ಚೆಂದದ ಹುಡುಗನ ಸಿನಿಕನಸು

7

ಚೆಂದದ ಹುಡುಗನ ಸಿನಿಕನಸು

Published:
Updated:
Deccan Herald

ಮಾಡೆಲಿಂಗ್ ಅನ್ನು ಮೆಟ್ಟಿಲಾಗಿಸಿಕೊಂಡು ಅದರ ಮೂಲಕ ಸಿನಿಮಾ ಅಥವಾ ಕಿರುತೆರೆಗೆ ಪ್ರವೇಶಿಸಬೇಕು ಎಂಬುದು ಕೆಲ ಯುವಕರ ಅಚಲ ನಿಲುವು. ಆದರೆ, ಅದಕ್ಕೆ ತದ್ವಿರುದ್ಧವಾಗಿ ನೇರವಾಗಿ ಸಿನಿಕ್ಷೇತ್ರಕ್ಕೆ ಬರಬೇಕು ಎಂದುಕೊಂಡು ಬಣ್ಣ ಹಚ್ಚಿದವರು ರಾಜೀವ್ ರಾಜ್ಭಾನ್.

ಕುರುಚಲು ಗಡ್ಡ, ನೀಳಕಾಯದಿಂದಲೇ ಆಕರ್ಷಿಸುವ ಸ್ಫುರದ್ರೂಪಿ ರಾಜೀವ್. ಮಾಡೆಲಿಂಗ್ ಎಲ್ಲ ನನಗೆ ಒಗ್ಗಿಬರುವುದಿಲ್ಲ ಎನ್ನುವ ಅವರು, ಚಂದನವನದ ಸ್ಟಾರ್ ನಟರ ಸಾಲಿನಲ್ಲಿ ನಿಲ್ಲಬೇಕೆಂಬ ಕನಸುಗಾರ. ಕನಸನ್ನು ನನಸಾಗಿಸಲು, ಸಿಕ್ಕ ಸಣ್ಣ ಪುಟ್ಟ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು, ಹೊಸ ಚಿತ್ರವೊಂದಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಮೊದಲ ಪ್ರಯತ್ನದಲ್ಲಿ ತೆರೆ ಮೇಲೆ ಮೋಡಿ ಮಾಡಲು ಸಾಕಷ್ಟು ತಯಾರಿಯೂ ನಡೆಸಿದ್ದಾರೆ.

‘ನನ್ನ ತಂದೆ ನಿರಂಜನ್ ದಾಸ್ ರಾಜ್ಭಾನ್. ಅವರು ಗಾಯಕರು. ಅವರ ಗಾಯನ ಕೇಳಿಯೇ ಸಂಗೀತದ ಅಭಿರುಚಿ ಬೆಳೆಸಿಕೊಂಡೆ’ ಎನ್ನುವ ರಾಜೀವ್ ಸಹ ಸುಮಧುರವಾಗಿ ಹಾಡುತ್ತಾರೆ. ‘ವಾಯ್ಸ್ ಆಫ್ ತುಮಕೂರು’ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಕೆಲ ವೇದಿಕೆ ಕಾರ್ಯಕ್ರಮಗಳಲ್ಲಿ ಗಾಯನದ ಮೂಲಕವೇ ಗುರುತಿಸಿಕೊಂಡಿದ್ದ ಅವರು, ಓದಿದ್ದು ಬೆಳೆದಿದ್ದೆಲ್ಲ ತುಮಕೂರಿನಲ್ಲಿ. ರಾಜ್ಭಾನ್ ಸ್ಕೂಲ್ ಆಫ್ ಡಾನ್ಸ್ ಆ್ಯಂಡ್ ಮ್ಯೂಸಿಕ್ ಮತ್ತು ರಾಜ್ಭಾನ್ ಸ್ಟುಡಿಯೊ ಸಹ ಹೊಂದಿದ್ದಾರೆ.

‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾದ ನಿರ್ದೇಶಕ ಸುನಿ, ‘ವಾಯ್ಸ್ ಆಫ್ ತುಮಕೂರು’ ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲಿ ನನ್ನ ಪ್ರತಿಭೆ ಗುರುತಿಸಿ, ‘ನೀನು ತುಂಬಾ ಚೆನ್ನಾಗಿ ಹಾಡುತ್ತೀಯ, ನೋಡಲೂ ಚೆನ್ನಾಗಿದ್ದೀಯ. ಸಿನಿಮಾಗಳಲ್ಲಿ ಏಕೆ ಪ್ರಯತ್ನಿಸಬಾರದು’ ಎಂದಿದ್ದರು. ಅವರ ಆ ಮಾತುಗಳು ನನ್ನ ಮನವನ್ನು ಜಾಗೃತಗೊಳಿಸಿದವು. ಮನೆಯವರ ಪ್ರೋತ್ಸಾಹ ಬೆನ್ನಿಗಿದ್ದಿದ್ದರಿಂದ ಹಿಂದುಮುಂದು ಯೋಚಿಸದೇ ಗಾಂಧಿನಗರಕ್ಕೆ ಬಂದೆ’ ಎನ್ನುತ್ತಾರೆ ರಾಜೀವ್.

‘ದೂರದ ಬೆಟ್ಟ ನುಣ್ಣಗೆ ಅಂತಾರಲ್ಲ. ಹಾಗೆಯೇ, ಗಾಂಧಿನಗರ. ಅದರ ವಾಸ್ತವ ಅರಿಯದೇ ಇಲ್ಲಿಗೆ ಬಂದು ಸಾಕಷ್ಟು ಪರದಾಡಿದೆ. ಸಿನಿಮಾ ರಂಗದಲ್ಲಿ ಪರಿಚಯಸ್ಥರು ಯಾರೂ ಇರಲಿಲ್ಲ. ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ಆಗ, ದೂರದ ಪರಿಚಯಸ್ಥರಾದಹಾಗೂ ಸಿನಿಮಾ ನಂಟು ಹೊಂದಿದ್ದ ಗುರುಮೂರ್ತಿ ಅಂಕಲ್ ಸಿಕ್ಕರು. ಅವರ ಮಾರ್ಗದರ್ಶನದಂತೆ ಹಲವಾರು ಆಡಿಷನ್‌ಗಳಲ್ಲಿ ಪಾಲ್ಗೊಂಡೆ. ನಡುನಡುವೆ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುವ ಅವಕಾಶಗಳು ಸಿಕ್ಕವು. ಖುಷಿಯಿಂದಲೇ ನಟಿಸಿದೆ.’

‘ಆದರೆ, ಚಿತ್ರವೊಂದರ ಪ್ರಧಾನ ಪಾತ್ರಧಾರಿಯಾಗಿ ನಟಿಸಬೇಕು ಎಂಬ ತುಡಿತ ನನ್ನ ಒಳಮನಸ್ಸನ್ನು ಜಾಗೃತಗೊಳಿಸುತ್ತಲೇ ಇತ್ತು. ಆಡಿಷನ್‌ಗಳಲ್ಲಿ ನನ್ನನ್ನು ಸಿನಿಮಾಗಳ ನಾಯಕನಾಗಿ ಆಯ್ಕೆ ಮಾಡುತ್ತಿದ್ದರು. ಅದರ ಜೊತೆಗೆ, ಸಿನಿಮಾಕ್ಕೆ ಬಂಡವಾಳ ಹೂಡಬೇಕು ಎನ್ನುತ್ತಿದ್ದರು. ಬಂಡವಾಳ ಹೂಡಲಾಗದೇ ಕೆಲ ಅವಕಾಶಗಳನ್ನು ಕಳೆದುಕೊಂಡೆ. ಕೊನೆಗೂ, ಕಿಶೋರ್ ಗೋವಿಂದಯ್ಯ ನಿರ್ದೇಶನದ ‘ಕಾರ್ಮೋಡ’ ಸಿನಿಮಾದ ನಾಯಕನ ಪಾತ್ರಕ್ಕೆ ಆಯ್ಕೆಯಾದೆ. ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಇದು ಸಿನಿಪ್ರಿಯರ ಮನಗೆಲ್ಲುವ ಕಥಾಹಂದರವನ್ನು ಒಳಗೊಂಡಿದೆ’ ಎನ್ನುತ್ತಾರೆ.

ನಾಯಕನಟನಾಗುವ ಮುನ್ನ ರಾಜೀವ್, ನಟ ಅಜಯ್ ರಾವ್ ಅಭಿನಯದ ‘ಧೈರ್ಯಂ’ ಹಾಗೂ ನಟ ವಿಕಾಸ್ ಮದಕರಿ ಅಭಿನಯದ ‘ಖರಾಬ್ ದುನಿಯಾ’ ಸಿನಿಮಾಗಳ ಸಹಾಯಕ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಅಂತಪುರ’ ಹಾಗೂ ‘ಮೊಗ್ಗಿನ ಮೊನಸು’ ಧಾರವಾಹಿಗಳಲ್ಲಿ ಮತ್ತು ‘ಸ್ವಪ್ನ’, ‘ಕಾನ್‌ಸ್ಟೆಂಟ್’, ‘ಸರ್ವಪತನ’ ಹಾಗೂ ‘ನೋಡುಗರಿಗೆ’ ಸಾಕ್ಷ್ಯಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !