ರಮೇಶ್ ಅರವಿಂದ್ ಸಂದರ್ಶನ: ‘ಮುಂದ...’ ಸ್ಫೂರ್ತಿಯ ಮಂತ್ರ

ದೀರ್ಘ ಕಾಲದ ನಂತರ ಹೊಸ ಬಗೆಯ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೀರಿ...
– ಹೌದು, ಸದಾ ಹೊಸತನಕ್ಕೆ ತೆರೆದುಕೊಳ್ಳುವವನು ನಾನು. ‘100’ ಸಿನಿಮಾ ಪ್ರಸ್ತುತ ಸನ್ನಿವೇಶದ ಜೊತೆಗೇ ಬೆಸೆದುಕೊಂಡಿದೆ. ವಾಸ್ತವ ಜಗತ್ತಿನಲ್ಲಿ ಏನು ನಡೆಯುತ್ತಿದೆ, ಅದು ನಮ್ಮ ಬದುಕನ್ನು ಹೇಗೆ ಆವರಿಸುತ್ತಿದೆ ಎಂಬುದನ್ನು ಹೇಳಬೇಕಿತ್ತು. ಇದುವರೆಗೆ ಥ್ರಿಲ್ಲರ್ ಪ್ರಕಾರಕ್ಕೆ ನಾನು ಹೋಗಿರಲಿಲ್ಲ. ಥ್ರಿಲ್ಲರ್‌ನಲ್ಲೂ ಇದು ಫ್ಯಾಮಿಲಿ ಥ್ರಿಲ್ಲರ್. ಕಥೆ ಕೂಡ ಹಾಗೆಯೇ, ಕುಟುಂಬದ ಒಳಗೇ ನಡೆಯುತ್ತದೆ. ಪ್ರೇಕ್ಷಕರಾಗಿಯೂ ಇಡೀ ಕುಟುಂಬ ನೋಡಬೇಕಾದ ಚಿತ್ರ.
ಏನಿದು ‘100’, ಅದರಲ್ಲಿ ರಮೇಶ್ ಯಾರು?
– ‘100’ ಎಂದರೆ ಪೊಲೀಸ್ ಸಹಾಯವಾಣಿ. ಇಡೀ ಕಥೆ ಸೈಬರ್ ಅಪರಾಧದ ಸುತ್ತ ಇದೆ. ಇದರಲ್ಲಿ ನನ್ನದು ಇನ್‌ಸ್ಪೆಕ್ಟರ್ ವಿಷ್ಣು ಅನ್ನುವ ಪಾತ್ರ. ಬಹಳ ಗಂಭೀರ ಪಾತ್ರ. ನನ್ನ ಮತ್ತು ಒಬ್ಬ ಸೈಬರ್ ಸ್ಟಾಕರ್ ನಡುವೆ ನಡೆಯುವ ಘರ್ಷಣೆ ಚಿತ್ರದ ಕಥೆ. ಈಗಿನ ಪ್ಲಸ್ ಮತ್ತು ಮೈನಸ್ ಪಾಯಿಂಟ್‌ಗಳು ಎರಡೂ ಇರುವುದೂ ಸಾಮಾಜಿಕ ಮಾಧ್ಯಮದಲ್ಲಿ. ಅದನ್ನು ಆಧಾರವಾಗಿಟ್ಟುಕೊಂಡು ಸಾಮಾಜಿಕ ಮಾಧ್ಯಮ ತಪ್ಪು ವ್ಯಕ್ತಿಗಳ ಕೈಗೆ ಸಿಕ್ಕಿದರೆ ಏನಾಗುತ್ತದೆ ಎಂಬುದನ್ನು ಹೇಳಿದ್ದೇನೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.
- ‘100’ರಲ್ಲಿ ಏನು ಹೇಳಲು ಹೊರಟಿದ್ದೀರಿ?
ಈಗ ನಿಮ್ಮ ಮನೆಯೊಳಗೆ ಅನುಮತಿ ಇಲ್ಲದೇ ನಿಮ್ಮ ಮೊಬೈಲ್ ಮೂಲಕ ಯಾರ‍್ಯಾರೋ ಪ್ರವೇಶಿಸಿ ಏನೇನನ್ನೋ ತುಂಬುತ್ತಿದ್ದಾರೆ. ಬ್ರೈನ್‌ವಾಷ್ ಮಾಡುತ್ತಿದ್ದಾರೆ. ಇಂಟರ್‌ನೆಟ್ ಅನ್ನುವುದು ಅಟಂ ಬಾಂಬ್ ಇದ್ದ ಹಾಗೆ. ಸರ್ವನಾಶ ಮಾಡಲೂಬಹುದು. ಅದನ್ನು ಇಲ್ಲಿ ಹೇಳಿದ್ದೇನೆ. ಕಮರ್ಷಿಯಲ್ ಚಿತ್ರವಿದು. ಒಳ್ಳೆಯ ಪ್ರತಿಭೆಗಳ ತಂಡ ಈ ಚಿತ್ರದಲ್ಲಿದೆ.
ಬಹಳ ಕಾಲದ ಬಳಿಕ ಸಾಹಸ ದೃಶ್ಯದಲ್ಲಿ ಕಾಣಿಸಿದ್ದೇನೆ. ಎಲ್ಲ ಚಿತ್ರಗಳಲ್ಲಿ ಹೀರೊ ವಿಲನ್‌ಗೆ ಹೊಡೆಯುತ್ತಾನಲ್ಲಾ... ಆದರೆ, ಯಾವ ಕಾರಣಕ್ಕೆ ಹೊಡೆಯುತ್ತಾನೆ ಎಂಬುದನ್ನು ಸ್ಪಷ್ಟಪಡಿಸಿ ಹೊಡೆಯಬೇಕು. ಅದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.
- ಕೋವಿಡ್ ಪರಿಣಾಮ ‘100’ ಚಿತ್ರದ ಮೇಲೆ ಹೇಗಾಯಿತು?
ಕೋವಿಡ್ ಎಲ್ಲರ ಮೇಲೂ ಪರಿಣಾಮ ಬೀರಿದೆ. ಶಿವಾಜಿ ಸುರತ್ಕಲ್ ಬಿಡುಗಡೆಯಾಗಿ 50ನೇ ದಿನಕ್ಕೆ ‘100’ನ್ನು ಬಿಡುಗಡೆ ಮಾಡಬೇಕು ಅಂದುಕೊಂಡಿದ್ದೆ. ಕೋವಿಡ್‌ನಿಂದ ಸುಮಾರು 1 ವರ್ಷ ತಡವಾಯಿತು. ಆದರೆ, ಕುಟುಂಬದೊಡನೆ ಕಾಲಕಳೆಯಲು, ಒಂದಿಷ್ಟು ಓದಿಕೊಳ್ಳಲು ಸಮಯ ಸಿಕ್ಕಿತು.
- ಶಿವಾಜಿ ಸುರತ್ಕಲ್–2 ಸಿದ್ಧತೆ ಹೇಗಿದೆ?
ಶಿವಾಜಿ ಸುರತ್ಕಲ್–2 ಕಲಾವಿದರ ಆಯ್ಕೆ ನಡೆದು ಎಲ್ಲ ಸಿದ್ಧತೆಗಳು ನಡೆದಿವೆ. ಮುಂದಿನ ಬೇಸಿಗೆ ರಜೆ ವೇಳೆಗೆ ನೀವು ‘ಶಿವಾಜಿ ಸುರತ್ಕಲ್–2’ಅನ್ನು ನೋಡಬಹುದು.
- ಮತ್ತೆ ತುಂಟ, ಲವ್ವರ್ ಬಾಯ್ ರಮೇಶ್ ಅವರನ್ನು ಕಾಣಬಹುದೇ?
ನಮ್ಮದು ಕ್ರಿಯೇಟಿವ್ ತುಂಟತನ. ಕಾಲೇಜು ವೇದಿಕೆಗಳಲ್ಲೆಲ್ಲಾ ತುಂಟತನ ಮಾಡುತ್ತಿದ್ದೆ. ತುಂಟತನದ ಅನೇಕ ಪಾತ್ರಗಳು ನನ್ನ ಸ್ವಭಾವಕ್ಕೆ ಹೊಂದುತ್ತಿದ್ದವು.
ಲವರ್ ಬಾಯ್ ಇಮೇಜ್‌ಗೆ ಯಾವ ರೀತಿಯ ಕಥೆಗಳು ಬರುತ್ತವೆ ಅನ್ನುವುದೂ ಮುಖ್ಯ. ಎಷ್ಟೋ ಜನ ಹುಡುಗರು ನನ್ನ ‘ತ್ಯಾಗರಾಜ’ನ ತರಹ ಭಾವನೆ ಹೇಳದೇ ಹೋಗುತ್ತಾರೆ. ಮನುಷ್ಯನ ಭಾವನೆಗಳು ಹೀಗೆಯೇ ಅಲ್ವಾ? ರಾಮನ ಕಾಲದಲ್ಲೂ ಅದೇ ಇತ್ತು. ಈಗಲೂ ಅದೇ ಇದೆ. ಅದನ್ನು ಹೇಗೆ ಪ್ಯಾಕೇಜ್ ಮಾಡುತ್ತೇವೆ ಅನ್ನುವುದು ಮುಖ್ಯ. ಈಗಲೂ ಅಂಥದ್ದು ಮಾಡಬಹುದು. ಆದರೆ, ಬೇರೆಯೇ ರೀತಿ ಅಷ್ಟೆ.
- ಡಿಜಿಟಲ್ ವೇದಿಕೆಗೆ ಬರುತ್ತಿದ್ದೀರಂತೆ?
ನನ್ನ ಮೂಲವೇ ಸೃಜನಶೀಲತೆ. ಅದನ್ನು ಮರೆಯುವುದಿಲ್ಲ. ಕಲಿಯುತ್ತಲೇ ಹೋಗುತ್ತೇನೆ. ಮರುಹುಡುಕಾಟ ಮಾಡುತ್ತಲೇ ಇರಬೇಕು. ನಮ್ಮನ್ನು ನಾವೇ ಮತ್ತೆ ಮತ್ತೆ ಹುಟ್ಟಿಸಿಕೊಳ್ಳಬೇಕು. ಡಿಜಿಟಲ್ ವೇದಿಕೆಗೆ ಎಂದು ಒಂದು ವಿಷಯ ಸಿದ್ಧಪಡಿಸಿದ್ದೆ. ಅದು ಕನ್ನಡಿಗರೇ ಕಟ್ಟುವ ವೇದಿಕೆಗೆ ಎಂದು ಸಿದ್ಧಪಡಿಸಿದ್ದು. ಮುಂದೆ ನೋಡೋಣ.
ಡಿಜಿಟಲ್ ವೇದಿಕೆ ಹೇಗೆಲ್ಲಾ ಬೆಳೆಯುತ್ತದೋ ಅದಕ್ಕೆ ತಕ್ಕಂತೆ ತೆರೆದುಕೊಳ್ಳುತ್ತೇನೆ. ಹಾಗೆಯೇ ಇದುವರೆಗೆ ಎರಡು ಗಂಟೆಗೆ ಸಿನಿಮಾ ಮಾಡುತ್ತಿದ್ದೇನೆ. ಅದನ್ನು ಮುಂದೆ ಒಟಿಟಿಗೆ ಮಾಡುವುದಾದರೆ ಎರಡು ಗಂಟೆಗಳ ಕಥೆಯನ್ನು ಹತ್ತು ಭಾಗಗಳಲ್ಲಿ ಹೇಳುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಬರೆಯುವ ವಿಧಾನವೇ ಬೇರೆ. ಜನ ಮುಂದಿನ ಸಂಚಿಕೆಗೆ ಕಾಯುವಂತಾಗಬೇಕು. ಅಂಥ ಕನ್ನಡದ ಅದ್ಭುತ ಕಂಟೆಂಟ್ ಒಟಿಟಿಯಲ್ಲಿ ಬರಬೇಕು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.