‘ವಾಚೋ’ ರಕ್ತಚಂದನ!

ಬುಧವಾರ, ಏಪ್ರಿಲ್ 24, 2019
31 °C

‘ವಾಚೋ’ ರಕ್ತಚಂದನ!

Published:
Updated:
Prajavani

ನಿರ್ದೇಶಕ ಬಿ.ಎಂ. ಗಿರಿರಾಜ್‌ ‘ರಕ್ತಚಂದನ’ ಎಂಬ ವೆಬ್‌ಸೀರೀಸ್‌ ನಿರ್ದೇಶಿಸಿರುವುದು ಗೊತ್ತೇ ಇದೆ. ಇಪ್ಪತ್ತು ನಿಮಿಷಗಳ ಹನ್ನೊಂದು ಕಂತುಗಳಲ್ಲಿರುವ ಈ ವೆಬ್‌ಸೀರೀಸ್‌ ಪೂರ್ಣಗೊಂಡಿರುವುದಲ್ಲದೇ ಈಗಾಗಲೇ ಅಂತರ್ಜಾಲದಲ್ಲಿ ವೀಕ್ಷಣೆಗೆ ಲಭ್ಯವಾಗಿದೆ. ‘ವಾಚೋ’ ಎಂಬ ಆ್ಯಪ್‌ನಲ್ಲಿ ‘ರಕ್ತಚಂದನ’ವನ್ನು ವೀಕ್ಷಿಸಬಹುದು.

ಡಿಟಿಎಚ್‌ ರೀಲಾಂಚ್‌ ಆಗುತ್ತಿದ್ದು, ಅಂತರ್ಜಾಲ ಮನರಂಜನಾ ಮಾರುಕಟ್ಟೆಗೂ ಬರಲು ನಿರ್ಧರಿಸಿದೆ. ಈ ಉದ್ದೇಶದಿಂದಲೇ ಅದು ಇಂಗ್ಲಿಷಿನ ವಾಚ್‌ ಮತ್ತು ಹಿಂದಿಯ ದೇಖೋ ಎಂಬ ಎರಡು ಶಬ್ದಗಳನ್ನು ಸೇರಿಸಿ ‘ವಾಚೋ’ ಎಂಬ ಆ್ಯಪ್‌ ರೂಪಿಸಿದೆ. ಇದರಲ್ಲಿ ಹಲವು ಪ್ರಾದೇಶಿಕ ಭಾಷೆಗಳ ವೆಬ್‌ ಕಂಟೆಂಟ್‌ಗಳನ್ನೂ ನೋಡುಗರಿಗೆ ಒದಗಿಸುವ ಯೋಜನೆಯನ್ನು ಹೊಂದಿದೆ. ಕನ್ನಡದಲ್ಲಿ ‘ರಕ್ತಚಂದನ’ ವೆಬ್‌ಸೀರಿಸ್‌ ಅನ್ನೂ ಡಿಟಿಎಚ್‌ ಖರೀದಿಸಿದ್ದು ಈಗಾಗಲೇ ‘ವಾಚೋ’ ವೇದಿಕೆಯಲ್ಲಿ ಬಿಡುಗಡೆಯನ್ನೂ ಮಾಡಿದೆ.

‘ವಾಚೋ ಆ್ಯಪ್‌ ಈಗಾಗಲೇ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಆದರೆ ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಒಟ್ಟಿಗೇ ಆ್ಯಪ್‌ ಅನ್ನು ಲಾಂಚ್‌ ಮಾಡಬೇಕು ಎಂಬ ಕಾರಣಕ್ಕೆ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಹಾಗಾಗಿ ಪ್ರಚಾರವನ್ನೂ ಮಾಡುತ್ತಿಲ್ಲ. ಆದರೆ ಈಗಾಗಲೇ ಪ್ಲೇಸ್ಟೋರ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ರಕ್ತಚಂದನ ನೋಡಿದ ಹಲವರು ನಮಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ’ ಎಂದು ಹೇಳಿಕೊಳ್ಳುತ್ತಾರೆ ಗಿರಿರಾಜ್‌.

‘ಕನ್ನಡದಲ್ಲಿ ಈಗಷ್ಟೇ ವೆಬ್‌ ಕಂಟೆಂಟ್‌ ಸೃಷ್ಟಿಯಾಗುತ್ತಿವೆ. ಹಾಗಾಗಿ ರಿಸ್ಕ್‌ ಕೂಡ ಇದೆ. ನಾವು ಈ ವೆಬ್‌ಸೀರೀಸ್‌ ಆರಂಭಿಸಿದ್ದು ಪೂರ್ತಿ ರಿಸ್ಕ್‌ ತೆಗೆದುಕೊಂಡೇ. ಬಜೆಟ್‌ ಕೂಡ ಅಂದುಕೊಂಡಿದ್ದಕ್ಕಿಂತ ಹೆಚ್ಚೇ ಆಯಿತು. ನಮ್ಮ ಅದೃಷ್ಟಕ್ಕೆ ವೆಬ್‌ಸೀರೀಸ್‌ ಮುಗಿಯುತ್ತಿರುವ ಹಾಗೆಯೇ ಕನ್ನಡದಲ್ಲಿ ವೆಬ್‌ ಕಂಟೆಂಟ್‌ ಹುಡುಕುತ್ತಿರುವ ಕಂಪನಿ ಸಿಕ್ಕಿತು. ರಕ್ತಚಂದನವನ್ನು ನೋಡಿ ಇಷ್ಟಪಟ್ಟು ಖರೀದಿಸಿತು’ ಎಂದು ವಿವರಣೆ ನೀಡುವ ಅವರು ‘ಇದರಿಂದ ತುಂಬ ಲಾಭ ಮಾಡಿಕೊಳ್ಳಲಿಕ್ಕೆ ಸಾಧ್ಯವಾಗಿಲ್ಲ. ಆದರೆ ಬಂಡವಾಳ ವಾಪಸ್‌ ಬಂದಿದೆ. ನಾವು ಸೇಫ್‌ ಆಗಿದ್ದೇವೆ’ ಎನ್ನುತ್ತಾರೆ.

ಆದ್ವಿಕಾ, ಭಜರಂಗಿ ಲೋಕಿ ಮತ್ತು ಧನ್ಯಾ ಬಾಲಕೃಷ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ರಕ್ತಚಂದನ’ ಕ್ರೈಂ ಥ್ರಿಲ್ಲರ್‌ ಆಗಿರುವುದರಿಂದ ಜನರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಅವರದು.

ಮುಂದೆ ಇನ್ನಷ್ಟು ವೆಬ್‌ಸೀರೀಸ್‌ಗಳನ್ನು ನಿರ್ದೇಶಿಸುವ ಆಸೆ ಗಿರಿರಾಜ್‌ ಅವರಿಗಿದೆ. ಆದರೆ ‘ರಿಸ್ಕ್‌ ತೆಗೆದುಕೊಳ್ಳಲಾರೆ’ ಎಂದೂ ಸ್ಪಷ್ಟವಾಗಿಯೇ ಹೇಳುತ್ತಾರೆ. ‘ವೆಬ್‌ಸೀರೀಸ್‌ಗಳಲ್ಲಿ ನಿರ್ದೇಶಕರಿಗೆ ಕಂಟೆಂಟ್‌ ಮೇಲೆ ಸಂಪೂರ್ಣ ಸ್ವಾತಂತ್ರ್ಯ ಇರುತ್ತದೆ. ಅದು ಖುಷಿ ಕೊಡುತ್ತದೆ. ಯಾರಾದರೂ ಹಣ ಹೂಡಲು ಮುಂದೆ ಬಂದರೆ ಖಂಡಿತ ಇನ್ನಷ್ಟು ವೆಬ್‌ಸೀರೀಸ್‌ ನಿರ್ದೇಶಿಸುವ ಆಸೆ ಇದೆ’ ಎನ್ನುತ್ತಾರೆ ಗಿರಿರಾಜ್‌.‌

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !