ನಟಿ ರಾಗಿಣಿ ಮೇಲೆ ಬಂಡವಾಳ ಹೂಡಿದ ‘ಗಾಂಧಿಗಿರಿ’ ನಿರ್ಮಾಪಕರ ಅಳಲು ಏನು?

ನಟಿ ರಾಗಿಣಿ ನಟಿಸಿದ ‘ಅಧ್ಯಕ್ಷ ಇನ್ ಅಮೆರಿಕಾ’ ಸಿನಿಮಾ ಕಳೆದ ವರ್ಷ ತೆರೆಕಂಡಿತ್ತು. ಇದಾದ ಬಳಿಕ ಅವರು ‘ಗಾಂಧಿಗಿರಿ’ ಸಿನಿಮಾಕ್ಕೆ ಬಣ್ಣ ಹಚ್ಚಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆಯೇ ಇದರ ಶೂಟಿಂಗ್ ಶುರುವಾಗಿತ್ತು. ಆದರೆ, ಆಮೆಗತಿಯಲ್ಲಿ ಸಾಗಿದ್ದ ಇದರ ಚಿತ್ರೀಕರಣ ಶೇಕಡ 80ರಷ್ಟು ಪೂರ್ಣಗೊಂಡಿದೆ. ಈಗ ಡ್ರಗ್ಸ್ ಜಾಲದಲ್ಲಿ ಭಾಗಿಯಾದ ಆರೋಪದಡಿ ರಾಗಿಣಿ ದ್ವಿವೇದಿ ಬಂಧನಕ್ಕೆ ಒಳಗಾಗಿದ್ದಾರೆ. ಇದೇ 14ರಿಂದ ಉಳಿದ ಭಾಗದ ಚಿತ್ರೀಕರಣಕ್ಕೆ ಸಜ್ಜಾಗಿದ್ದ ‘ಗಾಂಧಿಗಿರಿ’ ಚಿತ್ರತಂಡಕ್ಕೆ ಅವರ ಬಂಧನವು ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.
ಆರ್.ಜೆ. ಸ್ಟುಡಿಯೊನಡಿ ರಾಜೇಶ್ ಪಿ. ಪಟೇಲ್ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ರಘು ಹಾಸನ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಜ್ಯೋಗಿ’ ಚಿತ್ರದ ಖ್ಯಾತಿಯ ಪ್ರೇಮ್, ಅರುಂಧತಿ ನಾಗ್, ರಂಗಾಯಣ ರಘು, ಜೆ.ಡಿ. ಚಕ್ರವರ್ತಿ ಇದರಲ್ಲಿ ನಟಿಸಿದ್ದಾರೆ. ಚಿತ್ರೀಕರಣದಲ್ಲಿ ಭಾಗವಹಿಸುವುದಾಗಿ ಹೇಳಿದ್ದ ರಾಗಿಣಿ ಈಗ ಬಂಧನದಲ್ಲಿದ್ದಾರೆ. ಹಾಗಾಗಿ, ಬಾಕಿ ಉಳಿದಿರುವ ಶೇಕಡ 20ರಷ್ಟು ಚಿತ್ರೀಕರಣವನ್ನು ಸುಸೂತ್ರವಾಗಿ ನಡೆಸಿಕೊಡಲು ಕ್ರಮವಹಿಸಬೇಕು ಎಂದು ನಿರ್ಮಾಪಕ ರಾಜೇಶ್ ಪಟೇಲ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಕೋರಿದ್ದಾರೆ.
‘ಇದೇ 14ರಿಂದ ಚಿತ್ರದ ಉಳಿದ ಭಾಗದ ಶೂಟಿಂಗ್‌ಗೆ ನಿರ್ಧರಿಸಿದ್ದೆವು. ಕಲಾವಿದರು, ತಂತ್ರಜ್ಞರು ಕೂಡ ಒಪ್ಪಿಗೆ ಸೂಚಿಸಿದ್ದರು. ಇದೀಗ ರಾಗಿಣಿಯವರ ವಿಷಯದಲ್ಲಿ ಆಗಿರುವ ಬೆಳವಣಿಗೆಯಿಂದ ಶೂಟಿಂಗ್ ಸ್ಥಗಿತಗೊಂಡಿದೆ. ಚಿತ್ರೀಕರಣದ ಭವಿಷ್ಯ ಕುರಿತು ಚಿತ್ರತಂಡ ಕಂಗಾಲಾಗಿದೆ. ನಾನು ‘ಗಾಂಧಿಗಿರಿ’ ಚಿತ್ರದ ಮೇಲೆ ಸಾಕಷ್ಟು ಹಣ ಹೂಡಿದ್ದೇನೆ. ಇನ್ನುಳಿದ ಚಿತ್ರೀಕರಣಕ್ಕೆ ಬೇಕಾಗಿರುವ ಹಣವನ್ನು ಬಡ್ಡಿಗೆ ತಂದಿದ್ದೇನೆ. ಸದ್ಯಕ್ಕೆ ಮುಂದಿನ ದಾರಿ ತಿಳಿಯದೆ ಕಂಗಾಲಾಗಿದ್ದೇನೆ. ವಾಣಿಜ್ಯ ಮಂಡಳಿಯ ಗಮನಕ್ಕೆ ತರದೆ ನಮಗೆ ಬೇರೆ ದಾರಿಯಿಲ್ಲ. ಸುಸೂತ್ರವಾಗಿ ನಮ್ಮ ಬಾಕಿ ಉಳಿದಿರುವ ಚಿತ್ರೀಕರಣ ನಡೆಸಲು ಅನುವು ಮಾಡಿಕೊಡಬೇಕು’ ಎಂದು ಫಿಲ್ಮ್ ಚೇಂಬರ್‌ಗೆ ಮನವಿ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.