ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವತ್ತೈದರ ‘ಯುವಕ’ ರಾಜೀವ ಮೆನನ್‌

Last Updated 10 ಫೆಬ್ರುವರಿ 2019, 13:17 IST
ಅಕ್ಷರ ಗಾತ್ರ

ಮದ್ರಾಸ್ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ಗೆ ಸಿನಿಮಾಟೊಗ್ರಫರ್‌ ಕೋರ್ಸ್‌ಗೆಂದು ಅರ್ಜಿ ಹಾಕಿದ್ದ ಹುಡುಗನೊಬ್ಬ ಜೇಬಲ್ಲಿದ್ದ ಎರಡು ಮೂರು ಕಪ್ಪು–ಬಿಳುಪು ಪಾಸ್‌ಪೋರ್ಟ್‌ ಫೋಟೊಗಳನ್ನು ನೋಡುತ್ತಿದ್ದ. ಪಕ್ಕದಲ್ಲಿದ್ದವರೆಲ್ಲ ದೊಡ್ಡ ದೊಡ್ಡ ಲ್ಯಾಂಡ್‌ಸ್ಕೇಪ್‌ ಚಿತ್ರಗಳನ್ನು ಹಿಡಿದು ಕುಳಿತಿದ್ದರು. ಸಂದರ್ಶನದ ಸರದಿ ಬಂತು. ‘ನೀನು ಒಂದೂ ಫೋಟೊ ತೆಗೆದಿಲ್ಲವೇ’ ಎಂಬ ಪ್ರಶ್ನೆ ಸಂದರ್ಶಕರಿಂದ ಬಂದದ್ದೇ ಹುಡುಗನಿಗೆ ಕೋಪ.

‘ಬೇರೆಯವರು ತಂದಿರುವ ಫೋಟೊಗಳನ್ನು ಅವರೇ ತೆಗೆದಿದ್ದಾರೆ ಎಂದು ಹೇಗೆ ನಂಬುವಿರಿ’ ಎಂದು ಮರುಪ್ರಶ್ನೆ ಹಾಕಿದ. ಸಂದರ್ಶಕರ ಸಮಿತಿಯ ಎಲ್ಲರಲ್ಲೂ ಮೌನ. ಕೊನೆಗೆ ಹುಡುಗನಿಗೆ ಸಿನಿಮಾಟೊಗ್ರಫಿಗೆ ಸಂಬಂಧಿಸಿದ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದರು. ಒಂದು ಆರೋಗ್ಯಕರ ಚರ್ಚೆಯೇ ನಡೆದುಹೋಯಿತು. ಮದ್ರಾಸ್‌ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ಗೆ ಆಯ್ಕೆಯಾದದ್ದೇ ಆತ್ಮವಿಶ್ವಾಸದ ಹಕ್ಕಿ ರೆಕ್ಕೆ ಬಡಿಯತೊಡಗಿತು.

ಹಾಗೆ ಸಂದರ್ಶನದಲ್ಲಿ ಆಯ್ಕೆಯಾದ ಹುಡುಗ ಈಗ ಐವತ್ತೈದು ವರ್ಷದ ‘ಯುವಕ’. ಹೆಸರು ರಾಜೀವ್ ಮೆನನ್.ರಾಜೀವ್‌ ಹುಟ್ಟಿದ್ದು ಕೊಚ್ಚಿಯಲ್ಲಿ. ಅಪ್ಪ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಉತ್ತರ ಭಾರತದಿಂದ ದಕ್ಷಿಣ ಭಾರತದ ಹಲವು ಊರುಗಳಲ್ಲಿ ಓದುವುದು ಅನಿವಾರ್ಯವಿತ್ತು. ಅಮ್ಮ ಕಲ್ಯಾಣಿ ಮೆನನ್ ತಮಿಳು ಹಾಗೂ ಮಲಯಾಳ ಸಿನಿಮಾಗಳ ಹಿನ್ನೆಲೆ ಗಾಯಕಿಯಾಗಿ ಹೆಸರು ಮಾಡಿದ್ದರು. ಅವರ ಕಂಠದ ‘ಶಂಕರಾಭರಣಂ’, ದೇವಗಂಧಾರ ರಾಗ ಕೇಳಿ ಬೆಳೆದ ರಾಜೀವ್‌ ಎದೆಯೊಳಗೆ ಸಂಗೀತದ ರಸಿಕನೊಬ್ಬ ಮೊಳೆತ. ಜತೆಗೆ ಓದಿನ ಗೀಳು. ಅವರು ಇತಿಹಾಸವನ್ನು ಎಷ್ಟು ಇಷ್ಟಪಟ್ಟು ಓದಿರುವರೆಂದರೆ, ಪ್ರಮುಖ ಘಟನಾವಳಿಗಳ ಇಸವಿಗಳನ್ನೆಲ್ಲ ಪಟಪಟನೆ ಹೇಳಬಲ್ಲರು.

ಮದ್ರಾಸ್‌ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ಗೆ ಸೇರುವ ಮೊದಲು ರಾಜೀವ್‌ ವಾಸವಿದ್ದ ಮನೆಯ ಮೇಲಿನ ಮಹಡಿಯಲ್ಲಿದ್ದ ‘ಹಿಂದೂ’ ಪತ್ರಿಕೆಯ ಫೋಟೊಗ್ರಾಫರ್‌ ಒಬ್ಬರು ಹಳೆಯ ಒಂದು ಕ್ಯಾಮೆರಾ ಕೊಟ್ಟಿದ್ದರು. ಅದು ಕೈಗೆ ಬಂದ ಮೇಲೆಯೇ ಸಿನಿಮಾಟೊಗ್ರಫರ್‌ ಆಗಬೇಕೆಂಬ ಬಯಕೆ ಮೂಡಿದ್ದು. ಮದ್ರಾಸ್‌ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ನ ಕೆಲವು ಸ್ನೇಹಿತರೆಲ್ಲ ಸೇರಿ ಸಿನಿಮಾ ಸಮಾಜ ಕಟ್ಟಿಕೊಂಡು ಶ್ಯಾಮ್‌ ಬೆನೆಗಲ್‌, ಗುರುದತ್‌, ಸತ್ಯಜಿತ್‌ ರೇ, ಮೃಣಾಲ್‌ ಸೆನ್ ಸಿನಿಮಾಗಳನ್ನೆಲ್ಲ ನೋಡುತ್ತಾ ಚಲನಚಿತ್ರ ಕುಶಲತೆಯ ಪಟ್ಟುಗಳ ಕುರಿತು ಚರ್ಚಿಸತೊಡಗಿದರು.

ಶ್ಯಾಮ್‌ ಬೆನೆಗಲ್ ಹಾಗೂ ಗಿರೀಶ ಕಾರ್ನಾಡ್ ಜತೆ ಕೆಲವು ಕಿರುಚಿತ್ರಗಳಿಗೆ ರಾಜೀವ್ ಕೆಲಸ ಮಾಡಿದರು. ಶಂಕರ್‌ನಾಗ್‌ ಅವರನ್ನು ನಾಯಕನನ್ನಾಗಿಸಿ ‘ಜೋಕುಮಾರಸ್ವಾಮಿ’ ಸಿನಿಮಾ ಮಾಡಬೇಕೆಂದು ಕಾರ್ನಾಡರು ನಿರ್ಧರಿಸಿದ್ದರು. ಅದಕ್ಕೆ ರಾಜೀವ್ ಸಿನಿಮಾಟೊಗ್ರಾಫರ್‌ ಆಗಿ ಆಯ್ಕೆಯಾಗಿದ್ದರು. ಆದರೆ, ರಸ್ತೆ ಅಪಘಾತದಲ್ಲಿ ಶಂಕರ್‌ ನಿಧನರಾದದ್ದೇ ಆ ಯೋಜನೆ ರದ್ದಾಯಿತು. ಮುಂದೆ, 1992ರಲ್ಲಿ ‘ಚೆಲುವಿ’ ಕನ್ನಡ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶವನ್ನು ಮತ್ತೆ ಕಾರ್ನಾಡರು ಅವರಿಗೆ ಕೊಟ್ಟರು.

ನಾಗಾರ್ಜುನ ಹಾಗೂ ಗೌತಮಿ ಅಭಿನಯದ ‘ಚೈತನ್ಯ’ ತೆಲುಗು ಸಿನಿಮಾಗೆ ಪಿ.ಸಿ. ಶ್ರೀರಾಮ್ ಹೊಸ ಪ್ರತಿಭೆಯನ್ನು ಹುಡುಕುತ್ತಿದ್ದಾಗ ಅವರಿಗೆ ರಾಜೀವ್‌ ಸಿಕ್ಕರು. ಆ ಸಿನಿಮಾದ ಕೆಲಸದಲ್ಲಿ ಕೈಪಳಗಿಸಿಕೊಂಡ ಮೇಲೆ ಬಹುಭಾಷಾ ಚಿತ್ರ ‘ಬಾಂಬೆ’ಯಲ್ಲಿ ಮಣಿರತ್ನಂ ಅವಕಾಶ ಕೊಟ್ಟರು. ಅದನ್ನು ರಾಜೀವ್ ಹಣ್ಣಾಗಿಸಿಕೊಂಡು ಮುಂದೆ ನಿರ್ದೇಶಕರೂ ಆಗಿ ಬೆಳೆದದ್ದು ಆಸಕ್ತಿಕರ. ತಮಿಳಿನ ‘ಮಿನ್ಸಾರ ಕಣವು’, ‘ಕಣ್ಣತ್ತಿಲ್ ಮುತ್ತಮಿಟ್ಟಾಳ್’ ಅವರ ನಿರ್ದೇಶನದ ಸಿನಿಮಾಗಳು.

ಹದಿನೆಂಟು ವರ್ಷಗಳ ನಂತರ ಅವರು ನಿರ್ದೇಶಿಸಿದ ‘ಸರ್ವಂ ತಾಳಮಯಂ’ ತಮಿಳು ಸಿನಿಮಾ ಕರ್ನಾಟಕ ಸಂಗೀತದ ಕಥಾವಸ್ತುವಿನ ಕಾರಣಕ್ಕೆ ಈಗ ಗಮನಸೆಳೆದಿದೆ. ವರ್ಷಗಟ್ಟಲೆ ಅವರು ತಿದ್ದಿದ ಚಿತ್ರಕಥೆ ಇದು. ಇದರಲ್ಲೂ ತಾಳ, ನಾದ ಇರುವುದರಿಂದ ಅಮ್ಮ ಎದೆಗೆ ಹಾಕಿದ ಸಂಗೀತದ ಮರ್ಮ ಎಂಥದೆನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.

‘ರೋಜಾ’ ಸಿನಿಮಾಗೆ ನಾಯಕ ಆಗುವಂತೆ ಮಣಿರತ್ನಂ ಆಹ್ವಾನವಿತ್ತಾಗ, ‘ನಾನು ಸಿನಿಮಾಟೊಗ್ರಾಫರ್ ಆಗಬೇಕು’ ಎಂದು ಹೇಳಿ ಅದನ್ನು ತಿರಸ್ಕರಿಸಿದ್ದವರು ರಾಜೀವ್. ಈಗಲೂ ಮಣಿ ಅದನ್ನು ನೆನಪಿಸಿ, ಚುಚ್ಚುತ್ತಾ ತಮಾಷೆ ಮಾಡುತ್ತಿರುತ್ತಾರಂತೆ.

**

‘ದಿಲೀಪ’ ಮತ್ತು ರಾಜೀವ...

ಸ್ಟಿಲ್‌ ಫೋಟೊಗ್ರಾಫರ್‌ ಆಗಿ ಕೆಲಸ ಆರಂಭಿಸಿದ ರಾಜೀವ್‌, ಕೆಲವು ಜಾಹೀರಾತುಗಳಿಗೂ ಕೆಲಸ ಮಾಡಿದರು. ಹಾರ್ವೆಸ್ಟ್‌ ಶೇಂಗಾ ಎಣ್ಣೆ ಜಾಹೀರಾತಿಗೆ ಪ್ಲೇಟ್‌ ಒಡೆಯುವ ಶಬ್ದ ಬೇಕಿತ್ತು. ಇಳಯರಾಜಾ ಅವರ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ದಿಲೀಪ್‌ ಎನ್ನುವವರಲ್ಲಿ ತಕ್ಷಣಕ್ಕೆ ಅಂಥ ಶಬ್ದ ಸಿಗುತ್ತದೆ ಎನ್ನುವುದು ಗೊತ್ತಾಯಿತು. ಸಿಂಥಸೈಸರ್‌ ಬಳಸಿಯೇ ಅಂಥ ಶಬ್ದವನ್ನು ನಿಮಿಷಗಳಲ್ಲೇ ದಿಲೀಪ್‌ ಕೊಟ್ಟರು.

ಆಮೇಲೆ ಹಲವು ಸಲ ರಾಜೀವ್‌–ದಿಲೀಪ್‌ ಕೆಲಸದ ಕಾರಣಕ್ಕೆ ಪದೇ ಪದೇ ಭೇಟಿಯಾದರು. ಇಬ್ಬರ ನಡುವೆ ಸ್ನೇಹ ಬೆಳೆಯಿತು. ‘ರೋಜಾ’ ಸಿನಿಮಾ ತೆರೆಕಂಡ ಮೇಲೆ ಎ.ಆರ್.ರೆಹಮಾನ್ ಎಂಬ ಸಂಗೀತ ಪ್ರತಿಭೆಯ ಅನಾವರಣವಾಯಿತು. ಆ ರೆಹಮಾನ್‌ ಮೂಲ ಹೆಸರೇ ದಿಲೀಪ್!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT