ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್‌ ರಾಜ್‌ಕುಮಾರ್‌ ಹೊಸ ಚಿತ್ರಕ್ಕೆ ಡಿ. ಸತ್ಯಪ್ರಕಾಶ್‌ ಆ್ಯಕ್ಷನ್‌ ಕಟ್‌?

Last Updated 21 ನವೆಂಬರ್ 2019, 7:00 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗಕ್ಕೆ ‘ರಾಮಾ ರಾಮಾ ರೇ’ ಮತ್ತು ‘ಒಂದಲ್ಲಾ ಎರಡಲ್ಲಾ’ದಂತಹ ಅಪರೂಪದ ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆ ನಿರ್ದೇಶಕ ಡಿ. ಸತ್ಯಪ್ರಕಾಶ್‌ ಅವರದ್ದು. 2018ರ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ರಾಷ್ಟ್ರೀಯ ಏಕತೆಗೆ ನೀಡುವ ‘ನರ್ಗಿಸ್‌ ದತ್‌’ ಪ್ರಶಸ್ತಿಗೆ ಅವರು ನಿರ್ದೇಶಿಸಿದ ‘ಒಂದಲ್ಲಾ ಎರಡಲ್ಲಾ’ ಸಿನಿಮಾ ಭಾಜನವಾಗಿತ್ತು. ಇದೇ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಮಾಸ್ಟರ್‌ ಪಿ.ವಿ. ರೋಹಿತ್ ‘ಶ್ರೇಷ್ಠ ಬಾಲನಟ’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು ಗಮನಾರ್ಹ.

ಸತ್ಯಪ್ರಕಾಶ್‌ ಅವರ ಸೃಜನಶೀಲತೆಗೆ ಈ ಎರಡು ಸಿನಿಮಾಗಳೇ ಸಾಕ್ಷಿ. ಈಗ ಅವರು ‘ಪವರ್‌ ಸ್ಟಾರ್‌’ ಪುನೀತ್ ರಾಜ್‌ಕುಮಾರ್‌ ಅವರ ‘ಪಿಆರ್‌ಕೆ’ ಬ್ಯಾನರ್‌ನಡಿ ಹೊಸ ಸಿನಿಮಾದ ಸ್ಕ್ರಿಪ್ಟ್‌ನಲ್ಲಿ ತೊಡಗಿಸಿಕೊಂಡಿರುವುದು ಎಲ್ಲರಿಗೂ ಗೊತ್ತು. ಅವರು ಯಾವ ನಟನಿಗೆ ಕಥೆ ಹೊಸೆಯುತ್ತಿದ್ದಾರೆ ಎಂಬ ಕುತೂಹಲ ಎಲ್ಲೆಡೆ ಹಬ್ಬಿತ್ತು. ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಅವರು ಸ್ಕ್ರಿಪ್ಟ್‌ ಬರೆಯುತ್ತಿರುವುದು ಪುನೀತ್‌ ಅವರ ಹೊಸ ಚಿತ್ರಕ್ಕಂತೆ. ಈ ಚಿತ್ರವನ್ನು ಪುನೀತ್‌ಗೆ ಸತ್ಯಪ್ರಕಾಶ್‌ ಅವರೇ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿಯೂ ಹೊರಬಿದ್ದಿದೆ.

ಪಿಆರ್‌ಕೆ ಪ್ರೊಡಕ್ಷನ್‌ನಡಿ ನಿರ್ಮಾಣಗೊಂಡಿದ್ದ ಮೊದಲ ಚಿತ್ರ ‘ಕವಲು ದಾರಿ’. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು ಹೇಮಂತ್‌ ರಾವ್‌. ರಿಷಿ ನಾಯಕ ನಟರಾಗಿದ್ದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲೂ ಒಳ್ಳೆಯ ಫಸಲು ತೆಗೆದಿತ್ತು.

ಡಿ. ಸತ್ಯಪ್ರಕಾಶ್‌
ಡಿ. ಸತ್ಯಪ್ರಕಾಶ್‌

ಪ್ರಸ್ತುತ ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಮೊದಲ ಚಿತ್ರ ‘ಮಾಯಾಬಜಾರ್‌’, ಸಮರ್ಥ್‌ ನಿರ್ದೇಶನದ ರಾಗಿಣಿ ಚಂದನ್‌ ಮುಖ್ಯಭೂಮಿಕೆಯಲ್ಲಿರುವ ‘ಲಾ’ ಸಿನಿಮಾವೂ ಪಿಆರ್‌ಕೆ ಬ್ಯಾನರ್‌ನಡಿ ನಿರ್ಮಾಣವಾಗುತ್ತಿದೆ. ಜೊತೆಗೆ, ಪನ್ನಗ ಭರಣ ಕೂಡ ಇದೇ ಬ್ಯಾನರ್‌ನಡಿ ಹೊಸ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ.

‘ಒಂದಲ್ಲಾ ಎರಡಲ್ಲಾ’ ಚಿತ್ರದ ಬಿಡುಗಡೆ ವೇಳೆ ‘ಒಳ್ಳೆಯ ವಿಷಯವಿಟ್ಟುಕೊಂಡು ಸಿನಿಮಾ ಮಾಡಬೇಕೆಂಬುದೇ ನನ್ನಾಸೆ’ ಎಂದಿದ್ದರು ಸತ್ಯಪ್ರಕಾಶ್‌. ಈಗ ಮೊದಲ ಬಾರಿಗೆ ಅವರು ಪುನೀತ್‌ ರಾಜ್‌ಕುಮಾರ್‌ಗೆ ಆ್ಯಕ್ಷನ್‌ ಕಟ್ ಹೇಳುವ ಖುಷಿಯಲ್ಲಿದ್ದಾರೆ. ಈ ಸುದ್ದಿ ಅಧಿಕೃತವಾಗಿ ಪ್ರಕಟಗೊಳ್ಳುವುದಷ್ಟೇ ಬಾಕಿ ಇದೆ. ಅವರ ಮೂರನೇ ಸಿನಿಮಾ ಕುತೂಹಲ ಹೆಚ್ಚಿಸಿದೆ.

ಸಂತೋಷ್‌ ಆನಂದರಾಮ್‌ ನಿರ್ದೇಶನದ ‘ಯುವರತ್ನ’ ಚಿತ್ರದಲ್ಲಿ ಪುನೀತ್‌ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ನಡೆಯುತ್ತಿದೆ. ಇದು ಮುಗಿದ ಬಳಿಕ ಹಾಡುಗಳ ಶೂಟಿಂಗ್‌ ಶುರುವಾಗಲಿದೆ. ಮತ್ತೊಂದೆಡೆ ಪುನೀತ್‌ ಅವರು ಚೇತನ್‌ಕುಮಾರ್‌ ನಿರ್ದೇಶನದ ‘ಜೇಮ್ಸ್‌’ ಚಿತ್ರದಲ್ಲೂ ನಟಿಸಲಿದ್ದಾರೆ. ‘ಜೇಮ್ಸ್‌’ ಮತ್ತು ಸತ್ಯಪ್ರಕಾಶ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಪುನೀತ್‌ ಸಮಯ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಸತ್ಯಪ್ರಕಾಶ್‌ ನಿರ್ದೇಶನದ ಸಿನಿಮಾ 2020ಕ್ಕೆ ಸೆಟ್ಟೇರಿಸುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT