ಶನಿವಾರ, ಜುಲೈ 2, 2022
22 °C

Video: ಪ್ರಭಾಸ್‌ ಅಭಿನಯದ ರಾಧೆ ಶ್ಯಾಮ್‌ನಲ್ಲಿ ಶಿವರಾಜ್‌ ಕುಮಾರ್‌ ಧ್ವನಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

'ಪ್ರೀತಿ ಮತ್ತು ವಿಧಿಯ ನಡುವೆ ನಡೆಯುವ ಯುದ್ಧ...' -ನಟ ಶಿವರಾಜ್‌ ಕುಮಾರ್‌ ಅವರ ಧ್ವನಿಯಲ್ಲಿ ಕೇಳಿಸುವ ಈ ಸಾಲು 'ರಾಧೆ ಶ್ಯಾಮ್‌' ಸಿನಿಮಾ ಕಥೆಯ ಬಗ್ಗೆ ಸುಳಿವು ನೀಡುತ್ತದೆ. ಪ್ರಭಾಸ್‌ ಮತ್ತು ಪೂಜಾ ಹೆಗ್ಡೆ ಅಭಿನಯಿಸಿರುವ ರಾಧೆ ಶ್ಯಾಮ್‌ ಚಿತ್ರವು ಮಾರ್ಚ್‌ 11ರಂದು ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ತೆರೆ ಕಾಣಲಿದೆ.

ಸಿನಿಮಾ ಬಿಡುಗಡೆಗೂ ಮುನ್ನ ಚಿತ್ರ ತಂಡವು ಬುಧವಾರ ಅಂತಿಮ ಟ್ರೇಲರ್‌ ಬಿಡುಗಡೆ ಮಾಡಿದೆ. ಹಸ್ತ ನೋಡಿ ಬದುಕಿನ ಮುಂದಿನ ನಡೆ ಮತ್ತು ಸಾವನ್ನೂ ಹೇಳಿ ಬಿಡುವ ವಿಶೇಷ ಜ್ಞಾನ ಹೊಂದಿರುವ ನಾಯಕ, ಪ್ರೀತಿಯ ವಿಚಾರದಲ್ಲಿ ತಪ್ಪಾಗುವ ಆತನ ಅಂದಾಜು, ಎದುರಾಗುವ ಅಡೆ ತಡೆಗಳು,...ಈ ಎಲ್ಲ ದೃಶ್ಯಗಳು ವಿಧಿಯಾಟ ಮತ್ತು ಪ್ರೀತಿ ಜೊತೆಗಿನ ಗುದ್ದಾಟವನ್ನು ತೆರೆದಿಡುತ್ತವೆ.

ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಚೈನೀಸ್‌ ಹಾಗೂ ಜಪಾನಿ ಭಾಷೆಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ರಾಧಾ ಕೃಷ್ಣ ಕುಮಾರ್‌ ಈ ಸಿನಿಮಾ ನಿರ್ದೇಶಿಸಿದ್ದಾರೆ.

1970ರ ದಶಕದಲ್ಲಿ ಯುರೋಪ್‌ ಭಾಗದಲ್ಲಿ ನಡೆಯುವ ಕಥೆ ಇದಾಗಿದೆ. ಆದರೆ, 1936ರ ವರೆಗೂ ಬದುಕಿದ್ದ ಐರ್ಲೆಂಡ್‌ ಮೂಲದ ಹಸ್ತರೇಖಾ ಶಾಸ್ತ್ರಜ್ಞ ವಿಲಿಯಮ್‌ ಜಾನ್‌ ವಾರ್ನರ್‌ (ಕೈರೊ) ಅವರ ಜೀವನದಿಂದ ಸ್ಫೂರ್ತಿ ಪಡೆದು ಪ್ರಭಾಸ್‌ ಅಭಿನಯಿಸಿರುವ ವಿಕ್ರಮಾದಿತ್ಯ ಪಾತ್ರ ಸೃಷ್ಟಿಸಲಾಗಿದೆ. ಎರಡು ಮೂರು ನೈಜ ಘಟನೆಗಳನ್ನೂ ಸಿನಿಮಾ ಕಥೆಯಲ್ಲಿ ಅಳವಡಿಸಲಾಗಿದೆ ಎಂದು ನಿರ್ದೇಶಕರು ತಿಳಿಸಿರುವುದಾಗಿ ವರದಿಯಾಗಿದೆ.

ರಾಧೆ ಶ್ಯಾಮ್‌ ಸಿನಿಮಾ ನಿರ್ಮಾಣವು 2018ರಿಂದಲೂ ನಡೆಯುತ್ತಿದೆ. ಕೋವಿಡ್‌ ಲಾಕ್‌ಡೌನ್‌ ಸೇರಿದಂತೆ ಹಲವು ಸಮಸ್ಯೆಗಳು ಚಿತ್ರ ತಂಡಕ್ಕೆ ಎದುರಾಗಿತ್ತು. ಸಚಿನ್‌ ಖೇಡೆಕರ್‌, ಪ್ರಿಯದರ್ಶಿ ಪುಲಿಕೊಂಡಾ, ಭಾಗ್ಯಶ್ರೀ, ಜಗಪತಿ ಬಾಬು, ಮುರಳಿ ಶರ್ಮಾ, ಕುನಾಲ್‌ ರಾಯ್‌ ಕಪೂರ್‌, ರಿದ್ಧಿ ಕುಮಾರ್‌, ಸಾಶಾ ಚೆಟ್ರಿ, ಸತ್ಯನ್‌ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು