ಶುಕ್ರವಾರ, ನವೆಂಬರ್ 15, 2019
20 °C

‘ರಣಹೇಡಿ’ ಚಿತ್ರ ತೆರೆಗೆ ಬರಲು ಸಿದ್ಧ

Published:
Updated:
ಐಶ್ವರ್ಯ ರಾವ್‌

ದೇಶದ ಬೆನ್ನೆಲುಬಾದ ರೈತರ ಬದುಕು– ಬವಣೆಯನ್ನು ಕಟ್ಟಿಕೊಡಲಿರುವ ‘ರಣಹೇಡಿ’ ಚಿತ್ರ ತೆರೆಗೆ ಬರಲು ಸಿದ್ಧಗೊಂಡಿದೆ. ಚಿತ್ರದ ಶೀರ್ಷಿಕೆ ಹೀಗಿದೆಯಲ್ಲಾ ಎಂದುಕೊಂಡರೆ, ‘ಬಲರಾಮನ ಕಡೆ ನೋಡಿ’ ಎನ್ನುವ ಅಡಿಬರಹ ಚಿತ್ರದ ನಾಯಕನಾದ ರೈತ ರಣಹೇಡಿಯಲ್ಲ, ನಿಜವಾದ ಯೋಧ ಎನ್ನುವ ಸಂದೇಶ ಸಾರುವಂತಿದೆ. ಈ ಚಿತ್ರ ಇದೇ 22ರಂದು ಚಿತ್ರ ತೆರೆಕಾಣಲಿದೆ.

ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯದ ಜತೆಗೆ ನಿರ್ದೇಶನದ ನೊಗಹೊತ್ತಿರುವ ಮನು ಕೆ.ಶೆಟ್ಟಹಳ್ಳಿ, ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದರು.

‘ಇದು ರಿಯಾಲಿಸ್ಟಿಕ್ ಸಿನಿಮಾ‌. ನಾನು ನನ್ನ ಹಳ್ಳಿಯಲ್ಲಿ ನೋಡಿದ, ಅನುಭವಿಸಿದ ಘಟನೆಗಳ ತುಣುಕುಗಳನ್ನು ಹೆಕ್ಕಿ ಕಟ್ಟಿಕೊಟ್ಟಿದ್ದೇನೆ. ಇಂದಿನ ಯುವಜನರನ್ನು‌ ಈ ಸಿನಿಮಾ ಖಂಡಿತಾ ಚಿಂತನೆಗೆ ಹಚ್ಚಲಿದೆ. ಸಮಾಜಿಕ ಸಂದೇಶದ ಜತೆಗೆ ಪ್ರೇಕ್ಷಕರಿಗೆ ಒಳ್ಳೆಯ ಮನರಂಜನೆ ನೀಡಲಿದೆ. ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ಖಂಡಿತಾ ಜಿನುಗುವಂತೆ‌ ಸಿನಿಮಾ ಮಾಡಿದ್ದೇನೆ’ ಎಂದು ಮನು ವಿಶ್ವಾಸ ವ್ಯಕ್ತಪಡಿಸಿದರು.

ಪೋಷಕ ನಟನಾಗಿ ನಟಿಸುತ್ತಿದ್ದ ಮಂಡ್ಯದ ಬಸುಕುಮಾರ್‌ ಈ ಚಿತ್ರದಿಂದ ಕರ್ಣಕುಮಾರ್‌ ಆಗಿ ಹೆಸರು ಬದಲಿಸಿಕೊಂಡಿದ್ದು, ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ.

‘ಇಂದು ಎಲ್ಲರೂ ಮಣ್ಣಿನ ಮಗನನ್ನು ಕೈಬಿಡುತ್ತಿದ್ದಾರೆ. ರೈತರು ನಿಜವಾಗಿಯೂ ಸಮಸ್ಯೆಯ ಸುಳಿಯಲ್ಲಿದ್ದಾರೆ. ಅವರ ಹೋರಾಟಕ್ಕೆ ಕಲೆಯ ಮೂಲಕ ಧ್ವನಿಗೂಡಿಸುವ ಕೆಲಸವನ್ನು ಈ ಚಿತ್ರತಂಡ ಮಾಡಿದೆ. ಇದು ನಿಜವಾದ ಒಬ್ಬ ಮಣ್ಣಿನ‌ಮಗನ ಸಿನಿಮಾ. ಇದರಲ್ಲಿ ರಗಡ್ ಲವ್ ಸ್ಟೋರಿ, ನವಿರು ಸಂಸಾರದ ಬಾಂಧವ್ಯದ ಎಳೆಯೂ ಇದೆ’ ಎಂದರು ಕರ್ಣಕುಮಾರ್‌.

ನಾಯಕಿಯಾಗಿ ನಟಿಸಿರುವ ಐಶ್ವರ್ಯ ರಾವ್‌, ದೇಶದಲ್ಲಿಶೇ. 70ರಷ್ಟು ಜನರು ರೈತರೇ ಇದ್ದಾರೆ. ರೈತರ ಬದುಕನ್ನು ಯಾರೂ ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ. ಈ ಚಿತ್ರ ರೈತನ ಬದುಕನ್ನು ತೆರೆದಿಡಲಿದೆ. ಸಮಾಜಕ್ಕೆ ಉತ್ತಮ ಸಂದೇಶವನ್ನೂ ನೀಡಲಿದೆ ಎಂದರು. 

ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವ ವಿ.ಮನೋಹರ್, ನಿರ್ದೇಶಕರು ಕಥೆ ಹೇಳಿದಾಗ ಒಂದು ಸಿನಿಮಾ ನೋಡಿದ ಅನುಭವವೇ ಆಯಿತು. ಆಧುನಿಕತೆಗೆ ಸಿಕ್ಕಿ ಹಳ್ಳಿಗಳ ನೈಜ ಸ್ವರೂಪ ಬದಲಾಗಿರುವಾಗ ಈ ಚಿತ್ರದಲ್ಲಿ ಗ್ರಾಮೀಣ ಸೊಗಡು ಹಾಸುಹೊಕ್ಕಾಗಿ ಕಾಣಿಸಿದೆ ಎಂದರು.

ಚಿತ್ರಕ್ಕೆ ನಿರ್ಮಾಪಕ ಸುರೇಶ್ ಸೃಷ್ಟಿ ಎಂಟರ್ ಪ್ರೈಸಸ್‌ ಮೂಲಕ ಬಂಡವಾಳ ಹೂಡಿದ್ದಾರೆ.

ಛಾಯಾಗ್ರಹಣ ಕುಮಾರ್‌ಗೌಡ, ಸಂಕಲನ ನಾಗೇಂದ್ರ ಅರಸ್ ಅವರದ್ದು. ತಾರಾಗಣದಲ್ಲಿ ಟಾಲಿವುಡ್‌ನ ಷಫಿ, ಜಾನಪದ ಗಾಯಕ ಮಳವಳ್ಳಿಯ ನಾಗೇಂದ್ರ, ರಘುಪಾಂಡೆ, ಸತೀಶ್, ಅಚ್ಯುತ ಕುಮಾರ್, ಆಶಾ ಲತಾ, ಬೇಬಿ ಚೈತನ್ಯ ಇದ್ದಾರೆ.

ಪ್ರತಿಕ್ರಿಯಿಸಿ (+)