ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕುಲ್ ಪ್ರೀತ್ ಸಿಂಗ್: ಕನ್ನಡ ಟು ಹಿಂದಿ ವಯಾ ತೆಲುಗು

Last Updated 27 ಮೇ 2019, 5:17 IST
ಅಕ್ಷರ ಗಾತ್ರ

ಆಗಿನ್ನೂ ರಕುಲ್ ಪ್ರೀತ್ ಸಿಂಗ್ ಹದಿನೆಂಟರ ಹುಡುಗಿ. ಹಾಲುಗಲ್ಲ. ತುಂಬುಕೆನ್ನೆಗಳು. ಕಣ್ಣಾಲಿಗಳಲ್ಲಿ ತುಳುಕುತ್ತಿದ್ದ ಮುಗ್ಧತೆ. ಜಗ್ಗೇಶ್ ಮಗ ಗುರುರಾಜ್ ನಾಯಕನಾಗಿದ್ದ ‘ಗಿಲ್ಲಿ’ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದ ಅವರಿಗೆ ಅವಕಾಶ ಸಿಕ್ಕಿದ್ದಕ್ಕೆ ಧನ್ಯತಾ ಭಾವ. ತಮಿಳಿನ ‘7ಜಿ ರೇನ್‌ಬೋ ಕಾಲೊನಿ’ಯ ರೀಮೇಕ್‌ ಸಿನಿಮಾ ಅದು. ಸೇಟು ಹುಡುಗಿಯ ಪಾತ್ರಕ್ಕೆ ಆ ಮುಖ ಹೇಳಿ ಮಾಡಿಸಿದಂತೆ ಇದ್ದುದರಿಂದ ಆಯ್ಕೆ ಮಾಡಿಕೊಂಡಿದ್ದಾಗಿ ನಿರ್ದೇಶಕ ರಾಘವ ಲೋಕಿ ಆಗ ಹೇಳಿದ್ದರು. ಸಿನಿಮಾ ಸುಮಾರಾಗಿ ಓಡಿತ್ತಷ್ಟೆ.

ಹತ್ತು ವರ್ಷಗಳಲ್ಲಿ ಎಷ್ಟೋ ನೀರು ಹರಿದಿದೆ. ಈಗ ರಕುಲ್‌ ಪ್ರೀತ್‌ ಸಿಂಗ್‌ ‘ದೇ ದೇ ಪ್ಯಾರ್‌ ದೇ’ ಹಿಂದಿ ಸಿನಿಮಾದಲ್ಲಿ ಅಜಯ್‌ ದೇವಗನ್‌ ಅವರಿಗೆ ನಾಯಕಿಯಾಗಿ ನಟಿಸಿ, ಬಾಲಿವುಡ್‌ನಲ್ಲೂ ಸಂಚಲನ ಮೂಡಿಸುವ ಮರುಯತ್ನಕ್ಕೆ ಕೈಹಾಕಿದ್ದಾರೆ. ಅಪ್ಪಿತಪ್ಪಿ ಕೂಡ ಅವರು ಕನ್ನಡದ ‘ಗಿಲ್ಲಿ’ ಸಿನಿಮಾ ಕಟ್ಟಿಕೊಟ್ಟ ಅನುಭವವನ್ನೂ ಎಲ್ಲಿಯೂ ಪ್ರಸ್ತಾಪಿಸುವುದಿಲ್ಲ.

ದೆಹಲಿಯ ಹುಡುಗಿ ರಕುಲ್‌ ಸೇನಾ ಕುಟುಂಬದ ಹಿನ್ನೆಲೆಯವರು. ಓದಿದ್ದೂ ಸೇನಾ ಶಾಲೆಯಲ್ಲಿಯೇ. ಕಾಲೇಜು ಮೆಟ್ಟಿಲು ಹತ್ತಿದಾಗ ಮಾಡೆಲಿಂಗ್‌ಗೆ ಇಳಿದರು. ಅಲ್ಲಿಂದಲೇ ಕನ್ನಡ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು. 2011ರಲ್ಲಿ ಫೆಮಿನಾ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಕಂಡ ಮುಖಗಳಲ್ಲಿ ಅವರದ್ದೂ ಒಂದು. ಐದನೇ ಸ್ಥಾನ ಪಡೆದ ಅವರು, ‘ಇಂಡಿಯಾ ಟೈಮ್ಸ್‌’ನ ‘ಜನರ ಆಯ್ಕೆ’ಯಲ್ಲಿ ಮೊದಲಿಗರಾದರು. ‘ಮಿಸ್‌ ಫ್ರೆಷ್‌’, ‘ಮಿಸ್‌ ಬ್ಯೂಟಿಫುಲ್‌ ಸ್ಮೈಲ್‌’, ‘ಮಿಸ್‌ ಬ್ಯೂಟಿಫುಲ್‌ ಐಸ್‌’ ಎಂಬೆಲ್ಲ ಗೌರವಗಳು ಸಂದವು.

ಕನ್ನಡದಲ್ಲಿ ರಕುಲ್‌ಗೆ ಇನ್ನೊಂದು ಸಿನಿಮಾ ಅವಕಾಶ ಸಿಗುತ್ತಿತ್ತೋ ಇಲ್ಲವೋ? ಅವರು ಸೀದಾ ತೆಲುಗಿನತ್ತ ಮುಖ ಮಾಡಿದರು. ತಮಿಳಿನಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದರು. ಆದರೆ, ಬ್ರೇಕ್‌ ನೀಡಿದ್ದು ತೆಲುಗಿನ ‘ವೆಂಕಟಾದ್ರಿ ಎಕ್ಸ್‌ಪ್ರೆಸ್‌’. ಆಗಲೇ ಹಿಂದಿ ಚಿತ್ರರಂಗಕ್ಕೆ ಜಿಗಿಯಬೇಕೆಂಬ ಉತ್ಕಟತೆ ಇತ್ತು. ‘ಯಾರಿಯಾ’ ಸಿನಿಮಾದಲ್ಲಿ ನಟಿಸಿದರಾದರೂ ಅದು ಯಶಸ್ವಿಯಾಗಲಿಲ್ಲ.

ಆ ಕಾಲಘಟ್ಟದಲ್ಲಿ ರಕುಲ್‌ ಸಿನಿಮಾ ಗುಣಮಟ್ಟವನ್ನು ಅಳೆದೂ ತೂಗಿ ಆಯ್ಕೆ ಮಾಡಿಕೊಳ್ಳುವಷ್ಟು ಪ್ರಬುದ್ಧರಾಗಿರಲಿಲ್ಲ. ಹಾಗೆಂದು ಅವರೇ ಹೇಳಿಕೊಂಡಿದ್ದಾರೆ.

ಒಂದು ಸಿನಿಮಾ ನಿಕ್ಕಿಯಾಗಿ, ಮೂರ್ನಾಲ್ಕು ದಿನ ಚಿತ್ರೀಕರಣ ಕೂಡ ನಡೆಯಿತು. ಆಮೇಲೆ ಬೇರೆ ನಾಯಕಿಯನ್ನು ಇವರ ಜಾಗಕ್ಕೆ ತಂದರು. ಆ ಕಹಿ ನೆನಪು ಕೆಲವು ತಿಂಗಳುಗಳೇ ಕಾಡಿತ್ತು. ಮೂರ್ನಾಲ್ಕು ತಿಂಗಳು ಯಾವುದೇ ಅವಕಾಶ ಸಿಗದೆ ಪರದಾಡಿದ್ದೂ ಇದೆ. ಮನೆಯಲ್ಲಿ ಈ ಕ್ಷೇತ್ರದ ಅನಿಶ್ಚಿತತೆ ಕಂಡು ಅಪ್ಪ–ಅಮ್ಮನಿಂದ ಸಹಜವಾಗಿಯೇ ಎಚ್ಚರಿಕೆಯ ಗಂಟೆಯ ದನಿ ಕೇಳಿಬರುತ್ತಿತ್ತು. ಆಮೇಲೆ ತೆಲುಗಿನಲ್ಲೇ ನೆಲೆ ಕಂಡುಕೊಳ್ಳಲು ನಿರ್ಧರಿಸಿದರು.

‘ರಫ್‌’, ‘ಲೌಕ್ಯಂ’, ‘ಕಿಕ್‌ 2’ ತರಹದ ಸಿನಿಮಾಗಳು ತೆರೆಕಂಡ ಮೇಲೆ ರಕುಲ್‌ ನಸೀಬು ಬದಲಾಯಿತು. ಸ್ಟಾರ್‌ಗಳ ಚಿತ್ರಕ್ಕೆ ಹೊಂದುವ ಮುಖದ ನಾಯಕಿ ಎಂಬ ತೀರ್ಮಾನಕ್ಕೆ ನಿರ್ಮಾಪಕರು ಬಂದರು. ‘ಅದೃಷ್ಟದ ನಾಯಕಿ’ ಎಂದೂ ಕೆಲವರು ದೃಷ್ಟಿ ತೆಗೆದರು. ‘ಹಾಗೆಲ್ಲ ಹೇಳಬೇಡಿ. ಸಿನಿಮಾದ ಗೆಲುವು, ಸೋಲು ಎರಡರಲ್ಲೂ ಅನೇಕರ ಪಾಲಿರುತ್ತದೆ. ಎರಡಕ್ಕೂ ಒಬ್ಬರನ್ನೇ ಹೊಣೆಯಾಗಿಸುವುದು ಸರಿಯಲ್ಲ’ ಎಂದು ಆಗ ರಕುಲ್‌ ಪ್ರತಿಕ್ರಿಯಿಸಿದ್ದರು.

ಕಳೆದ ವರ್ಷ ನೀರಜ್‌ ಪಾಂಡೆ ನಿರ್ದೇಶನದ ‘ಅಯ್ಯಾರಿ’ ಹಿಂದಿ ಚಿತ್ರದಲ್ಲಿ ಅಭಿನಯಿಸಿ ಮತ್ತೊಮ್ಮೆ ಬಾಲಿವುಡ್‌ ಅದೃಷ್ಟ ಪರೀಕ್ಷೆಗೆ ಅವರು ಒಳಗಾಗಿದ್ದರು. ಈಗ ಅಜಯ್‌ ದೇವಗನ್‌ ಜತೆ ನಟಿಸಿದ್ದು, ಧರ್ಮ ಪ್ರೊಡಕ್ಷನ್ಸ್‌ನ ಒಂದು ಸಿನಿಮಾಗಾದರೂ ಆಯ್ಕೆಯಾಗುವುದು ತಮ್ಮ ಕನಸು ಎಂದು ಹೇಳಿಕೊಂಡಿದ್ದಾರೆ. ಆ ಕಾಲವೂ ಕೂಡಿ ಬರುವುದೋ ಏನೋ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT