ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಪಾಲ್‌ ಫಿಟ್‌ನೆಸ್‌ಗೆ ಲಲನೆಯರೂ ಫಿದಾ

Last Updated 20 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಅರ್ಜುನ್‌ ರಾಂಪಾಲ್‌ ವರ್ಕ್‌ ಔಟ್‌ ಮತ್ತು ಡಯಟ್‌ ಹೇಗಿದೆ ಗೊತ್ತಾ? ಮೂಲತಃ ರೂಪದರ್ಶಿಯಾಗಿದ್ದ ಅರ್ಜುನ್ ರಾಂಪಾಲ್‌, ಬಾಲಿವುಡ್‌ ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿ ಗುರುತಿಸಿಕೊಂಡವರು. 42ರ ಹರೆಯದಲ್ಲೂ 22ರ ತರಣರೂ ನಾಚುವಂತೆ ಬಾಡಿ ಫಿಟ್‌ನೆಸ್‌ ಕಾಯ್ದುಕೊಂಡಿದ್ದಾರೆ.

ಅವರ ದೇಹಸಿರಿಗೆ ಮನಸೋಲದವರೇ ಇಲ್ಲ. ‘ಪ್ಯಾರ್‌ ಇಷ್ಕ್‌ ಔರ್ ಮೊಹಬತ್‌’ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಇವರಿಗೆ ಚೊಚ್ಚಲ ಸಿನಿಮಾ ಅಷ್ಟೇನು ಯಶಸ್ಸು ತಂದುಕೊಡಲಿಲ್ಲ. ಆದರೆ, ಆ ಚಿತ್ರದಲ್ಲಿನ ನಟನೆಯಂತೂ ಬಾಲಿವುಡ್‌ನಲ್ಲಿ ಸಾಕಷ್ಟು ಅವಕಾಶಗಳು ಅರಸಿ ಬರುವಂತೆ ಮಾಡಿತು.

ಹಾಗೆ ನೋಡಿದರೆ ಅರ್ಜುನ್‌ಗೆ2006ರಲ್ಲಿ ‘ಡಾನ್‌’ ಮೊದಲ ಬಾರಿಗೆ ಯಶಸ್ಸು ತಂದು ಕೊಟ್ಟ ಸಿನಿಮಾ ಎನ್ನಬಹುದು. ‘ಓಂ ಶಾಂತಿ ಓಂ’ ಮತ್ತು ‘ರಾಕ್‌ ಆನ್‌’ ಸಿನಿಮಾಗಳಲ್ಲಿನ ಅವರ ಅದ್ಭುತ ಅಭಿನಯ ಸಿನಿ ಪ್ರೇಕ್ಷರನ್ನು ಸೂಜಿಗಲ್ಲಿನಂತೆ ಸೆಳೆದಿದ್ದು ಸುಳ್ಳಲ್ಲ. ಅಲ್ಲದೆ ‘ರಾಜನೀತಿ’ ಮತ್ತು ‘ಸತ್ಯಾಗ್ರಹ’ ಸಿನಿಮಾಗಳಲ್ಲಿನ ನಟನೆಯಂತೂ ಅವರಿಗೆ ದೊಡ್ಡ ಅಭಿಮಾನಿಗಳ ದಂಡನ್ನೇ ಸೃಷ್ಟಿಸಿಕೊಟ್ಟಿತು.

ಅರ್ಜುನ್‌ ನಲವತ್ತರ ಹರೆಯ ದಾಟಿದ್ದರೂ ಕಾಯ್ದುಕೊಂಡಿರುವ ಫಿಟ್‌ನೆಸ್‌ ಮತ್ತು ದೇಹದ ಕಾಂತಿಗೆ ಮಹಿಳಾ ಅಭಿಮಾನಿಗಳೇ ಹೆಚ್ಚು ಫಿದಾ ಆಗಿದ್ದಾರೆ ಎಂಬ ಮಾತು ಇದೆ.

ಜಬಲ್‌ಪುರದಲ್ಲಿ ಹುಟ್ಟಿ ಬೆಳೆದ ಈ ನಟನಿಗೆ ಕ್ರಿಕೆಟ್‌, ಫುಟ್‌ಬಾಲ್‌, ಟೆನಿಸ್ ಅಚ್ಚುಮೆಚ್ಚಿನ ಆಟಗಳು. ಈ ಕ್ರೀಡೆಗಳಲ್ಲಿ ಭಾಗವಹಿಸುವ ಜತೆಗೆ ಕ್ರೀಡಾಪಟುಗಳನ್ನೂಪ್ರೋತ್ಸಾಹಿಸುವ ಗುಣವುಳ್ಳವರೆನಿಸಿಕೊಂಡಿದ್ದಾರೆ.

ಫಿಟ್‌ನೆಸ್‌ ಗುಟ್ಟೇನು?

ಪ್ರತಿಯೊಬ್ಬರು ಕನಿಷ್ಠ ಒಂದು ಗಂಟೆಯಾದರೂ ಜಿಮ್‌ನಲ್ಲಿ ಸಮಯ ಕಳೆಯಬೇಕೆಂದು ಒತ್ತಿ ಹೇಳುವ ಅರ್ಜುನ್, ತಮ್ಮ ನಿತ್ಯ ಜೀವನದಲ್ಲೂ ಇದೇ ಪಾಲಿಸಿ ಅನುಸರಿಸುತ್ತಿದ್ದಾರೆ. ಸದಾ ಲವಲವಿಕೆಯಿಂದ ಇರಲು ಮತ್ತು ದೇಹದ ಕಾಂತಿ ಉಳಿಸಿಕೊಳ್ಳಲು ದೈಹಿಕ ಕಸರತ್ತಿಗೆ ಹೆಚ್ಚಿನ ಸಮಯ ಮೀಸಲಿರಿಸಿದ್ದಾರೆ. ಕಾರ್ಡಿಯೊ ವ್ಯಾಯಾಮಕ್ಕೂ ಹೆಚ್ಚು ಆದ್ಯತೆ ನೀಡುತ್ತಾರೆ.

ಹಾಸಿಗೆಯಿಂದ ಎದ್ದೇಳುವಾಗಲೇ ಅವರು ವಿಶಿಷ್ಟ ರೀತಿಯಲ್ಲಿ ವರ್ಕ್‌ ಔಟ್‌ ಮಾಡಿರುವಇತ್ತೀಚಿನವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ‘ಫಿಟ್‌ ಇಂಡಿಯಾ’ ಸವಾಲಿಗೆ ಮರು ಸವಾಲುವೊಡ್ಡುವಂತಿದೆ ಎಂದರೂ ಅತಿಶಯವಲ್ಲ.

ಫಿಟ್‌ನೆಸ್‌ ಪ್ರಿಯರಿಗೆ ಟಿಪ್ಸ್‌

ಸಂತುಲಿತ ಮತ್ತು ಸಮತೋಲನ ಆಹಾರ ಸೇವಿಸುವಂತೆಯೂ ಫಿಟ್‌ನೆಸ್‌ ಪ್ರಿಯರಿಗೆ ಅವರು ಟಿಪ್ಸ್‌ ಕೊಡುತ್ತಾರೆ. ಹಾಗೆಯೇ ನಿಮ್ಮ ಎತ್ತರ, ದೇಹದ ತೂಕಕ್ಕೆ ಅನುಗುಣವಾಗಿ ಆಹಾರ ಸೇವಿಸಬೇಕು. ದೈಹಿಕ ಕಸರತ್ತು ಆರಂಭಿಸುವ ಮೊದಲು ಹೊಟ್ಟೆ ಖಾಲಿ ಇಟ್ಟುಕೊಳ್ಳಬೇಡಿ. ಕನಿಷ್ಠ ಒಂದು ಬಾಳೆ ಹಣ್ಣು ಸೇವಿಸಿ ನಂತರ ವರ್ಕ್‌ಔಟ್‌ಗೆ ಇಳಿಯಬೇಕು ಎನ್ನುವುದು ಅವರ ಸಲಹೆ.

‘ನಾವು ಮಾಡುವ ವ್ಯಾಯಾಮಗಳು, ದೈಹಿಕ ಕಸರತ್ತುಗಳು ವಿಭಿನ್ನವಾಗಿರುವಂತೆಯೂ ನೋಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಬಂದಿರುವ ಅತ್ಯಾಧುನಿಕ ಜಿಮ್‌ ಉಪಕರಣಗಳಲ್ಲಿ ಪ್ರತಿ ದಿನ ಯಾವುದಾದರೂ ಒಂದು ಹೊಸ ಬಗೆಯ ದೈಹಿಕ ಕಸರತ್ತು ನಡೆಸಲು ಗಮನ ಕೊಡಿ. ಇದರಿಂದ ಏಕತಾನತೆ ಹೋಗಲಾಡಿಸಬಹುದು’ ಎಂದು ಹೇಳಲು ಅವರು ಮರೆಯುವುದಿಲ್ಲ.

ಪ್ರಮುಖ ಟಿಪ್ಸ್‌ ಇಂತಿದೆ...

* ಮೊದಲ ದಿನ ಒಂದು ಗಂಟೆ ಭಾರಿ ಕಸರತ್ತು ನಡೆಸಿದರೆ, ಮರುದಿನ ಒಂದು ಅಥವಾ ಅರ್ಧ ಗಂಟೆ ಮಾತ್ರ ಲಘು ವ್ಯಾಯಾಮ ಮಾಡಬೇಕು. ಇದೇ ನಿಯಮಪುನರಾವರ್ತಿಸಬೇಕು.

* ಬಲ ಪ್ರಯೋಗ ಬೇಡ; ದೇಹ, ಕೈ ಕಾಲುಗಳ ಮೇಲೆ ವಿಪರೀತ ಒತ್ತಡ ಹೇರಿ ಬಾಗಿಸಲು ಹೋಗಬಾರದು. ಅವುಗಳನ್ನು ಎಷ್ಟರ ಮಟ್ಟಿಗೆ ಬಾಗಿಸಲು ಸಾಮರ್ಥ್ಯ ಇದೆ ಎನ್ನುವ ಅರಿವು ಇರಬೇಕು. ಹಾಗೆ ಮುನ್ನೆಚ್ಚರಿಕೆ ವಹಿಸಿದರೆ ಕೀಲುಗಳು ಜಾರುವ ಮತ್ತು ಮಾಂಸಖಂಡಗಳು ಹಿಡಿದುಕೊಳ್ಳುವ ಸಮಸ್ಯೆಯಿಂದ ಪಾರಾಗಬಹುದು.

* ಇಡೀ ದಿನ ಜಿಮ್‌ನಲ್ಲಿ ಅವಿರತ ಬೆವರು ಹರಿಸುವುದು ಆರೋಗ್ಯಕ್ಕೂ ಒಳಿತಲ್ಲ. ದೇಹಕ್ಕೆ ಅಗತ್ಯ ವಿಶ್ರಾಂತಿ ಕೊಡಬೇಕು. ಜತೆಗೆ ಹೊರಾಂಗಣ ಚಟುವಟಿಕೆಗಳಲ್ಲೂ ತೊಡಗಬೇಕು. ಈಜು, ಸೈಕ್ಲಿಂಗ್, ರನ್ನಿಂಗ್, ಯೋಗ, ಕರಾಟೆ ಕೂಡ ದೈಹಿಕ ಸಾಮರ್ಥ್ಯ ಹೆಚ್ಚಿಸುತ್ತವೆ.

* ಪ್ರತಿಯೊಬ್ಬರಿಗೂಅವರದೇ ಆದ ದೇಹ ಪ್ರಕೃತಿ ಇರುತ್ತದೆ. ನಮ್ಮ ದೇಹಕ್ಕೆ ಏನುಬೇಕು ಅದಕ್ಕಷ್ಟೇ ಗಮನ ಕೊಡಬೇಕು. ಬೇರೆಯವರನ್ನು ಅನುಕರಿಸುವ ಭರದಲ್ಲಿ ದೇಹದ ಮೇಲೆ ವಿಪರೀತ ಒತ್ತಡ ಹಾಕಿದರೆ ಭವಿಷ್ಯದಲ್ಲಿ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಸಾಧ್ಯವಿಲ್ಲವೆಂಬ ಎಚ್ಚರಿಕೆಯನ್ನೂ ನೀಡುತ್ತಾರೆ ಅರ್ಜುನ್‌.

* ಈ ವಯಸ್ಸಿನಲ್ಲೂ ಅಷ್ಟೊಂದು ಚೆಂದವಾಗಿ ಚಿರಯುವಕನಂತೆ ಕಾಣಿಸುವ ಗುಟ್ಟೇನು ಎಂದರೆ, ಸರಿಯಾದ ಆಹಾರ ಕ್ರಮ ಮತ್ತು ಡಯಟ್‌ ಪಾಲಿಸುತ್ತೇನೆ ಎನ್ನುವುದು ಅರ್ಜುನ್ ರಾಂಪಾಲ್‌ ಮಾತು. ಫಿಟ್‌ನೆಸ್‌ ಪ್ರಿಯರಿಗೂ ಇದೇ ಸಲಹೆಯನ್ನು ಅವರು ನೀಡುತ್ತಾರೆ.

ಡಯಟ್ ಮತ್ತು ಆಹಾರಕ್ರಮ

* ಬೆಳಗಿನ ಉಪಾಹಾರ ಹೊಟ್ಟೆ ತುಂಬ ತಿನ್ನಬೇಕು. ಇದರಿಂದ ಮಧ್ಯಾಹ್ನದವರೆಗೂ ಹಸಿವು ಕಾಣಿಸುವುದಿಲ್ಲ. ಉಪಾಹಾರ ಮತ್ತು ಮಧ್ಯಾಹ್ನದ ಊಟದ ನಡುವೆ ಏನನ್ನೂ ತಿನ್ನಬಾರದು.

* ಮಧ್ಯಾಹ್ನದ ಊಟ ಹಿತವಾಗಿರಬೇಕು. ಆದಷ್ಟು ಮನೆಯಲ್ಲಿಯೇ ತಯಾರಿಸಿದ ಊಟ ಮಾಡಿ. ನಾನು ಸಹ ದಾಲ್‌, ರೊಟಿ, ಸಬ್ಜಿ ಸೇವಿಸುತ್ತೇನೆ.

* ರಾತ್ರಿ ಊಟವೂ ತುಂಬ ಮಿತವಾಗಿರಬೇಕು. ನಾನು ಒಂದು ಬಟ್ಟಲು ಸೂಪ್‌, ಸಲಾಡ್‌ ಮಾತ್ರ ಸೇವಿಸುತ್ತೇನೆ. ಮಧ್ಯರಾತ್ರಿ ಆಹಾರ ಸೇವಿಸುವುದಿಲ್ಲ.

* ರಾತ್ರಿ ವೇಳೆ ಹೊಟ್ಟೆ ಬೀರಿಯುವಂತೆ ತಿನ್ನಲೇಬಾರದು.

ತೂಕ ಇಳಿಸಬೇಕೆಂದುಕೊಂಡಿದ್ದರೆ ನಾಲ್ಕು ಚಪಾತಿ ಸೇವಿಸುತ್ತಿದ್ದವರು ಮೂರಕ್ಕೆ ಇಳಿಸಿ, ಮೂರರಿಂದ ಎರಡಕ್ಕೆ ಇಳಿಸಿ. ಈ ರೀತಿ ಕ್ರಮೇಣ ಆಹಾರ ಪ್ರಮಾಣ ಕಡಿಮೆ ಮಾಡಿದರೆ ತೂಕ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಡಯಟ್‌ ಮಾಡುವ ಬಹುತೇಕ ಮಂದಿ ಇದೇ ಕ್ರಮ ಅನುಸುರಿಸುತ್ತಾರೆ. ಇದರಲ್ಲಿ ಅರ್ಜುನ್ ರಾಮಪಾಲ್ ಕೂಡ ಹೊರತಾಗಿಲ್ಲ. ಅವರ ಡಯಟ್ ಕ್ರಮ ಮತ್ತು ದೈಹಿಕ ಕಸರತ್ತು ಅನುಕರಣೀಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT