ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜನಿಯ ನಟನೆ ಧ್ಯಾನ

Last Updated 6 ಡಿಸೆಂಬರ್ 2018, 20:01 IST
ಅಕ್ಷರ ಗಾತ್ರ

‘ರಿ ಯಲ್‌ ಲೈಫ್‌ನಲ್ಲಿ ನನ್ನದು ಮೊದ್ದು ಸ್ವಭಾವ. ರೀಲ್‌ ಬದುಕಿನಲ್ಲೂ ಅಂತಹದ್ದೇ ಪಾತ್ರ ಸಿಕ್ಕಿದೆ’ ಎಂದು ಹೂನಗೆ ಚೆಲ್ಲಿದರು ನಟಿ ರಜನಿ ಭಾರದ್ವಾಜ್. ತಾನು ಹೇಳಿದ ಮಾತಿನಲ್ಲಿ ತಪ್ಪು ಇದೆಯೇನೊ ಎಂದು ಗಲಿಬಿಲಿಗೊಂಡ ಅವರು, ‘ನನಗೆ ಕೊಂಚ ಶಾರ್ಪ್‌ನೆಸ್‌ ಕಡಿಮೆ ಅಷ್ಟೇ’ ಎಂದು ಮಾತು ವಿಸ್ತರಿಸಿ ನಕ್ಕರು.

ಹಾಸ್ಯನಟ ನರಸಿಂಹರಾಜು ಅವರ ಮೊಮ್ಮಗ ಎಸ್‌.ಡಿ. ಅರವಿಂದ್‌ ನಿರ್ದೇಶನದ ‘ಮಟಾಶ್‌’ ಚಿತ್ರ ಈ ಶುಕ್ರವಾರ ತೆರೆಕಾಣುತ್ತಿದೆ. ಇದು ರಜನಿ ನಟನೆಯ ಮೊದಲನೇ ಸಿನಿಮಾ. ಈ ಚಿತ್ರ ತಮ್ಮ ನಟನಾ ಪಯಣದ ದಿಕ್ಕು ಬದಲಿಸಲಿದೆ ಎಂಬ ವಿಶ್ವಾಸ ಅವರಲ್ಲಿದೆ. ಇದಕ್ಕೂ ಮೊದಲು ಅವರು ‘ಪಾಚಿ: ಪಾಪಿ ಚಿರಾಯು’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದರು.

ರಜನಿ ಹುಟ್ಟಿದ್ದು ಮೈಸೂರಿನಲ್ಲಿ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಎಂಬಿಎ ಪದವಿ ಪೂರೈಸಿದ್ದು ಅಲ್ಲಿಯೇ. 2013ರಲ್ಲಿ ‘ಮಿಸ್‌ ಕರ್ನಾಟಕ’ ಕಿರೀಟ ಧರಿಸಿದರು. ಆಗ ಅವರು ನಟನೆಯತ್ತ ಹೊರಳಲಿಲ್ಲ. ಸ್ನಾತಕೋತ್ತರ ಶಿಕ್ಷಣ ಪೂರೈಸಿದ ಬಳಿಕ ಉದ್ಯೋಗ ಅರಸಿ ನೇರವಾಗಿ ಆಸ್ಟ್ರೇಲಿಯಾಕ್ಕೆ ಹಾರಿದರು. ಮೂರು ತಿಂಗಳ ಕಾಲ ಅಲ್ಲಿ ಕೆಲಸ ಮಾಡಿದರು. ಖಾಸಗಿ ಕಂಪನಿಯು ಮೂರು ವರ್ಷದ ಒಪ್ಪಂದಕ್ಕೆ ಸಹಿ ಹಾಕುವಂತೆ ಕೇಳಿತಂತೆ. ಇದಕ್ಕೆ ಅವರ ಮನಸ್ಸು ಒಪ್ಪಲಿಲ್ಲ. ನೇರವಾಗಿ ಮೈಸೂರಿನತ್ತ ಲೋಹದ ಹಕ್ಕಿ ಹತ್ತಿದರು.

‘ಬೆಳಿಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಐದು ಗಂಟೆವರೆಗೆ ಕೆಲಸ ಮಾಡುವ ಹುಡುಗಿ ನಾನಲ್ಲ. ಅಂತಹ ಕೆಲಸ ಮಾಡಲು ನನಗೆ ಎಳ್ಳಷ್ಟೂ ಇಷ್ಟವಿಲ್ಲ. ಆ ವ್ಯವಸ್ಥೆಗೆ ನಾನು ಅಂಟಿಕೊಳ್ಳುವುದಿಲ್ಲ. ಹಾಗಾಗಿ, ಆಟಿಸಂಗೆ ತುತ್ತಾದ ಮಕ್ಕಳ ಪೋಷಣೆ ಮಾಡುವ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಈಗಲೂ ಅಲ್ಲಿಯೇ ಕೆಲಸ ಮುಂದುವರಿಸಿದ್ದೇನೆ’ ಎನ್ನುತ್ತಾರೆ ಅವರು.

ಬಾಲ್ಯದಲ್ಲಿಯೇ ನಟನಾ ಕ್ಷೇತ್ರ ಅವರನ್ನು ಸೆಳೆದಿತ್ತು. ಅವರು ಶಾಲಾ, ಕಾಲೇಜಿನ ಸಾಂಸ್ಕೃತಿಕ ವೇದಿಕೆಗಳಲ್ಲಿ ಪ್ರತಿಭೆ ಪ್ರದರ್ಶನ ಮಾಡಿದ್ದೂ ಉಂಟು. ಆದರೆ, ನಟನೆಗೆ ಅವರಿಗೆ ಸೂಕ್ತ ವೇದಿಕೆ ಸಿಕ್ಕಿರಲಿಲ್ಲ. ‘ಮಟಾಶ್‌ ಚಿತ್ರದ ಆಡಿಷನ್‌ ನಡೆಯುತ್ತಿರುವ ಬಗ್ಗೆ ಸ್ನೇಹಿತೆಯೊಬ್ಬಳು ಹೇಳಿದಳು. ಅವಳೊಟ್ಟಿಗೆ ತೆರಳಿ ಆಡಿಷನ್‌ ಕೊಟ್ಟೆ. ಅರವಿಂದ್ ಸರ್ ನನ್ನನ್ನು ಸೆಲೆಕ್ಟ್‌ ಮಾಡಿದಾಗ ನನಗೆ ನಂಬಲು ಆಗಲಿಲ್ಲ’ ಎಂದು ಸಿನಿಮಾಯಾನ ಆರಂಭಗೊಂಡ ಸಂದರ್ಭವನ್ನು ಮೆಲುಕು ಹಾಕುತ್ತಾರೆ.

‘ಶೂಟಿಂಗ್‌ ನಿಗದಿಯಾದ ದಿನದಂದೇ ನನ್ನ ಅಪ್ಪನ ಹುಟ್ಟುಹಬ್ಬವಿತ್ತು. ಅವರೊಟ್ಟಿಗೆ ಅಂಡಮಾನ್‌ಗೆ ತೆರಳುವ ಯೋಜನೆ ಇತ್ತು. ನಿಗದಿತ ಅವಧಿಗೆ ಶೂಟಿಂಗ್‌ ಮುಗಿಯುತ್ತದೆಯೇ ಎಂಬ ಗೊಂದಲದಲ್ಲಿದ್ದೆ. ಕೊನೆಗೆ ನಿರ್ದೇಶಕರೇ ನನ್ನ ಪರಿಸ್ಥಿತಿ ಅರಿತುಕೊಂಡು ನಿಗದಿತ ದಿನಕ್ಕೂ ಮೊದಲೇ ಶೂಟಿಂಗ್‌ ಆರಂಭಿಸಿದರು’ ಎಂದು ಸ್ಮರಿಸುತ್ತಾರೆ.

ರಜನಿ ಭರತನಾಟ್ಯ ಕಲಾವಿದೆ. ಸಾಲ್ಸಾ ಸೇರಿದಂತೆ ಪಾಶ್ಚಾತ್ಯ ನೃತ್ಯಗಳನ್ನೂ ಅಭ್ಯಾಸ ಮಾಡಿದ್ದಾರೆ. ಇದು ಅವರ ನಟನಾ ಬದುಕಿಗೆ ನೆರವಾಗುತ್ತಿದೆ.ಪಿ.ವಿ. ಶಂಕರ್‌ ನಿರ್ದೇಶನದ ಹಂಸಲೇಖ ಸಂಗೀತವಿರುವ ‘ಅಮರ ಚಿತ್ರಕಥಾ’ ಚಿತ್ರಕ್ಕೂ ಅವರ ನಾಯಕಿ. ಹಾರರ್‌, ಥ್ರಿಲ್ಲರ್‌ ಕಥೆ ಇದು. ಜೊತೆಗೆ, ಕನ್ನಡ ಮತ್ತು ತಮಿಳು ಭಾಷೆಯಲ್ಲಿ ನಿರ್ಮಾಣವಾಗಿರುವ ‘ತ್ರಯ’ ಚಿತ್ರದಲ್ಲೂ ಅವರು ನಟಿಸಿದ್ದಾರೆ. ಇದು ಸೈಕಲಾಜಿಕಲ್‌ ಥ್ರಿಲ್ಲರ್‌, ಮರ್ಡರ್‌ ಮಿಸ್ಟರಿ ಕಥೆ. ಕೃಷ್ಣ ಇದರ ನಿರ್ದೇಶಕರು.

‘ಈ ಎರಡೂ ಚಿತ್ರಗಳಲ್ಲಿ ಪೂರ್ತಿ ಬೇರೆಯದೇ ರೀತಿಯ ಪಾತ್ರಗಳಲ್ಲಿ ನಟಿಸಿದ್ದೇನೆ. ಜನರಿಗೆ ನನ್ನ ಪಾತ್ರ ಇಷ್ಟವಾಗಲಿದೆ’ ಎನ್ನುವುದು ಅವರ ವಿಶ್ವಾಸ.

‘ಚಿತ್ರರಂಗಕ್ಕೆ ನಾನು ಹೊಸಬಳು. ಸವೆಸುವ ಹಾದಿ ಬಹಳಷ್ಟಿದೆ. ಇಂತಹದ್ದೇ ಪಾತ್ರ ಬೇಕೆಂಬ ಬೇಡಿಕೆ ಇಲ್ಲ. ಎಲ್ಲ ತರಹದ ಪಾತ್ರಗಳು ಇಷ್ಟ. ಸಿಗುವ ಪಾತ್ರಗಳಿಗೆ ಜೀವ ನೀಡುವುದಷ್ಟೇ ನನ್ನ ಕೆಲಸ’ ಎನ್ನುತ್ತಾರೆ ಅವರು.

‘ಆಟಿಸಂನಿಂದ ಬಳಲುತ್ತಿರುವ ಮಕ್ಕಳೊಟ್ಟಿಗೆ ಕೆಲಸ ಮಾಡುವುದು ಸುಲಭವಲ್ಲ. ಅವರೊಟ್ಟಿಗೆ ಬೆರೆಯುವುದಕ್ಕೂ ಮೊದಲು ನಾವು ಸಾಕಷ್ಟು ಕಲಿಯಬೇಕಿದೆ. ಆ ಮಕ್ಕಳ ಜೊತೆಗೆ ಬೆರೆತಾಗ ಬದುಕಿನಲ್ಲಿ ನಾವು ಕಲಿಯುವುದು ಇನ್ನೂ ಇದೆ ಅನಿಸುತ್ತದೆ. ನಾನಿನ್ನೂ ಕಲಿಯುತ್ತಲೇ ಇದ್ದೇನೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT