ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದ ಕಥನ | ರಕ್ಷ್ ‘ಬಂಡಾಯ’

Last Updated 12 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ನಾಗೇಂದ್ರ ಮಾಗಡಿ ನಿರ್ದೇಶನದ ‘ನರಗುಂದ ಬಂಡಾಯ’ ಚಿತ್ರ ಗುರುವಾರ ಬಿಡುಗಡೆ ಆಗಿದೆ. ನರಗುಂದದಲ್ಲಿ ಎಂಬತ್ತರ ದಶಕದಲ್ಲಿ ರೈತರು ನಡೆಸಿದ ಹೋರಾಟವು ರಾಜ್ಯ ಕಂಡ ಪ್ರಮುಖ ರೈತ ಹೋರಾಟಗಳಲ್ಲಿ ಒಂದು. ಆ ಹೋರಾಟದ ಕಥೆಯನ್ನು ಹೊತ್ತಿರುವ ಕಾರಣ, ಈ ಚಿತ್ರ ಸಿನಿಮಾ ಪ್ರೇಮಿಗಳ ಆಸಕ್ತಿ ಕೆರಳಿಸಿದೆ.

ಚಿತ್ರದ ನಾಯಕ ನಟ ರಕ್ಷ್‌ ಅವರಿಗೆ ಇದು ಮೊದಲ ಸಿನಿಮಾ. ಅವರು ಇದರಲ್ಲಿ ರೈತ ಯುವಕ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಅವರ ಪಾತ್ರ ನಿಭಾಯಿಸಿದ್ದಾರೆ. ಈ ಪಾತ್ರಕ್ಕಾಗಿ ನಡೆಸಿದ ಸಿದ್ಧತೆ ಏನಿತ್ತು ಎಂದು ಅವರಲ್ಲಿ ಕೇಳಿದಾಗ, ‘ಬರಗಾಲ ಎದುರಿಸುತ್ತಿರುವ ರೈತನ ಪಾತ್ರ ನಿಭಾಯಿಸುವಾಗ ಚಾಕಲೇಟ್‌ ಹೀರೊ ತರಹ ಕಾಣಿಸಿಕೊಳ್ಳಲಾಗದು. ನರಗುಂದ ಭಾಗದ ಕನ್ನಡ ಶೈಲಿಯನ್ನು ಅಭ್ಯಾಸ ಮಾಡಿಕೊಳ್ಳಬೇಕಿತ್ತು. ಜೊತೆಗೆ, ಮೂವತ್ತು ಕೆ.ಜಿ. ತೂಕ ಇಳಿಸಿಕೊಳ್ಳಬೇಕಿತ್ತು. ಆ ಭಾಗದಲ್ಲಿ ಕುದುರೆ ಸಾಕುವ ಅಭ್ಯಾಸ ಹೆಚ್ಚಿದೆ. ಸಿನಿಮಾದ ದೃಶ್ಯಗಳಿಗಾಗಿ ಕುದುರೆ ಸವಾರಿ ಕಲಿಯಬೇಕಿತ್ತು. ಸವಾರಿ ವೇಳೆ ಕುದುರೆಯಿಂದ ಬಿದ್ದು ಗಾಯ ಮಾಡಿಕೊಂಡಿದ್ದೂ ಇದೆ’ ಎಂದು ವಿವರಿಸಿದರು.

ಚಿತ್ರದಲ್ಲಿ ಇರುವುದು ರೈತ ವೀರನ ಕಥೆಯಾಗಿರುವ ಕಾರಣ, ತಮ್ಮ ಯಾವ ಆ್ಯಕ್ಷನ್ ದೃಶ್ಯಕ್ಕೂ ಡ್ಯೂಪ್ ಬಳಕೆ ಮಾಡಬಾರದು ಎಂದು ರಕ್ಷ್ ಅವರು, ನಿರ್ದೇಶಕರಿಗೆ ಮನವಿ ಮಾಡಿಕೊಂಡಿದ್ದರು.

ಹೋರಾಟದ ಸಂದರ್ಭದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ವೀರಪ್ಪ ಅವರ ವ್ಯಕ್ತಿತ್ವ ಹೇಗಿತ್ತು ಎಂಬುದನ್ನು ತಿಳಿಯಲು ರಕ್ಷ್ ಅವರು ವೀರಪ್ಪ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದೂ ಇದೆ. ‘ಈ ಪಾತ್ರ ಒಪ್ಪಿಕೊಂಡ ನಂತರ ನಾನು ವೀರಪ್ಪ ಕುರಿತು ಮಾಹಿತಿ ಸಂಗ್ರಹಿಸಲು ಗೂಗಲ್ ಮೂಲಕ ಪ್ರಯತ್ನಿಸಿದ್ದೆ. ಆದರೆ ಅಲ್ಲಿ ಏನೂ ಸಿಗಲಿಲ್ಲ. ಹಾಗಾಗಿ ಅವರ ಊರಿಗೆ ಹೋಗಿ ಅವರ ಅಣ್ಣನನ್ನು ಭೇಟಿ ಮಾಡಿದೆವು. ಅವರ ಜೊತೆ ಮಾತುಕತೆ ನಡೆಸಿ, ವ್ಯಕ್ತಿತ್ವವನ್ನು ಅರ್ಥ ಮಾಡಿಕೊಂಡೆ. ಆ ಕಡೆಯವರ ಹಾವಭಾವ ಹೇಗಿರುತ್ತದೆ ಎಂಬುದನ್ನೂ ಅರ್ಥ ಮಾಡಿಕೊಂಡೆ. ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಊರಿನಲ್ಲಿ ವೀರಪ್ಪ ಅವರ ಪ್ರತಿಮೆ ಇದೆ. ಅದನ್ನು ನೋಡಿ ನನಗೆ ಶಾಕ್ ಆಯಿತು. ವೀರಪ್ಪ ಅವರ ಪ್ರತಿಮೆ ನನ್ನಂತೆಯೇ ಇದೆ’ ಎಂದು ಹೇಳಿದರು ರಕ್ಷ್.

ಇದು ವೀರಪ್ಪ ಅವರ ಬಯೋಪಿಕ್ ಆಗಿರುವ ಕಾರಣ, ಸೃಜನಶೀಲ ಸ್ವಾತಂತ್ರ್ಯ ಸಿನಿತಂಡಕ್ಕೆ ತೀರಾ ಕಡಿಮೆ ಇತ್ತು. ‘ಚಿತ್ರದಲ್ಲಿನ ಶೇಕಡ 95ರಷ್ಟು ಅಂಶಗಳು ನೈಜ ಘಟನೆಯನ್ನು ಆಧರಿಸಿವೆ. ಬಹಳಷ್ಟು ಘಟನೆಗಳನ್ನು ಅವು ನಡೆದ ಸ್ಥಳದಲ್ಲೇ ಚಿತ್ರೀಕರಿಸಲಾಗಿದೆ’ ಎಂದು ವಿವರಿಸಿದರು.

‘ಇದು ರೈತರ ಕುರಿತು ಅನುಕಂಪ ಸೃಷ್ಟಿಸಲು ಮಾಡಿರುವ ಸಿನಿಮಾ ಅಲ್ಲ. ರೈತರು ತಾಳ್ಮೆ ಕಳೆದುಕೊಂಡರೆ ಏನಾಗುತ್ತದೆ ಎಂಬುದನ್ನು ಹೇಳುತ್ತದೆ ಈ ಚಿತ್ರ. ಕಥೆಯನ್ನು ಭರಪೂರ ಆ್ಯಕ್ಷನ್‌ ದೃಶ್ಯಗಳ ಮೂಲಕ ಹೇಳಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನಡೆದ ಕಥೆ ಇದಾದರೂ, ಚಿತ್ರವು ಎಲ್ಲರಿಗೂ ಅರ್ಥವಾಗಲಿ ಎಂಬ ಉದ್ದೇಶದಿಂದ ಮೈಸೂರು ಕನ್ನಡ ಭಾಷೆಯನ್ನೂ ಬಳಸಲಾಗಿದೆ’ ಎನ್ನುವುದು ರಕ್ಷ್ ನೀಡುವ ವಿವರಣೆ.

**

ಇದು ಸರ್ಕಾರವನ್ನು ಬದಲಿಸಿದ ಹೋರಾಟದ ಕಥೆ. ರೈತ ತಿರುಗಿಬಿದ್ದರೆ ಏನಾಗುತ್ತದೆ ಎಂಬುದನ್ನು ಸಿನಿಮಾ ರೂಪದಲ್ಲಿ ಹೇಳುತ್ತಿದ್ದೇವೆ. ಹಾಗಾಗಿ ಇದನ್ನು ನಗರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಬೇಕು.
–ರಕ್ಷ್, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT