ಟಗರು ಪುಟ್ಟಿಯ ಡೈರೀಸ್‌

ಭಾನುವಾರ, ಏಪ್ರಿಲ್ 21, 2019
32 °C

ಟಗರು ಪುಟ್ಟಿಯ ಡೈರೀಸ್‌

Published:
Updated:
Prajavani

‘ಟಗರು ಪುಟ್ಟಿ’ ಮಾನ್ವಿತಾ ಕಾಮತ್‌ ಮುಂಬೈಗೆ ಹಾರಿ ಹಾಟ್‌ ಫೋಟೊಶೂಟ್‌ ಮಾಡಿಸಿದಾಗಲೇ ಅವರು ಮರಾಠಿ ಚಿತ್ರವೊಂದರಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡಿತ್ತು. ‘ರಾಜಾಸ್ಥಾನ್ ಡೈರೀಸ್’ ಚಿತ್ರದ ಮೂಲಕ ಆ ರಹಸ್ಯ ಈಗ ಬಯಲಾಗಿದೆ. ಕಿಚ್ಚ ಕ್ರಿಯೇಶನ್‌, ಕೆ.ಎಸ್.ಕೆ. ಶೋ ರೀಲ್ ನಿರ್ಮಾಣ ಸಂಸ್ಥೆಯಡಿ ಮುಂಬೈನ ಸಿನೆಮಂತ್ರ ಎಂಟರ್‌ಟೈನ್‍ಮೆಂಟ್ ಮತ್ತು ಮೀಡಿಯ ಸಂಸ್ಥೆಯು ಈ ಸಿನಿಮಾ ನಿರ್ಮಿಸುತ್ತಿದೆ. ಮಾನ್ವಿತಾ ಇದರ ನಾಯಕಿಯಾದರೆ, ರಂಗಭೂಮಿ ನಟ, ಕನ್ನಡಿಗ ಸುಮುಖ ನಾಯಕನಾಗಿ ಬಣ್ಣಹಚ್ಚುತ್ತಿದ್ದಾರೆ.

ವೇದ್ ಶ್ರೀಮಂತ ಕುಟುಂಬದ ಹುಡುಗ. ಪೋಷಕರ ನಡುವಿನ ಭಿನ್ನಾಭಿಪ್ರಾಯದಿಂದ ಬೇಸತ್ತು ಆತ್ಮಹತ್ಯೆಯ ನಿರ್ಧಾರ ತೆಳೆಯುತ್ತಾನೆ. ಆತ್ಮಹತ್ಯೆಯ ಕೊನೆ ಹಂತದಲ್ಲಿ ಇದ್ದಾಗ ಆತನ ಮೊಬೈಲ್‌ ರಿಂಗಣಿಸುತ್ತದೆ. ಆ ಕಡೆಯಿಂದ ಹೆಣ್ಣು ಧ್ವನಿ ಕೇಳಿಸುತ್ತದೆ. ‘ನೀನು ಒಬ್ಬನೇ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತೀಯ. ನಂದು ಅದೇ ಕೇಸ್. ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳೋಣ’ ಎನ್ನುತ್ತಾಳೆ ಆಕೆ.

ಆಗ ವೇದ್ ದಿಗ್ಬ್ರಮೆಗೊಳ್ಳುತ್ತಾನೆ. ಈ ಹುಡುಗಿ ಯಾರು? ಆಕೆಗೆ ನನ್ನ ವಿಷಯ ಗೊತ್ತಾಗಿದ್ದು ಗೇಗೆ ಎನ್ನುವ ಕುತೂಹಲ ಅವನಲ್ಲಿ ಮೂಡುತ್ತದೆ. ಆ ಹುಡುಗಿಯು ತಾನಿರುವ ಸ್ಥಳದ ಬಗ್ಗೆ ಮಾಹಿತಿ ನೀಡಿ ಕರೆ ಕಟ್‌ ಮಾಡುತ್ತಾಳೆ. ವೇದ್‌ಗೆ ಏನೆಂದೂ ಅರ್ಥವಾಗುವುದಿಲ್ಲ. ಆತ್ಮಹತ್ಯೆ ಮುಂದೂಡಿ ಅವಳ ಹುಡುಕಾಟಕ್ಕೆ ಹೊರಡುತ್ತಾನೆ. ಆಕೆ ಸುರಸುಂದರಿ. ಬಿಂದಾಸ್ ಹುಡುಗಿ. ಗೂಂಡಾಗಳಿಂದ ತಪ್ಪಿಸಿಕೊಳ್ಳುತ್ತಾ ವೇದ್‌ನ ಬೈಕ್‌ ಹಿಂದೆ ಕುಳಿತು ಆತ ಮಾತನಾಡಲೂ ಅವಕಾಶ ಕೊಡದೇ ಆತನನ್ನು ಹೊರಡಿಸುತ್ತಾಳೆ. ಹೀಗೆ ಶುರುವಾಗುವ ಇವರಿಬ್ಬರ ಪಯಣ ಎಲ್ಲಿ ಸಾಗುತ್ತದೆ ಎನ್ನುವುದೇ ಈ ಚಿತ್ರದ ತಿರುಳು.

ಕಥೆಗಾರ್ತಿ ನಂದಿತಾ ಯಾದವ್‌ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ನಟಿ ಮತ್ತು ಸಹ ನಿರ್ದೇಶಕಿಯಾಗಿ ಬಿ.ವಿ. ಕಾರಂತ್, ಎಂ.ಎಸ್, ಸತ್ಯು, ಅರುಂಧತಿ ನಾಗ್, ಸಿ.ಆರ್. ಸಿಂಹ, ಪ್ರಸನ್ನ, ಪಂಡಿತ್ ಸತ್ಯದೇವ್ ದುಬೆ, ಗಿರೀಶ ಕಾರ್ನಾಡ ಅವರೊಂದಿಗೆ ಕೆಲಸ ಮಾಡಿದ ಅನುಭವ ಅವರಿಗಿದೆ. ‘ಮಾನ್ವಿತಾ ಮತ್ತು ಸುಮುಖ ಇಬ್ಬರೂ ಮರಾಠಿ ಭಾಷೆ ಬಲ್ಲವರಾಗಿದ್ದು ಎರಡೂ ಭಾಷೆಯಲ್ಲೂ ಅವರದೇ ಧ್ವನಿ ಇರಲಿದೆ’ ಎನ್ನುತ್ತಾರೆ ಅವರು. 

ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರಾಘವೇಂದ್ರ ಹಾಸನ್ ಅವರದ್ದು. ಬಾಲಿವುಡ್‌ ನಟ ಸುನಿಲ್ ಶೆಟ್ಟಿ, ವರ್ಜೀನಿಯ, ಖುಷ್ಬೂ, ಸುಮಿತ್ ರಾಘವನ್, ನಾಡಿಯಾ, ರಾಜೇಶ್ ನಟರಂಗ, ಚಿನ್ಮಯ್ ಮಂಡಲೇಕರ್, ಸುಷ್ಮಾ ನಾಣಯ್ಯ, ಅರುಣ್ ಸಾಗರ್, ಸಂದೀಪ್ ಪಾಠಕ್, ಸಮೀಪ್ ತಾರಾಗಣದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !