ಶುಕ್ರವಾರ, ಡಿಸೆಂಬರ್ 13, 2019
17 °C

ಸಿಬಿಐ ಅಧಿಕಾರಿಯಾಗಿ ಪ್ರಿಯಾಮಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿತ್ರದ ಪೋಸ್ಟರ್‌ನಲ್ಲಿ ‘56’ ಎಂದು ದೊಡ್ಡದಾಗಿ ಬರೆಯಲಾಗಿತ್ತು. ಸಂಖ್ಯೆ ಐದಕ್ಕೆ ಸಿರೆಂಜ್‌ ಚುಚ್ಚಲಾಗಿತ್ತು. ಸಿರೆಂಜ್‌ ಮೇಲೆಯೇ ಡಾಕ್ಟರ್‌ ಎಂದು ಬರೆದಿತ್ತು. ಮೇಲಿಂದ ಇಳಿದು ಬಿದ್ದ ಹಗ್ಗವೊಂದು ಗಡಿಯಾರವನ್ನು ಬಿಗಿಯಾಗಿ ಹಿಡಿದಿತ್ತು. ಪೋಸ್ಟರ್‌ ನೋಡಿದವರು ಇದೊಂದು ಥ್ರಿಲ್ಲರ್‌ ಸಿನಿಮಾವೆಂದು ಅರ್ಥೈಸಿಕೊಳ್ಳಲು ಬಹುಹೊತ್ತು ಬೇಕಾಗಲಿಲ್ಲ. 

ರಾಜಿ ಆನಂದಲೀಲಾ ಇದರ ನಿರ್ದೇಶಕರು. ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಅವರಿಗೆ ಇದು ಮೊದಲ ಚಿತ್ರ. ಎಲ್ಲಿಯೂ ಕಥೆಯ ಎಳೆಯನ್ನು ಬಿಟ್ಟುಕೊಡದೇ ಸಿನಿಮಾ ಬಗ್ಗೆ ಮಾತನಾಡಲಾರಂಭಿಸಿದರು. ‘‍ಇದೊಂದು ಸೈನ್ಸ್‌ ಫಿಕ್ಷನ್‌ ಮರ್ಡರ್‌ ಮಿಸ್ಟರಿ ಕಥೆ. ಪ್ರತಿಯೊಬ್ಬರೂ ಜೀವನದಲ್ಲಿ ಈ ತಪ್ಪು ಮಾಡಿರುತ್ತೇವೆ. ಅದನ್ನು ಈಗಲೂ ಮಾಡುತ್ತಿರುತ್ತೇವೆ. ಅದನ್ನೇ ಚಿತ್ರದಲ್ಲಿ ಹೇಳಲು ಹೊರಟಿಸಿದ್ದೇವೆ’ ಎಂದು ಕುತೂಹಲ ಮೂಡಿಸಿದರು. ಬಳಿಕ ಪಕ್ಕದಲ್ಲಿ ಕುಳಿತಿದ್ದ ನಾಯಕ ಪ್ರವೀಣ್‌ ಅವರ ಕೈಗೆ ಮೈಕನ್ನು ವರ್ಗಾಯಿಸಿದರು.

ಪ್ರವೀಣ್‌ಗೆ ಇದು ಎರಡನೇ ಚಿತ್ರ. ಕಥೆ, ಚಿತ್ರಕಥೆ ಕೂಡ ಅವರದ್ದೇ. ಜೊತೆಗೆ ಬಂಡವಾಳ ಕೂಡ ಹೂಡಿದ್ದಾರೆ. ‘ಪ್ರತಿ 56 ನಿಮಿಷಕ್ಕೆ ನಾಯಕ ತೊಂದರೆಗೆ ಸಿಲುಕುತ್ತಾನೆ. ಆತ ಹೇಗೆ ಹೊರಬರುತ್ತಾನೆ ಎನ್ನುವುದೇ ಸಸ್ಪೆನ್ಸ್‌. ಹಾಗಾಗಿ ಚಿತ್ರಕ್ಕೆ 56 ಎಂದು ಹೆಸರಿಸಲಾಗಿದೆ. ಇದರಲ್ಲಿ ಆ ಸಂಖ್ಯೆಯೂ ಒಂದು ಕ್ಯಾರೆಕ್ಟರ್‌ ಆಗಿದೆ’ ಎಂದು ವಿವರಿಸಿದರು.

ನಟಿ ಪ್ರಿಯಾಮಣಿ ಅವರದು ಇದರಲ್ಲಿ ಸಿಬಿಐ ಅಧಿಕಾರಿಯ ಪಾತ್ರ. ನಿರ್ದೇಶಕರು ಕಥೆ ಬಗ್ಗೆ ಹೇಳಿದಾಗ ಅವರು ಕುತೂಹಲದ ಕಡಲಿಗೆ ಬಿದ್ದರಂತೆ. ‘ನಿರ್ದೇಶಕರು ಹೇಳಿದಂತೆ ತೆರೆಯ ಮೇಲೆ ಚಿತ್ರ ಮೂಡಿದರೆ ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗಲಿದೆ. ಭಿನ್ನವಾದ ಪಾತ್ರವಿದು. ಹಾಗಾಗಿ, ಒಪ್ಪಿಕೊಂಡೆ. ನನ್ನದು ದರ್ಪತೋರುವ ಅಧಿಕಾರಿಯ ಪಾತ್ರವಲ್ಲ. ತನಿಖೆಯ ಜಾಡು ಹಿಡಿದು ತಪ್ಪಿತಸ್ಥರನ್ನು ಹುಡುಕುವ ಪಾತ್ರ’ ಎಂದಷ್ಟೇ ಮಾಹಿತಿ ನೀಡಿದರು.

ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಈ ಚಿತ್ರ ನಿರ್ಮಿಸಲಾಗುತ್ತಿದೆ. ಎರಡು ಹಂತದಲ್ಲಿ ಆನೇಕಲ್‌ ಮತ್ತು ಪಿಚ್ಚಾವರಂನಲ್ಲಿ ಶೂಟಿಂಗ್‌ ನಡೆಸಲು ಚಿತ್ರತಂಡ ಯೋಜನೆ ರೂಪಿಸಿಕೊಂಡಿದೆ. ನೊಬಿಲ್‌ ಪಾಲ್‌ ಅವರ ಸಂಗೀತ ಸಂಯೋಜನೆಯಿದೆ. ಛಾಯಾಗ್ರಹಣ ರಾಕೇಶ್‌ ಸಿ. ತಿಲಕ್‌ ಅವರದ್ದು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು