ಸೋಮವಾರ, ಮಾರ್ಚ್ 1, 2021
20 °C

ಅಣ್ಣ-ತಂಗಿಯರ ಅನುಬಂಧ…

ರೇಷ್ಮಾ ಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಅಣ್ಣ -ತಂಗಿ ಬಾಂಧವ್ಯ ಎಂದಾಕ್ಷಣ ನೆನಪಾಗುವುದು ಶಿವರಾಜ್ ಕುಮಾರ್ ಹಾಗೂ ರಾಧಿಕಾ. 2000ರ ದಶಕದಲ್ಲಿ ‘ತವರಿಗೆ ಬಾ ತಂಗಿ’ ಸಿನಿಮಾದ ಮೂಲಕ ಅಣ್ಣ-ತಂಗಿ ನಡುವಿನ ಸುಮಧುರ ಸಂಬಂಧದ ಕಥೆಯನ್ನು ತೋರಿಸಿದ ಈ ಸಿನಿಮಾ ಇಂದಿಗೂ ಜನಮಾನಸದಲ್ಲಿ ಹಸಿರಾಗಿದೆ.

ಈಗ ಅದೇ ಅಣ್ಣ-ತಂಗಿ ಬಾಂಧವ್ಯ ಸಾರುವ ಧಾರಾವಾಹಿಯೊಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಒಬ್ಬ ಅಣ್ಣ ಹಾಗೂ ಮುದ್ದಿನ ಮೂವರು ತಂಗಿಯರ ಕಥೆಯೇ ರಕ್ಷಾಬಂಧನ.

ಕಳೆದೊಂದು ವಾರದಿಂದ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಈಗಾಗಲೇ ಜನರ ಗಮನ ಸೆಳೆದಿದೆ. ಇದರಲ್ಲಿ ಅಣ್ಣನಾಗಿ ಭವಾನಿ ಸಿಂಗ್ ನಟಿಸಿದ್ದರೆ, ತಂಗಿಯಾಗಿ ಪವಿತ್ರಾ ನಾಯ್ಕ್ ನಟಿಸುತ್ತಿದ್ದಾರೆ.

ಭವಾನಿ ಸಿಂಗ್ ರಾಜಸ್ಥಾನದವರಾದರೂ ಕನ್ನಡ ಕಿರುತೆರೆಯಲ್ಲಿ ನೆಲೆ ಕಂಡುಕೊಂಡವರು. ಚಿಕ್ಕ ವಯಸ್ಸಿನಿಂದಲೂ ನಟನೆಯನ್ನು ಕನವರಿಸಿದವರು. ಓದಿಗಾಗಿ ಬೆಂಗಳೂರಿಗೆ ಬಂದು ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದವರು. ಆ ಸಮಯದಲ್ಲಿ ಸ್ನೇಹಿತರೊಬ್ಬರು ನೀಡಿದ ಮಾರ್ಗದರ್ಶನದಿಂದಾಗಿ ನಟನೆಯತ್ತ ಮುಖ ಮಾಡಿದರು. ಅಭಿನಯ ತರಂಗ ಎಂಬ ರಂಗತಂಡವೊಂದರಲ್ಲಿ ಸೇರಿಕೊಂಡು ರಂಗಭೂಮಿಯಲ್ಲಿ ಡಿಪ್ಲೊಮಾ ಪದವಿ ಪೂರೈಸಿದರು. ಹೀಗೆ ಆರಂಭವಾದ ಇವರ ನಟನಾ ಪಯಣಕ್ಕೆ ಇನ್ನಷ್ಟು ಇಂಬು ನೀಡಿದ್ದು ಚರಣದಾಸಿ ಧಾರಾವಾಹಿ. ಸುಮಾರು 900 ಕಂತು ಪ್ರಸಾರವಾದ ಈ ಧಾರಾವಾಹಿ ದೂರದ ಹಿಂದಿಯ ಹುಡುಗನಿಗೆ ಕನ್ನಡ ಕಿರುತೆರೆಯಲ್ಲಿ ನೆಲೆ ಕಂಡುಕೊಳ್ಳುವಂತೆ ಮಾಡಿತ್ತು. ನಂತರ ಕೆಲವೊಂದು ಹಿಂದಿ ಧಾರಾವಾಹಿಗಳಲ್ಲಿ ನಟಿಸಿ ಮತ್ತೆ ‘ಸುಬ್ಬಲಕ್ಷ್ಮಿ ಸಂಸಾರ’ದ ಮೂಲಕ ಕನ್ನಡ ಕಿರುತೆರೆಯ ಕದ ತಟ್ಟಿದರು ಭವಾನಿ.

ಕಾರಣಾಂತರಗಳಿಂದ ಸುಬ್ಬಲಕ್ಷ್ಮಿ ಸಂಸಾರದಿಂದ ಹೊರ ನಡೆದ ಇವರಿಗೆ ಆಕಸ್ಮಿಕವೆಂಬಂತೆ ರಕ್ಷಾ ಬಂಧನದಲ್ಲಿ ಅಣ್ಣನ (ನಾಯಕ) ಪಾತ್ರಕ್ಕೆ ಅವಕಾಶ ಸಿಕ್ಕಿತು.

‘ರಕ್ಷಾಬಂಧನದಲ್ಲಿ ನನ್ನದು ಕಾರ್ತಿಕ್ ಹೆಸರಿನ ಪಾತ್ರ. ಮೂವರು ತಂಗಿಯರ ಪ್ರೀತಿಯ ಅಣ್ಣ ನಾನು. ಕಾರ್ತಿಕ್ ತಂಗಿಯರನ್ನು ಅಪ್ಪ–ಅಮ್ಮ, ಸ್ನೇಹಿತನಂತೆ ನೋಡಿಕೊಳ್ಳುವವನು. ಜೊತೆಗೆ ಧಾರಾವಾಹಿಯಲ್ಲಿ ಒಂದು ಮಾಸ್ ಚಹರೆ ಕೂಡ ನನ್ನ ಪಾತ್ರಕ್ಕಿದೆ. ತಂಗಿಯಂದಿರಿಗೆ ಸ್ವಲ್ಪ ತೊಂದರೆಯಾದರೂ ಸಹಿಸದ ಅಣ್ಣನ ಪಾತ್ರವದು. ಶಿವಣ್ಣ ಅವರು ಸೃಷ್ಟಿಸಿದ ಅಣ್ಣ-ತಂಗಿ ಬಾಂಧವ್ಯವನ್ನು ಮರುಸೃಷ್ಟಿ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ. ಅಣ್ಣನ ಪಾತ್ರ ನನಗೆ ತುಂಬಾ ಖುಷಿ ಕೊಟ್ಟಿದೆ. ನನಗೆ ನೆಲೆ ಕೊಟ್ಟ ಕನ್ನಡದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಖುಷಿಯಿಂದ ಹೇಳುತ್ತಾರೆ ರಾಜಸ್ಥಾನಿ ಹುಡುಗ.

ವಿಭಿನ್ನ ಪಾತ್ರಗಳಿಂದ ಜನ ಮೆಚ್ಚುಗೆ ಪಡೆಯುವ ಹಂಬಲವಿರುವ ಇವರನ್ನು ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲೂ ನೋಡಬಹುದು.

ಹಿರಿತೆರೆಯಿಂದ ಕಿರುತೆರೆಗೆ

ರಕ್ಷಾಬಂಧನದಲ್ಲಿ ತಂಗಿ ನಂದಿನಿ ಪಾತ್ರಕ್ಕೆ ಬಣ್ಣ ಹಚ್ಚಿರುವ ಪವಿತ್ರಾ ಎಂಜಿನಿಯರಿಂಗ್ ಪದವೀಧರೆ. ಹಿರಿತೆರೆಯಲ್ಲಿ ಬಣ್ಣ ಹಚ್ಚಿ ನಂತರ ಕಿರುತೆರೆಯ ಕದ ತಟ್ಟಿದವರು. ಆಕಸ್ಮಿಕವಾಗಿ ನಟಿಸಲು ಅವಕಾಶ ಬಂದಾಗ ಆ ಅವಕಾಶ ಬಾಚಿಕೊಳ್ಳುವ ಮೂಲಕ ನಟನೆಯನ್ನು ವೃತ್ತಿಯಾಗಿ ಆಯ್ದುಕೊಂಡವರು.

ಚಿಕ್ಕಮಗಳೂರಿನ ಈ ಬೆಡಗಿ, ‘ಎಲ್ಲಿ ನನ್ನ ವಿಳಾಸ’, ‘ಲಡ್ಡು’, ’ಸ್ವೇಚ್ಛ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂರೂ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದು ಮುಂದಿನ ದಿನಗಳಲ್ಲಿ ಬೆಳ್ಳಿತೆರೆಯ ಮೇಲೆ ಈಕೆಯ ನಟನೆಯನ್ನು ಕಣ್ತುಂಬಿಕೊಳ್ಳಬಹುದು.

‘ಈ ಧಾರಾವಾಹಿ ಪ್ರಸಾರವಾಗಲು ಆರಂಭಿಸಿ ವಾರವಷ್ಟೇ ಕಳೆದಿದೆ. ಜನರು ತುಂಬಾನೇ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮುಂದೇನಾಗಬಹುದು ಎಂಬ ಕುತೂಹಲ ಅವರಲ್ಲಿದೆ. ಅಲ್ಲದೇ ನಮಗೆ ತುಂಬಾ ಒಳ್ಳೆಯ ಪ್ರೈಮ್ ಟೈಮ್ ಸಿಕ್ಕಿದೆ. ಆ ಕಾರಣಕ್ಕೆ ಧಾರಾವಾಹಿ ಹೆಚ್ಚು ಜನರನ್ನು ತಲುಪಿದೆ. ಈ ಬಗ್ಗೆ ತುಂಬಾನೇ ಖುಷಿ ಇದೆ’ ಎನ್ನುತ್ತಾ ಸಂತಸ ಹಂಚಿಕೊಳ್ಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.