ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪುಗೆ ‘ಕರ್ನಾಟಕ ರತ್ನ‘ ಪ್ರಶಸ್ತಿ ಪ್ರದಾನ: ಮಳೆಯಲಿ ಮಿಂದ ಅಭಿಮಾನಿಗಳು

Last Updated 2 ನವೆಂಬರ್ 2022, 9:53 IST
ಅಕ್ಷರ ಗಾತ್ರ

ಬೆಂಗಳೂರು: ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಮತ್ತು ಸಹಸ್ರಾರು ಅಭಿಮಾನಿಗಳ ಹರ್ಷೋದ್ಗಾರಗಳ ಮಧ್ಯೆಯೇ, ನಾಡಿನ ಜನರ ಮನಗೆದ್ದ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮಂಗಳವಾರ ಸಂಜೆ ನಡೆದ ಸಮಾರಂಭದಲ್ಲಿ, ಪುನೀತ್‌ ಅವರನ್ನು ಕಳೆದುಕೊಂಡು ಆಗಸವೇ ಅಳುತ್ತಿದೆ ಯೇನೋ ಎಂಬಂತೆ ಭೋರ್ಗರೆದು ಸುರಿಯುತ್ತಿದ್ದ ವರ್ಷಧಾರೆಯ ನಡುವೆಯೇ ಛತ್ರಿಯ ಆಸರೆಯಲ್ಲಿ ಸಮಾರಂಭ ನಡೆಯಿತು. ತಂದೆ ಡಾ. ರಾಜ್‌ಕುಮಾರ್‌ ಅವರಿಗೆ 30 ವರ್ಷಗಳ ಹಿಂದೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಿದ್ದ ಸ್ಥಳದಲ್ಲೇ ಪುನೀತ್‌ ಅವರಿಗೂ ಇದೇ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಪುನೀತ್‌ ಅವರ ಪತ್ನಿ ಅಶ್ವಿನಿ ಪ್ರಶಸ್ತಿ ಸ್ವೀಕರಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು. ಚಿತ್ರನಟರಾದ ರಜನಿಕಾಂತ್‌, ನಂದಮೂರಿ ತಾರಕ ರಾಮರಾವ್‌ (ಜೂನಿಯರ್‌ ಎನ್‌.ಟಿ.ಆರ್‌.), ಇನ್ಫೊಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾ ಮೂರ್ತಿ, ಪುನೀತ್‌ ಅವರ ಅಣ್ಣಂದಿರಾದ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಸಹೋದರಿಯರು ಸೇರಿದಂತೆ ಕುಟುಂಬದ ಸದಸ್ಯರು, ಸಚಿವರಾದ ಆರ್‌. ಅಶೋಕ, ವಿ. ಸುನಿಲ್‌ ಕುಮಾರ್‌, ವಿ. ಸೋಮಣ್ಣ, ಎಸ್‌.ಟಿ. ಸೋಮ ಶೇಖರ್‌, ಬಿ.ಸಿ. ನಾಗೇಶ್‌, ಬೈರತಿ ಬಸವ ರಾಜ, ಡಾ.ಕೆ. ಸುಧಾಕರ್‌, ಮುನಿರತ್ನ, ವಿಧಾನ ಪರಿಷತ್‌ ಹಂಗಾಮಿ ಸಭಾಪತಿ ರಘುನಾಥರಾವ್‌ ಮಲ್ಕಾಪೂರೆ, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರಿಜ್ವಾನ್‌ ಅರ್ಷದ್‌, ಉದಯ್‌ ಗರುಡಾಚಾರ್‌ ಸೇರಿ ಹಲವರು ವೇದಿಕೆಯಲ್ಲಿದ್ದರು.

ಪುನೀತ್‌ ‘ಕರ್ನಾಟಕ ರತ್ನ’ ಗೌರವಕ್ಕೆ ಪಾತ್ರರಾದ ಹತ್ತನೇ ವ್ಯಕ್ತಿ. 1992ರಲ್ಲಿ ರಾಷ್ಟ್ರಕವಿ ಕುವೆಂಪು ಮತ್ತು ವರನಟ ಡಾ.ರಾಜ್‌ಕುಮಾರ್‌ ಅವರಿಗೆ ಮೊದಲ ಬಾರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರಿಗೆ 2009ರಲ್ಲಿ ಈ ಗೌರವ ನೀಡಲಾಗಿತ್ತು. 13 ವರ್ಷಗಳ ಬಳಿಕ ಪುನೀತ್‌ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿಯ ಗೌರವ ಸಂದಿದೆ.

ಪ್ರಶಸ್ತಿ ಪ್ರದಾನ ಮಾಡುತ್ತಿದ್ದಂತೆಯೇ ವಿಧಾನಸೌಧದ ಮುಂಭಾಗದ ಆವರಣ ಮತ್ತು ರಸ್ತೆಯ ಮೇಲೆ ಸೇರಿದ್ದ ಹತ್ತಾರು ಸಾವಿರ ಮಂದಿ ‘ಅಪ್ಪು ಅಪ್ಪು’ ಎಂಬ ಘೋಷಣೆ ಕೂಗಿ ಸಂಭ್ರಮಿಸಿದರು. ಸುರಿಯುವ ಮಳೆಯನ್ನೂ ಲೆಕ್ಕಿಸದೆ ಕನ್ನಡ ಬಾವುಟ ಮತ್ತು ಪುನೀತ್‌ ಭಾವಚಿತ್ರಗಳನ್ನು ಮೇಲಕ್ಕೆತ್ತಿ ಜೈಕಾರ ಹಾಕುತ್ತಾ ಕುಣಿದು ಕುಪ್ಪಳಿಸಿದರು.

ಮಳೆಯಿಂದ ಕಾರ್ಯಕ್ರಮ ಮೊಟಕು: ಸಂಜೆ 4 ಗಂಟೆಗೆ ನಡೆಯಬೇಕಿದ್ದ ಪ್ರಶಸ್ತಿ ಪ್ರದಾನ ಸಮಾರಂಭ 5 ಗಂಟೆಯ ಸುಮಾರಿಗೆ ಆರಂಭವಾಯಿತು. ಅತಿಥಿ ಗಳು ವೇದಿಕೆ ಏರುತ್ತಿದ್ದಂತೆಯೇ ಮಳೆ ಸುರಿಯಲಾರಂಭಿಸಿತು. ಮಳೆ ಜೋರಾಗುವ ಲಕ್ಷಣ ಅರಿತ ಮುಖ್ಯಮಂತ್ರಿಯವರು, ಸ್ವಾಗತ, ಪ್ರಾಸ್ತಾ ವಿಕ ನುಡಿ ಸೇರಿದಂತೆ ಎಲ್ಲ ಔಪಚಾರಿಕ ಪ್ರಕ್ರಿಯೆಗಳಿಗೂ ಕಡಿವಾಣ ಹಾಕಿದರು.

ನೇರವಾಗಿ ತಾವೇ ನಿರೂಪಕರ ಹೊಣೆ ವಹಿಸಿಕೊಂಡ ಬೊಮ್ಮಾಯಿ, ರಜನಿಕಾಂತ್‌ ಅವರನ್ನು ಭಾಷಣಕ್ಕೆ ಆಹ್ವಾನಿಸಿದರು. ನಂತರ ಜೂನಿಯರ್‌ ಎನ್‌.ಟಿ.ಆರ್‌. ಅವರ ಭಾಷಣಕ್ಕೆ ಅವಕಾಶ ಕಲ್ಪಿಸಿದರು. ಅವರ ಮಾತು ಮುಗಿಯುತ್ತಿದ್ದಂತೆ ಚುಟುಕಾಗಿ ತಮ್ಮ ಮಾತುಗಳನ್ನು ಮುಗಿಸಿ, ಪ್ರಶಸ್ತಿ ಪ್ರದಾನ ಮಾಡಿದರು.

ಅಪ್ಪು ದೇವರ ಮಗು: ರಜನಿಕಾಂತ್

‘ಡಾ.ರಾಜ್‌ಕುಮಾರ್‌ ಸೇರಿದಂತೆ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರಾಗಿರುವ ಉಳಿದ ಎಲ್ಲರೂ 70 ವರ್ಷಗಳಲ್ಲಿ ಮಾಡಿರುವ ಸಾಧನೆಯನ್ನು ನಮ್ಮ ಪ್ರೀತಿಯ ಪುನೀತ್‌ ರಾಜ್‌ಕುಮಾರ್‌ 21 ವರ್ಷಗಳಲ್ಲೇ ಮಾಡಿ ಹೋಗಿದ್ದಾನೆ’ ಎಂದು ನಟ ರಜನಿಕಾಂತ್‌ ಹೇಳಿದರು.

ಕನ್ನಡದಲ್ಲೇ ಮಾತನಾಡಿದ ಅವರು, ‘ಮಾರ್ಕಂಡೇಯ, ಪ್ರಹ್ಲಾದ, ನಚಿಕೇತ ನಂತೆ ಕಲಿಯುಗದಲ್ಲಿ ಈ ಅಪ್ಪು. ಅವನು ದೇವರ ಒಬ್ಬ ಮಗು. ಸ್ವಲ್ಪ ದಿನ ಇಲ್ಲಿಗೆ ಬಂದು ನಮ್ಮ ಜತೆ ಇದ್ದು ಆಟವಾಡಿ, ತನ್ನಲ್ಲಿ ಇರುವುದನ್ನೆಲ್ಲ ತೋರಿಸಿ ದೇವರ ಹತ್ತಿರ ಹೋಗಿದ್ದಾನೆ. ಅವನ ಆತ್ಮ ಇಲ್ಲೇ ನಮ್ಮ ಸುತ್ತವೇ ಇದೆ. ಬಹಳ ದೊಡ್ಡ ಜೀವ ಅದು’ ಎಂದರು.

ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಮಳೆ ಕೊಂಚ ಕಡಿಮೆಯಾಗಿದ್ದನ್ನು ಗಮನಿಸಿದ ರಜನಿಕಾಂತ್‌ ಮತ್ತೆ ಮಾತಿಗಿಳಿದರು. ಪುನೀತ್‌ ಅವರು 4 ವರ್ಷಗಳ ಪುಟ್ಟ ಮಗುವಾಗಿ ಪರಿಚಯವಾದದ್ದು, ಅವರ ಬೆಳವಣಿಗೆಯನ್ನು ಸ್ಮರಿಸಿದರು.

ರಾಜ್ ಅವರು ಪ್ರತಿವರ್ಷ ಶಬರಿಮಲೆಗೆ ಹೋಗುತ್ತಿದ್ದರು. 48 ಕಿ.ಮೀ ದೂರ ಅಪ್ಪುವನ್ನು ಹೆಗಲ ಮೇಲೆಯೇ ಕೂರಿಸಿಕೊಂಡು ನಡೆದೇ ಹೋಗುತ್ತಿದ್ದರು.

ಇರುಮುಡಿ ಕಟ್ಟಿದ ಬಳಿಕ ಶಬರಿಮಲೆಗೆ ಹೊರಡುವ ಮುನ್ನ ಯಾವಾಗಲೂ ಖ್ಯಾತಗಾಯಕ ವೀರಮಣಿ ಅವರು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಭಜನೆ ಆರಂಭಿಸುತ್ತಿದ್ದರು.

‘ಒಳ್ಳೆಯತನದಿಂದ ರಾಜ್ಯ ಗೆದ್ದ ವ್ಯಕ್ತಿ’

‘ಯುದ್ಧ ಮಾಡದೆ, ಕೇವಲ ವ್ಯಕ್ತಿತ್ವ, ನಗು ಮತ್ತು ಅಹಂಕಾರವಿಲ್ಲದ ಒಳ್ಳೆಯತನದಿಂದ ರಾಜ್ಯ ಗೆದ್ದ ವ್ಯಕ್ತಿ ಪುನೀತ್‌ ರಾಜ್‌ಕುಮಾರ್‌’ ಎಂದು ಜೂನಿಯರ್‌ ಎನ್‌ಟಿಆರ್‌ ಬಣ್ಣಿಸಿದರು.

ಕನ್ನಡದಲ್ಲೇ ಮಾತನಾಡಿದ ಅವರು, ‘ಒಬ್ಬ ಮನುಷ್ಯನಿಗೆ ಪರಂಪರೆ ಮತ್ತು ಉಪನಾಮಗಳು ಹಿರಿಯರಿಂದ ಬರುತ್ತವೆ. ಆದರೆ, ವ್ಯಕ್ತಿತ್ವ ಮಾತ್ರ ಮನುಷ್ಯನ ಸ್ವಂತ ಸಂಪಾದನೆ. ಆ ರೀತಿ ವ್ಯಕ್ತಿತ್ವದಿಂದ ರಾಜ್ಯ ಗೆದ್ದ ಏಕೈಕ ರಾಜ ಪುನೀತ್‌’ ಎಂದರು.

‘ಈಗ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರಬಹುದು. ಆದರೆ, ಪುನೀತ್‌ ಕರ್ನಾಟಕದ ರತ್ನವೇ ಆಗಿದ್ದರು. ನಾನು ಸಾಧನೆಯ ಅರ್ಹತೆಗಳಿಂದ ಇಲ್ಲಿ ಬಂದು ನಿಂತಿಲ್ಲ. ಕೇವಲ ಒಬ್ಬ ಹೆಮ್ಮೆಯ ಗೆಳೆಯನಾಗಿ ಬಂದಿದ್ದೇನೆ’ ಎಂದು ಎನ್‌ಟಿಆರ್‌ ಪುನೀತ್‌ ಜತೆಗಿನ ಗೆಳೆತನವನ್ನು ಸ್ಮರಿಸಿದರಲ್ಲದೇ, ಕರ್ನಾಟಕ ರಾಜ್ಯೋತ್ಸವದ ಶುಭಾಶಯವನ್ನೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT