ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಮಾಫಿಯಾ ಕಥೆಹೇಳುವ ‘ಯುವರತ್ನ’

Last Updated 18 ಜುಲೈ 2019, 19:30 IST
ಅಕ್ಷರ ಗಾತ್ರ

ಶಿಕ್ಷಣ ವ್ಯವಸ್ಥೆಯಲ್ಲಿರುವ ಮಾಫಿಯಾವನ್ನು ‘ಯುವರತ್ನ’ದ ಮೂಲಕ ಬಿಚ್ಚಿಡುತ್ತಿದ್ದೇವೆ. ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟರುವ ಕಾರ್ಪೊರೇಟ್‌ ವ್ಯವಸ್ಥೆಯು ಶಿಕ್ಷಣ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬುದರ ಸುತ್ತ ಕಥೆ ಹೆಣೆಯಲಾಗಿದೆ. ಪೋಷಕರು ಮಕ್ಕಳನ್ನು ಹೇಗೆ ಬೆಳೆಸಬೇಕು ಮತ್ತು ಗುರು–ಶಿಷ್ಯರ ಸಂಬಂಧ ಹೇಗಿರಬೇಕು ಎಂಬುದನ್ನು ಚಿತ್ರ ಹೇಳುತ್ತದೆ.

‘ರಾಮಾಚಾರಿ’ಯಲ್ಲಿ ತಂದೆ–ಮಗನ ಸಂಬಂಧ, ‘ರಾಜಕುಮಾರ’ದಲ್ಲಿ ಕೌಟುಂಬಿಕ ಸಂಬಂಧಗಳ ಮೌಲ್ಯದ ಬಗ್ಗೆ ಹೇಳಿದ್ದೆ. ಇಲ್ಲಿಯೂ ಅಂತಹದ್ದೇ ನೈತಿಕ ಮೌಲ್ಯಗಳ ಸಂದೇಶವಿರಲಿದೆ. ಪ್ರತಿ ಮನೆಯಲ್ಲೂ ನಡೆಯುವ ವಾಸ್ತವ ತೆರೆ ಮೇಲೆ ಮೂಡಲಿದೆ. ನಾವೆಲ್ಲರೂ ದಾಟಿ ಬಂದಿರುವ ವಿದ್ಯಾರ್ಥಿ ಬದುಕನ್ನು ಈ ಚಿತ್ರದ ಮೂಲಕ ಮತ್ತೊಮ್ಮೆ ಹಿಂದಿರುಗಿ ನೋಡಬಹುದು.

ಪ್ರತಿಯೊಬ್ಬರಲ್ಲೂ ಒಂದು ಪವರ್ ಇರುತ್ತದೆ. ಆ ಪವರ್ ಏನು ಎಂಬುದನ್ನು ಪುನೀತ್ ಅವರ ಪಾತ್ರ ಹೇಳುತ್ತದೆ. ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿರುವ ಅವರ ಪಾತ್ರಕ್ಕೆ ಎರಡು ಶೇಡ್‌ಗಳಿದ್ದು, ವಿದ್ಯಾರ್ಥಿಯಾಗಿಯೇ ತೆರೆ ಮೇಲೆ ಹೆಚ್ಚು ಹೊತ್ತು ಇರಲಿದ್ದಾರೆ. ಧಾರವಾಡ, ಬೆಂಗಳೂರು ಹಾಗೂ ಮೈಸೂರಿನಲ್ಲಿ ಶೂಟಿಂಗ್ ನಡೆಸುತ್ತಿದ್ದೇವೆ. ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಆಲೋಚನೆ ಇದೆ.

ಮೇಕಿಂಗ್ ಅಷ್ಟೇ ನಂಬಿಕೊಂಡಿಲ್ಲ!

ನಾನು ಮೇಕಿಂಗ್‌ ಅಷ್ಟೇ ನಂಬಿಕೊಂಡಿರುವ ನಿರ್ದೇಶಕನಲ್ಲ. ಕಥೆಗೆ ಮೊದಲ ಆದ್ಯತೆ, ಅದರಲ್ಲೂ ಚಿತ್ರಕಥೆ ಬಲವಾಗಿರಬೇಕೆಂಬುದು ನನ್ನ ಪ್ರತಿಪಾದನೆ. ವೀಕ್ಷಕ ಸಿನಿಮಾ ನೋಡಿದಾಗ, ಆತನಿಗೆ ಏನಾದರೂ ಸಂದೇಶ ತಲುಪಬೇಕು ಎಂದು ಬಯಸುವವನು ನಾನು. ಹಿಂದಿನ ‘ರಾಮಾಚಾರಿ’ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಹಾಗೂ ‘ರಾಜಕುಮಾರ’ದಲ್ಲಿ ರಾಜ್‌ಕುಮಾರ್ ಅವರ ಸ್ಫೂರ್ತಿ ಇತ್ತು. ಆದರೆ, ಈ ಚಿತ್ರದಲ್ಲಿ ಸ್ವತಃ ಅಪ್ಪು ಅವರೇ ಸ್ಫೂರ್ತಿ. ಅವರೊಬ್ಬ ಯೂತ್ ಐಕಾನ್. ಹಾಗಾಗಿ, ಚಿತ್ರದ ಶೀರ್ಷಿಕೆ ಕೆಳಗೆ ‘ಪವರ್ ಆಫ್ ಯೂತ್’ ಎಂಬ ಅಡಿಬರಹ ಹಾಕಿದ್ದೇವೆ.

ಪುನೀತ್ ಸರ್ ಜತೆ ಎರಡನೇ ಸಿನಿಮಾ ಮಾಡುತ್ತಿರುವುದು ನನ್ನ ಅದೃಷ್ಟ. ಅವರು ನನ್ನ ಕೆಲಸ ಗೌರವಿಸುತ್ತಾರೆ. ಚಿತ್ರಕಥೆಯನ್ನು ಡಾಮಿನೇಟ್ ಮಾಡುವುದಿಲ್ಲ. ಹಾಗಾಗಿ, ಅವರೊಂದಿಗೆ ಕೆಲಸ ಮಾಡುವುದೆಂದರೆ ಎಲ್ಲಿಲ್ಲದ ಖುಷಿ. ನನ್ನ ಬದುಕಿನಲ್ಲಿ ಅಣ್ಣನ ಸ್ಥಾನ ತುಂಬಿರುವ ಅವರ ಅಕ್ಕರೆಗೆ ನಾನು ಸದಾ ಅಭಾರಿ.

ಕನ್ನಡಕ್ಕಷ್ಟೇ ಆದ್ಯತೆ

‘ಯುವರತ್ನ’ ಬೇರೆ ಭಾಷೆಗೆ ಡಬ್ ಆಗುವುದಿಲ್ಲ. ಈ ಸಿನಿಮಾಗೆ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗುವ ಅರ್ಹತೆ ಇಲ್ಲ ಎಂದಲ್ಲ. ಇದು ಡಬ್ಬಿಂಗ್ ಆಗುವುದಕ್ಕಿಂತ ರಿಮೇಕ್ ಆಗಲು ಸೂಕ್ತ. ಯಾವುದೇ ಭಾಷೆಯ ಸಿನಿಮಾ ಮೊದಲು ಸ್ವಂತ ಭಾಷೆಯಲ್ಲೇ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು. ಕನ್ನಡವನ್ನು ಕನ್ನಡದಲ್ಲೇ ನೋಡಿದರೆ ಮಾತ್ರ ಭಾಷೆ ಬೆಳೆಯುತ್ತದೆ ಎಂಬುದು ನನ್ನ ನಂಬಿಕೆ. ಹಾಗಾಗಿ, ಈ ಸಿನಿಮಾ ಕನ್ನಡ ಭಾಷೆಯಲ್ಲಷ್ಟೇ ಬಿಡುಗಡೆಯಾಗಲಿದೆ. ಕನ್ನಡದ ರಾಯಭಾರಿಯಾಗಿದ್ದ ರಾಜ್‌ಕುಮಾರ್ ಅವರು ನನಗೆ ಸ್ಫೂರ್ತಿ. ಅವರ ಹಾದಿಯನ್ನು ಅನೇಕ ಮಂದಿ ಪಾಲಿಸಿಕೊಂಡು ಬಂದಿದ್ದಾರೆ. ಅವರೆಲ್ಲರ ಬುನಾದಿಯಿಂದ ಚಿತ್ರರಂಗ ಇಲ್ಲಿಯವರೆಗೆ ನಡೆದುಕೊಂಡು ಬಂದಿದೆ. ಅಣ್ಣಾವ್ರ ಸ್ಥಾನವನ್ನು ಇದೀಗ ಪುನೀತ್ ತುಂಬುತ್ತಿದ್ದಾರೆ. ಕನ್ನಡಿಗರಿಗೆ ಹಾಗೂ ಕನ್ನಡೇತರರಿಗೆ ಕನ್ನಡದಲ್ಲೇ ಸಿನಿಮಾ ತಲುಪಿಸಬೇಕು ಎಂಬ ಇರಾದೆ ನನ್ನದು. ನಾನೂ ಅಷ್ಟೇ, ಕನ್ನಡ ಬಿಟ್ಟು ಬೇರಾವುದೇ ಭಾಷೆಗೂ ಹೋಗುವುದಿಲ್ಲ.

ಒಳ್ಳೆಯ ಸಂದೇಶವಿದೆ

‘ಯುವರತ್ನ’ ಒಳ್ಳೆಯ ಕಥೆಯೊಂದಿಗೆ ಸಮಾಜಕ್ಕೆ ಉತ್ತಮ ಸಂದೇಶವಿರುವ ಸಿನಿಮಾ. ವಾಸ್ತವ ಬದುಕಿಗೆ ಹತ್ತಿರವಾಗುವ ಎಳೆಯನ್ನಿಟ್ಟುಕೊಂಡು ಸಂತೋಷ್ ಆನಂದರಾಮ್ ಕಥೆ ಹೆಣೆದಿದ್ದಾರೆ. ಮೇಲ್ನೋಟಕ್ಕೆ ಯೂತ್ ಸಿನಿಮಾವಾದರೂ, ಎಲ್ಲಾ ವರ್ಗದ ವೀಕ್ಷಕರನ್ನು ಸೆಳೆಯಬಲ್ಲದು. ಪಾತ್ರಗಳಲ್ಲಿ ಸಂದೇಶವನ್ನು ಅಡಕಗೊಳಿಸುವ ಜಾಣ್ಮೆ ಸಂತೋಷ್ ಅವರಿಗಿದೆ. ‘ರಾಜಕುಮಾರ’ ಸಿನಿಮಾದಂತೆ ಇಲ್ಲಿಯೂ ಒಳ್ಳೆಯ ಸಂದೇಶವಿದೆ.

ಕನ್ನಡ ಚಿತ್ರರಂಗದ ಬೆಳವಣಿಗೆ ಆಶಾದಾಯಕವಾಗಿದೆ. ಕಥೆ, ತಾಂತ್ರಿಕ ನೈಪುಣ್ಯತೆ ಹಾಗೂ ನಿರ್ಮಾಣದಲ್ಲಿ ಇಂಡಸ್ಟ್ರಿ ಸದ್ದು ಮಾಡುತ್ತಿದೆ. ಕನ್ನಡ ಸಿನಿಮಾಗಳು ಹಿಂದಿಗೆ ಡಬ್ ಆಗಿ ಬಿಡುಗಡೆಯಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ದಕ್ಷಿಣ ಭಾರತದ ಚಿತ್ರಗಳ ಬಗ್ಗೆ ಬಾಲಿವುಡ್‌ನವರಿಗೆ ಅಷ್ಟು ಗೊತ್ತಿರಲಿಲ್ಲ. ಇದೀಗ ಡಬ್ ಆಗಿ ಉತ್ತರ ಭಾರತದಲ್ಲೂ ತೆರೆ ಕಾಣುತ್ತಿರುವುದರಿಂದ ನಮ್ಮ ಸಿನಿಮಾಗಳೂ ಅವರನ್ನು ತಲುಪುತ್ತಿವೆ. ಕಲೆಗೆ ಭಾಷೆಯ ಗಡಿ ಇಲ್ಲ ಎಂಬುದನ್ನು ಕೆ.ಜಿ.ಎಫ್ ಸಿನಿಮಾ ಸಾಬೀತುಪಡಿಸಿತು.

ಇದರ ಜತೆಗೆ, ಪ್ರಯೋಗಶೀಲ ಹಾಗೂ ಅತ್ಯುತ್ತಮ ತಂತ್ರಜ್ಞಾನದ ಚಿತ್ರಗಳು ತೆರೆ ಕಾಣುತ್ತಿವೆ. ನಮ್ಮ ಪಿಆರ್‌ಕೆ ಪ್ರೊಡಕ್ಷನ್‌ನಿಂದ ‘ಕವಲುದಾರಿ’ ತೆರೆ ಕಂಡಿತು. ಮುಂದೆ ‘ಮಾಯಾ ಬಜಾರ್’, ‘ಲಾ’ ಹಾಗೂ ನಟ ಡ್ಯಾನಿಷ್ ಶೇಟ್ ಅವರ ನಟನೆಯ ಚಿತ್ರವೊಂದು ನಮ್ಮ ಪ್ರೊಡಕ್ಷನ್‌ನಿಂದ ತಯಾರಾಗಲಿದೆ.

ವೆಬ್‌ ಸೀರಿಸ್‌

ಇತ್ತೀಚೆಗೆ ಆರಂಭವಾಗಿರುವ ವೆಬ್ ಸಿರೀಸ್‌ಗಳು ವೀಕ್ಷಕರನ್ನು ಹೆಚ್ಚಿಸಿಕೊಳ್ಳುತ್ತಿವೆ. ಮನರಂಜನೆಯ ಮತ್ತೊಂದು ಭಾಗವಾಗಿ ಜನಪ್ರಿಯವಾಗುತ್ತಿರುವುದು ಒಳ್ಳೆಯ ಬೆಳವಣಿಗೆ.

ನಮ್ಮ ಪಿಆರ್‌ಕೆ ಪ್ರೊಡಕ್ಷನ್‌ನಲ್ಲೇ ಶಿವಣ್ಣ (ಶಿವರಾಜ್‌ಕುಮಾರ್) ನಟಿಸಿರುವ ‘ರೋಮಿಯೊ’ ಎಂಬ ವೆಬ್ ಸಿರೀಸ್ ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದೆ. ಅಣ್ಣನ ಮಗಳು ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಿಸಿದ್ದಾರೆ. ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಿಸುತ್ತೇವೆ. ನನಗೂ ವೆಬ್‌ ಸೀರೀಸ್‌ನಲ್ಲಿ ನಟಿಸಲು ಇಷ್ಟ, ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೇನೆ.

ಜೀವನದಲ್ಲಿ ಫೇಲಾಗಬಾರದು...

ಪರೀಕ್ಷೆಯಲ್ಲಿ ಫೇಲಾಗಬಹುದು. ಆದರೆ, ಜೀವನದಲ್ಲಿ ಯಾರೂ ಫೇಲಾಗಬಾರದು ಎಂಬುದೇ ‘ಯುವರತ್ನ’ದ ತಿರುಳು ಹಾಗೂ ಸಂದೇಶ. ಪುನೀತ್ ಸರ್ ಹಾಗೂ ಸಂತೋಷ್ ಆನಂದರಾಮ್ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡುತ್ತಿರುವುದಕ್ಕೆ ಬಹಳ ಹೆಮ್ಮೆ ಎನಿಸುತ್ತಿದೆ. ಪುನೀತ್ ಅವರು ಯುವಜನರಾದಿಯಾಗಿ ಎಲ್ಲಾ ವರ್ಗದ ಪ್ರೇಕ್ಷಕವನ್ನು ಹೊಂದಿರುವ ನಟರಾದರೆ, ಸಂತೋಷ್ ಅವರ ಕಥೆಯಲ್ಲಿ ಗಟ್ಟಿತನವಿರುತ್ತದೆ. ಚಿತ್ರಕಥೆ ನಂಬಿ ಸಿನಿಮಾ ಮಾಡುವ ನಿರ್ದೇಶಕ ಅವರು.

ಹೊಡೆದಾಟದ ದೃಶ್ಯಕ್ಕಾಗಿ ₹ 1 ಕೋಟಿ ವೆಚ್ಚದ ಸೆಟ್ ಹಾಕಿದ್ದೇವೆ. ಜತೆಗೆ, ಒಂದು ಹಾಡಿನ ಸೆಟ್‌ಗೆ ₹ 1.5 ಕೋಟಿ ವೆಚ್ಚ ಮಾಡುತ್ತಿದ್ದೇವೆ. ಚಿತ್ರಕ್ಕೆ ತಮಿಳಿನ ತಮನ್ ಸಂಗೀತ ನಿರ್ದೇಶನವಿದೆ.

ವಿಜಯ್ ಕಿರಗಂದೂರು, ನಿರ್ಮಾಪಕ

ವೆಬ್ ಸಿರೀಸ್ ನಿರ್ದೇಶನ

ಕಲೆ ಹೀಗೆಯೇ ಸಾಗಬೇಕು, ಇದೇ ಸ್ವರೂಪದಲ್ಲಿರಬೇಕು ಅಂತ ಯಾವ ನಿಯಮವೂ ಇಲ್ಲ. ಅದು ಯಾವ ರೂಪದಲ್ಲಿ ಬೇಕಾದರೂ ಇರಬಹುದು ಎಂಬುದಕ್ಕೆ ವೆಬ್‌ ಸಿರೀಸ್ ಅತ್ಯುತ್ತಮ ನಿದರ್ಶನ. ಸಿನಿಮಾದಲ್ಲಿ ಯಶಸ್ಸು ಕಾಣದವರು ಅಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅದರ ವೀಕ್ಷಕ ವರ್ಗವೂ ದೊಡ್ಡದಾಗುತ್ತಿದೆ. ನಾನೂ ಒಂದು ವೆಬ್‌ ಸಿರೀಸ್ ನಿರ್ಮಿಸಬೇಕೆಂದಿರುವೆ, ನನ್ನ ತಂಡ ಆ್ಯಕ್ಷನ್ ಕಟ್ ಹೇಳಲಿದೆ. ‘ಯುವರತ್ನ’ ಬಳಿಕ ಹೊಂಬಾಳೆ ಪ್ರೊಡಕ್ಷನ್‌ಗೆ ಮತ್ತೆರಡು ಸಿನಿಮಾ ಮಾಡುತ್ತಿದ್ದೇನೆ. ಕಥೆಗಳು ಇನ್ನೂ ಅಂತಿಮಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT