ಶನಿವಾರ, ಆಗಸ್ಟ್ 24, 2019
28 °C

ದುಬೈನಲ್ಲಿ ರಾಫೆಲ್‌ ಜೊತೆ ನಟಿ ರಮ್ಯಾ ಮದುವೆ?

Published:
Updated:

ನಟಿ ಹಾಗೂ ರಾಜಕಾರಣಿ ರಮ್ಯಾ ಪೋರ್ಚುಗಲ್‌ ದೇಶದ ತಮ್ಮ ಬಹುಕಾಲದ ಗೆಳೆಯ ರಾಫೆಲ್‌ ಜೊತೆಗೆ ಹಸೆಮಣೆ ಏರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ರಾಫೆಲ್‌ ಉದ್ಯಮಿಯಾಗಿದ್ದಾರೆ. ಸದ್ಯಕ್ಕೆ ಅವರು ದುಬೈನಲ್ಲಿ ನೆಲೆಸಿದ್ದಾರೆ. ಕಳೆದ ವರ್ಷ ರಮ್ಯಾ ಅವರ ತಾಯಿ ರಂಜಿತಾ ಅವರು ಮುಂದಿನ ವರ್ಷ ನನ್ನ ಪುತ್ರಿ ವಿವಾಹವಾಗಲಿದ್ದಾಳೆ ಎಂದು ಮಾಧ್ಯಮದವರಿಗೆ ಹೇಳಿಕೆ ನೀಡಿದ್ದರು. ದುಬೈನಲ್ಲಿ ಈ ಜೋಡಿ ಮದುವೆಯಾಗಲಿದ್ದು, ಸಿದ್ಧತೆಯಲ್ಲಿ ತೊಡಗಿದೆ ಎನ್ನುತ್ತವೆ ಗಾಂಧಿನಗರದ ಮೂಲಗಳು. 

2013ರಲ್ಲಿ ಮಂಡ್ಯ ಲೋಕಸಭೆಯ ಉಪ ಚುನಾವಣೆ ಮೂಲಕ ರಮ್ಯಾ ರಾಜಕೀಯ ಪ್ರವೇಶಿಸಿದ್ದರು. ಚುನಾವಣೆಯಲ್ಲಿ ಗೆದ್ದು ಸಂಸತ್‌ ಪ್ರವೇಶಿಸಿದ್ದ ಅವರು ಮರುವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿದ್ದರು. ಬಳಿಕ ಕಾಂಗ್ರೆಸ್‌ ಪಕ್ಷದಲ್ಲಿ ಅವರು ಸೋಷಿಯಲ್‌ ಮೀಡಿಯಾದ ಉಸ್ತುವಾರಿ ಹೊತ್ತಿದ್ದರು.

ಈ ಮೋಹಕ ತಾರೆ ಕನ್ನಡ ಚಿತ್ರರಂಗ ಪ್ರವೇಶಿಸಿದ್ದು ನಟ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಅಭಿ’ ಚಿತ್ರದ ಮೂಲಕ. ಕನ್ನಡ ಸೇರಿದಂತೆ ತೆಲುಗು ಮತ್ತು ತಮಿಳು ಚಿತ್ರದಲ್ಲಿಯೂ ಅವರು ನಟಿಸಿದ್ದಾರೆ. 2016ರಲ್ಲಿ ತೆರೆಕಂಡ ಕನ್ನಡದ ‘ನಾಗರಹಾವು’ ಅವರು ನಟಿಸಿದ ಕೊನೆಯ ಸಿನಿಮಾ.

ರಮ್ಯಾ ಮತ್ತು ಶ್ರೀನಗರ ಕಿಟ್ಟಿ ಮುಖ್ಯಭೂಮಿಕೆಯಲ್ಲಿದ್ದ ‘ಸಂಜು ವೆಡ್ಸ್ ಗೀತಾ’ ಸಿನಿಮಾದ ಸಂಭ್ರಮಾಚರಣೆಯಲ್ಲಿ ರಮ್ಯಾ ಹಾಗೂ ರಾಫೆಲ್ ಒಟ್ಟಾಗಿ ಕಾಣಿಸಿಕೊಂಡಿದ್ದರು. ಬಳಿಕ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ವೇಳೆಯೂ ಜೊತೆಯಾಗಿ ಕಾಣಿಸಿಕೊಂಡಿದ್ದರಿಂದ ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. 

ರಮ್ಯಾ ರಾಜಕೀಯ ಪ್ರವೇಶಿಸಿದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದರು. ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ಅವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತ ಬಳಿಕ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ರಾಫೆಲ್‌ ಜೊತೆಗೆ ಅವರು ಮದುವೆಯ ತಯಾರಿಯಲ್ಲಿದ್ದಾರೆ. ಆದರೆ, ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ರಮ್ಯಾ ಅವರ ಆಪ್ತ ಮೂಲಗಳು ತಿಳಿಸಿವೆ.

 

ರಮ್ಯಾ ಅವರ ಮದುವೆ ಸಂಬಂಧ ನವರಸನಾಯಕ ಜಗ್ಗೇಶ್‌ ಟ್ವಿಟರ್‌ನಲ್ಲಿ ಶುಭ ಕೋರಿದ್ದಾರೆ. ‘ಶುಭಮಸ್ತು. ದೀರ್ಘಸುಮಂಗಲಿಯಾಗಿ ನೂರ್ಕಾಲ ಸುಖವಾಗಿ ಬಾಳಿ, ಶುಭ ಹಾರೈಕೆ’ ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.

Post Comments (+)