ಶನಿವಾರ, ಸೆಪ್ಟೆಂಬರ್ 26, 2020
23 °C

ಆಗಸ್ಟ್‌ 8ರಂದು ರಾನಾ ದಗ್ಗುಬಾಟಿ –ಮಿಹಿಕಾ ಸರಳ ವಿವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ರಾನಾ ದಗ್ಗುಬಾಟಿ ಒಂದು ದಶಕದ ಹಿಂದೆ ‘ಲೀಡರ್‌’ ಸಿನಿಮಾ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದರು. ಹಲವು ಸಿನಿಮಾಗಳಲ್ಲಿ ನಟಿಸಿರುವ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟ ಚಿತ್ರ ‘ಬಾಹುಬಲಿ’. ಎಸ್‌.ಎಸ್. ರಾಜಮೌಳಿ ನಿರ್ದೇಶನದ ಈ ಸರಣಿ ಸಿನಿಮಾಗಳಲ್ಲಿ ರಾನಾ ನಟಿಸಿದ ಬಲ್ಲಾಳ ದೇವನ ಪಾತ್ರ ಸಿನಿಪ್ರಿಯರ ಮನ ಗೆದ್ದಿತು. ಅಮರೇಂದ್ರ ಬಾಹುಬಲಿ  ಮತ್ತು ಮಹೇಂದ್ರ ಬಾಹುಬಲಿ ವಿರುದ್ಧ ಅಬ್ಬರಿಸುವ ಬಲ್ಲಾಳ ದೇವನನ್ನು ಜನರು ಎಂದಿಗೂ ಮರೆಯುವುದಿಲ್ಲ.

ಪ್ರಸ್ತುತ ರಾನಾ ‘ವಿರಾಟ ಪರ್ವಂ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಟಿ ತ್ರಿಷಾ ಕೃಷ್ಣನ್‌ ಜೊತೆಗೆ ರಾನಾಗೆ ಪ್ರೇಮಾಂಕುರವಾಗಿತ್ತು. ಇಬ್ಬರೂ ವೈವಾಹಿಕ ಜೀವನ ಪ್ರವೇಶಿಸಲಿದ್ದಾರೆ ಎಂದು ಅವರ ಅಭಿಮಾನಿಗಳು ಲೆಕ್ಕಾಚಾರದಲ್ಲಿ ಮುಳುಗಿದ್ದರು. ಆದರೆ, ಈ ಇಬ್ಬರ ಪ್ರೀತಿಯ ಬೆಸುಗೆ ಮುರಿದು ಬಿತ್ತು. ಇದಾದ ಬಳಿಕ ರಾನಾ, ತನ್ನ ಬಹುಕಾಲದ ಗೆಳತಿ ಮಿಹಿಕಾ ಬಜಾಜ್‌ ಅವರ ಕೈಹಿಡಿಯುತ್ತಿರುವುದಾಗಿ ಟ್ವಿಟರ್‌ನಲ್ಲಿ ಅಧಿಕೃತವಾಗಿ ಘೋಷಿಸಿದರು.

ಮಿಹಿಕಾ ಯುನಿವರ್ಸಿಟಿ ಆಫ್‌ ಆರ್ಟ್ಸ್‌ ಲಂಡನ್‌ನ ಪದವೀಧರೆ. ಹೈದರಾಬಾದ್‌ನಲ್ಲಿಯೇ ನೆಲೆಸಿರುವ ಆಕೆ ಒಳಾಂಗಣ ವಿನ್ಯಾಸಕಿಯಾಗಿದ್ದಾರೆ. ಅಲ್ಲದೇ, ಡಿವ್ಯೂ ಡ್ಯಾಪ್‌ ಡಿಸೈನ್‌ ಸ್ಟುಡಿಯೊ ಹೆಸರಿನ ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯ ಒಡತಿಯೂ ಹೌದು.

ಕಳೆದ ಮೇ ತಿಂಗಳ ಅಂತ್ಯದಲ್ಲಿ ನಡೆದ ಈ ಇಬ್ಬರ ನಿಶ್ಚಿತಾರ್ಥದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. ಹೈದರಾಬಾದ್‌ನ ತಾಜ್ ಫಲಕ್ನುಮಾ ಅರಮನೆಯಲ್ಲಿ ಈ ಇಬ್ಬರ ವಿವಾಹಕ್ಕೆ ಆಗಸ್ಟ್‌ 8ರಂದು ದಿನಾಂಕವೂ ನಿಗದಿಯಾಗಿತ್ತು. ಇದಕ್ಕೆ ಎರಡೂ ಕುಟುಂಬದ ಸದಸ್ಯರ ಹಸಿರು ನಿಶಾನೆ ಸಿಕ್ಕಿತ್ತು. ಆದರೆ, ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಪರಿಣಾಮ ಮದುವೆಯ ಸ್ಥಳ ಬದಲಿಸಲು ಕುಟುಂಬದ ಸದಸ್ಯರು ಮುಂದಾಗಿದ್ದಾರೆ.

ರಾನಾ ಅವರ ಮನೆಯಲ್ಲಿಯೇ ಅಂದು ಸರಳವಾಗಿ ಮದುವೆ ಕಾರ್ಯ ನಡೆಯಲಿದೆಯಂತೆ. ಕುಟುಂಬದ ಸದಸ್ಯರು, ಆಪ್ತರು ಮತ್ತು ಟಾಲಿವುಡ್‌ನ ಕೆಲವು ನಟ, ನಟಿಯರಿಗಷ್ಟೇ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು