ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ರಜನಿ, ಅಭಿಮಾನಿಗಳು ನಿರಾಳ

ಚೆನ್ನೈ: ಮಿದುಳಿನ ರಕ್ತ ಸಂಚಾರ ವ್ಯವಸ್ಥೆಯನ್ನು ಸಹಜ ಸ್ಥಿತಿಗೆ ತರಲು ನಡೆಸಲಾದ ಶಸ್ತ್ರಚಿಕಿತ್ಸೆಯಿಂದ (carotid artery revascularisation) ಸೂಪರ್‌ಸ್ಟಾರ್ ರಜನಿಕಾಂತ್ ಚೇತರಿಸಿಕೊಂಡಿದ್ದು ಸೋಮವಾರ ಮನೆಗೆ ಮರಳಿದ್ದಾರೆ.
ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ನಾನು ಮನೆಗೆ ಮರಳಿದ್ದೇನೆ’ ಎಂದಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗುವ ಮುನ್ನ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರಜನಿಕಾಂತ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.
Returned home 🙏 https://t.co/35VeiRDj7b
— Rajinikanth (@rajinikanth) October 31, 2021
ರಜನಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅಭಿಮಾನಿಗಳು ಆತಂಕಗೊಂಡಿದ್ದರು. ನಿನ್ನೆ ರಜನಿ ಮನೆಗೆ ಮರಳಿರುವುದರಿಂದ ಅಭಿಮಾನಿಗಳು ನಿರಾಳರಾಗಿದ್ದಾರೆ.
ಇಲ್ಲಿನ ಕಾವೇರಿ ಆಸ್ಪತ್ರೆಯಲ್ಲಿ ರಜನಿಕಾಂತ್ (70) ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅಕ್ಟೋಬರ್ 28ರಂದು ನಿಯಮಿತ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಎದೆಯ ಭಾಗದಲ್ಲಿ ನೋವು ಮತ್ತು ಸುಸ್ತು ಕಾಣಿಸಿಕೊಂಡಿತ್ತು.
ಅಕ್ಟೋಬರ್ 25ರಂದು ದೆಹಲಿಯಲ್ಲಿ ನಡೆದ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಜನಿಕಾಂತ್ ಅವರಿಗೆ 51ನೇ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಪ್ರದಾನ ಮಾಡಲಾಗಿತ್ತು.
ರಜನಿಕಾಂತ್ ಅಭಿನಯದ 'ಅಣ್ಣಾತ್ತೆ' ಸಿನಿಮಾ ನವೆಂಬರ್ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.