ಭಾನುವಾರ, ನವೆಂಬರ್ 29, 2020
22 °C

ರಾಜ್‌ ನೆನಪು ಮರುಕಳಿಸುವಂತಿದೆ ‘ಯುವ ರಣಧೀರ ಕಂಠೀರವ’ ಟೈಟಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ವರನಟ’ ಡಾ.ರಾಜ್‌ ಕುಟುಂಬದ ಕುಡಿ ಯುವರಾಜ್‌ಕುಮಾರ್‌ ಯಾನೆ ಗುರು ರಾಜ್‌ಕುಮಾರ್‌ ನಟಿಸುತ್ತಿರುವ ಚೊಚ್ಚಲ ಸಿನಿಮಾದ ಟೈಟಲ್‌ ಅನಾವರಣಗೊಂಡಿದೆ. ಚಿತ್ರದ ಹೆಸರು ‘ಯುವ ರಣಧೀರ ಕಂಠೀರವ’.

ಕನ್ನಡ ರಾಜ್ಯೋತ್ಸವದಂದೇ ಚಿತ್ರದ ಟೈಟಲ್‌ ಬಿಡುಗಡೆಯಾಗಿದೆ. ‘ದೊಡ್ಮನೆ’ ನಟರ ಅಭಿಮಾನಿಗಳಿಗೆ ಡಬಲ್‌ ಖುಷಿ ನೀಡುವಂತೆ ಚಿತ್ರದ 5 ನಿಮಿಷದ ಟ್ರೈಲರ್‌ ಕೂಡ ಯೂಟೂಬ್‌ನ ಪಿಆರ್‌ಕೆ ಆಡಿಯೊ ಚಾನೆಲ್‌ ಮೂಲಕ ಬಿಡುಗಡೆಯಾಗಿದೆ. ಸಖತ್‌ ಥ್ರಿಲ್ಲಿಂಗ್‌ ಆಗಿರುವ ಟ್ರೈಲರ್‌ ಸದ್ಯ ಟ್ರೆಂಡಿಂಗ್‌ನಲ್ಲಿದೆ. ಬಿಡುಗಡೆಯಾದ ಒಂದೇ ದಿನದಲ್ಲಿ ಸುಮಾರು 3 ಲಕ್ಷ ವೀಕ್ಷಕರ ಸಂಖ್ಯೆ ದಾಟಿದೆ!

ಈ ಚಿತ್ರವನ್ನು ಎಷ್ಟೊಂದು ಅದ್ಧೂರಿಯಾಗಿ ನಿರ್ಮಿಸಬೇಕೆಂಬ ಕನಸನ್ನು ನಿರ್ದೇಶಕ ಪುನೀತ್‌ ರುದ್ರನಾಗ್‌ ಈ ಟ್ರೈಲರ್‌ನಲ್ಲಿ ತೆರೆದಿಟ್ಟಿದ್ದಾರೆ. ರಾಜ್‌ ನಟನೆಯ ಐತಿಹಾಸಿಕ ಚಿತ್ರಗಳನ್ನು ನೆನಪಿಸುವಂತೆ ಯುವ ಕೂಡ ಖಡಕ್ ಆಗಿಯೇ ಡೈಲಾಗ್ ಹೊಡೆದಿದ್ದಾರೆ. ಜೊತೆಗೆ ಸಾಹಸ ಸನ್ನಿವೇಶಗಳಲ್ಲಿ ಮಿಂಚಿದ್ದಾರೆ. ಇದಕ್ಕಾಗಿ ದೇಹ ಹುರಿಗೊಳಿಸಿ, ಗಡ್ಡಧಾರಿಯ ಲುಕ್‌ನಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಮಂಗಳಾ ದಂಪತಿಯ ಎರಡನೇ ಪುತ್ರ ಯುವರಾಜ್‌ ಕುಮಾರ್‌ ಸಖತ್‌ ಸಿದ್ಧತೆ ಮಾಡಿಕೊಂಡೇ ಸ್ಯಾಂಡಲ್‌ವುಡ್‌ಗೆ ಅಡಿ ಇಡುತ್ತಿದ್ದಾರೆ. ಡಾ.ರಾಜ್‌ಕುಮಾರ್‌ ಹುಟ್ಟುಹಬ್ಬದಂದು ‘ಯುವ 01’ ಹೆಸರಿನಲ್ಲಿ ಬಿಡುಗಡೆಯಾಗಿದ್ದ ಚಿತ್ರದ ಪೋಸ್ಟರ್‌ ಚಿತ್ರರಸಿಕರಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿತ್ತು.

‘ಯೂಟೂಬ್‌ ಚಾನೆಲ್‌ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೈಲರ್‌ ಸದ್ಯ ನಂ.1 ಟ್ರೆಂಡಿಂಗ್‌ನಲ್ಲಿದೆ. ನನ್ನ ನಿರೀಕ್ಷೆ ಮೀರಿ ಟ್ರೈಲರ್‌ಗೆ ಸ್ಪಂದನೆ ಸಿಗುತ್ತಿದೆ. ಗೇಮಿಂಗ್‌ ಕಂಪನಿಗಳು ಈ ಟ್ರೈಲರ್‌ ಅನ್ನು ತುಂಬಾ ಇಷ್ಟಪಟ್ಟಿವೆ. ನಿಜ ಹೇಳಬೇಕೆಂದರೆ ನಾನು ತುಂಬಾ ಭಾವುಕನಾಗಿದ್ದೇನೆ. ನನ್ನ ಬಾಯಿಯಿಂದ ಪದಗಳೇ ಬರುತ್ತಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ ನಿರ್ದೇಶಕ ಪುನೀತ್‌ ರುದ್ರನಾಗ್‌. ‘ಕೆಜಿಎಫ್‌ ಚಾಪ್ಟರ್‌ 1’ ಚಿತ್ರದಲ್ಲಿ ನಿರ್ದೇಶಕ ಪ್ರಶಾಂತ್‌ ನೀಲ್‌ ಜತೆಗೆ ಸಹ ನಿರ್ದೇಶಕನಾಗಿ ಮತ್ತು ಆ ಚಿತ್ರದ ‘ರುಗ್ಗ’ ಪಾತ್ರದಲ್ಲಿ ಗಮನ ಸೆಳೆದಿದ್ದರು. ಅವರು ಹಾಡಿದ ‘ಸಲಾಂ ರಾಖಿ ಭಾಯ್‌’ ಹಾಡು ಕೂಡ ಚಿತ್ರರಸಿಕರ ಗಮನ ಸೆಳೆದಿದೆ. ಪ್ರಶಾಂತ್‌ ನೀಲ್‌ ಗರಡಿಯಲ್ಲಿ ಪಳಗಿರುವ ಪುನೀತ್‌, ‘ಯುವ ರಣಧೀರ ಕಂಠೀರವ’ ಸ್ಕ್ರಿಪ್ಟ್‌ಗೆ ಪ್ರಶಾಂತ್‌ ಅವರ ಸಾಕಷ್ಟು ಸಲಹೆಗಳನ್ನು ಹೆಜ್ಜೆಹೆಜ್ಜೆಗೂ ಪಡೆದಿದ್ದಾರೆ.

ಅದ್ಧೂರಿಯಾಗಿ ನಡೆದ ಟೈಟಲ್‌ ಅನಾವರಣ ಕಾರ್ಯಕ್ರಮದಲ್ಲಿ ಡಾ.ರಾಜ್‌ ಪರಿವಾರ ಮತ್ತು ಸಿನಿರಂಗದ ಹಲವು ಖ್ಯಾತನಾಮರು ಸೇರಿದ್ದರು.

‘ಯುವ ನಮ್ಮ ಮನೆಯ ಮಗ. ನಾವು ಏನೇ ಮಾತನಾಡಿದರೂ, ಹೆಚ್ಚಾಗಿ ಮಾತನಾಡಿದಂತಾಗುತ್ತದೆ. ಈ ಸಿನಿಮಾಗೆ ಒಂದು ಶೋ ರೀಲ್‌ನಂತೆ ಐದು ನಿಮಿಷದ ವಿಡಿಯೋ ಮಾಡಿದ್ದಾರೆ. ಯುವನಲ್ಲಿರುವ ಪ್ರತಿಭೆ ಅನಾವರಣಗೊಳಿಸುವ ಉದ್ದೇಶದಿಂದ ನಿರ್ದೇಶಕ ಪುನೀತ್ ಮಾಡಿದ್ದಾರೆ ಎನಿಸುತ್ತದೆ. ಶೂಟಿಂಗ್‌ ಸೆಟ್‌ಗೆ ನಾನು ಸಹ ಭೇಟಿ ನೀಡಿದ್ದೆ. ಯುವ ತುಂಬಾ ಕಷ್ಟಪಟ್ಟಿದ್ದಾನೆ, ಶ್ರದ್ಧೆಯಿಂದ ಕೆಲಸ ಮಾಡಿದ್ದಾನೆ. ಸ್ಟಂಟ್ ಉತ್ತಮವಾಗಿ ಮಾಡಿದ್ದಾನೆ. ಒಬ್ಬ ಪ್ರೇಕ್ಷಕನಾಗಿ ಆತನ ಸಂಭಾಷಣೆಯ ಶೈಲಿ ನನಗೆ ಇಷ್ಟವಾಯ್ತು. ಆ ಸಂಭಾಷಣೆ ಕೇಳಿದಾಗ ಅಪ್ಪಾಜಿ ನೆನಪಾದರು’ ಎಂದರು ನಟ ಪುನೀತ್‌ ರಾಜ್‌ಕುಮಾರ್‌.

‘ಇದು ಯುವನಿಗಷ್ಟೇ ಲಾಂಚಿಂಗ್‌ ಸಿನಿಮಾ ಅಲ್ಲ, ಇಡೀ ತಂಡಕ್ಕೆ ಇದು ಲಾಂಚಿಂಗ್‌ ಸಿನಿಮಾ’ ಎನ್ನುವ ಮಾತು ಸೇರಿಸಿದರು ರಾಘವೇಂದ್ರ ರಾಜ್‌ಕುಮಾರ್‌.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು