ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗ್ಗೇಶ್‌ ಕಲಿಸಿದ ‍ಪರಿಸರ ಪಾಠ

Last Updated 28 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ನಟ ಜಗ್ಗೇಶ್ ಸಿಟ್ಟಾಗಿದ್ದರು.

ಬಂಡೀಪುರದಲ್ಲಿ ಸಾವಿರಾರು ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿರುವುದು, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ನಿರಂತರವಾಗಿ ಮರಗಳ ಮಾರಣ ಹೋಮ ನಡೆಯುತ್ತಿರುವುದು ಅವರ ಸಿಟ್ಟಿಗೆ ಕಾರಣವಾಗಿತ್ತು. ಪ್ರತಿಷ್ಠಿತರು, ಸುಶಿಕ್ಷಿತರು ಎನ್ನಿಸಿಕೊಂಡವರೇ ಮರಗಳಿಗೆ ಕೊಡಲಿ ಹಾಕುತ್ತಿದ್ದಾರೆ ಎಂಬುದು ಅವರನ್ನು ಇನ್ನಷ್ಟು ಚಿಂತೆಗೆ ಈಡು ಮಾಡಿತ್ತು…

ಜಗ್ಗೇಶ್‌ ಅಭಿನಯದ ‘ಪ್ರೀಮಿಯರ್‌ ಪದ್ಮಿನಿ’ ಸಿನಿಮಾದ ಆಡಿಯೊ ಬಿಡುಗಡೆ ಸಮಾರಂಭ ಅದು. ಆ ಸಮಾರಂಭಕ್ಕೆ ವಿಶೇಷವಾಗಿ ನಟ ದರ್ಶನ್‌ ಅವರನ್ನು ಆಹ್ವಾನಿಸಿ, ಅವರಿಗೆ ಸಂಪಿಗೆ ಗಿಡವೊಂದನ್ನು ಕೊಟ್ಟು, ‘ಪರಿಸರ ಕಾಳಜಿ ಬೆಳೆಸಲು ಯುವಕರಿಗೆ ನೀವು ಕರೆ ಕೊಡಬೇಕು’ ಎಂದು ಮನವಿ ಮಾಡಿಕೊಂಡರು. ಈ ನಡೆಗೆ ಕಾರಣವನ್ನೂ ವಿವರಿಸಿದ ಜಗ್ಗೇಶ್‌, ‘ದರ್ಶನ್‌ ಅವರ ಪರಿಸರ ಕಾಳಜಿ ಎಲ್ಲರಿಗೂ ಗೊತ್ತಿರುವಂಥದ್ದು. ರಾಜ್ಯದ ಮೂಲೆ ಮೂಲೆಗಳಲ್ಲೂ ಅವರಿಗೆ ಅಭಿಮಾನಿಗಳಿದ್ದಾರೆ. ‘ಗಿಡಗಳನ್ನು ನೆಟ್ಟು ಬೆಳೆಸಿ’ ಎಂದು ದರ್ಶನ್‌ ಕರೆ ಕೊಟ್ಟರೆ, ಅದನ್ನು ಅಭಿಮಾನಿಗಳು ಶಿರಸಾ ವಹಿಸಿ ಪಾಲಿಸುತ್ತಾರೆ. ಅವರ ಪ್ರತಿಯೊಬ್ಬ ಅಭಿಮಾನಿಯೂ ಕನಿಷ್ಠ ಎರಡು ಗಿಡಗಳನ್ನು ನೆಟ್ಟು ಬೆಳೆಸಿದರೆ ಅದೆಷ್ಟು ಕೋಟಿ ಗಿಡಗಳು ಬೆಳೆಯುತ್ತವೆ ಎಂಬುದನ್ನು ಊಹಿಸಿ...’ ಎಂದರು.

‘ಬಂಡೀಪುರ ಅರಣ್ಯಕ್ಕೆ ಬೆಂಕಿ ಹತ್ತಿಕೊಳ್ಳಲು ಕಾಡ್ಗಿಚ್ಚು ಕಾರಣ ಅಲ್ಲ. ಅದೆಲ್ಲವೂ ಪಟ್ಟಭದ್ರರು ಹೆಣೆಯುತ್ತಿರುವ ಸುಳ್ಳುಗಳ ಕಂತೆ. ಬೆಂಕಿಗೆ ಕಾಡುಗಳ್ಳರೇ ಕಾರಣ. ಅಕ್ರಮವಾಗಿ ಕಾಡಿನೊಳಗೆ ಪ್ರವೇಶಿಸುವ ಕಳ್ಳರು, ಕಾಡುಪ್ರಾಣಿಗಳನ್ನು ಕೊಂದು, ಒಣಗಿದ್ದ ಆನೆ ಲದ್ದಿಗೆ ಬೆಂಕಿ ಹಚ್ಚಿ ಅದರಲ್ಲಿ ಪ್ರಾಣಿಗಳನ್ನು ಸುಟ್ಟು ತಿನ್ನುತ್ತಾರೆ. ಹೀಗೆ ಯಾರೋ ಹಚ್ಚಿದ್ದ ಬೆಂಕಿ ಸಾವಿರಾರು ಎಕರೆ ಅರಣ್ಯವನ್ನು ಆಪೋಶನ ತೆಗೆದುಕೊಂಡಿದೆ’ ಎಂದು ಸಿಟ್ಟಾದರು ಜಗ್ಗೇಶ್‌.

‘ನನ್ನ ಮನೆ ಇರುವ ಮಲ್ಲೇಶ್ವರದ ಪರಿಸರದಲ್ಲಿ ನಾವೆಲ್ಲ ಸೇರಿಕೊಂಡು 150ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿದ್ದೇವೆ. ಇಂದು ಆ ಮರಗಳ ಮೇಲೆ ಸಾವಿರಾರು ಪಕ್ಷಿಗಳು ಆಶ್ರಯ ಪಡೆದಿವೆ. ಅವುಗಳನ್ನು ನೋಡಿದಾಗ ಸಂತೋಷವೆನಿಸುತ್ತದೆ. ಒಮ್ಮೆ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಪತ್ನಿ, ತಮ್ಮ ಕಾರ್‌ ಪಾರ್ಕಿಂಗ್‌ಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಒಂದು ಮರವನ್ನು ಕಡಿಯಲು ಮುಂದಾಗಿದ್ದರು. ನಾವೆಲ್ಲರೂ ಸೇರಿ ಮುಲಾಜಿಲ್ಲದೆ ಅವರನ್ನು ವಿರೋಧಿಸಿದ್ದೆವು. ಇಂಥ ಪ್ರತಿಷ್ಠಿತರಿಂದಲೇ ಅನೇಕ ಮರಗಳು ಧರೆಗುರುಳುತ್ತಿವೆ. 2045ರ ವೇಳೆಗೆ ಬೆಂಗಳೂರು ನಗರದಲ್ಲಿ ಹನಿ ನೀರಿಗೂ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ನಡೆದರೆ ಮಾತ್ರ ಇಂಥ ದಿನಗಳು ಬರುವುದನ್ನು ತಡೆಯಬಹುದು’ ಎಂದರು.

ಇಷ್ಟೆಲ್ಲ ಹೇಳಿದ ಬಳಿಕ ಸ್ವಲ್ಪ ಸಮಾಧಾನಗೊಂಡ ಜಗ್ಗೇಶ್‌, ‘ಪ್ರೀಮಿಯರ್‌ ಪದ್ಮಿನಿ’ಯತ್ತ ಮಾತು ತಿರುಗಿಸಿದರು.

‘ಇದು ಪ್ರತಿಯೊಬ್ಬರೂ ಕುಟುಂಬ ಸಮೇತರಾಗಿಯೇ ನೋಡಬೇಕಾದ ಸಿನಿಮಾ. ಕಠೋರ ಮನಸ್ಸಿನ ವ್ಯಕ್ತಿಯೊಬ್ಬ ಜೀವನದ ಬೇರೆ ಬೇರೆ ಹಂತದಲ್ಲಿ ತನ್ನ ಪರಿಸರದಿಂದಲೇ ಪಾಠ ಕಲಿತು ಹೇಗೆ ಬದಲಾಗುತ್ತಾನೆ ಎಂಬುದು ಈ ಸಿನಿಮಾದ ಕಥೆ. ಸಿನಿಮಾ ನೋಡಿ ಮುಗಿಸುವಾಗ ಎಂಥ ಕಟುಕನ ಕಣ್ಣುಗಳೂ ತೇವವಾಗಿರುತ್ತವೆ. ಸುಧಾರಾಣಿಯಂಥ ಹಿರಿಯ ನಟಿಯ ಜೊತೆಜೊತೆಗೆ ಅನೇಕ ಹೊಸ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ಹೊಸಬರ ಕೆಲಸ ನೋಡಿ ನಾನೇ ದಂಗಾಗಿದ್ದೇನೆ’ ಎಂದರು.

ಟಿ.ವಿ. ಧಾರಾವಾಹಿಗಳ ಮೂಲಕ ಜನಪ್ರಿಯರಾಗಿರುವ ನಿರ್ದೇಶಕ ರಮೇಶ್ ಇಂದಿರಾ ಅವರಿಗೆ ಇದು ಮೊದಲ ಕನ್ನಡ ಸಿನಿಮಾ. ‘ಪ್ರೀಮಿಯರ್‌ ಪದ್ಮಿನಿ ಕಾರನ್ನು ಬದುಕಿನ ಒಂದು ಸಂಕೇತವಾಗಿ ಬಳಸಿಕೊಂಡು ಸಿನಿಮಾ ಹೆಣೆದಿದ್ದೇನೆ. ಒಟ್ಟಾರೆಯಾಗಿ ಒಬ್ಬ ವ್ಯಕ್ತಿಯ ಜೀವನದ ಏರುಪೇರುಗಳನ್ನು ತಿಳಿಸುವುದೇ ನಮ್ಮ ಉದ್ದೇಶ. ಮಾರ್ಚ್‌ ತಿಂಗಳ ಕೊನೆಯಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ಯೋಚನೆ ಇದೆ’ ಎಂದು ರಮೇಶ್‌ ಹೇಳಿದರು.

ಸಿನಿಮಾಗೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ‘ಎಂದಿನಂತೆ, ನಾನು ಕನ್ನಡದ ಪ್ರತಿಭೆಗಳಿಗೆ ಆದ್ಯತೆ ಕೊಟ್ಟಿದ್ದೇನೆ. ‘ಸರಿಗಮಪ’ ಸ್ಪರ್ಧೆಯ ಗಾಯಕ ನಿಹಾಲ್‌ ಅವರು ಒಂದು ಹಾಡನ್ನು ಹಾಡಿದ್ದಾರೆ. ಹಾಡುಗಳಷ್ಟೇ ಅಲ್ಲ ಇಡೀ ಸಿನಿಮಾ ಸುಂದರವಾಗಿ ಮೂಡಿಬಂದಿದೆ’ ಎಂದು ಅರ್ಜುನ್‌ ಮೆಚ್ಚುಗೆ ಸೂಚಿಸಿದರು.

ಶ್ರುತಿ ನಾಯ್ಡು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ವಿವೇಕ್‌ ಸಿಂಹ, ಪ್ರಮೋದ್‌, ಸಿಹಿಕಹಿ ಚಂದ್ರು ಅವರ ಪುತ್ರಿ ಹಿತಾ ಚಂದ್ರು, ದಾನಪ್ಪ, ಕೃತಿ ಮುಂತಾದ ಹೊಸ ಕಲಾವಿದರೂ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT