ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಕಥೆ ಹೇಳುವ ‘ರಣಹೇಡಿ’

Last Updated 21 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ರೈತರ ಜೀವನದ ಸುಖ ದುಃಖಗಳ ಚಿತ್ರಣ ಕಟ್ಟಿಕೊಡುವ ‘ರಣಹೇಡಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಆಡಿಯೊ ಹಾಗೂ ಟೀಸರ್‌ ಅನ್ನು ಈಚೆಗೆ ಬಿಡುಗಡೆ ಮಾಡಲಾಗಿದೆ.

‘ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರ ಸುಖದುಃಖಗಳ ಕಥೆ ಈ ಚಿತ್ರದಲ್ಲಿದೆ. ಜಮೀನ್ದಾರರೊಬ್ಬರ ಹೊಲದಲ್ಲಿ ದುಡಿಯಲು ಉತ್ತರ ಕರ್ನಾಟಕ ಭಾಗದಿಂದ ಬಂದ ಜನರು ಅನುಭವಿಸುವ ಕಷ್ಟಗಳು, ನಡುವೆ ನವಿರಾದ ಪ್ರೀತಿ– ಪ್ರೇಮ. ಸ್ವಲ್ಪ ಭಾವನಾತ್ಮಕ ಅಂಶಗಳು ಒಂದಷ್ಟು ಹೊಡೆದಾಟ, ಕಾಮಿಡಿ... ಎಲ್ಲವನ್ನೂ ಹದವಾಗಿ ಮಿಶ್ರಣ ಮಾಡಿ ಕೊಟ್ಟಿದ್ದೇವೆ. ಜೊತೆಗೆ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನೂ ಕೊಟ್ಟಿದ್ದೇವೆ’ ಎಂದು ನಿರ್ದೇಶಕ ಮನು ಕೆ. ಶೆಟ್ಟಿಹಳ್ಳಿ ಕಥೆಯ ಹಂದರವನ್ನು ಬಿಚ್ಚಿಟ್ಟರು.

ವಿ. ಮನೋಹರ್‌ ಸಂಗೀತ ನೀಡಿರುವ ಆರು ಹಾಡುಗಳು ಈ ಚಿತ್ರದಲ್ಲಿವೆ. ‘ಹಳ್ಳಿಯ ಕಥೆಯನ್ನು ಆಧರಿಸಿದ ಸಿನಿಮಾಗಳನ್ನು ನೋಡುವ ಜನರು ಈಗಲೂ ಇದ್ದಾರೆ. ಆದರೆ ಅಂಥ ಚಿತ್ರಗಳನ್ನು ನಿರ್ಮಿಸಲು ಯಾರೂ ಮುಂದೆ ಬರುತ್ತಿಲ್ಲ. ನಿರ್ಮಾಪಕ ಸುರೇಶ್‌ ಹಾಗೂ ನಿರ್ದೇಶಕ ಮನು ಅವರು ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದು ಮನೋಹರ್‌ ಅವರು ‘ರಣಹೇಡಿ’ಗೆ ಮೆಚ್ಚುಗೆಯ ಮೊಹರು ಒತ್ತಿದರು.

ನಾಯಕ ನಟನಾಗಿ ಕರ್ಣ ಕುಮಾರ್‌ ಅವರಿಗೆ ಇದುಮೊದಲನೆಯ ಚಿತ್ರ. ‘ಅನೇಕ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈಗ ನಾಯಕನಾಗುವ ಅವಕಾಶ ಒದಗಿದೆ. ಇದು ರೈತರ ಕಥೆಯಾಗಿರುವುದರಿಂದ ಹೆಚ್ಚು ಆತ್ಮೀಯವೆನಿಸಿದೆ’ ಎಂದು ಕರ್ಣ ಕುಮಾರ್‌ ಸಂತಸ ಹಂಚಿಕೊಂಡರು.

ಐಶ್ವರ್ಯಾ ಈ ಚಿತ್ರದ ನಾಯಕಿ. ಉತ್ತರ ಕರ್ನಾಟಕದಿಂದ ಕೂಲಿ ಆಳಾಗಿ ಬಂದ ಯುವತಿಯ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ಇವರಲ್ಲದೆ ರಘು ಪಾಂಡೇಶ್ವರ, ಆಶಾಲತಾ, ಚೈತನ್ಯಾ, ನಾಗೇಂದ್ರ ಮಳವಳ್ಳಿ, ಅಚ್ಯುತ ರಾವ್‌, ಶಫಿ, ಮತ್ತಿತರರ ತಾರಾಗಣವಿದೆ. ಮೊದಲ ಬಾರಿ ಕ್ಯಾಮೆರಾ ಎದುರಿಸಿರುವ ಸತೀಶ್‌ ಅವರು ವಿಲನ್‌ ಆಗಿ ಕಾಣಿಸಿಕೊಂಡಿದ್ದಾರೆ.

ನಾಗೇಂದ್ರ ಅರಸು ಅವರ ಸಂಕಲನ ಹಾಗೂ ಕುಮಾರಗೌಡ ಅವರ ಛಾಯಾಗ್ರಹಣವಿದೆ. ಗಾಯಕ ನಾಗೇಂದ್ರ ಮಳವಳ್ಳಿ ಅವರು ಕೆಲವು ಹಾಡುಗಳನ್ನು ಹಾಡಿದ್ದಲ್ಲದೆ ಸಣ್ಣ ಪಾತ್ರವನ್ನೂ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT