ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಧಾನಿ ಟೀಕೆಗೆ ಬಳಕೆಯಾದುದು ಬೇಸರ’

Last Updated 2 ಫೆಬ್ರುವರಿ 2018, 5:21 IST
ಅಕ್ಷರ ಗಾತ್ರ

ಮಂಗಳೂರು: ಬೆಂಗಳೂರಿನಲ್ಲಿ ಗೌರಿ ಲಂಕೇಶ್‌ ಅವರ ಹುಟ್ಟು ಹಬ್ಬ ಸಂದರ್ಭದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ಪ್ರಧಾನಿ ಅವರನ್ನು ಟೀಕಿಸಲು ಬಳಸಿಕೊಂಡಿರುವುದು ವಿಪರ್ಯಾಸದ ಸಂಗತಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್‌ ಹೇಳಿದ್ದಾರೆ.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿ ಅವರ ನೆನಪಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ ಬದುಕಿನ ಸಾಧನೆಯ ಬಗ್ಗೆಯಾಗಲೀ, ಹತ್ಯೆ ಮಾಡಿದವರನ್ನು ಬಂಧಿಸದೇ ಇರುವ ಸರ್ಕಾರದ ವೈಫಲ್ಯದ ಬಗ್ಗೆ ಪ್ರತಿಭಟನೆಯಾಗಲೀ ವ್ಯಕ್ತವಾಗಿಲ್ಲ. ದೇಶದ ಪ್ರಧಾನಿಯನ್ನೇ ಟೀಕಿಸುವುದರಲ್ಲಿ ಎಲ್ಲರೂ ಮಗ್ನರಾಗಿದ್ದರು. ಅದಕ್ಕಾಗಿ ಹಿರಿಯರಾದ ಎಚ್‌. ಎಸ್‌. ದೊರೆಸ್ವಾಮಿ ಅಂತಹವರನ್ನು ಬಳಸಿಕೊಳ್ಳಲಾಗಿದೆ. ಅಲ್ಲದೆ ಪ್ರಧಾನಿ ಕರ್ನಾಟಕಕ್ಕೆ ಬರಬಾರದು ಎಂಬ ಫರ್ಮಾನು ಹೊರಡಿಸಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದರು.

‘ಮಂಗಳೂರಿನಲ್ಲಿಯೂ ಕೋಮುಸೌಹಾರ್ದತೆಗಾಗಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನ್‌ಮಟ್ಟು ಅವರು ರಾಜಕೀಯ ಟೀಕೆಗಳನ್ನು ಮಾಡುವ ಮೂಲಕ ಸಾಮರಸ್ಯ ಕೆಡಿಸಲು ಯತ್ನಿಸಿದ್ದಾರೆ. ಕುದ್ರೋಳಿ ದೇವಸ್ಥಾನವೇನೂ ದಿನೇಶ್‌ ಅಮೀನ್‌ ಮಟ್ಟು ಅವರ ವೈಯಕ್ತಿಕ ಆಸ್ತಿಯಲ್ಲ’ ಎಂದರು.

ದೇವಸ್ಥಾನಕ್ಕೆ ಭಕ್ತರಾಗಿ ಯಾರು ಬೇಕಾದರೂ ಬರಬಹುದು. ಆದರೆ ಕಲ್ಲಡ್ಕ ಪ್ರಭಾಕರ ಭಟ್‌ ಭಯೋತ್ಪಾದಕರೇನೋ ಎಂಬಂತೆ ಅವರು ಟೀಕಿಸಿದ್ದು ಸರಿಯಲ್ಲ ಎಂದು ಹೇಳಿದರು.

ಜಾತ್ಯತೀತೆಯ ಹೆಸರಿನಲ್ಲಿ, ಜಾತೀಯ ಮತ್ತು ಮತೀಯ ಭಾವನೆ ಕೆದಕಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಲು ನಡೆಯುತ್ತಿರುವ ಹುನ್ನಾರವನ್ನು ಜನರು ಅರ್ಥ ಮಾಡಿಕೊಳ್ಳಬಲ್ಲರು.

ಕನ್ನಡ ಸಂಘಗಳನ್ನು ಬಳಸಿಕೊಂಡು, ಎಚ್‌.ಎಸ್‌. ದೊರೆಸ್ವಾಮಿಯಂತಹ ಹಿರಿಯರನ್ನು ಬಳಸಿಕೊಂಡು ಮಾಡುವ ರಾಜಕೀಯ, ಪ್ರಧಾನಿಗೆ ತೋರುವ ಅಗೌರವದ ನಡೆಯೂ ಜನರ ಅರಿವಿಗೂ ಬಂದಿರುತ್ತದೆ.

ಗುಜರಾತ್‌ನಲ್ಲಿ ಜಿಗ್ನೇಶ್‌ ಮೇವಾನಿ ಮತ್ತು ಅಲ್ಪೇಶ್‌ ಠಾಕೂರ್‌ ಅವರ ಮೂಲಕ ರಾಜಕೀಯ ಮಾಡಿದಂತೆ ಕರ್ನಾಟಕದಲ್ಲಿಯೂ ಕಲಾವಿದ ಪ್ರಕಾಶ್‌ ರೈ ಅವರನ್ನು ಉಪಯೋಗಿಸಿಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ. ಆದರ ಜನರೇ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವಿಕಾಸ್‌ ಪುತ್ತೂರು, ಸಂಜಯ್‌ ಪ್ರಭು, ಜಿತೇಂದ್ರ ಕೊಟ್ಟಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT