ಬುಧವಾರ, ನವೆಂಬರ್ 13, 2019
23 °C

ನಟ ರಮೇಶ್‌ ಅರವಿಂದ್‌‌ಗೆ ಇದು ಪರ್ವಕಾಲ

Published:
Updated:
Prajavani

ಶೆರ್ಲಾಕ್‌ಹೋಮ್ಸ್‌ ಕನ್ನಡಕ್ಕೆ ತರಬೇಕೆಂದು ನಾನೇ ಒಂದು ಕಾಲಕ್ಕೆ ತುಂಬಾ ಆಸೆ ಇಟ್ಟುಕೊಂಡಿದ್ದೆ. ಅದಕ್ಕೆ ಬೇಕಾದ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೆ. ಈಗ ಆ ನನ್ನ ಕನಸು ನಿರ್ದೇಶಕ ಆಕಾಶ್‌ ಶ್ರೀವತ್ಸ ಮೂಲಕ ನನಸಾಗುತ್ತಿದೆ ಎಂದರು ನಟ ರಮೇಶ್‌ ಅರವಿಂ‌ದ್‌.

ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಟಿ.ವಿ ಕಾರ್ಯಕ್ರಮಗಳ ನಿರೂಪಕನಾಗಿಯೂ ತನ್ನೊಳಗಿನ ಬಹುಮುಖ ಪ್ರತಿಭೆಯ ಮೂಲಕ ಸಿನಿ ರಸಿಕರ, ಕಿರುತೆರೆ ವೀಕ್ಷಕರ ಮನಗೆದ್ದಿದ್ದಾರೆ ರಮೇಶ್‌ ಅರವಿಂದ್‌. ‘ಶಿವಾಜಿ ಸುರತ್ಕಲ್‌ ಎ ಕೇಸ್‌ ಆಫ್‌ ರಣಗಿರಿ ರಹಸ್ಯ’ ಸಿನಿಮಾದಲ್ಲಿ ಅವರು ಮೊದಲ ಬಾರಿಗೆ ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಂಡು, ಈ ಹೊಸ ಅವತಾರದಲ್ಲಿ ಪ್ರೇಕ್ಷಕರ ಮನಗೆಲ್ಲಲು ಹೊರಟಿದ್ದಾರೆ. ಇದು ಅವರ ವೃತ್ತಿ ಬದುಕಿನಲ್ಲಿ ನೂರೊಂದನೇಯ ಸಿನಿಮಾ. ‘ಸಿನಿಮಾ ಪುರವಣಿ’ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಸಿನಿ ಬದುಕಿನ ಅನೇಕ ಸಂಗತಿಗಳನ್ನು ತೆರೆದಿಟ್ಟಿದ್ದಾರೆ.

 * ‘ಶಿವಾಜಿ ಸುರತ್ಕಲ್‌ ಎ ಕೇಸ್‌ ಆಫ್‌ ರಣಗಿರಿ ರಹಸ್ಯ’ದ ಬಗ್ಗೆ ಹೇಳಿ

ಇಂಗ್ಲಿಷ್‌ ಚಿತ್ರಗಳಲ್ಲಿ ಹೆಚ್ಚು ಜನಪ್ರಿಯ ಪಾತ್ರವೆಂದರೆ ಆರ್ಥರ್‌ ಕಾನನ್‌ ಡಾಯ್ಲ್‌ ಮಾಡಿದಂತಹ ಶೆರ್ಲಾಕ್‌ ಹೋಮ್ಸ್‌. ಆ ಪಾತ್ರ ಸ್ಫೂರ್ತಿಯಾಗಿಟ್ಟುಕೊಂಡು, ಶೆರ್ಲಾಕ್‌ಹೋಮ್ಸ್‌ಗೇ ಅರ್ಪಿಸುವಂತೆ ಶಿವಾಜಿ ಸುರತ್ಕಲ್‌ ಸಿನಿಮಾ ಮೂಲಕ ನಮ್ಮ ನಮನ ಸಲ್ಲಿಸುತ್ತಿದ್ದೇವೆ.

ಬಹಳ ವೇಗವಾಗಿ ಯೋಚಿಸಬಲ್ಲ, ಬಹಳ ವೇಗವಾಗಿ ಮಾತನಾಡಬಲ್ಲ, ಪ್ರಕರಣದ ಜಾಡನ್ನು ಊಹಿಸಬಲ್ಲ ಪತ್ತೇದಾರಿಯೇ ಶಿವಾಜಿ ಸುರತ್ಕಲ್‌. ಇಂತಹ ಶಿವಾಜಿಗೆ ವೈಯಕ್ತಿಕ ಸಮಸ್ಯೆಗಳೂ ಇರುತ್ತವೆ. ರಾತ್ರಿ ನಿದ್ದೆ ಬರುವುದಿಲ್ಲ. ಖಿನ್ನತೆಯ ಸಮಸ್ಯೆ ಇರುತ್ತದೆ. ಈ ಸಮಸ್ಯೆಗಳ ಮಧ್ಯೆ ಒಂದು ಗಂಭೀರ ಪ್ರಕರಣವನ್ನು ಹೇಗೆ ಭೇದಿಸುತ್ತಾನೆ ಎನ್ನುವುದು ಚಿತ್ರದ ಕಥೆ. ಇದೊಂದು ಕಾಲ್ಪನಿಕ ಕಥೆ. 

* ಇದು ಕನ್ನಡದ ಶೆರ್ಲಾಕ್‌ಹೋಮ್ಸ್‌ ಎನ್ನಬಹುದಾ?

ಇಂಗ್ಲಿಷಿನಲ್ಲಿ ಹೇಗೆ ಒಬ್ಬ ಜೇಮ್ಸ್ ಬಾಂಡ್, ಒಬ್ಬ ಶೆರ್ಲಾಕ್‌ಹೋಮ್ಸ್‌ ಇದ್ದರೋ ಅದೇ ರೀತಿ ಈ ಶಿವಾಜಿ ಸುರತ್ಕಲ್ ಕನ್ನಡ ಚಿತ್ರರಂಗದಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾನೆ. 

 * ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ

ನಾನು ಇಂತಹ ರೋಲ್‌ ಮಾಡಿಯೇ ಇರಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಅಪರಿಚಿತ ಸಿನಿಮಾ ನೋಡಿ ಬಹಳ ಖುಷಿ ಪಟ್ಟಿದ್ದೆ. ಚಿಕ್ಕ ವಯಸ್ಸಿನಲ್ಲಿ ಇರುವಾಗ ಪತ್ತೇದಾರಿ ಪಾತ್ರ ಬಹಳ ಇಷ್ಟವಾಗುತ್ತಿತ್ತು. ಒಬ್ಬ ಕಲಾವಿದನಿಗೆ ಇಂತಹ ಪಾತ್ರ ಸಿಗುವುದೇ ಅಪರೂಪ. ಶಿವಾಜಿ ಫ್ಲ್ಯಾಷ್‌ಬ್ಯಾಕ್‌ನಲ್ಲಿ ಪೊಲೀಸ್‌ ಅಧಿಕಾರಿಯಾಗಿರುತ್ತಾನೆ. ಡಿಪ್ರೆಷನ್‌ಗೆ ಹೋದಾಗ ಗಡ್ಡಧಾರಿಯಾಗಿ ಕಾಣಿಸುತ್ತಾನೆ. ಈ ಎರಡು ಪಾತ್ರಗಳ ನಡುವೆ ನಡೆಯುವ ಕಥೆಯೇ ಈ ಸಿನಿಮಾ. ಅದಾಗಲೇ ನೂರು ಪ್ರಕರಣಗಳನ್ನು ಭೇದಿಸಿರುರುವ ಶಿವಾಜಿಗೆ ‘ರಣಗಿರಿ ರಹಸ್ಯ’ ನೂರೊಂದನೇಯ ಪ್ರಕರಣ. ನಿರ್ದೇಶಕರು ಬಹಳ ಜಾಣ್ಮೆಯಿಂದ 101ನೇ ಪ್ರಕರಣವನ್ನು ಶಿವಾಜಿಗೆ ವಹಿಸಿದ್ದಾರೆ. ನನ್ನ ನೂರು ಚಿತ್ರಗಳಲ್ಲಿ ನನ್ನನ್ನು ಜನರು ನೋಡದೆ ಇರುವ ಗೆಟಪ್‌, ಬಾಡಿ ಲಾಂಗ್ವೇಜ್‌ನಲ್ಲಿ ನನ್ನನ್ನು ತೋರಿಸಿದ್ದಾರೆ ನಿರ್ದೇಶಕರು. ನನ್ನ ಬಾಯಲ್ಲಿ ಕೇಳದೆ ಇದ್ದ ಡೈಲಾಗ್ ಅನ್ನು‌ ಹೇಳಿಸಿದ್ದಾರೆ. ಈ ಸಮಯದಲ್ಲಿ ಈ ಪಾತ್ರ ನನಗೆ ಬೇಕಾಗಿಯೂ ಇತ್ತು.

* ಹೊಸ ನಿರ್ದೇಶಕರ ಬಗ್ಗೆ ಏನು ಹೇಳುತ್ತೀರಿ?

ಆಗಿನ ಕಾಲದ ನಿರ್ದೇಶಕರು ಒಂದು ರೀತಿಯಲ್ಲಿ ಸರ್ವಾಧಿಕಾರಿಗಳಂತೆ ಇದ್ದರು. ಈಗಿನ ಯುವ ನಿರ್ದೇಶಕರು ಬಹಳ ಮುಕ್ತಮನಸಿನವರು. ಅವರು ಆಯ್ಕೆ ಮಾಡುವ ಶಾಟ್‌ ಮತ್ತು ದೃಶ್ಯಗಳ ಅವಧಿ ನನ್ನನ್ನೂ ಚಕಿತಗೊಳಿಸಿದೆ. ನಾನೇ ನಿರ್ದೇಶಿಸಿ, ನಟಿಸುತ್ತಿರುವ ನೂರನೇ ಚಿತ್ರಕ್ಕೆ ಆಕಾಶ್‌ ಅವರಿಂದ ಸಂಕಲನ ಮಾಡಿಸುತ್ತಿದ್ದೇನೆ. ನಾವು ‘ಆಕ್ಸಿಡೆಂಟ್’ ಸಿನಿಮಾ ಮಾಡುವಾಗ ಆಕಾಶ್‌ ಪರಿಚಿತರಾದವರು. ಅವರ ಒಂದು ಕಿರುಚಿತ್ರದ ಪೋಸ್ಟರ್‌ ನೋಡಿಯೇ ಅವರಲ್ಲಿನ ಸೃಜನಶೀಲತೆ ಅರಿತುಕೊಂಡಿದ್ದೆ. ಆಕ್ಸಿಡೆಂಟ್‌ ಸಿನಿಮಾದ ಪ್ರೊಮೊಸ್‌, ಸ್ಮಾರ್ಟ್‌ ಮೇಕಿಂಗ್‌ ಕೆಲಸದಲ್ಲಿ ಆಕಾಶ್‌ ಕೈಚಳಕವಿದೆ. ಶೆರ್ಲಾಕ್‌ಹೋಮ್ಸ್‌ನಂತಹ ಪಾತ್ರವೊಂದನ್ನು ಕನ್ನಡದಲ್ಲಿ ಕಾರ್ಯರೂಪಕ್ಕೆ ತರುವ ಜಾಣ್ಮೆ, ಕೌಶಲ ಅವರಲ್ಲಿದೆ. ಅದ್ಭುತ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಆಕಾಶ್ ಸಿಗಲಿದ್ದಾರೆ.

* ಚಿತ್ರರಂಗದಲ್ಲಿ ಇದು ನಿಮಗೆ ಪರ್ವಕಾಲವೇ?

ಕಳೆದ ಎರಡು ವರ್ಷಗಳಿಂದ ದಿನವೂ 15ರಿಂದ 16 ಗಂಟೆ ಕೆಲಸ ಮಾಡಿದ್ದೇನೆ. ‘ವೀಕ್‌ ಎಂಡ್‌ ವಿತ್‌ ರಮೇಶ್‌’ ಕಾರ್ಯಕ್ರಮ ನಡೆಸಿಕೊಡುವಾಗ ಮಾತ್ರ ನನಗೆ ವೀಕ್ಷಕರೊಂದಿಗೆ ಮುಖಾಮುಖಿಯಾಗುವ ಅವಕಾಶ ಸಿಗುತ್ತಿತ್ತು. ನಾನು ಮಾಡಿರುವ ಕೆಲಸಗಳು ಈಗ ಒಂದೊಂದಾಗಿ ಹೊರಬರಲಾರಂಭಿಸಿವೆ. ನಿಜಕ್ಕೂ ನನಗೆ ಇದು ಪರ್ವಕಾಲವೇ ಸರಿ.

* ನಿಮ್ಮ ಹೊಸ ಸಿನಿಮಾಗಳು ಯಾವ ಹಂತದಲ್ಲಿವೆ

ಬಟರ್‌ ಫ್ಲೈ, ಪ್ಯಾರಿಸ್‌ ಪ್ಯಾರಿಸ್‌ ಸಿನಿಮಾಗಳು ಪೂರ್ಣಗೊಂಡಿವೆ. ಈ ಸಿನಿಮಾಗಳು ನಾಲ್ಕು ಭಾಷೆಗಳಲ್ಲಿ ಬರಲಿವೆ. ಕನ್ನಡ ಮತ್ತು ತಮಿಳಿನಲ್ಲಿ ನಾನೇ ನಿರ್ದೇಶಿಸಿದ್ದೇನೆ. ತೆಲುಗು ಮತ್ತು ಮಲಯಾಳದಲ್ಲಿ ಬೇರೆಯವರು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಗಳು ನಾಲ್ಕು ಭಾಷೆಗಳಲ್ಲಿ ಒಂದೇ ದಿನ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಶಿವಾಜಿ ಸುರತ್ಕಲ್‌ ಡಬ್ಬಿಂಗ್‌ ಮುಗಿದಿದ್ದು, ಚಿತ್ರೀಕರಣೋತ್ತರ ಕೆಲಸಗಳು ಬಾಕಿ ಇವೆ. ನವೆಂಬರ್‌ ಕೊನೆಯಲ್ಲಿ ಸಿನಿಮಾ ತೆರೆಗೆ ಬರಲಿದೆ. ನನ್ನ ನಿರ್ದೇಶನ, ನಟನೆಯ ‘100’ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ. ಶೇ 75ರಷ್ಟು ಚಿತ್ರೀಕರಣವಾಗಿದೆ. ಪೋಸ್ಟ್‌ ಪ್ರೊಡಕ್ಷನ್‌ ಬಾಕಿ ಇದೆ. ಇನ್ನು ‘ಬೈರಾದೇವಿ’ ಸಿನಿಮಾವನ್ನು ಮೂರು ಭಾಷೆಗಳಲ್ಲಿ ಮಾಡಲಾಗಿದೆ. ರಾಧಿಕಾ ಮತ್ತು ಸ್ಕಂದ ಅವರ ನಟನೆಯ ಭಾಗ ಶೂಟಿಂಗ್‌ ಬಾಕಿ ಇದೆ.

* ನಿಮ್ಮನ್ನು ಕಾಡಿದ ಪಾತ್ರ ಬಗ್ಗೆ ಹೇಳಿ

ಶಿವಾಜಿ ಪಾತ್ರದ ಹ್ಯಾಂಗೋವರ್‌ ನನಗೆ ಇಲ್ಲ. ನಾನು ಪಾತ್ರದ ವಿಷಯ ಬಂದಾಗ ಯಾವತ್ತೂ ಆನ್‌ ಅಂಡ್‌ ಆಫ್‌ ಇದ್ದಂತೆ. ಕ್ಯಾಮೆರಾ ಚಾಲನೆಯಲ್ಲಿರುವಾಗ ಮಾತ್ರ ಪಾತ್ರವಾಗಿರುತ್ತೇನೆ. ಆದರೆ, ಇಷ್ಟು ವರ್ಷಗಳಲ್ಲಿ ಕ್ಯಾಮೆರಾ ಚಾಲನೆಯಲ್ಲಿರದೇ ಇದ್ದಾಗಲೂ ಪಾತ್ರದಿಂದ ಹೊರಬರಲು ಆಗದೇ ಇದ್ದದ್ದು ಎಂದರೆ ಅಮೃತವರ್ಷಿಣಿ ಸಿನಿಮಾದಲ್ಲಿ ಶರತ್‌ಬಾಬು ಅವರನ್ನು ಕೊಲೆ ಮಾಡಿ ಬಂದ ಮೇಲೆ, ಸುಹಾಸಿನಿಗೆ ಬಾಬು ಸಾವಿನ ಸುದ್ದಿ ಹೇಳಬೇಕಾದ ದೃಶ್ಯದಲ್ಲಿ. ಆ ದೃಶ್ಯದ ಚಿತ್ರೀಕರಣ ಮುಗಿದ ಅರ್ಧ ಗಂಟೆಯಾದರೂ ನನಗೆ ಪುನಃ ನಟಿಸಲು ಆಗಿರಲೇ ಇಲ್ಲ.

*ಮುಂದಿನ ಯೋಜನೆಗಳೇನು?

ರಾಮ, ಶ್ಯಾಮ, ಬಾಮಾ ಸಿನಿಮಾ ಎರಡನೇ ಭಾಗ ಮಾಡಬೇಕೆಂದುಕೊಂಡಿದ್ದೇನೆ. ಅದಕ್ಕೆ ಒಳ್ಳೆಯ ಕಥೆ ಇಟ್ಟುಕೊಂಡಿದ್ದೇನೆ. ಕಮಲ್‌ ಹಸನ್‌ ರಾಜಕೀಯದ ಕಡೆ ಹೋಗಿದ್ದಾರೆ. ನಾನು ‌ಇಲ್ಲಿ  ಬ್ಯುಸಿಯಾಗಿದ್ದೇನೆ. ಹಾಗೆಯೇ ‘ತುತ್ತಾ ಮುತ್ತಾ’ ಸಿನಿಮಾದ ಎರಡನೇ ಭಾಗ ಮಾಡಲು ತುಂಬಾ ಆಸೆ ಇದೆ. ಅದಕ್ಕೂ ಒಂದು ಕಥೆ ಸಿದ್ಧ ಮಾಡಿಟ್ಟಿದ್ದೇನೆ.

* ನೂರೊಂದು ಸಿನಿಮಾಗಳ ಜರ್ನಿ ಬಗ್ಗೆ ಏನು ಹೇಳುತ್ತೀರಿ?

ನನಗೂ ಆಶ್ಚರ್ಯವಾಗುತ್ತದೆ. ನನ್ನದು ಹಿಂತಿರುಗಿ ನೋಡುವ ಸ್ವಭಾವೇ ಅಲ್ಲ. ಅದ್ಭುತ ಚಿತ್ರಗಳನ್ನು ಮಾಡಿದ್ದೇವೆ. ಅವಾರ್ಡ್‌ಗಳೂ ಬಂದಿವೆ. ಕಾರಿನಲ್ಲಿ ಪ್ರಯಾಣಿಸುವಾಗ ರೇರ್‌ವೀವ್‌ ಮಿರರ್‌ನಲ್ಲಿ ಲೈಟಾಗಿ ಆಗಾಗ ನೋಡುವಂತೆ ‘ಅಮೆರಿಕಾ ಅಮೆರಿಕಾ’ ‘ಅಮೃತವರ್ಷಿಣಿ’ ಸಿನಿಮಾಗಳನ್ನು ನೋಡಬಹುದೇ ಹೊರತು, ಡ್ರೈವಿಂಗ್‌ ಮಾಡುವಾಗ ವಿಂಡ್‌ಶೀಲ್ಡ್‌ ನೋಡಿಕೊಂಡು ಮುಂದೆ ಹೋಗಬೇಕೆನ್ನುವುದು ನನ್ನ ವಾದ. ಸಿಬಿಐ ಶಿವ ಸಿನಿಮಾ ಮಾಡಿ ಈಗ ಮೂವತ್ತು ವರ್ಷಗಳು ತುಂಬಿವೆ. ಆಗಲೇ 30 ವರ್ಷ ಆಗಿಹೋಯಿತಾ ಅನಿಸುತ್ತದೆ. ಈಗ ನನ್ನ ಗಮನ ಇರುವುದೆಲ್ಲವೂ ‘100’, ಶಿವಾಜಿ ಸುರತ್ಕಲ್‌ ಸಿನಿಮಾಗಳ ಮೇಲೆ. 

* ನಿಮ್ಮ ಚಿರ ಯೌವ್ವನದ ಗುಟ್ಟು

ಅದರಲ್ಲಿ ಗುಟ್ಟೇನು ಇಲ್ಲ. ನನಗೆ ಒತ್ತಡ ಬಹಳ ಕಡಿಮೆ. ನಾನು ಯಾವುದಕ್ಕೂ ಒತ್ತಡ ತಂದುಕೊಳ್ಳುವುದಿಲ್ಲ. ಯಾವುದೇ ಕೆಲಸವನ್ನು ಮಿಕ್ಸಪ್‌ ಮಾಡಿಕೊಳ್ಳುವುದಿಲ್ಲ. ಇದು ನನ್ನ ಕೆಲಸಗಳನ್ನು ಮುಗಿಸಲು ಸಹಾಯಕ್ಕೆ ಬಂದಿದೆ. ಏಕಾಗ್ರತೆ ಇದ್ದರೆ 24 ಗಂಟೆಯನ್ನು 48 ಗಂಟೆಯಂತೆ ಬಳಸಿಕೊಳ್ಳಬಹುದು.

ಪ್ರತಿಕ್ರಿಯಿಸಿ (+)