l ‘ಸೆಪ್ಟೆಂಬರ್ 21’ ಚಿತ್ರ ಈಗಾಗಲೇ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಈ ಸಿನಿಮಾ ಇತರ ಚಿತ್ರಗಳಿಗಿಂತ ಹೇಗೆ ಭಿನ್ನವಾಗಿದೆ?

ಇದು ಒಂದು ಕಲಾತ್ಮಕ ಚಿತ್ರ. ಆಲ್ಝೈಮರ್ ಕಾಯಿಲೆಯಿಂದ ಬಳಲುವ ವ್ಯಕ್ತಿ ಮತ್ತು ಆತನ ಆರೈಕೆ ಮಾಡುವವರ ಜೀವನದ ಸುತ್ತ ಕಥೆ ಸಾಗುತ್ತದೆ. ಆಲ್ಝೈಮರ್ ಎಷ್ಟು ಗಂಭೀರ ಕಾಯಿಲೆ, ಅದು ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಭಾವನಾತ್ಮಕವಾಗಿ ಹೇಳಿದ್ದೇವೆ. ಆರೈಕೆ ಮಾಡುವವರ ನೋವು ಮತ್ತು ಸಂಕಷ್ಟಗಳನ್ನೂ ಚಿತ್ರದಲ್ಲಿ ತೋರಿಸಿದ್ದೇವೆ. ನಾನು ಮನೆಯ ಕೆಲಸದಾಕೆಯ ಪಾತ್ರದಲ್ಲಿ ನಟಿಸಿದ್ದೇನೆ. ಇದು ನಮ್ಮ ದಿನನಿತ್ಯದ ಬದುಕಿಗೆ ಹತ್ತಿರವಾಗುವ ಕಥೆ; ಜೊತೆಗೆ ಒಂದು ಸಾಮಾಜಿಕ ಸಂದೇಶವನ್ನೂ ಹೊತ್ತಿದೆ.

ಕಮರ್ಷಿಯಲ್ ಸಿನಿಮಾಗಳ ನಾಯಕಿಯಾಗಿದ್ದ ನೀವು ಈಗ ಕಲಾತ್ಮಕ ಸಿನಿಮಾಗಳತ್ತ ಹೊರಳಿದ್ದೇಕೆ?

ನನಗೆ ಯಾವಾಗಲೂ ಇಂತಹ ಕಥೆಗಳೇ ಇಷ್ಟ. ನಟಿಯಾಗಿ ಎಲ್ಲ ರೀತಿಯ ಪಾತ್ರಗಳನ್ನು ಎದುರು ನೋಡುತ್ತೇನೆ. ಆದರೆ ಇಂಥ ಅವಕಾಶಗಳು ಇದುವರೆಗೆ ಬಂದಿರಲಿಲ್ಲ. ಈ ಸಿನಿಮಾ ಬಂದಾಗ ನಾನು ಆ ಪಾತ್ರಕ್ಕೆ ಭಾವನಾತ್ಮಕವಾಗಿ ಸಿದ್ಧವಾಗಿದ್ದೆ. ಇಂತಹ ಪಾತ್ರಗಳಿಗೆ ಒಂದು ರೀತಿಯ ಪಕ್ವತೆ ಬೇಕಾಗುತ್ತದೆ.

ನನ್ನ ಕುಟುಂಬದಲ್ಲಿಯೂ ಆಲ್ಝೈಮರ್ ಸಮಸ್ಯೆ ಅನುಭವಿಸಿದವರು ಇದ್ದಾರೆ. ಅವರನ್ನು ಹತ್ತಿರದಿಂದ ನೋಡಿದ್ದೇನೆ. ಅದೂ ಈ ಪಾತ್ರವನ್ನು ಒಪ್ಪಿಕೊಳ್ಳಲು ಕಾರಣವಾಯಿತು. ಮತ್ತೊಂದು ಕಾರಣ, ಈ ಕಥೆಯನ್ನು ಜನರಿಗೆ ಹೇಳಲೇಬೇಕು ಅನ್ನಿಸಿತು. ವಯಸ್ಸಾದವರಿಗೆ ಮಾತ್ರವಲ್ಲ, ಯುವಕರಿಗೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ನಾವು ಮರೆವನ್ನು ಸಾಮಾನ್ಯವಾಗಿ ತೆಗೆದುಕೊಳ್ಳುತ್ತೇವೆ. ವಿಶೇಷವಾಗಿ ಅನೇಕ ಮಹಿಳೆಯರಿಗೆ 40 ವರ್ಷದ ನಂತರ ಮರೆವು ಹೆಚ್ಚಾಗುತ್ತದೆ. ಹೀಗಾಗಿ ಈ ಕಥೆಯಲ್ಲಿ ಒಂದು ಸತ್ವ ಇದೆ ಎಂದು ಅನ್ನಿಸಿತು.

ಕೋಲ್ಕತ್ತದಿಂದ ಸ್ಯಾಂಡಲ್ವುಡ್ವರೆಗಿನ ನಿಮ್ಮ ಪಯಣ ಹೇಗಿತ್ತು?

ಬಂಗಾಳಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿ ಈಗ 50ಕ್ಕೂ ಹೆಚ್ಚು ಸಿನಿಮಾಗಳನ್ನು ಪೂರೈಸಿದ್ದೇನೆ. ನಾನು ನಟಿಯಾಗುತ್ತೇನೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ನನ್ನ ತಾಯಿ ನಟಿಯಾಗಿದ್ದರು. ಆದರೆ ಅವರು ಚಿತ್ರರಂಗದಲ್ಲಿ ಹೆಚ್ಚು ಮುಂದುವರಿಯಲಿಲ್ಲ. ಅವರ ಕನಸನ್ನು ನಾನು ನನಸಾಗಿಸಿದೆ ಎನ್ನಬಹುದು.

ಮದುವೆ ಮತ್ತು ಮಕ್ಕಳಾದ ನಂತರ ನಾನು ಸಿನಿಮಾದಲ್ಲಿ ಮುಂದುವರಿಯುತ್ತೇನೆ ಎಂಬ ಕಲ್ಪನೆಯೇ ಇರಲಿಲ್ಲ. ಆದರೆ ಅವಕಾಶಗಳು ಬಂದವು. ಇವತ್ತಿಗೂ ನನಗೆ ಕುಟುಂಬವೇ ಮೊದಲ ಆದ್ಯತೆ. ಅದರ ಜತೆಗೆ ನಟನೆಯನ್ನೂ ಸಮತೋಲನದಲ್ಲಿ ಮುಂದುವರಿಸಲು ಸಾಧ್ಯವಾಗಿದೆ.

ನಾಯಕಿಯಾಗಿ ಇಷ್ಟು ವರ್ಷಗಳ ಕಾಲ ನೆಲೆ ನಿಲ್ಲುವುದು ಎಷ್ಟು ಸವಾಲಿನ ಕೆಲಸ?

ಇವತ್ತು ನಾಯಕ–ನಾಯಕಿ ಎಂಬ ಕಲ್ಪನೆಗಿಂತ ಪಾತ್ರ ಮತ್ತು ಕಥೆಯೇ ಮುಖ್ಯವಾಗಿದೆ. ಕಮರ್ಷಿಯಲ್ ಸಿನಿಮಾಗಳಲ್ಲಿ ಮಾತ್ರ ಆ ಪರಿಕಲ್ಪನೆ ಹೆಚ್ಚು ಕಾಣಿಸುತ್ತದೆ. ನಾನು ಎಂದಿಗೂ ಗ್ಲಾಮರ್ ಹಿಂದೆ ಹೋಗಲಿಲ್ಲ. ಪಾತ್ರದ ತೂಕವನ್ನೇ ಮೊದಲಿಗೆ ನೋಡುತ್ತೇನೆ.

ನನ್ನನ್ನು ಹುಡುಕಿಕೊಂಡು ಸಿನಿಮಾ ಬಂದಾಗ ಖುಷಿಯಾಗುತ್ತದೆ. ನಾನು ವರ್ತಮಾನದಲ್ಲಿ ಬದುಕುವವಳು. ಹೊಸ ರಿಸ್ಕ್ ತೆಗೆದುಕೊಳ್ಳುತ್ತೇನೆ. ಪ್ರತಿಯೊಂದು ಪಾತ್ರವೂ ಭಿನ್ನವಾಗಿರಬೇಕು ಎನ್ನುವುದು ನನ್ನ ಆಸೆ.

ಕಾಲಕ್ರಮೇಣ ಮಹಿಳೆಯರ ದೇಹದ ಸ್ವರೂಪ, ಬದುಕಿನ ಹಂತಗಳು ಬದಲಾಗುತ್ತವೆ. ಹೀಗಾಗಿ 20 ವರ್ಷಗಳ ಹಿಂದೆ ಮಾಡಿದ ಪಾತ್ರಗಳನ್ನು ಈಗ ಮಾಡಲಾಗುವುದಿಲ್ಲ ಎಂಬ ಅರಿವು ನನಗಿದೆ. ಸಮಾಜದಲ್ಲಿ ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಆ ಕಥೆಗಳು ಸಿನಿಮಾಗಳಲ್ಲೂ ಕಾಣಿಸಬೇಕು.

ಒಂದೊಮ್ಮೆ ನಟಿಯಾಗದೇ ಇದ್ದರೆ ಯಾವ ಕ್ಷೇತ್ರದಲ್ಲಿ ಇರುತ್ತಿದ್ದಿರಿ?

ನಾನು ವಾಣಿಜ್ಯ ವಿದ್ಯಾರ್ಥಿನಿ. ಲಂಡನ್ನಲ್ಲಿ ಎಂಬಿಎ ಮಾಡುವ ಕನಸಿತ್ತು. ನನ್ನ ತಂದೆ ಎಂಜಿನಿಯರ್. ಬಾಲ್ಯದ ಬಹುಭಾಗ ವಿದೇಶದಲ್ಲೇ ಕಳೆದಿದ್ದೆ. ಸಿನಿಮಾದಲ್ಲಿ ಅವಕಾಶ ಸಿಗದಿದ್ದರೆ ಆ ಕ್ಷೇತ್ರದಲ್ಲೇ ಮುಂದುವರಿಯುತ್ತಿದ್ದೆ.

ರೂಪದರ್ಶಿಯಾಗಿ ಕೆಲಸ ಆರಂಭಿಸಿದ್ದೆ. ಅಲ್ಲಿಂದ ಅದೃಷ್ಟವಶಾತ್ ಸಿನಿಮಾಕ್ಕೆ ಬಂದೆ. ಅಮ್ಮ ತುಂಬ ಬೆಂಬಲ ಕೊಟ್ಟರು. ನಾನು ಚಿತ್ರರಂಗಕ್ಕೆ ಬರದೇ ಇದ್ದರೆ ಉಪೇಂದ್ರ ಅವರನ್ನು ಭೇಟಿಯಾಗುತ್ತಿರಲಿಲ್ಲ; ಈ ನಾಡಿನ ಪರಿಚಯವೂ ಆಗುತ್ತಿರಲಿಲ್ಲ.

ಚಿತ್ರರಂಗದಲ್ಲಿ ಇನ್ನೂ ಯಾವ ಕನಸು ಉಳಿದಿದೆ?

ನಿರ್ದೇಶಕಿಯಾಗುವ ಕನಸಿದೆ. ಕೆಲವೊಮ್ಮೆ ‘ಇಷ್ಟು ಸಾಕು, ಈಗ ಆರಾಮವಾಗಿ ಇರೋಣ’ ಎಂದು ಅನಿಸುತ್ತಿತ್ತು. ಆದರೆ ಕಾನ್ ಚಿತ್ರೋತ್ಸವಕ್ಕೆ ಹೋಗಿ ಬಂದ ನಂತರ ಸಿನಿಮಾದಲ್ಲಿ ಇನ್ನೂ ಸಾಕಷ್ಟು ಸಾಧ್ಯತೆಗಳಿವೆ ಅನ್ನಿಸಿತು.

ಒಳ್ಳೆಯ ಸಿನಿಮಾಗಳನ್ನು ನಿರ್ಮಿಸಬೇಕು ಎನ್ನುವ ಆಸೆಯಿದೆ. ಈಗಾಗಲೇ ನಿರ್ಮಾಣ ಕ್ಷೇತ್ರದಲ್ಲೂ ಕೈಹಾಕಿದ್ದೇನೆ. ನಿರ್ದೇಶನ ಕಲಿಯಬೇಕು, ಉಪೇಂದ್ರ ಅವರ ಜೊತೆ ಕೆಲಸ ಮಾಡಬೇಕು ಎಂಬ ಹಂಬಲ ಇದೆ.

ಮೊದಲಿಗೆ ನಮ್ಮ ಮೂಲಸತ್ವವನ್ನು ನಾವು ಅರಿತುಕೊಳ್ಳಬೇಕು. ಗುರುತಿಸಿಕೊಳ್ಳಬೇಕೆಂಬ ಹಂಬಲದಲ್ಲಿ ನಮ್ಮತನ ಕಳೆದುಕೊಳ್ಳಬಾರದು. ಚಿತ್ರರಂಗದಲ್ಲಿ ಏರಿಳಿತಗಳು ಸಹಜ. ಅದನ್ನು ಸಮತೋಲನದಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅವಕಾಶ ಸಿಕ್ಕಾಗ ಶ್ರಮಪಟ್ಟು ನಮ್ಮ ಪ್ರತಿಭೆಯನ್ನು ಸಾಬೀತುಪಡಿಸಬೇಕು.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-51-1969591257

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.