ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್‌ ತೆರೆಗೆ ಪುನೀತ್?

punith rajkumar
Last Updated 14 ಮಾರ್ಚ್ 2019, 9:07 IST
ಅಕ್ಷರ ಗಾತ್ರ

ಬಾಲಿವುಡ್ ನಟರಾದ ಇಮ್ರಾನ್ ಹಶ್ಮಿ ವೆಬ್‌ ತೆರೆಗಾಗಿ ಒಂದು ಸಿನಿಮಾ ಮಾಡುತ್ತಿದ್ದಾರೆ. ಅರ್ಜುನ್‌ ರಾಮ್‌ಪಾಲ್‌ ಅವರು ಜೀ5ನಲ್ಲಿ ಪ್ರಸಾರ ಆಗಿರುವ ‘ದಿ ಫೈನಲ್ ಕಾಲ್‌’ ಮೂಲಕ ವೆಬ್‌ ತೆರೆ ಪ್ರವೇಶ ಮಾಡಿ ಆಗಿದೆ. ಅಲ್ಲದೆ, ಖಿಲಾಡಿಗಳ ಖಿಲಾಡಿ ಅಕ್ಷಯ್ ಕುಮಾರ್‌ ಅವರು ಅಮೆಜಾನ್‌ ಪ್ರೈಮ್‌ಗಾಗಿ ಒಂದು ವೆಬ್‌ ಸರಣಿಯಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಬಂದಿದೆ.

ಕನ್ನಡದಲ್ಲಿ, ನಟ ಶಿವರಾಜ್‌ ಕುಮಾರ್‌ ಅವರ ಪುತ್ರಿ ನಿವೇದಿತಾ ಒಂದು ವೆಬ್‌ ಸಿರೀಸ್ ನಿರ್ಮಾಣ ಮಾಡಿದ್ದು, ಅವರಿಗೆ ಮಾರ್ಗದರ್ಶನ ನೀಡುವ ಕೆಲಸವನ್ನು ಶಿವಣ್ಣ ಮಾಡಿದ್ದಾರೆ. ಆದರೆ, ಕನ್ನಡದಲ್ಲಿ ಸ್ಟಾರ್ ನಟರು ವೆಬ್‌ ತೆರೆಗಾಗಿ ರೂಪಿಸುವ ಸಿನಿಮಾ ಅಥವಾ ಸಿರೀಸ್‌ಗಳಿಗಾಗಿ ನಟಿಸುವ ಕಾಲ ಬರುವುದು ಯಾವಾಗ? ಆ ಕಾಲ ಸನಿಹದಲ್ಲೇ ಇದೆಯೇ?

‘ಅಂಥದ್ದೊಂದು ವೆಬ್‌ ಸಿನಿಮಾ ಅಥವಾ ವೆಬ್‌ ಸಿರೀಸ್‌ನಲ್ಲಿ ಯಾಕೆ ಅಭಿನಯಿಸಬಾರದು’ ಎಂದು ಕೇಳುತ್ತಿದ್ದಾರೆ ಪುನೀತ್ ರಾಜ್‌ಕುಮಾರ್. ‘ಕವಲುದಾರಿ’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮದ ನಂತರ ಪುನೀತ್ ಅವರು ಮಾತಿಗೆ ಸಿಕ್ಕಿದ್ದರು. ಈ ಚಿತ್ರ ನಿರ್ಮಾಣ ಮಾಡಿರುವುದು ಅವರದೇ ಮಾಲೀಕತ್ವದ ‘ಪಿಆರ್‌ಕೆ ಪ್ರೊಡಕ್ಷನ್ಸ್’.

ಮಾತಿನ ನಡುವೆ ಅವರಲ್ಲಿ ವೆಬ್‌ ಕಾರ್ಯಕ್ರಮಗಳ ಬಗ್ಗೆ ಪ್ರಶ್ನಿಸಿದಾಗ, ‘ಪಿಆರ್‌ಕೆ ಬ್ಯಾನರ್‌ ಅಡಿಯಲ್ಲಿ ಒಳ್ಳೆಯ ವೆಬ್‌ ಸರಣಿ ಅಥವಾ ವೆಬ್‌ ಸಿನಿಮಾ ಮಾಡುವಂತೆ ಒಳ್ಳೆಯ ಒಟಿಟಿ ವೇದಿಕೆಗಳಿಂದ (ಸ್ಮಾರ್ಟ್‌ಫೋನ್‌ ಮೂಲಕ ಮನರಂಜನಾ ಕಾರ್ಯಕ್ರಮ ಪ್ರಸಾರ ಮಾಡುವ ವೇದಿಕೆ) ಆಫರ್‌ ಬಂದರೆ ಖಂಡಿತ ಆ ಬಗ್ಗೆ ಧನಾತ್ಮಕವಾಗಿ ಸ್ಪಂದಿಸುವೆ’ ಎಂದರು.

ಮಾತನ್ನು ಇನ್ನೂ ಸ್ವಲ್ಪ ವಿಸ್ತರಿಸಿ, ‘ವೆಬ್ ಸಿನಿಮಾಗಳಲ್ಲಿ ನಿಮ್ಮನ್ನೂ ನೋಡಬಹುದೇ’ ಎಂದು ಕೇಳಿದಾಗ: ‘ನಾನೂ ಅಭಿನಯಿಸಬಲ್ಲೆ ಅದರಲ್ಲಿ. ನಾನು ಯಾಕೆ ಅಭಿನಯಿಸಬಾರದು? ಇನ್ನು ಮುಂದೆ ಡಿಜಿಟಲ್‌ ವೇದಿಕೆಗಳಿಗಾಗಿಯೇ (ಒಟಿಟಿ ವೇದಿಕೆಗಳು) ಸಿನಿಮಾ ಮಾಡುವ ಯುಗ ನಮ್ಮಲ್ಲಿ ಕೂಡ ಆರಂಭ ಆಗಬಹುದು’ ಎಂದರು.

‘ಅಪ್ಪು ಸರ್‌ ಖದರ್‌ಗೆ ತಕ್ಕಂತಹ ವೆಬ್‌ ಸಿರೀಸ್‌ ಅಥವಾ ವೆಬ್‌ ಸಿನಿಮಾ ಅವಕಾಶ ಬಂದಲ್ಲಿ, ಅವರು ಖಂಡಿತ ಅಭಿನಯಿಸುತ್ತಾರೆ. ಅದಕ್ಕೆ ಕಾಲ ತುಸು ಕೂಡಿಬರಬೇಕು’ ಎನ್ನುತ್ತವೆ ಪುನೀತ್ ಅವರ ಆಪ್ತ ಮೂಲಗಳು.

ಹಿಂದಿಯಲ್ಲಿ ಸ್ಟಾರ್‌ ನಟರು ವೆಬ್‌ ಕಾರ್ಯಕ್ರಮಗಳಿಗಾಗಿಯೇ ಕೆಲಸ ಮಾಡಿದಂತೆ, ಕನ್ನಡದಲ್ಲೂ ಆಗಬೇಕು ಎಂದಾದರೆ, ಕನ್ನಡದ ಮಾರುಕಟ್ಟೆ ಅದಕ್ಕೆ ಸ್ಪಂದಿಸಬೇಕು. ಕನ್ನಡದ ಸೊಗಡು ಇರುವ ವೆಬ್ ಸಿನಿಮಾ ಅಥವಾ ವೆಬ್ ಸಿರೀಸ್ ಮಾಡಿದ ನಂತರ, ಅವುಗಳನ್ನು ಒಟಿಟಿ ವೇದಿಕೆಗಳ ಮೂಲಕ ಹಣ ಕೊಟ್ಟು ವೀಕ್ಷಿಸುವವರು ದೊಡ್ಡ ಸಂಖ್ಯೆಯಲ್ಲಿ ಬೇಕು. ಆಗ ಕನ್ನಡದ ಸ್ಟಾರ್‌ ನಟರು ಕೂಡ ವೆಬ್‌ ವೇದಿಕೆಗಳತ್ತ ತೆರೆದುಕೊಳ್ಳುತ್ತಾರೆ ಎನ್ನುತ್ತವೆ ಮೂಲಗಳು.

ಅಂದಹಾಗೆ, ‘ಕವಲುದಾರಿ’ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್‌ ಪ್ರೈಮ್‌ ಖರೀದಿ ಮಾಡಿದೆಯಂತೆ.

‘ಕೆಜಿಎಫ್‌’ನಂತಹ ದೊಡ್ಡ ಚಿತ್ರದ ಡಿಜಿಟಲ್‌ ಹಕ್ಕುಗಳನ್ನು ಅಮೆಜಾನ್‌ ಪ್ರೈಮ್‌ನವರು ಖರೀದಿ ಮಾಡಿದ್ದು ಗಮನಾರ್ಹ. ಆ ಸಿನಿಮಾ ತಮ್ಮಲ್ಲಿ ಪ್ರಸಾರ ಆಗುತ್ತದೆ ಎಂಬುದನ್ನು ಪ್ರೈಮ್‌ನವರು ಪ್ರಚಾರ ಮಾಡಿದ್ದು ಕೂಡ ದೊಡ್ಡ ಮಟ್ಟದಲ್ಲೇ ಇತ್ತು. ಇವೆರಡೂ ಕೂಡ ಕನ್ನಡ ಸಿನಿಮಾಗಳ ಪಾಲಿಗೆ ಡಿಜಿಟಲ್‌ ಮಾರುಕಟ್ಟೆ ವಿಸ್ತರಣೆ ಕಾಣುತ್ತಿರುವುದರ ಸೂಚನೆ ಎನ್ನುತ್ತವೆ ಕನ್ನಡ ಸಿನಿಮೋದ್ಯಮದ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT