ಭಾನುವಾರ, ಜನವರಿ 19, 2020
23 °C
ಜ. 25ರಂದು ಪ್ರಶಸ್ತಿ ಪ್ರದಾನ

ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಜ. 25ರಂದು ಸಂಜೆ 5.30ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಲಿದೆ.

ದಿವಂಗತ ಡಿ.ವಿ. ಸುಧೀಂದ್ರ ಅವರು ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ. ಅವರು ಸ್ಥಾಪಿಸಿದ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25 ವರ್ಷ ತುಂಬಿದ ವೇಳೆ ನಿರ್ಮಾಪಕರು ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು. ಎರಡು ಪ್ರಶಸ್ತಿಯೊಂದಿಗೆ ಆರಂಭವಾದ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಸಂಸ್ಥೆ ಮೂಲಕ ಪ್ರಶಸ್ತಿ ನೀಡಲು ಮುಂದಾದರು. ಈಗ ಪ್ರಶಸ್ತಿಗಳ ಸಂಖ್ಯೆ 11ಕ್ಕೆ ಏರಿದೆ. ಸಂಸ್ಥೆಯ 43ನೇ ವಾರ್ಷಿಕೋತ್ಸವ ಹಾಗೂ 19ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಿದ್ಧತೆ ನಡೆದಿದೆ.

ಕಾರ್ಯಕ್ರಮದಲ್ಲಿ ಸಂಸ್ಥೆಯಿಂದ ತಯಾರಿಸಿರುವ ಸುಧೀಂದ್ರ ಅವರ ವೃತ್ತಿಜೀವನ ಕುರಿತು ಸಾಕ್ಷ್ಯಚಿತ್ರದ ಪ್ರದರ್ಶನವೂ ಇದೆ ಎಂದು ಸಂಸ್ಥೆಯ ಪತ್ರಿಕಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ತಿಳಿಸಿದ್ದಾರೆ.

ಪ್ರಶಸ್ತಿಯ ವಿವರ

ಹಿರಿಯ ನಿರ್ಮಾಪಕ ಕೆ. ಪ್ರಭಾಕರ್ (ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ), ಸಿನಿಮಾ ಪತ್ರಕರ್ತೆ ಎಸ್.ಜಿ. ತುಂಗಾರೇಣುಕಾ (ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ), ಹಿನ್ನೆಲೆ ಗಾಯಕಿ ಪಿ. ಸುಶೀಲಾ(ಡಾ.ರಾಜ್‍ಕುಮಾರ್ ಪ್ರಶಸ್ತಿ), ನಿರ್ದೇಶಕ ಎಸ್. ಉಮೇಶ್ (ಆರ್. ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ), ಹಿರಿಯ ನಟಿ ಪ್ರಮೀಳಾ ಜೋಷಾಯ್(ಜಯಮಾಲಾ ಎಚ್.ಎಂ. ರಾಮಚಂದ್ರ ಪ್ರಶಸ್ತಿ), ‘ಗರ’ ಚಿತ್ರದ ಅತ್ಯುತ್ತಮ ಸಂಗೀತ ಸಂಯೋಜನೆಗಾಗಿ ಸಾಗರ್ ಗುರುರಾಜ್ (ಎಂ.ಎಸ್. ರಾಮಯ್ಯ ಮೀಡಿಯಾ ಅಂಡ್ ಎಂಟರ್‌ಟೈನ್‍ಮೆಂಟ್ ಪ್ರೈವೇಟ್ ಲಿಮಿಟೆಡ್‌ ಪ್ರಶಸ್ತಿ) ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅತ್ಯುತ್ತಮ ಕಥಾ ಲೇಖಕ ಪ್ರಶಸ್ತಿಯನ್ನು ಸಾಹಿತಿ ಶಿವರಾಮ ಕಾರಂತ(ನಿರ್ದೇಶಕ, ನಿರ್ಮಾಪಕ ಕೆ.ವಿ. ಜಯರಾಂ ಪ್ರಶಸ್ತಿ) ಅವರಿಗೆ ನೀಡಲಾಗುತ್ತಿದೆ. ತೆರೆಯ ಮೇಲೆ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯನ್ನು ತಂದ ನಿರ್ದೇಶಕ ಪಿ. ಶೇಷಾದ್ರಿ ಅವರಿಗೆ ವಿಶೇಷ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.

‘ಬಿಂಬ ಆ ತೊಂಬತ್ತು ನಿಮಿಷಗಳು’ ಚಿತ್ರದಲ್ಲಿನ ಅತ್ಯುತ್ತಮ ಸಂಭಾಷಣೆಗಾಗಿ ಶ್ರೀನಿವಾಸ ಪ್ರಭು(ಚಿತ್ರ ಸಾಹಿತಿ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ), ಚೊಚ್ಚಿಲ ಸಿನಿಮಾ ನಿರ್ದೇಶನಕ್ಕಾಗಿ ನೀಡುವ ಪ್ರಶಸ್ತಿಗೆ ‘ಪ್ರೀಮಿಯರ್‌ ಪದ್ಮಿನಿ’ ಚಿತ್ರದ ನಿರ್ದೇಶಕ ರಮೇಶ್ ಇಂದಿರಾ ಮತ್ತು ‘ಗಂಟುಮೂಟೆ’ ಚಿತ್ರದ ನಿರ್ದೇಶಕಿ ರೂಪಾ ರಾವ್(ಬಿ. ಸುರೇಶ್ ಪ್ರಶಸ್ತಿ) ಆಯ್ಕೆಯಾಗಿದ್ದಾರೆ.

‘ಗಿರ್ಮಿಟ್‌’ ಚಿತ್ರದ ‘ಆರಂಭವೆ ಆರಂಭವೇ...’ ಹಾಡು ಬರೆದ ಕಿನಾಲ್ ರಾಜ್ ಅವರಿಗೆ ಅತ್ಯುತ್ತಮ ಗೀತರಚನೆ ಪ್ರಶಸ್ತಿ ಸಂದಿದೆ(ಹಿರಿಯ ಪತ್ರಕರ್ತ ಪಿ.ಜಿ. ಶ್ರೀನಿವಾಸಮೂರ್ತಿ ಸ್ಮರಣಾರ್ಥ ಪ್ರಶಸ್ತಿ).

ಪೋಷಕ ಕಲಾವಿದ ಪ್ರಶಸ್ತಿಗೆ ರಮೇಶ್ ಭಟ್ (ಹಿರಿಯ ಪತ್ರಕರ್ತ ಸಿ. ಸೀತಾರಾಂ ಸ್ಮರಣಾರ್ಥ ಪ್ರಶಸ್ತಿ) ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು