ಗುರುವಾರ , ಸೆಪ್ಟೆಂಬರ್ 24, 2020
20 °C

ಇಂದು ರಾಣಾ–ಮಿಹಿಕಾ ಮದುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‌ನಟ ರಾಣಾ ದಗ್ಗುಬಾಟಿ ಹಾಗೂ ಉದ್ಯಮಿ ಮಿಹಿಕಾ ಬಜಾಜ್ ಇಂದು ಸಪ್ತಪದಿ ತುಳಿಯಲಿದ್ದಾರೆ. ಹೈದರಾಬಾದ್‌ನ  ರಾಮಾನಾಯ್ಡು ಸ್ಟುಡಿಯೊದಲ್ಲಿ ನಡೆಯಲಿರುವ ಮದುವೆ ಕಾರ್ಯಕ್ರಮಕ್ಕೆ ಕೇವಲ ಕುಟುಂಬದ 30 ಮಂದಿಗಷ್ಟೇ ಆಹ್ವಾನ ನೀಡಲಾಗಿದೆ. 

ಸದಾ ಸಿನಿಮಾ, ಧಾರಾವಾಹಿ, ವೆಬ್‌ ಸಿರೀಸ್‌ ಶೂಟಿಂಗ್‌ ಎಂದು ಬ್ಯುಸಿಯಾಗಿರುತ್ತಿದ್ದ ರಾಮಾನಾಯ್ಡು ಸ್ಟುಡಿಯೊ ಈಗ ಮದುವೆ ಕಳೆಯಲ್ಲಿ ಮಿಂಚುತ್ತಿದೆ. ಫಿಲ್ಮನಗರ್‌ನಲ್ಲಿರುವ ಸ್ಟುಡಿಯೊದಲ್ಲಿ ಈ ಜೋಡಿಯ ಮದುವೆಗಾಗಿ ವಿಶೇಷ ವಿವಾಹ ಮಂಪಟವನ್ನು ರಚಿಸಲಾಗಿದೆ. ಇವರ ನಿಶ್ಚಿತಾರ್ಥ ಮೇ ತಿಂಗಳಲ್ಲಿ ನಡೆದಿತ್ತು. 

ಮೊದಲು ಮದುವೆ ಸಮಾರಂಭವನ್ನು ಐಷಾರಾಮಿ ತಾಜ್‌ ಫಲಕ್‌ನುಮಾ ಪ್ಯಾಲೆಸ್‌ನಲ್ಲಿ ನಡೆಸಲು ಆಯೋಜಿಸಲಾಗಿತ್ತು. ಆದರೆ ಹೈದರಾಬಾದ್‌ನಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಗ್ಗುಬಾಟಿ ಹಾಗೂ ಮಿಹಿಕಾ ಕುಟುಂಬ ಮದುವೆಯ ಸ್ಥಳವನ್ನು ಬದಲಿಸಿದೆ. 

ಮದುವೆ ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ರಾಣಾ ತಂದೆ ಸುರೇಶ್ ಬಾಬು ‘ಮದುವೆಯಲ್ಲಿ ಕೇವಲ 30 ಮಂದಿ ಪಾಲ್ಗೊಳ್ಳುತ್ತಾರೆ. ಕುಟುಂಬ ವರ್ಗದವರಿಗಷ್ಟೇ ಆಹ್ವಾನ ನೀಡಿದ್ದೇವೆ. ಚಿತ್ರರಂಗ ಹಾಗೂ ಇತರ ಆತ್ಮೀಯರನ್ನೂ ಮದುವೆಗೆ ಆಹ್ವಾನಿಸಿಲ್ಲ. ಭಾಗವಹಿಸುವ ಪ್ರತಿಯೊಬ್ಬರೂ ಮೊದಲೇ ಕೋವಿಡ್ ಪರೀಕ್ಷೆಗೆ ಒಳಗಾಗುತ್ತಾರೆ. ನಾವು ಕೂಡ ಇಡೀ ಮಂಟಪವನ್ನು ಸ್ಯಾನಿಟೈಸ್ ಮಾಡುವ ಯೋಚನೆ ಮಾಡಿದ್ದೇವೆ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತೇವೆ. ಇದು ಸಡಗರದ ಸಮಯ. ಅದರೊಂದಿಗೆ ಸುರಕ್ಷಿತವಾಗಿರುವುದು ತುಂಬಾ ಮುಖ್ಯ’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅರಿಸಿನ ಹಚ್ಚುವ ಸಂಭ್ರಮ
ಅರಿಸಿನ ಹಚ್ಚುವ ಕಾರ್ಯಕ್ರಮದಲ್ಲಿ ರಾಣಾ ಬಿಳಿ ಪಂಚೆ ಹಾಗೂ ಶರ್ಟ್‌ನಲ್ಲಿ ಮಿಂಚುತ್ತಿದ್ದರೆ, ಹಳದಿ ಬಣ್ಣದ ಲೆಹೆಂಗಾ ಮಿಹಿಕಾ ಅಂದವನ್ನು ಹೆಚ್ಚಿಸಿತ್ತು. ಕಾರ್ಯಕ್ರಮದಲ್ಲಿ ಈ ಜೋಡಿ ಒಟ್ಟಿಗೆ ಕುಳಿತು ಪೋಸ್ ನೀಡಿದ್ದ ಫೋಟೊವನ್ನು ರಾಣಾ ಹಾಗೂ ಮಿಹಿಕಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಮೆಹಂದಿ ಕಾರ್ಯಕ್ರಮವೂ ಅದ್ಧೂರಿಯಾಗಿ ನಡೆದಿದ್ದು ಕಾರ್ಯಕ್ರಮದಲ್ಲಿ ಗುಲಾಬಿ ಬಣ್ಣದ ಲೆಹೆಂಗಾ ಧರಿಸಿದ್ದರು ಮಿಹಿಕಾ.

ಮದುವೆಗೆ ಪ್ಲ್ಯಾನ್ ಬಿ 
ರಾಮಾನಾಯ್ಡು ಸ್ಟುಡಿಯೊದಲ್ಲಿ ಮಳೆಯಿಂದ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಮದುವೆಗೆ ಇನ್ನೊಂದು ಜಾಗವನ್ನು ಅಣಿಗೊಳಿಸಿದ್ದಾರೆ. ಪ್ಲ್ಯಾನ್‌ ಬಿಯ ಪ್ರಕಾರ ಜ್ಯುಲಿಬಿ ಹಿಲ್ಸ್‌ನಲ್ಲಿರುವ ತಮ್ಮ ಮನೆಯಲ್ಲೂ ಬೇಕಾದ ತಯಾರಿಯನ್ನು ಮಾಡಿಕೊಂಡಿದ್ದಾರೆ ಸುರೇಶ್ ಬಾಬು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು