ರಾಘಣ್ಣನ ಭರ್ಜರಿ 2ನೇ ಇನ್ನಿಂಗ್‌

ಶನಿವಾರ, ಏಪ್ರಿಲ್ 20, 2019
27 °C

ರಾಘಣ್ಣನ ಭರ್ಜರಿ 2ನೇ ಇನ್ನಿಂಗ್‌

Published:
Updated:
Prajavani

ಒಂದೂವರೆ ದಶಕದ ಕಾಲ ನಟ ರಾಘವೇಂದ್ರ ರಾಜ್‌ಕುಮಾರ್‌ ನಟನೆಯಿಂದ ದೂರ ಉಳಿದಿದ್ದರು. ಹಾಗೆಂದು ಅವರು ಚಿತ್ರರಂಗದ ಚಟುವಟಿಕೆಯಿಂದ ದೂರ ಸರಿದಿರಲಿಲ್ಲ. ಚಿತ್ರ ನಿರ್ಮಾಣದ ಜವಾಬ್ದಾರಿಯ ನಡುವೆಯೇ ಅನಾರೋಗ್ಯಕ್ಕೂ ತುತ್ತಾದರು. ಎಲ್ಲಾ ತೊಂದರೆಗಳನ್ನು ಮೆಟ್ಟಿನಿಂತ ಅವರನ್ನು ಮತ್ತೆ ನಟನೆಯ ಅಂಗಳಕ್ಕೆ ಕರೆದೊಯ್ದ ಚಿತ್ರ ‘ಅಮ್ಮನ ಮನೆ’. 

ನಿರ್ದೇಶಕ ನಿಖಿಲ್‌ ಮಂಜೂ ಲಿಂಗಯ್ಯ ‘ಅಮ್ಮನ ಮನೆ’ ಚಿತ್ರದ ಕಥೆ ಹೇಳಿದಾಗ ತನ್ನಿಂದ ಈ ಚಿತ್ರದಲ್ಲಿ ನಟಿಸಲು ಸಾಧ್ಯವೇ ಎಂದು ಅವರು ಆತ್ಮವಿಮರ್ಶೆ ಮಾಡಿಕೊಂಡಿದ್ದರಂತೆ. ಕೊನೆಗೆ, ಸಿನಿಮಾದ ಟೈಟಲ್‌ ಅವರಿಗೆ ಬಹುಬೇಗ ಆಪ್ತವಾಯಿತಂತೆ. ಅದು ದೃಶ್ಯರೂಪ ತಳೆದು ಚಿತ್ರವಾಗಿ ತೆರೆಕಂಡಾಗ ರಾಘಣ್ಣ ಅವರ ನಟನೆಗೆ ಎಲ್ಲೆಡೆ ಪ್ರಶಂಸೆ ಸಿಕ್ಕಿತು. ಅವರು ಅಮ್ಮ(ಪಾರ್ವತಮ್ಮ ರಾಜ್‌ಕುಮಾರ್‌)ನಿಗೆ ಆ ಚಿತ್ರವನ್ನು ಅರ್ಪಿಸಿದರು.

ಇದಾದ ಬಳಿಕ ಅವರು ಬ್ಯಾಕ್‌ ಟು ಬ್ಯಾಕ್‌ ಆಗಿ ಸಿನಿಮಾಗಳಲ್ಲಿ ನಟಿಸುತ್ತಾ ಹೋದರು. ಇದೇ ವಾರ ತೆರೆ ಕಾಣುತ್ತಿರುವ ದಯಾಳ್ ಪದ್ಮನಾಭನ್‌ ನಿರ್ದೇಶನದ ‘ತ್ರಯಂಬಕಂ’ ಚಿತ್ರದಲ್ಲೂ ಅವರು ಅಪ್ಪನ ಪಾತ್ರಕ್ಕೆ ಜೀವ ತುಂಬಿದ್ದಾರೆ. ‘ಆ್ಯಕ್ಷನ್‌ ಪ್ರಿನ್ಸ್‌’ ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರದ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. 

ಅಂದಹಾಗೆ ಫಣೀಶ್ ಭಾರದ್ವಾಜ್‌ ನಿರ್ದೇಶನದ ರಾಘಣ್ಣ ನಟನೆಯ ‘ಆಡಿಸಿದಾತ’ ಚಿತ್ರ ಇತ್ತೀಚೆಗೆ ಸೆಟ್ಟೇರಿದೆ. ಇದು ಅವರ 25ನೇ ಚಿತ್ರ. ದುಡ್ಡು ಮತ್ತು ಮಾನವೀಯತೆ ನಡುವಿನ ಮಹತ್ವ ಹೇಳುವ ಕಥೆ ಇದರಲ್ಲಿದೆಯಂತೆ. ಸಿನಿಮಾದಲ್ಲಿ ಏಳೆಂಟು ಪಾತ್ರಗಳಿದ್ದು ಅವುಗಳನ್ನು ರಾಘಣ್ಣ ಹೇಗೆ ಆಟವಾಡಿಸುತ್ತಾರೆ ಎನ್ನುವುದೇ ಚಿತ್ರದ ತಿರುಳು.

ವರನಟ ರಾಜ್‌ಕುಮಾರ್‌ ಅವರಿಗೆ ಬಿಳಿಉಡುಪುಗಳೆಂದರೆ ಅಚ್ಚುಮೆಚ್ಚು. ಅಣ್ಣಾವ್ರು ನಟಿಸಿದ ಸಿನಿಮಾಗಳು ಶಾಂತಿಯನ್ನು ಪ್ರತಿಪಾದಿಸುತ್ತವೆ. ಹಾಗಾಗಿ, ‘ಅಪ್ಪನ ಅಂಗಿ’ ಸಿನಿಮಾ ಮಾಡಿ ಅಪ್ಪಾಜಿಗೆ ಅರ್ಪಿಸುತ್ತೇನೆ ಎಂದು ರಾಘಣ್ಣ ಹೇಳಿದ್ದಾರೆ. ರಾಜ್‌ ಜನ್ಮದಿನದಂದು ಅಭಿಮಾನಿಗಳಿಗೆ ಸ್ಪೆಷಲ್‌ ಗಿಫ್ಟ್‌ ನೀಡುವುದಾಗಿ ಘೋಷಿಸಿದ್ದಾರೆ. 

ಶಿವರಾಜ್‌ಕುಮಾರ್‌, ರಾಘಣ್ಣ ಮತ್ತು ಪುನೀತ್‌ ರಾಜ್‌ಕುಮಾರ್‌ ಒಟ್ಟಾಗಿ ಸಿನಿಮಾ ಮಾಡುವ ಆಲೋಚನೆಯಲ್ಲಿದ್ದಾರೆ. ಸೂಕ್ತ ಕಥೆಗಾಗಿ ಹುಡುಕಾಟ ನಡೆದಿದೆ. ರಾಘಣ್ಣ ನಟನೆಯ ಎರಡನೇ ಇನ್ನಿಂಗ್‌ ಅನ್ನು ಭರ್ಜರಿಯಾಗಿ ಆರಂಭಿಸಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !