ಶುಕ್ರವಾರ, ನವೆಂಬರ್ 15, 2019
24 °C

‘ತಲೈವ’ನ ದರ್ಬಾರ್

Published:
Updated:
Prajavani

ಭಾರತೀಯ ಚಿತ್ರರಂಗದಲ್ಲಿಯೇ ದೊಡ್ಡ ಸಂಚಲನ ಸೃಷ್ಟಿಸಿದ ಹೆಗ್ಗಳಿಕೆ ನಟ ರಜನಿಕಾಂತ್‌ ಸಿನಿಮಾಗಳದ್ದು. ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗುವ ರಜನಿ ಚಿತ್ರಗಳಲ್ಲಿ ನಾಯಕನ ಅತಿಯಾದ ವೈಭವೀಕರಣವಿರುವುದು ಸಹಜ. ಅದು ಪ್ರೇಕ್ಷಕರನ್ನು ರಂಜಿಸಲು ಬಳಸುವ ತಂತ್ರಗಾರಿಕೆಯೂ ಹೌದು.

ತಲೈವನ ಸಿನಿಮಾ ಹೇಗೆಯೇ ಇರಲಿ, ಬಿಡುಗಡೆಗೂ ಮುನ್ನವೇ ಭಾರಿ ಹವಾ ಸೃಷ್ಟಿಯಾಗುತ್ತದೆ. ಈ ಕಾರಣಕ್ಕಾಗಿಯೇ 2016ರಲ್ಲಿ ಬಿಡುಗಡೆಗೊಂಡಿದ್ದ ‘ಕಬಾಲಿ’ ಸಿನಿಮಾ ಪೇಕ್ಷಕರ ಮನ ಗೆಲ್ಲದಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಫಸಲು ಬಿತ್ತಿತ್ತು. 

ಚಿತ್ರಕಥೆಗಿಂತಲೂ ಅವರ ನಟನಾ ಶೈಲಿಗೆ ಮಾರುಹೋಗುವ ಪ್ರೇಕ್ಷಕರೇ ಹೆಚ್ಚು. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ರಜನಿ ಕಾಣಿಸಿಕೊಳ್ಳಲಿರುವ ‘ದರ್ಬಾರ್‌’ ಚಿತ್ರದ ಫಸ್ಟ್‌ಲುಕ್‌ ಕೂಡ ಬಣ್ಣದಲೋಕದಲ್ಲಿ ದೊಡ್ಡಮಟ್ಟದ ಸಂಚಲನ ಸೃಷ್ಟಿಸಿದೆ.

ಈ ಚಿತ್ರ 2020ರಲ್ಲಿ ತೆರೆಗೆ ಅಪ್ಪಳಿಸುವ ನಿರೀಕ್ಷೆ ಇದೆ. ಎ.ಆರ್. ಮುರುಗದಾಸ್ ನಿರ್ದೇಶನದಡಿ ಸಿದ್ಧಗೊಳ್ಳುತ್ತಿರುವ ಈ ಚಿತ್ರದಲ್ಲಿ ನಯನ ತಾರಾ, ಸುನಿಲ್ ಶೆಟ್ಟಿ, ಯೋಗಿಬಾಬು ಮುಖ್ಯಭೂಮಿಕೆಯಲ್ಲಿದ್ದಾರೆ.

‘ಘಜನಿ’, ‘ತುಪಾಕಿ’, ‘ಕತ್ತಿ’ ಮತ್ತು ‘ಸರ್ಕಾರ್’ ಮೊದಲಾದ ಯಶಸ್ವಿ ಚಿತ್ರಗಳನ್ನು ನೀಡಿರುವ ಹಿರಿಮೆ ಮುರುಗದಾಸ್ ಅವರದು. ಅದಕ್ಕಾಗಿಯೇ ಮುರುಗದಾಸ್‌ ಮತ್ತು ರಜನಿ ಕಾಂಬಿನೇಷನ್‌ನಡಿ ಮೂಡಿಬರಲಿರುವ ಈ ಸಿನಿಮಾ ಚಿತ್ರ ಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಎರಡೂವರೆ ದಶಕಗಳ ನಂತರ ರಜನಿಕಾಂತ್ ಮತ್ತೆ ಪೊಲೀಸ್ ವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ವಿಶೇಷ. 

1992ರಲ್ಲಿ ಬಿಡುಗಡೆಗೊಂಡ ‘ಪಾಂಡಿಯನ್’ ಅವರು ಕೊನೆಯದಾಗಿ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡ ಚಿತ್ರ. ಇದನ್ನು ನಿರ್ದೇಶಿಸಿದ್ದು ಎಸ್.ಪಿ. ಮುತ್ತುರಾಮನ್. ಜಯಸುಧಾ, ಖುಷ್ಬು, ಟೈಗರ್ ಪ್ರಭಾಕರ್ ನಟಿಸಿದ್ದ ಈ ಚಿತ್ರ ಜನರಿಗೆ ಮೋಡಿ ಮಾಡಿತ್ತು.

ತಮಿಳು ಚಿತ್ರಗಳಲ್ಲದೆ ಬಾಲಿವುಡ್ ಸಿನಿಮಾಗಳಲ್ಲೂ ಖಾಕಿ ತೊಟ್ಟು ರಜನಿ ಹೇಳಿದ್ದ ಖಡಕ್‌ ಡೈಲಾಗ್‌ಗೆ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ತಟ್ಟಿದ್ದರು. 1985ರಲ್ಲಿ ಪ್ರಯಾಗ್ ರಾಜ್ ನಿರ್ದೇಶನದ ಹಿಂದಿಯ ‘ಗಿರಫ್ತಾರ್’ ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದರು. ಇದರಲ್ಲಿ ಕಮಲ್ ಹಾಸನ್ ಮತ್ತು ಅಮಿತಾಭ್ ಬಚ್ಚನ್‌ ಅವರು ರಜನಿ ಜೊತೆಗೆ ತೆರೆ ಹಂಚಿಕೊಂಡಿದ್ದರು. ಇದರಲ್ಲಿನ ಅವರ ಅದ್ಭುತ ನಟನೆ ರಜನಿಗೆ ಬಾಲಿವುಡ್‌ನಲ್ಲಿ ಅವಕಾಶದ ಹೆಬ್ಬಾಗಿಲು ತೆರೆದಿತ್ತು.

1986ರಲ್ಲಿ ತೆರೆಕಂಡಿದ್ದ ಹಿಂದಿಯ ‘ದೋಸ್ತಿ ದುಷ್ಮನಿ’ ಚಿತ್ರದಲ್ಲಿ ರಜನಿ ಮತ್ತೆ ಖಾಕಿ ಖದರ್ ಪ್ರದರ್ಶಿಸಿದ್ದರು. ಜಿತೇಂದ್ರ ಮತ್ತು ರಿಷಿ ಕಪೂರ್ ಇದರಲ್ಲಿ ನಟಿಸಿದ್ದರು.  1991ರಲ್ಲಿ ಕೆ.ಸಿ. ಬೊಕಾಡಿಯಾ ನಿರ್ದೇಶನದ ಹಿಂದಿಯ ‘ಫೂಲ್ ಬನೆ ಅಂಗಾರೆ’ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಅಬ್ಬರಿಸಿದ್ದರು. ಇದರಲ್ಲಿ ರಜನಿಗೆ ಜೋಡಿಯಾಗಿದ್ದು, ನಟಿ ರೇಖಾ. ಈ ಚಿತ್ರ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಆ ಮೂಲಕ ಬಿ ಟೌನ್‌ನಲ್ಲೂ ಅವರಿಗೆ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಅದೇ ವರ್ಷ ಅನಿಲ್ ಶರ್ಮಾ ನಿರ್ದೇಶನದಡಿ ತೆರೆಕಂಡಿದ್ದ ‘ಫರಿಶ್ತೆ’ ಚಿತ್ರದಲ್ಲೂ ಅವರು ಪೊಲೀಸ್ ಅಧಿಕಾರಿಯಾಗಿ ಮಿಂಚು ಹರಿಸಿದ್ದರು. ಆ ನಂತರ ಬಿಡುಗಡೆಗೊಂಡ ಮುಕುಲ್ ಎಸ್. ಆನಂದ್ ನಿರ್ದೇಶನದ ‘ಹಮ್’ ಚಿತ್ರದಲ್ಲೂ ಖಾಕಿ ತೊಟ್ಟಿದ್ದರು. ಇದರಲ್ಲಿ ಅಮಿತಾಭ್ ಬಚ್ಚನ್ ಮತ್ತು ಗೋವಿಂದ ನಟಿಸಿದ್ದರು.

ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದ ತಮಿಳು ಚಿತ್ರಗಳೂ ರಜನಿಕಾಂತ್‌ಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿವೆ. 1980ರಲ್ಲಿ ಬಿಡುಗಡೆಗೊಂಡಿದ್ದ ಆರ್. ತ್ಯಾಗರಾಜನ್ ನಿರ್ದೇಶನದ ‘ಅನ್ಬುಕ್ಕು ನಾ ಅಡಿಮೈ’, 1982ರಲ್ಲಿ ತೆರೆಕಂಡ ಎ. ಜಗನ್ನಾಥನ್ ನಿರ್ದೇಶನದ ‘ಮೂನ್ಡ್ರು ಮುಗಂ’, 1988ರಲ್ಲಿ ತೆರೆಕಂಡಿದ್ದ ಪಿ. ಭಾರತೀರಾಜ ನಿರ್ದೇಶನದ ‘ಕೊಡಿ ಪರಕುದು’ ಚಿತ್ರಗಳಲ್ಲಿ ರಜನಿ ಅವರ ಪೊಲೀಸ್ ಪಾತ್ರಕ್ಕೆ ಪ್ರೇಕ್ಷಕರ ಮನಸೋತಿದ್ದರು. ‘ಮೂನ್ಡ್ರು ಮುಗಂ’ ಚಿತ್ರವು ‘ಜಾನ್ ಜಾನಿ ಜನಾರ್ದನ’ ಹೆಸರಿನಲ್ಲಿ ಹಿಂದಿಗೂ ರಿಮೇಕ್ ಆಗಿತ್ತು. ಅದರಲ್ಲೂ ರಜನಿಕಾಂತ್ ಅವರೇ ನಟಿಸಿದ್ದು ವಿಶೇಷ.

ಕನ್ನಡದಲ್ಲಿ ನಟ ರವಿಚಂದ್ರನ್‌ ನಟಿಸಿದ್ದ ‘ಶಾಂತಿ ಕ್ರಾಂತಿ’ ಚಿತ್ರವು ‘ನಾಟ್ಟುಕ್ಕು ಒರು ನಲ್ಲವನ್’ ಹೆಸರಿನಡಿ ತಮಿಳಿಗೆ ರಿಮೇಕ್‌ ಆಗಿತ್ತು. ಇದರಲ್ಲಿ ರಜನಿಕಾಂತ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು.

ತಲೈವ ಖಾಕಿ ತೊಟ್ಟು ಮಿಂಚಿದ್ದ ಚಿತ್ರಗಳು ಭರ್ಜರಿ ಯಶಸ್ಸು ಕಂಡಿವೆ. ‘ದರ್ಬಾರ್’ ಮೂಲಕ ಮತ್ತೆ ಖಾಕಿ ಗತ್ತಿನ ಗತವೈಭವ ಮರುಕಳಿಸುವುದೇ ಎನ್ನುವುದು ಅವರ ಅಭಿಮಾನಿಗಳ ಕುತೂಹಲ.

ಪ್ರತಿಕ್ರಿಯಿಸಿ (+)