ಶುಕ್ರವಾರ, ಡಿಸೆಂಬರ್ 6, 2019
20 °C

‘ಡಿಂಪಲ್‌ ಕ್ವೀನ್‌’ ರಚಿತಾ ರಾಮ್‌ ಚಿರಂಜೀವಿ ಅಳಿಯನ ಜೊತೆಗೆ ರೊಮ್ಯಾನ್ಸ್‌!

Published:
Updated:

‘ಡಿಂಪಲ್‌ ಕ್ವೀನ್‌’ ರಚಿತಾ ರಾಮ್‌ಗೆ ಸ್ಟಾರ್‌ ನಟರ ಜೊತೆಗಷ್ಟೇ ನಟಿಸುವ ನಟಿ ಎಂಬ ಹಣೆಪಟ್ಟಿ ಅಂಟಿಕೊಂಡಿದೆ. ಮತ್ತೊಂದೆಡೆ ರಚ್ಚು ಹೊಸಬರ ಸಿನಿಮಾಗಳಲ್ಲಿ ನಟಿಸಿದ್ದೂ ಕಡಿಮೆಯೇ. ಹೊಸಬರ ಪ್ರಯೋಗಾತ್ಮಕ ಚಿತ್ರಗಳಲ್ಲಿ ನಾನು ನಟಿಸಲು ಸಿದ್ಧ; ಅಂತಹ ಒಳ್ಳೆಯ ಸ್ಕ್ರಿಪ್ಟ್‌ ಬೇಕು ಎಂಬುದು ಅವರ ಅಂಬೋಣ.

ಹೊಸ ಸುದ್ದಿ ಅದಲ್ಲ. ಅದೇನಪ್ಪ ಅಂದರೆ ರಚಿತಾ ಅವರು ಚಿರಂಜೀವಿ ಅವರ ಅಳಿಯ ಕಲ್ಯಾಣ್‌ ದೇವ್‌ ಜೊತೆಗೆ ಪರದೆಯ ಮೇಲೆ ರೊಮ್ಯಾನ್ಸ್‌ ಮಾಡಲು ಸಜ್ಜಾಗಿದ್ದಾರಂತೆ. ಟಾಲಿವುಡ್‌ ಅಂಗಳದಿಂದ ಹೊರ ಬಿದ್ದಿರುವ ಈ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೂ ಸಂತಸವಾಗಿದೆಯಂತೆ.

ಕಲ್ಯಾಣ್‌ ದೇವ್‌ ನಟಿಸಿದ ಮೊದಲ ಚಿತ್ರ ‘ವಿಜೇತ’. ರೊಮ್ಯಾಂಟಿಕ್‌ ಮತ್ತು ಕೌಟುಂಬಿಕ ಚಿತ್ರ ಇದು. ಆದರೆ, ಸಿನಿಪ್ರಿಯರ ಮನಸ್ಸಿಗೆ ಈ ಸಿನಿಮಾ ನಾಟಲಿಲ್ಲ. ಮತ್ತೆ ಕಲ್ಯಾಣ್ ತೆರೆಯ ಮೇಲೆ ಮೋಡಿ ಮಾಡಲು ಸಿದ್ಧರಾಗಿದ್ದಾರೆ. ಅವರ ಎರಡನೇ ಚಿತ್ರದ ಹೆಸರು ‘ಸೂಪರ್‌ ಮಚ್ಚಿ’. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಪುಲಿ ವಾಸು. ಇದು ಕೂಡ ರೊಮ್ಯಾಟಿಂಕ್‌ ಫ್ಯಾಮಿಲಿ ಡ್ರಾಮಾ. ಸಮಾಜಕ್ಕೆ ಒಳ್ಳೆಯ ಸಂದೇಶವಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ನವೆಂಬರ್‌ 22ರಿಂದ ಚಿತ್ರದ ಮೊದಲ ಹಂತದ ಶೂಟಿಂಗ್‌ ಶುರುವಾಗಲಿದೆ. ರಚಿತಾ ರಾಮ್‌ ಶೀಘ್ರವೇ ಚಿತ್ರತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎನ್ನುತ್ತವೆ ಟಾಲಿವುಡ್‌ ಮೂಲಗಳು.

ಬೊಯಪತಿ ಶ್ರೀನು ನಿರ್ದೇಶನದ ನಂದಮೂರಿ ಬಾಲಕೃಷ್ಣ ನಟನೆಯ ಹೊಸ ಚಿತ್ರವೊಂದರಲ್ಲಿ ರಚಿತಾ ರಾಮ್‌ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಟಾಲಿವುಡ್‌ ಅಂಗಳದಲ್ಲಿ ಹರಿದಾಡಿತ್ತು. ಇದು ದೃಢಗೊಳ್ಳುವ ಮೊದಲೇ ಕರಗಿ ಹೋಯಿತು.

ಉಪೇಂದ್ರ ಮತ್ತು ರಚಿತಾ ಮುಖ್ಯಭೂಮಿಕೆಯಲ್ಲಿದ್ದ ಆರ್. ಚಂದ್ರು ನಿರ್ದೇಶನದ ‘ಐ ಲವ್‌ ಯು’ ಸಿನಿಮಾ ತೆಲುಗಿಗೂ ಡಬ್‌ ಆಗಿತ್ತು. ಆದರೆ, ತೆಲುಗಿಯಲ್ಲಿಯೂ ನಟನೆ ಆರಂಭಿಸುವ ರಚ್ಚು ಆಸೆಗೆ ‘ಸೂಪರ್‌ ಮಚ್ಚಿ’ ವೇದಿಕೆ ಕಲ್ಪಿಸಿದೆ. ಕೊನೆಗೆ, ಅವರ ಕನಸು ಈಡೇರಿರುವುದಕ್ಕೆ ಖುಷಿಯಾಗಿದೆಯಂತೆ.


ಕಲ್ಯಾಣ್‌ ದೇವ್‌

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು