ಭಾನುವಾರ, ಜನವರಿ 24, 2021
18 °C

'ಕೆಜಿಎಫ್‌ 2' ಚಿತ್ರದ ರಮಿಕಾ ಸೇನ್ ಸಂಕೀರ್ಣ ಪಾತ್ರ: ರವೀನಾ ಟಂಡನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕೆಜಿಎಫ್‌’ ಚಂದನವನದಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಸಿನಿಮಾ. ಈಗ ‘ಕೆಜಿಎಫ್‌ 2’ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಪ್ರಶಾಂತ್‌ ನೀಲ್ ನಿರ್ದೇಶನದ ಈ ಸಿನಿಮಾದಲ್ಲಿ ಬಾಲಿವುಡ್‌ನ ಖ್ಯಾತರು ನಟಿಸಿದ್ದಾರೆ. ನಟಿ ರವೀನಾ ಟಂಡನ್ ಕೂಡ ‘ಕೆಜಿಎಫ್‌–2’ನ ಭಾಗವಾಗಿದ್ದಾರೆ. ಇವರು ಚಿತ್ರದಲ್ಲಿನ ತಮ್ಮ ಪಾತ್ರ, ಸಹನಟರು ಹಾಗೂ ನಿರ್ದೇಶಕರ ಕುರಿತು ಮಾತನ್ನಾಡಿದ್ದಾರೆ.

ಮೊದಲ ಬಾರಿಗೆ ನಟ ಯಶ್ ಅವರೊಂದಿಗೆ ನಟಿಸಿದ ಅನುಭವ ಹೇಗಿತ್ತು?

ಯಶ್‌ ಅವರೊಂದಿಗೆ ನಟಿಸಿದ ಅನುಭವ ನಿಜಕ್ಕೂ ಅದ್ಭುತವಾಗಿತ್ತು. ಅವರು ತುಂಬಾ ಒಳ್ಳೆಯ ವ್ಯಕ್ತಿ, ಶುದ್ಧ ಮನಸ್ಸಿನವರು. ಅವರಲ್ಲಿ ಅದ್ಭುತ ನಟನಾ ಪ್ರತಿಭೆ ಇದೆ. ಅವರೊಂದಿಗೆ ಕೆಲಸ ಮಾಡಿರುವುದು ಸಂತಸ ತಂದಿದೆ.

ನಿಮ್ಮ ಪಾತ್ರದ ಬಗ್ಗೆ ಹೇಳಿ?

ನಾನು ಪಾತ್ರದ ಬಗ್ಗೆ ಹೆಚ್ಚಿಗೆ ಏನೂ ಹೇಳಲು ಬಯಸುವುದಿಲ್ಲ, ಯಾಕೆಂದರೆ ಇದು ತುಂಬಾ ಕುತೂಹಲಕಾರಿ ಹಾಗೂ ಭಿನ್ನವಾದ ಪಾತ್ರ. ರಮಿಕಾ ಸೇನ್‌ ಸಂಕೀರ್ಣ ಪಾತ್ರ, ಆದರೆ ಆ ಪಾತ್ರಕ್ಕೆ ತುಂಬಾನೇ ತೂಕವಿದೆ. ಇದು ನೆಗೆಟಿವ್‌ ಛಾಯೆ ಇರುವ ಪಾತ್ರವೂ ಹೌದು. ಸಿನಿಮಾದಲ್ಲಿ ಪಾತ್ರ ಯಾವ ರೀತಿ ಸಾಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಾಗುವುದಿಲ್ಲ ಅಂತಹ ಪಾತ್ರವಿದು.

ಯಶ್‌ ಜೊತೆ ನಿಮ್ಮನ್ನು ತೆರೆ ಮೇಲೆ ನೋಡಲು ನಿಮ್ಮ ಅಭಿಮಾನಿಗಳು ಕಾಯುತ್ತಿದ್ದಾರೆ. ನಿಮಗೆ ನೇರವಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಯಾವ ರೀತಿಯ ಸಂದೇಶಗಳು ಬರುತ್ತಿವೆ?

ಅಭಿಮಾನಿಗಳ ಕುತೂಹಲ ಹಾಗೂ ಖುಷಿ ಅಗಾಧವಾದದ್ದು, ಅದನ್ನು ನಾನು ವಿವರಿಸಲು ಸಾಧ್ಯವಿಲ್ಲ. ಅವರ ಉತ್ಸಾಹವು ನನ್ನಲ್ಲೂ ಸಹ ಸಾಕಷ್ಟು ನಿರೀಕ್ಷೆ ಹುಟ್ಟುವಂತೆ ಮಾಡಿದೆ. ಅಭಿಮಾನಿಗಳು ಸಿನಿಮಾದಲ್ಲಿ ಯಶ್‌ ಜೊತೆ ನನ್ನನ್ನು ನೋಡಲು ತುಂಬಾನೇ ಕಾತರರಾಗಿದ್ದಾರೆ. ಕೆಜಿಎಫ್‌ ಭಾಗ 1ಕ್ಕೆ ದೊಡ್ಡ ಅಭಿಮಾನಿ ಬಳಗವೇ ಇತ್ತು. ಕೆಜಿಎಫ್‌ 2 ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ನನ್ನ ಫಸ್ಟ್‌ಲುಕ್ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಅಭಿಮಾನಿಗಳು ರಮಿಕಾ ಸೇನ್‌ಳನ್ನು ಖಂಡಿತವಾಗಿಯೂ ತೆರೆ ಮೇಲೆ ಇಷ್ಟಪಡುತ್ತಾರೆ.

ರಮಿಕಾ ಸೇನ್‌ ಪಾತ್ರ ಒ‍‍ಪ್ಪಲು ಕಾರಣ?

ಸಿನಿಮಾ ತಂಡದ ಜೊತೆ ಮಾತನಾಡುತ್ತಾ, ಕಥೆ ಕೇಳಿದಾಗ ಕಥೆ ನನಗೆ ತುಂಬಾನೇ ಇಷ್ಟವಾಗಿತ್ತು. ಮೊದಲ ಭಾಗವನ್ನು ನೋಡುವ ಮೊದಲೇ ನನಗೆ ಪ್ರಶಾಂತ್ ಸ್ಕ್ರಿಪ್ಟ್‌ನ ವಿವರಣೆ ನೀಡಿದ್ದರು. ನಂತರ ನಾನು ಕೆಜಿಎಫ್ ಸಿನಿಮಾ ನೋಡಿದೆ. ನಿಜಕ್ಕೂ ಆ ಸಿನಿಮಾ ಅದ್ಭುತವಾಗಿತ್ತು. ಸಿನಿಮಾ ಜಗತ್ತಿಗೆ ಇದೊಂದು ಹೊಸ ಅಲೆ. ಅದೇನೇ ಇದ್ದರೂ ಕಥೆ ಹಾಗೂ ನಿರೂಪಣೆಯೊಂದಿಗೆ ಕೆಜಿಎಫ್‌ 2 ಹೇಗೆ ಹೊರಹೊಮ್ಮುತ್ತದೆ ಎಂಬುದು ಮುಖ್ಯವಾಗುತ್ತದೆ. ಇದರಲ್ಲಿ ನನ್ನ ಪಾತ್ರ ನಿಜಕ್ಕೂ ಆಸಕ್ತಿಕರವಾಗಿದೆ. ನಟಿಸುವುದಿಲ್ಲ ಎಂದು ಹೇಳಲು ನನ್ನ ಬಳಿ ಕಾರಣವೇ ಇರಲಿಲ್ಲ.

ಹೊಂಬಾಳೆ ಫಿಲ್ಮ್ಸ್ ಹಾಗೂ ಪ್ರಶಾಂತ್‌ ನೀಲ್ ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಪ್ರಶಾಂತ್ ಅವರ ಕೆಲಸದ ಬಗ್ಗೆ ವಿವರಿಸಲು ಸಾಧ್ಯವಿಲ್ಲ. ಬಹುಶಃ ಅವರ ಕೆಲಸವೇ ಇಂದು ಅವರನ್ನು ವಿಶೇಷ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ. ಯಾಕೆಂದರೆ ಅವರ ಶಾಂತವಾಗಿರುವ ಮನಸ್ಸಿನ ಹಿಂದೆ ಯಾವ ರೀತಿಯ ಯೋಚನೆಗಳು ಓಡುತ್ತಿರುತ್ತವೆ ಎಂಬುದನ್ನು ಊಹಿಸಲು ಸಾಧ್ಯವಾಗುವುದಿಲ್ಲ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು