ಗುರುವಾರ , ಅಕ್ಟೋಬರ್ 17, 2019
24 °C

ಸಂದರ್ಶನ | ರಕ್ಷಿತ್ ಶೆಟ್ಟಿ ಕಂಡಂತೆ ಶ್ರೀಮನ್ನಾರಾಯಣ!

Published:
Updated:

ರಕ್ಷಿತ್ ಶೆಟ್ಟಿ ಅವರು ನಾಯಕ ನಟನಾಗಿ ವೀಕ್ಷಕರ ಎದುರು ಬಂದ ಕೊನೆಯ ಸಿನಿಮಾ ‘ಕಿರಿಕ್ ಪಾರ್ಟಿ’. 2016ರ ಸೂಪರ್‌ ಹಿಟ್ ಚಿತ್ರಗಳಲ್ಲಿ ಅದೂ ಒಂದು. ಆದರೆ, ಆ ಸಿನಿಮಾ ಬಳಿಕ ರಕ್ಷಿತ್ ನಾಯಕನಾಗಿ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿಲ್ಲ. ಮೂರು ವರ್ಷಗಳ ಅಂತರದ ನಂತರ ಅವರು ‘ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನು ವೀಕ್ಷಕರ ಎದುರು ಇರಿಸಲು ಸಜ್ಜಾಗಿದ್ದಾರೆ.

ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಈ ಚಿತ್ರದ ಬಿಡುಗಡೆ ಪಕ್ಕಾ ಎಂದು ಹೇಳುತ್ತಿರುವ ರಕ್ಷಿತ್, ‘ಸಿನಿಮಾ ಪುರವಣಿ’ಯ ವಿಜಯ್‌ ಜೋಶಿ ಅವರೊಂದಿಗೆ ಮಾತಿಗೆ ಸಿಕ್ಕಿದ್ದರು. ‘ಅಭಿಮಾನಿಗಳನ್ನು ಇಷ್ಟು ವರ್ಷ ಕಾಯಿಸಿದ್ದು ಸರಿಯೇ’ ಎಂಬಲ್ಲಿಂದ ಹಿಡಿದು, ಮುಂದಿನ ಆಲೋಚನೆಗಳವರೆಗೆ ಅವರ ಮಾತು ಹರಡಿಕೊಂಡಿತ್ತು.

ಅವರ ಜೊತೆಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ...

* ಸರಿಸುಮಾರು ಮೂರು ವರ್ಷ ನೀವು ಯಾವ ಚಿತ್ರದಲ್ಲೂ ನಾಯಕನಾಗಿ ಕಾಣಿಸಿಕೊಳ್ಳಲಿಲ್ಲ. ಏಕೆ ಇಷ್ಟು ವಿಳಂಬ?

‘ಕಿರಿಕ್ ಪಾರ್ಟಿ’ ನಂತರ ನಾನು ನಾಯಕನಾಗಿ ನಟಿಸುತ್ತಿರುವ ಚಿತ್ರ ತೆರೆಗೆ ಬರಲು ಮೂರು ವರ್ಷಗಳ ಅವಧಿ ತೆಗೆದುಕೊಳ್ಳುತ್ತಿರುವುದು ನಿಜ. ಆದರೆ, ಈ ವಿಳಂಬ ನನ್ನನ್ನು ಅಷ್ಟಾಗಿ ಕಾಡುತ್ತಿಲ್ಲ. ನಮ್ಮ ಕೆಲಸವನ್ನು ಖುಷಿಯಿಂದ ಮಾಡಬೇಕು ಎಂಬ ತತ್ವದಲ್ಲಿ ನಂಬಿಕೆ ಇರಿಸಿದ್ದೇನೆ. ಈ ಮೂರು ವರ್ಷಗಳಲ್ಲಿ ನಾನು ಹಗಲು–ರಾತ್ರಿ ಕೆಲಸ ಮಾಡಿದ್ದೇನೆ. ಮೂರು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಸಿನಿಮಾ ಮಾಡಲು ನನ್ನಿಂದ ಆಗುತ್ತಿರಲಿಲ್ಲ. ನಡುವಿನಲ್ಲಿ ಒಂದೋ ಎರಡೋ ದಿನ ಬಿಡುವು ತೆಗೆದುಕೊಂಡಿದ್ದನ್ನು ಹೊರತುಪಡಿಸಿದರೆ, ನನ್ನ ಅಷ್ಟೂ ಸಮಯವನ್ನು ಈ ಸಿನಿಮಾಕ್ಕಾಗಿ ಮೀಸಲಿರಿಸಿದ್ದೆ. ಈ ಸಿನಿಮಾದಿಂದ ದಕ್ಕಿರುವ ಅನುಭವ ಆಧರಿಸಿ ನಾನು ಮುಂದೆ ಇದಕ್ಕಿಂತ ದೊಡ್ಡ ಸಿನಿಮಾವನ್ನೂ ಇನ್ನಷ್ಟು ಬೇಗ ಮಾಡಬಹುದು. ಬರವಣಿಗೆ, ನಿರ್ಮಾಣ... ಇವೆಲ್ಲದರಲ್ಲಿ ಹೊಸ ಅನುಭವ ಸಿಕ್ಕಿದೆ.

* ಅದೆಲ್ಲ ಸರಿ. ಆದರೆ, ನಿಮ್ಮ ಅಭಿಮಾನಿಗಳಿಗೆ ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಡವಾ?!

ನಾನು ಈ ಅವಧಿಯಲ್ಲಿ ಪ್ರಯತ್ನ ಮಾಡಿಯೇ ಇಲ್ಲ ಅಂತಲ್ಲ. ಆದರೆ, ಈಗ ಮಾಡಿರುವುದಕ್ಕಿಂತ ಹೆಚ್ಚಿನದೇನನ್ನೂ ಮಾಡಲಾರೆ! ಮೂರೂ ವರ್ಷ ಖುಷಿಯಿಂದ ಕೆಲಸ ಮಾಡಿದ್ದೇನೆ. ಈ ಸಿನಿಮಾ ಕಾರಣದಿಂದಾಗಿ ಭಾರಿ ಬಜೆಟ್ಟಿನ ‘ಪುಣ್ಯಕೋಟಿ’ ಸಿನಿಮಾ ಮಾಡಲು ವಿಶ್ವಾಸ ಮೂಡಿದೆ. ಏನನ್ನೋ ಪಡೆಯಲು ನಾವು ಇನ್ನೇನನ್ನೋ ಕಳೆದುಕೊಳ್ಳಲೇಬೇಕಲ್ಲ?! ಹಾಗಂತ ಮೂರು ವರ್ಷಗಳಲ್ಲಿ ನಾನು ಏನನ್ನೋ ಕಳೆದುಕೊಂಡೆ ಎಂದು ಹೇಳುತ್ತಿಲ್ಲ. ನಾನು ಬಹಳಷ್ಟು ಕಲಿತಿದ್ದೇನೆ ಕೂಡ.

ಮೂರು ವರ್ಷ ಯಾವುದೇ ಸಿನಿಮಾ ಕೊಡದಿದ್ದ ಕಾರಣಕ್ಕಾಗಿ, ‘ಅವನೇ ಶ್ರೀಮನ್ನಾರಾಯಣ’ ಹೆಸರಿನಲ್ಲಿ ಒಳ್ಳೆಯ  ಸಿನಿಮಾ ಕೊಡುತ್ತೇನೆ. ಹಾಗೆಯೇ, ನನ್ನ ಮುಂದಿನ ಸಿನಿಮಾಗಳಲ್ಲೂ ಒಳ್ಳೆಯ ಹೂರಣ ಕೊಡುತ್ತೇನೆ!


ರಕ್ಷಿತ್ ಶೆಟ್ಟಿ

* ‘ಉಳಿದವರು ಕಂಡಂತೆ’ ಚಿತ್ರದ ರಿಚ್ಚಿ ಛಾಯೆ ‘ಕಿರಿಕ್‌ ಪಾರ್ಟಿ’ಯ ಕರ್ಣನಲ್ಲಿ ತುಸು ಇತ್ತು. ಈಗ, ನಾರಾಯಣನ ಪಾತ್ರದಲ್ಲಿ ರಿಚ್ಚಿ ಅಥವಾ ಕರ್ಣನ ಛಾಯೆ ಕಾಣಿಸಬಹುದೇ?

ಹುಡುಕಿದರೆ ಸಿಗಬಹುದು! ಈ ಚಿತ್ರದಲ್ಲೂ ಅಭಿನಯಿಸುತ್ತ ಇರುವುದು ನಾನೇ ಆಗಿರುವ ಕಾರಣ, ಕರ್ಣನ ಒಂದು ಛಾಯೆ ಕಾಣಬಹುದು. ಕರ್ಣನಲ್ಲಿ ಕಂಡ ತುಂಟತನ ನಾರಾಯಣನ ಪಾತ್ರದಲ್ಲಿ ಕಾಣಿಸಬಹುದು. ಆದರೆ ಒಂದು ವ್ಯತ್ಯಾಸ ಇದೆ – ಕರ್ಣ ಬಹಳ ಮುಗ್ಧ, ನಾರಾಯಣ ಚಾಲಾಕಿ!

* ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ವಿಶೇಷ ಏನು?

‘ಉಳಿದವರು ಕಂಡಂತೆ’ ಸಿನಿಮಾ ಮಾಡಿದಾಗ ನನಗೆ ಬರವಣಿಗೆಯಲ್ಲಿ ಹೆಚ್ಚಿನ ಅರಿವು ಇರಲಿಲ್ಲ. ನಾನು ಚಿಕ್ಕವನಾಗಿದ್ದಾಗ ಕಂಡಿದ್ದನ್ನು ಆಧರಿಸಿ ಕಥೆ ಮಾಡಿದೆ. ‘ಕಿರಿಕ್ ‍ಪಾರ್ಟಿ’ ಸಿನಿಮಾ ನನ್ನ ಅಗತ್ಯವಾಗಿತ್ತು. ನನಗೊಂದು ದೊಡ್ಡ ಹಿಟ್ ಬೇಕಿತ್ತು. ಅಲ್ಲದೆ, ನಾನು ಸಂಪಾದಿಸಿದ ಕಾಲೇಜು ಅನುಭವ ಬಳಸಿ ಜನರಿಗೆ ಮನರಂಜನೆ ಕೊಡುವುದನ್ನು ಗುರಿಯಾಗಿಟ್ಟುಕೊಂಡಿದ್ದೆ. ಚಿಕ್ಕ ಬಜೆಟ್ಟಿನಲ್ಲೇ ಒಂದು ಹಿಟ್ ಸಿನಿಮಾ ಕೊಡುವ ಉದ್ದೇಶ ಕೂಡ ಇತ್ತು.

‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ನನಗೆ ಬಹಳಷ್ಟು ಕಲಿಸಿದೆ. ಬರವಣಿಗೆಯಲ್ಲಿ ಇನ್ನೂ ಒಂದು ಹಂತ ಮೇಲಕ್ಕೆ ತಂದಿದೆ. ಇದು ವೀಕ್ಷಕರಲ್ಲಿ ರೋಮಾಂಚನವನ್ನೂ ಹುಟ್ಟಿಸುತ್ತದೆ. ನಾನು ಇದುವರೆಗೆ ಮಾಡಿದ ಸಿನಿಮಾಗಳಿಗೂ, ‘ಅವನೇ ಶ್ರೀಮನ್ನಾರಾಯಣ’ ಸಿನಿಮಾಕ್ಕೂ ಬರವಣಿಗೆ ವಿಚಾರದಲ್ಲಿ ಬಹುದೊಡ್ಡ ವ್ಯತ್ಯಾಸ ಇದೆ. ‘ಉಳಿದವರು...’, ‘ಕಿರಿಕ್‌ ..’ನ ಕಥೆಯಲ್ಲಿ ನನ್ನ ಅನುಭವಗಳೂ ಸೇರಿವೆ. ಆದರೆ ‘ಅವನೇ...’ ಸಂಪೂರ್ಣವಾಗಿ ಫ್ಯಾಂಟಸಿ ಸಿನಿಮಾ. ಇದರ ಕಥೆಯಲ್ಲಿ ನನ್ನ ಜೀವನಾನುಭವ ಏನೂ ಇಲ್ಲ. ಇದರಲ್ಲಿ ನಾವು ಸೃಜನಶೀಲವಾಗಿ ಹೆಚ್ಚು ಪ್ರಯೋಗಗಳನ್ನು ಮಾಡಲು ಸಾಧ್ಯವಾಯಿತು.

ಇದು ಫ್ಯಾಂಟಸಿ ಕಥೆಯಾದ ಕಾರಣ ಬಹುಪಾಲು ದೃಶ್ಯಗಳನ್ನು ಸೆಟ್‌ನಲ್ಲೇ ಚಿತ್ರೀಕರಿಸಿದೆವು. ಚಿತ್ರೀಕರಣದ ಸಂದರ್ಭದಲ್ಲಿ ಕೆಲವು ಬಾರಿ ಎರಡು ಸಾವಿರ ಜನರನ್ನು ನಿಭಾಯಿಸಬೇಕಾಗಿ ಬಂದಿದ್ದೂ ಇದೆ. ಇದೊಂದು ದೊಡ್ಡ ಅನುಭವ ನನಗೆ. ಇದರಲ್ಲಿ ಎರಡು ಸಾವಿರ ದೃಶ್ಯಗಳು ವಿಎಫ್ಎಕ್ಸ್‌ ಬಳಸಿ ಸಿದ್ಧವಾಗಿವೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಬಗ್ಗೆ ನಿಮಗಿಂತ ಚೆನ್ನಾಗಿ ನನಗೆ ಗೊತ್ತು –ರಕ್ಷಿತ್‌ ಶೆಟ್ಟಿ

* ‘ಅವನೇ...’ ಚಿತ್ರ ಬೇರೆ ಭಾಷೆಗಳಿಗೆ ಡಬ್ ಆಗಿ, ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಬೇರೆ ರಾಜ್ಯಗಳ ಜನರಿಗೆ ಇದರ ಕಥೆ ಆಪ್ತ ಆಗುತ್ತದೆಯಾ?

ಇದು ಫ್ಯಾಂಟಸಿ ಕಥೆ ಎಂದು ಹೇಳಿದ್ದೇನೆ. ಕಥೆ ನಡೆಯುವುದು ಅಮರಾವತಿ ಎಂಬ ಊರಿನಲ್ಲಿ. ಅಂಥದ್ದೊಂದು ಊರು ಕನ್ನಡ ನಾಡಿನಲ್ಲಿ ಇಲ್ಲ. ಆದರೆ ನಾವು ಅಂಥದ್ದೊಂದು ಜಾಗವನ್ನು ಸೃಷ್ಟಿಸಿದ್ದೇವೆ. ಚಿತ್ರ ನೋಡುವಾಗ, ಇದು ಉತ್ತರ ಕರ್ನಾಟಕದ ಯಾವುದೋ ಊರು ಆಗಿರಬಹುದು ಎಂಬ ಭಾವನೆ ಬರುತ್ತದೆ. ಹಾಗೆಯೇ, ಇದು ತಮ್ಮ ರಾಜ್ಯದ ಒಂದು ಊರು ಆಗಿರಬಹುದೇ ಎಂಬ ಭಾವನೆ ಆಂಧ್ರಪ್ರದೇಶದವರಿಗೂ, ಉತ್ತರ ಭಾರತದವರಿಗೂ ಬರುತ್ತದೆ. ಆರ್.ಕೆ. ನಾರಾಯಣ್ ಸೃಷ್ಟಿಸಿದ ಮಾಲ್ಗುಡಿ ದಕ್ಷಿಣ ಭಾರತದ ಎಲ್ಲಿಯೂ ಇದ್ದಿರಬಹುದಲ್ಲವೇ?!

* ಮತ್ತೆ ನಿರ್ದೇಶನ ಆರಂಭಿಸುವುದು ಯಾವಾಗ?

‘ಪುಣ್ಯಕೋಟಿ’ ಸಿನಿಮಾ ಮೂಲಕ ಮತ್ತೆ ನಿರ್ದೇಶನ ಆರಂಭಿಸುವೆ. ಇದರ ಚಿತ್ರೀಕರಣವನ್ನು ಕರ್ನಾಟಕದಲ್ಲೇ ನಡೆಸಬೇಕು ಎಂಬ ಆಸೆ ಇದೆ. ಆದರೆ ಬರವಣಿಗೆ ಪೂರ್ಣಗೊಂಡ ನಂತರ, ಲೊಕೇಷನ್‌ಗಳು ಅಂತಿಮವಾಗುತ್ತವೆ.

* ಇಷ್ಟರವರೆಗೆ ನಿಭಾಯಿಸಿದ ಪಾತ್ರಗಳಲ್ಲಿ ನಿಮ್ಮ ಹೃದಯಕ್ಕೆ ಹತ್ತಿರವಾದ ಪಾತ್ರ ಯಾವುದು?

ನಾನು ಪ್ರತೀ ಪಾತ್ರವನ್ನೂ ಬಹಳ ಖುಷಿಯಿಂದ ನಿಭಾಯಿಸಿದ್ದೇನೆ. ಎಲ್ಲ ಪಾತ್ರಗಳೂ ನನಗೆ ಒಂದೊಂದು ಕಾರಣಕ್ಕೆ ಇಷ್ಟ. ರಿಚ್ಚಿ (ರಿಚರ್ಡ್ ಆ್ಯಂಟನಿ) ಪಾತ್ರವನ್ನು ನಿಭಾಯಿಸುವಾಗ ನಾನು ಸಂಪೂರ್ಣವಾಗಿ ಅವನೇ ಆಗಿಬಿಟ್ಟಿದ್ದೆ. ಈ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟ ನನಗೆ. ಆದರೆ, ರಿಚ್ಚಿ ಜನರಿಗೆ ಹೆಚ್ಚು ಇಷ್ಟವಾದ ಪಾತ್ರ. ನಾರಾಯಣನ ಪಾತ್ರವನ್ನು ನೀವು ಹಿಂದೆ ಎಲ್ಲಿಯೂ ನೊಡಿರಲಿಕ್ಕಿಲ್ಲ.

* ರಿಚ್ಚಿ ಪಾತ್ರಕ್ಕೆ ಮತ್ತೆ ಜೀವ ಕೊಡುವ ಆಲೋಚನೆ ಎಲ್ಲಿಗೆ ಬಂದಿದೆ?

ಕಥೆ ಸಿದ್ಧವಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಪುಣ್ಯಕೋಟಿ ಮತ್ತು ಈ ಸಿನಿಮಾವನ್ನು ಜೊತೆಜೊತೆಗೆ ಮಾಡಬಹುದು. ರಿಚ್ಚಿ ಪಾತ್ರವನ್ನು ನಾನೇ ನಿಭಾಯಿಸಲಿದ್ದೇನೆ. ಆದರೆ ನಿರ್ದೇಶನವನ್ನು ಬೇರೆಯವರು ಮಾಡಲಿದ್ದಾರೆ. ಅದೇನೇ ಇರಲಿ, ರಿಚ್ಚಿ ಪುನಃ ತೆರೆಯ ಮೇಲೆ ಕಾಣಿಸಿಕೊಳ್ಳುವುದು ಖಂಡಿತ. ಇನ್ನು ಮೂರು ವರ್ಷಗಳಲ್ಲಿ ಆತ ಮತ್ತೆ ವೀಕ್ಷಕರ ಎದುರು ಬರಲಿದ್ದಾನೆ.

 

Post Comments (+)