ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ದೀಪದಡಿ ರಾಮ್‌ಚೇತನ್‌ ಕನಸು

Last Updated 29 ಮೇ 2020, 4:04 IST
ಅಕ್ಷರ ಗಾತ್ರ

ಕಾಲೇಜು ದಿನಗಳಲ್ಲಿ ಕಿರುಚಿತ್ರಗಳನ್ನು ಮಾಡುತ್ತಿದ್ದ ಆ ಹುಡುಗನಲ್ಲಿ ನಿರ್ದೇಶಕನಾಗುವ ಕನಸು ಹುಟ್ಟಿಕೊಂಡಿತು. ಆ ಕನಸು ಹೊತ್ತು ಗಾಂಧಿನಗರಕ್ಕೆ ಬಂದ ಹುಡುಗ ಮೊದಲ ಬಾರಿ ಸಿನಿಮಾವೊಂದರಲ್ಲಿ ನಟಿಸಿದ. ನಂತರ ಧಾರಾವಾಹಿಗಳಲ್ಲಿ ಸಣ್ಣ–ಪುಟ್ಟ ಪಾತ್ರ ಮಾಡಿದ. ನಿರ್ದೇಶನದ ದಿಸೆಯಲ್ಲೇ ಸಾಗುತ್ತಿದ್ದ ಹುಡುಗನಿಗೆ ನಟನಾಗುವ ಅದೃಷ್ಟ ಆಕಸ್ಮಿಕವಾಗಿ ಒಲಿಯಿತು. ಹೀಗೆ ನಿರ್ದೇಶಕನಾಗಲು ಬಂದು ‘ಬೀದಿ ದೀಪ’ ಸಿನಿಮಾಕ್ಕೆ ನಾಯಕನಾದರು ರಾಮ್‌ಚೇತನ್‌.

ಚಿಕ್ಕಮಗಳೂರು ಮೂಲದ ಇವರು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪದವಿ ಓದುತ್ತಿದ್ದಾಗ ಹಿರಿಯ ವಿದ್ಯಾರ್ಥಿಗಳು ಮಾಡಿದ ಕಿರುಚಿತ್ರ ನೋಡಿದ ಇವರಿಗೂ ಕಿರುಚಿತ್ರ ಮಾಡುವ ಮನಸ್ಸಾಯಿತು.ಆಗ ತಾವೇ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ ಹಾಗೂ ನಟನೆಯ ಜವಾಬ್ದಾರಿ ಹೊತ್ತರು. ಒಟ್ಟು 13 ಕಿರುಚಿತ್ರಗಳನ್ನು ಮಾಡಿದರು. ‘ಬ್ಯೂಟಿಪುಲ್‌’ ಎಂಬ ಪೂರ್ಣ ಪ್ರಮಾಣದ ಚಿತ್ರವನ್ನು ಮಾಡಿದರು. ಮೊದಮೊದಲು ಕಿರುಚಿತ್ರಗಳಿಂದ ಯಶಸ್ಸು ಸಿಗದಿದ್ದರೂ ನಂತರ ಕಿರುಚಿತ್ರಗಳಿಂದಲೇ ರಾಷ್ಟ್ರಪ್ರಶಸ್ತಿ ಪಡೆದರು. ಇದು ಅವರಲ್ಲಿ ನಿರ್ದೇಶಕನಾಗುವ ಕನಸಿನ ಬೇರು ಇನ್ನಷ್ಟು ದೃಢವಾಗಲು ಕಾರಣವಾಯಿತು. ಆ ಕನಸಿನೊಂದಿಗೆ ಗಾಂಧಿನಗರಕ್ಕೆ ಕಾಲಿಟ್ಟರು.

ಸಿನಿರಂಗಕ್ಕೆ ಬಂದ ಆರಂಭದಲ್ಲಿ ‘ಸ್ಟೈಲ್ ರಾಜ’ ಎಂಬ ಸಿನಿಮಾದಲ್ಲಿ ಖಳನಟನ ಪಾತ್ರ ಮಾಡಿದರು. ಆ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿದರು. ಆದಾದ ನಂತರ ಕಿರುತೆರೆಯ ಹಾದಿಯಲ್ಲಿ ಸಾಗಿದರು ರಾಮ್‌ಚೇತನ್. ತ್ರೀವೇಣಿ ಸಂಗಮ, ಪತ್ತೇದಾರಿ ಪ್ರತಿಭಾ, ಮಂಗ್ಳೂರು ಹುಡುಗ ಹುಬ್ಳಿ ಹುಡುಗಿ, ರಾಧಾ ರಮಣ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದರು. ಹೀಗೆ ಸಿನಿಮಾ, ನಿರ್ದೇಶನ ಹಾಗೂ ಧಾರಾವಾಹಿ ಎಂದು ಸಾಗುತ್ತಿದ್ದ ಹುಡುಗನಿಗೆ ನೇರವಾಗಿ ನಾಯಕನಾಗುವ ಅವಕಾಶ ಒದಗಿ ಬಂದಿದೆ.

‘ಬೀದಿ ದೀಪ’ ಸಿನಿಮಾ‌ಗೆ ನಿರ್ದೇಶಕನಾಗಲು ಬಂದ ಇವರಿಗೆ ನಾಯಕನಾಗುವ ಅದೃಷ್ಟ ಒಲಿದಿದೆ. ಸಿಕ್ಕ ಅವಕಾಶ ಬಿಡುವುದೇಕೆ ಎಂದುಕೊಂಡು ನಿರ್ದೇಶಕನಾಗುವ ಕನಸನ್ನು ಬದಿಗೊತ್ತಿ ನಾಯಕನಾಗಿದ್ದಾರೆ.

ಮೊದಲ ಸಿನಿಮಾದಲ್ಲೇಮಿತ್ರ ಹಾಗೂ ಪೂಜಾ ಗಾಂಧಿಯಂತಹ ಅನುಭವಿಗಳ ಜೊತೆ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ ರಾಮ್‌ಚೇತನ್‌. ‘ನಾನು ಸಿನಿಮಾ ಕ್ಷೇತ್ರಕ್ಕೆ ಬರಬೇಕು ಎಂದು ದೃಢ ನಿರ್ಧಾರ ಮಾಡಿದ್ದರಿಂದ ಸಾಕಷ್ಟು ತಯಾರಿ ನಡೆಸಿದ್ದೆ. ಆದರೂ ನಾಯಕನಾಗಿ ನಟಿಸುವುದು ಸುಲಭದ ಮಾತಾಗಿರಲಿಲ್ಲ. ಮಿತ್ರ ಅವರು ನಟನೆಯ ವಿಷಯದಲ್ಲಿ ತುಂಬಾನೇ ಸಹಾಯ ಮಾಡಿದ್ದಾರೆ. ಶೂಟಿಂಗ್‌ ಬಿಡುವಿನ ವೇಳೆ ನಟನೆಯ ಭಂಗಿಗಳನ್ನು ಹೇಳಿ ಕೊಡುತ್ತಿದ್ದರು. ಹಾಗಲ್ಲಾ ಹೀಗೆ ಮಾಡು ಎಂದು ತಿದ್ದುತ್ತಿದ್ದರು’ ಎಂದು ನೆನೆಪಿಸಿಕೊಳ್ಳುತ್ತಾರೆ.

ಗಾಂಧಿನಗರಕ್ಕೆ ಮೊದಲ ಬಾರಿ ಬಂದಿದ್ದು, ಕ್ಯಾಮೆರಾ ಎದುರಿಸಿದ ಬಗ್ಗೆ ಚೇತನ್ ಹೇಳುವುದು ಹೀಗೆ: ‘ನನಗೆ ಮೊದಲು ಬರುವಾಗ ಭಯ ಖಂಡಿತ ಇತ್ತು. ಕಾಲೇಜು ದಿನಗಳಲ್ಲಿ ಸಣ್ಣಪುಟ್ಟ ಕ್ಯಾಮೆರಾದಲ್ಲಿ ಶೂಟಿಂಗ್ ಮಾಡುತ್ತಿದ್ದೆವು. ಅಲ್ಲಿ ಎಲ್ಲವೂ ನಮ್ಮ ನಿಯಂತ್ರಣದಲ್ಲೇ ಇರುತ್ತಿತ್ತು. ಆದರೆ ಇಲ್ಲಿ ಹಾಗಲ್ಲ. ಮೊದಲಿಗೆ ಸ್ವಲ್ಪ ನರ್ವಸ್ ಆಗಿದ್ದೆ. ಆದರೆ ದಿನ ಕಳೆದ ಮೇಲೆ ಧೈರ್ಯ ಬಂತು. ಜೊತೆಗೆ ನಮ್ಮ ನಿರ್ದೇಶಕರು ಹಾಗೂ ಚಿತ್ರತಂಡ ನನಗೆ ಧೈರ್ಯ ತುಂಬಿ ಸಹಕಾರ ನೀಡಿದ್ದಾರೆ. ಆ ಕಾರಣಕ್ಕೆ ನಾನು ನಾಯಕನಾಗಲು ಸಾಧ್ಯವಾಯಿತು’ ಎನ್ನುತ್ತಾ ಚಿತ್ರತಂಡಕ್ಕೆ ಧನ್ಯವಾದ ಹೇಳುತ್ತಾರೆ.

‘ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಮಗ ಸಂಬಳ ಬರುವ ಕೆಲಸ ಮಾಡಲಿ ಎಂದು ತಂದೆ–ತಾಯಿ ನಿರೀಕ್ಷಿಸುವುದು ಸಾಮಾನ್ಯ. ಮೊದಲು ನಮ್ಮ ಮನೆಯಲ್ಲೂ ಕೆಲಸ, ಸಂಬಳ ಎಂದೆಲ್ಲಾ ಹೇಳುತ್ತಿದ್ದರು. ಆದರೆ ಟಿವಿಯಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ ಮೇಲೆ ಮನೆಯವರಿಗೆ ನನ್ನ ಮೇಲೆ ಆಶಾಭಾವ ಮೂಡಿದೆ. ಈಗ ನನಗೆ ತುಂಬಾ ಸಹಕಾರ ನೀಡುತ್ತಿದ್ದಾರೆ. ಜೊತೆಗೆ ನನ್ನ ಇಷ್ಟೆಲ್ಲಾ ಸಾಧನೆಯ ಹಿಂದಿರುವುದು ಎಸ್‌ಡಿಎಂ ಕಾಲೇಜು ಹಾಗೂ ಅಲ್ಲಿನ ಪ್ರಾಧ್ಯಾಪಕ ವೃಂದ. ಅವರೆಲ್ಲರ ಸಹಕಾರವೇ ನನ್ನ ಈ ಯಶಸ್ಸು’ ಎಂದು ವಿನಮ್ರರಾಗಿ ನುಡಿಯುತ್ತಾರೆ.

‘ನನಗೆ ಹೀರೊಯಿಸಂಗಿಂತ ಜನರ ಮನಸ್ಸಿಗೆ ಹತ್ತಿರವಾಗುವ, ನೈಜತೆ ಇರುವ ಪಾತ್ರಗಳಲ್ಲಿ ನಟಿಸಲು ಇಷ್ಟ’ ಎನ್ನುವ ಇವರು ಮುಂದಿನ ದಿನಗಳಲ್ಲಿ ನಟನೆ ಹಾಗೂ ನಿರ್ದೇಶನದಲ್ಲೇ ಮುಂದುವರಿಯುವ ಆಶಾಭಾವನೆ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT