ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಟರಂಗ್‌’ ಟ್ಯೂನ್‌ ಕದ್ದಿದ್ದರೇ ಅರ್ಜುನ್ ಜನ್ಯ?

‘ರ‍್ಯಾಂಬೋ’ ಚಿತ್ರದ ಈ ಹಾಡಿಗೆ ಸ್ಪೂರ್ತಿ ಯಾವುದು ಗೊತ್ತೇ?
Last Updated 25 ಡಿಸೆಂಬರ್ 2018, 1:28 IST
ಅಕ್ಷರ ಗಾತ್ರ

ಒಂದೆಡೆಗೆ ‘ಕೆಜಿಎಫ್‌’ ಸಿನಿಮಾ ಕನ್ನಡದ ಸೀಮೆಯಾಚೆಗೂ ಸುದ್ದಿಯಾಗುತ್ತಿದೆ. ಉಳಿದ ಚಿತ್ರರಂಗದವರೂ ಕನ್ನಡದತ್ತ ತಿರುಗಿ ನೋಡುವಂತೆ ಮಾಡುತ್ತಿದೆ. ಒಂದೆಡೆ ಈ ಸಂಭ್ರಮ ಹರಡಿರುವಾಗಲೇ, 2017ರಲ್ಲಿ ಮರಾಠಿಯ ಎಬಿಪಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ಸಂದರ್ಶನವೊಂದಲ್ಲಿ ಕನ್ನಡ ಚಿತ್ರರಂಗ ಉಲ್ಲೇಖಗೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಅದು ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡುವ ಖ್ಯಾತ ಸಂಗೀತ ನಿರ್ದೇಶಕ ಸಹೋದರರಾದ ಅಜಯ್‌– ಅತುಲ್‌ ಅವರ ಸಂದರ್ಶನ ಕಾರ್ಯಕ್ರಮ.

ಅಜಯ್‌– ಅತುಲ್‌ ಕನ್ನಡ ಚಿತ್ರರಂಗವನ್ನು ಮೆಚ್ಚಿಕೊಂಡು ಮಾತಾಡಿದರೆ ಎಂದು ಹೆಮ್ಮೆಪಡಬೇಡಿ. ಇಲ್ಲಿ ಕನ್ನಡ ಚಿತ್ರರಂಗದ ಉಲ್ಲೇಖವಾಗಿರುವುದು ಹೆಮ್ಮೆಪಡುವ ಕಾರಣಕ್ಕೆ ಖಂಡಿತ ಅಲ್ಲ. ಈ ಕಾರ್ಯಕ್ರಮದ ವಿಷಯ ‘ಅಜಯ್‌– ಅತುಲ್‌’ ಅವರು ಸಂಯೋಜಿಸಿದ ಸಂಗೀತವನ್ನು ಎಲ್ಲೆಲ್ಲಿ ಕದ್ದು ಬಳಕೆ ಮಾಡಿಕೊಳ್ಳಲಾಗಿದೆ ಎಂಬುದರ ಕುರಿತು. ಈ ಕುರಿತು ಮಾತನಾಡುತ್ತ ಅಜತ್‌– ಅತುಲ್‌ ತಮ್ಮ ‘ನಟರಂಗ್‌’ ಸಿನಿಮಾದ ಖೇಲ್‌ ಮಂಡಳ್‌ ಹಾಡನ್ನು ಯಥಾವತ್‌ ಕದ್ದು ಕನ್ನಡದ ‘ರ್‍ಯಾಂಬೋ’ ಸಿನಿಮಾಕ್ಕೆ ಬಳಕೆ ಮಾಡಿಕೊಂಡಿರುವುದನ್ನು ಉಲ್ಲೇಖಿಸಿದ್ದಾರೆ. ಅದಕ್ಕೆ ಪುರಾವೆ ಎಂಬಂತೆ ರ‍್ಯಾಂಬೋ ಚಿತ್ರದ ‘ಕಣ್ಣಾ ಮುಚ್ಚೆ...’ ಎಂಬ ಹಾಡನ್ನು ಪ್ಲೇ ಮಾಡಿ ಕೂಡ ತೋರಿಸಲಾಗುತ್ತದೆ.

‘ಈ ಹಾಡು ಕನ್ನಡದಲ್ಲಿ ಹಿಟ್‌ ಆಗಿದೆಯಂತೆ. ಆದರೆ ಈ ಬಗ್ಗೆ ನನಗೆ ಏನೇನೂ ತಿಳಿದಿರಲಿಲ್ಲ. ನಮ್ಮ ಅನುಮತಿಯನ್ನೂ ಪಡೆದುಕೊಂಡಿಲ್ಲ’ ಎಂದು ಅವರು ಹೇಳಿಕೊಳ್ಳುವಾಗ ಯಾವುದೇ ಕನ್ನಡಿಗನಾದರೂ ನಾಚಿಕೆಯಿಂದ ತಲೆತಗ್ಗಸುವಂತಾಗುತ್ತದೆ.

‘ನಟರಂಗ್‌’ನ ಖೇಲ್‌ ಮಂಡಳ್‌ ಹಾಡು ಮತ್ತು ರ‍್ಯಾಂಬೋ ಚಿತ್ರದ ‘ಕಣ್ಣಾ ಮುಚ್ಚೆ’ ಹಾಡು ಒಂದರ ಹಿಂದೆ ಒಂದು ಕೇಳಿನೋಡಿದರೆ ಸಂಗೀತ ಸಂಗತಿಗಳನ್ನು ಕೊಂಚ ಬದಲಾವಣೆಯನ್ನೂ ಮಾಡಿಕೊಳ್ಳದೆ ಯಥಾವತ್‌ ಎತ್ತಿಕೊಂಡಿರುವುದು ತುಂಬ ಸುಲಭವಾಗಿ ಗೊತ್ತಾಗುತ್ತದೆ. ರವಿ ಜಾಧವ್‌ ನಿರ್ದೇಶನದ ಅತುಲ್‌ ಕುಲಕರ್ಣಿ ಮತ್ತು ಸೋನಾಲಿ ಕುಲಕರ್ಣಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ನಟರಂಗ್‌’ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿತ್ತು. 2010 ಜನವರಿ 1ಕ್ಕೆ ಈ ಚಿತ್ರ ಬಿಡುಗಡೆಯಾಗಿತ್ತು.

ಅಂದ ಹಾಗೆ ಈ ಹಾಡನ್ನುನಕಲು ಮಾಡಿರುವವರು ಯಾರು ಗೊತ್ತೇ? ಯಾವುದೋ ಹೊಸ ಸಂಗೀತ ನಿರ್ದೇಶಕರಲ್ಲ. ಸಾಲು ಸಾಲು ಹಿಟ್‌ ಹಾಡುಗಳನ್ನು ಕೊಟ್ಟ, ಜನಪ್ರಿಯ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ. ಹೌದು, ’ರ್‍ಯಾಂಬೋ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವುದು ಅರ್ಜುನ್‌ ಜನ್ಯ. ವಿಜಯ ಪ್ರಕಾಶ್‌ ಈ ಹಾಡನ್ನು ಹಾಡಿದ್ದಾರೆ.

ಎಂ.ಎಸ್. ಶ್ರೀನಾಥ್‌ ನಿರ್ದೇಶನದ ಶರಣ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ರ‍್ಯಾಂಬೋ ಚಿತ್ರ 2012 ಸೆಪ್ಟೆಂಬರ್ 7ಕ್ಕೆ ಬಿಡುಗಡೆಯಾಗಿ ಹಿಟ್‌ ಆಗಿತ್ತು.

ಯೂ ಟ್ಯೂಬ್‌ನಲ್ಲಿ ಲಭ್ಯವಿರುವ ಈ ವಿಡಿಯೊಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಹೀಗೆ ನಟರಂಗ್‌ ಸಿನಿಮಾ ಟ್ಯೂನ್‌ ಅನ್ನು ಕದ್ದು ಕನ್ನಡದಲ್ಲಿ ಬಳಸಿಕೊಂಡಿರುವುದಕ್ಕೆ ಅರ್ಜುನ್‌ ಜನ್ಯ ವಿರುದ್ಧ ಸಾಕಷ್ಟು ಜನ ಕಿಡಿ ಕಾರಿದ್ದಾರೆ. ‘ಕನ್ನಡಿಗರ ಪರವಾಗಿ ಕ್ಷಮೆ ಕೋರುತ್ತೇನೆ. ನಾಚಿಕೆಯಾಗಬೇಕು ಅರ್ಜುನ್ ಜನ್ಯ ಅವರಿಗೆ’ ಎಂದು ಪೋಸ್ಟ್‌ ಮಾಡಿದ್ದಾರೆ. ‘ಅರ್ಜುನ್‌ ಜನ್ಯ, ಅಜಯ್‌– ಅತುಲ್ ಅವರಲ್ಲಿ ಕ್ಷಮೆ ಕೋರಬೇಕು‍’ ಎಂದೂ ಒತ್ತಾಯಿಸಿದ್ದಾರೆ. ಇಡೀ ದಕ್ಷಿಣ ಭಾರತದವರನ್ನೇ ಕಳ್ಳರು ಎಂದು ಜರಿದ ಕಮೆಂಟ್‌ ಕೂಡ ಇದೆ.

2012 ಅಗಸ್ಟ್‌ನಲ್ಲಿ ‘ಕಣ್ಣಾ ಮುಚ್ಚೆ’ ಹಾಡನ್ನು ಯೂ ಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದಾಗಲೇ ಹಲವರು ಇದು ‘ನಟರಂಗ್‌’ ಚಿತ್ರದ ಹಾಡು ಎಂದು ಗುರ್ತಿಸಿದ್ದರು. ಟ್ಯೂನ್‌ ಕದ್ದಿರುವುದಕ್ಕೆ ಟೀಕೆಯನ್ನೂ ಮಾಡಿದ್ದರು. ಇದುವರೆಗೆ ಈ ಹಾಡನ್ನು 14.73 ಲಕ್ಷ ಜನರು ವೀಕ್ಷಿಸಿದ್ದಾರೆ.

ಸಂಗೀತ ನಿರ್ದೇಶಕರು ತಮ್ಮ ಟ್ಯೂನ್‌ಗಳಿಗೆ ಸ್ಫೂರ್ತಿಯನ್ನು ಹಲವು ಕಡೆಗಳಿಂದ ಪಡೆದುಕೊಳ್ಳುವುದು ಹೊಸ ಸಂಗತಿಯೇನಲ್ಲ. ತಮಗೆ ಸ್ಪೂರ್ತಿ ಸಿಕ್ಕ ಸಂಗತಿ ಏನು ಎಂಬುದನ್ನೂ ಹಲವು ದೊಡ್ಡ ದೊಡ್ಡ ಸಂಗೀತ ನಿರ್ದೇಶಕರೇ ಮುಕ್ತವಾಗಿ ಹಂಚಿಕೊಂಡಿರುವುದನನ್ನೂ ನಾವುನೋಡಿದ್ದೇವೆ. ಆದರೆ ಸ್ಪೂರ್ತಿಯ ನೆಪದಲ್ಲಿ ಇಡೀ ಟ್ಯೂನ್‌ ಅನ್ನೇ ಯಥಾವತ್‌ ತೆಗೆದುಕೊಂಡು ಮರುಬಳಕೆ ಮಾಡಿಕೊಳ್ಳುವುದು, ಅದಕ್ಕೆ ಕ್ರೆಡಿಟ್‌ ಕೊಡುವ ಸೌಜನ್ಯವನ್ನೂ ತೋರದಿರುವುದು ಮಾತ್ರ ಸರಿ ಎಂದು ಒಪ್ಪಿಕೊಳ್ಳುವುದು ಕಷ್ಟ. ಇಂಥ ಚಾಳಿಯಿಂದ ಕನ್ನಡ ಚಿತ್ರರಂಗ ಬೆಳೆಯುವುದಿರಲಿ, ಘನತೆಯನ್ನು ಕುಂದಿಸಿಕೊಳ್ಳಬೇಕಾಗುತ್ತದೆ.

ಇಂದಿಗೂ ಬಹುಬೇಡಿಕೆಯ ಸಂಗೀತ ನಿರ್ದೇಶಕನಾಗಿಯೇ ಇರುವ, ಕನ್ನಡದ ಸಂಗೀತದ ರಿಯಾಲಿಟಿ ಷೋ ಒಂದಕ್ಕೆ ನಿರ್ಣಾಯಕರೂ ಆಗಿರುವ ಅರ್ಜುನ್‌ ಜನ್ಯಾ, ಅವರು ಸಂಯೋಜಿಸಿದ ಹಾಡುಗಳಲ್ಲಿ ನಕಲಿಗಳಿವೆಯೋ ಅವರೇ ಹೇಳಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT