ಭಾನುವಾರ, ಜನವರಿ 26, 2020
18 °C

ಮೋಹನ್‌ ರಾಜ ಸಿನಿಮಾಕ್ಕೆ ರಾಮ್‌ ಚರಣ್ ಹೀರೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಸ್‌.ಎಸ್‌ ರಾಜಮೌಳಿ ಅಭಿನಯದ ‘ಆರ್‌ಆರ್‌ಆರ್‌’ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ರಾಮ್‌ ಚರಣ್‌ ತೇಜಾ ಹಾಗೂ ಜ್ಯೂನಿಯರ್‌ ಎನ್‌ಟಿಆರ್‌ ನಾಯಕರಾಗಿ ನಟಿಸುತ್ತಿದ್ದಾರೆ.

ಈಗ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಬ್ಲಾಕ್‌ಬಸ್ಟರ್‌ ತಮಿಳು ಹಿಟ್‌ ಸಿನಿಮಾ ‘ಥಾಣಿ ಒರುವನ್’  ನೀಡಿದ ನಿರ್ದೇಶಕ ಮೋಹನ್‌ ರಾಜ ಅವರು ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದು, ಅವರು ತೆಲುಗು ಭಾಷೆಯಲ್ಲಿ ಮಾಡುತ್ತಿರುವ ಮೊದಲ ಸಿನಿಮಾವಿದು. ಈ ಚಿತ್ರದಲ್ಲಿ ನಾಯಕನಾಗಿ ರಾಮ್‌ಚರಣ್‌ ತೇಜಾ ನಟಿಸಲಿದ್ದಾರೆ.

‘ಥಾಣಿ ಒರುವನ್‌’ ಚಿತ್ರದಲ್ಲಿ ನಟ ಜಯಂ ರವಿ ನಾಯಕನಾಗಿ ನಟಿಸಿದ್ದರು. ಈಗ ಈ ಚಿತ್ರದ ಸೀಕ್ವೆಲ್‌ ಸಿನಿಮಾಕ್ಕೆ ಮೋಹನ್‌ ರಾಜ್‌ ಯೋಜನೆ ಮಾಡುತ್ತಿದ್ದಾರೆ. ಆದರೆ ಜಯಂ ರವಿ ಅವರು ಮಣಿರತ್ನಂ ಅವರ ‘ಪೊನ್ನಿಯಿನ್‌ ಸೆಲ್ವನ್‌’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಹಾಗಾಗಿ ಈ ಚಿತ್ರದಲ್ಲಿ ನಾಯಕನನ್ನಾಗಿ ರಾಮ್‌ ಚರಣ್‌ ತೇಜಾ ಅವರನ್ನು ಆಯ್ಕೆ ಮಾಡಿದ್ದಾರೆ.

‘ಥಾಣಿ ಒರುವನ್‌’ ಚಿತ್ರದ ತೆಲುಗು ರಿಮೇಕ್‌ ‘ಧ್ರುವ’ದಲ್ಲಿ ರಾಮ್‌ ಚರಣ್‌ ತೇಜಾ ನಾಯಕನಾಗಿ ನಟಿಸಿದ್ದರು. ಈ ಚಿತ್ರವೂ 2017ರಲ್ಲಿ ಥಿಯೇಟರ್‌ಗಳಲ್ಲಿ ಭಾರಿ ಹಿಟ್‌ ಗಳಿಸಿದ್ದ ಚಿತ್ರ. ಒಂದು ವೇಳೆ ಈ ಚಿತ್ರದಲ್ಲಿ ನಟಿಸಲು ರಾಮ್‌ ಚರಣ್‌ ಒಪ್ಪಿಕೊಂಡರೆ ಮೋಹನ್‌ ರಾಜ ಅವರು ಇದೇ ಮೊದಲ ಬಾರಿಗೆ ತೆಲುಗು ಇಂಡಸ್ಟ್ರಿಗೆ ಕಾಲಿಡಲಿದ್ದಾರೆ.

ಸದ್ಯ ರಾಮ್‌ಚರಣ್‌ ತೇಜಾ ‘ಆರ್‌ಆರ್‌ಆರ್’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದು, ಅದರ ಚಿತ್ರೀಕರಣ ನಡೆಯುತ್ತಿದೆ.  ಈ ಪ್ಯಾನ್‌ ಇಂಡಿಯಾ ಚಿತ್ರವು 2020ರ ಜುಲೈ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದರಲ್ಲಿ ಅಲ್ಲುರಿ ಸೀತಾರಾಮ ರಾಜು ಪಾತ್ರದಲ್ಲಿ ತೇಜಾ ಕಾಣಿಸಿಕೊಳ್ಳುತ್ತಿದ್ದಾರೆ.

 ಇದೇ ವೇಳೆ ಕೊರಟಾಲ ಶಿವ ನಿರ್ದೇಶನದ, ಚಿರಂಜೀವಿ ನಟನೆಯ ಸಿನಿಮಾವನ್ನು ರಾಮ್‌ ಚರಣ್‌ ತೇಜಾ ಅವರೇ ನಿರ್ಮಾಣ ಮಾಡಲಿದ್ದಾರೆ . ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ. ಈ ಚಿತ್ರದಲ್ಲಿ ರಾಮ್‌ ಚರಣ್‌ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ.

ಇದನ್ನೂ ಓದಿ: ಮತ್ತೆ ಮಗನ ಚಿತ್ರದಲ್ಲಿ ನಟಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಹಿರಿಯ ನಟ!

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು