ಟಿತು. ಪಾಕಿಸ್ತಾನದ ನೆಲಕ್ಕೆ ನುಗ್ಗಿ ಅಲ್ಲಿನ ಉಗ್ರರನ್ನು ಬುಡಸಮೇತ ಅಲ್ಲಾಡಿಸುವ ಹೊಸಕಾಲದ ಜನಪ್ರಿಯ ಕಥನವನ್ನು ಆದಿತ್ಯ ಧರ್ ಸಿನಿಮೀಯ ತಂತ್ರಗಾರಿಕೆಯ ಮೂಲಕ ಹಿಡಿದಿಟ್ಟಿದ್ದರು. ಇತ್ತೀಚಿನ ಇತಿಹಾಸ ಹಾಗೂ ಅಂತರರಾಷ್ಟ್ರೀಯ ಸಂಬಂಧದ ಕುರಿತ ಮಾಹಿತಿಯನ್ನೇ ಜನಪ್ರಿಯ ಸಂಕಥನವೊಂದಕ್ಕೆ ಹೊಂದುವಂತೆ ಬಗ್ಗಿಸಿ, ಅನುಕೂಲಸಿಂಧು ಧೋರಣೆಯೊಂದನ್ನು ನಿರ್ದೇಶಕರು ತೋರಿದ್ದರು. ಅದು ಮಾರುಕಟ್ಟೆ ತಂತ್ರವಾಗಿಯೂ ಗೆದ್ದಿರುವುದರಿಂದ ಸಹಜವಾಗಿಯೇ ಮುಂದೇನು ಎಂಬ ಕುತೂಹಲ ಅನೇಕರಲ್ಲಿ ಮೂಡಿದೆ.

ಮುಂದೆ ಅದೇ ಮಾದರಿಯಲ್ಲಿ ಸಿನಿಮಾ ತಯಾರಾಗುವ ಸಾಧ್ಯತೆಯನ್ನು ಜ್ಯೋತಿ ಅವರು ತೆರೆದಿಟ್ಟಿದ್ದಾರೆ. ಆದರೆ, ಯಾವ ಕಥೆಯನ್ನು ಸಿನಿಮಾ ಮಾಡಲಿದ್ದಾರೆ ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ‘ಧುರಂಧರ್’ ಫ್ರಾಂಚೈಸಿ ಮುಂದುವರಿಯುವುದುದಂತೂ ನಿಜ ಎಂದಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.