ಸೋಮವಾರ, ಡಿಸೆಂಬರ್ 9, 2019
20 °C

ರಶ್ಮಿಕಾ ಮಂದಣ್ಣಗೆ ಜನರ ಮುಂದೆ ಮಾತನಾಡಲು ಭಯ ಏಕೆ?

Published:
Updated:
Prajavani

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಯಾರಿಗೆ ಗೊತ್ತಿಲ್ಲ ಹೇಳಿ? ದಕ್ಷಿಣ ಭಾರತದ ಬಹುತೇಕ ಸಿನಿಪ್ರಿಯರಿಗೆ ಆಕೆಯ ಮುಖ ಚಿರಪರಿಚಿತ. ಆಕೆ ತೆಲುಗು ಚಿತ್ರರಂಗ ಪ್ರವೇಶಿಸಿದ್ದು ‘ಚಲೊ’ ಚಿತ್ರದ ಮೂಲಕ. ನಾಗಶೌರ್ಯ ನಾಯಕರಾಗಿದ್ದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನು ಸಕ್ಸಸ್ ಆಗಲಿಲ್ಲ. ಆ ನಂತರ ವಿಜಯ್ ದೇವರಕೊಂಡ ಜೊತೆಗೆ ನಟಿಸಿದ ರೊಮ್ಯಾಂಟಿಕ್‌ ಡ್ರಾಮ್ ‘ಗೀತ ಗೋವಿಂದಂ’ ಸಿನಿಮಾ ಸೂಪರ್‌ ಹಿಟ್ ಆಯಿತು. ಇದು ರಾತ್ರಿ ಬೆಳಗಾಗುವುದರೊಳಗೆ ರಶ್ಮಿಕಾಗೆ ಟಾಲಿವುಡ್‌ನಲ್ಲಿ ಭದ್ರನೆಲೆ ಒದಗಿಸಿತು. ತೆಲುಗು ಸಿನಿ ಪ್ರೇಕ್ಷಕರ ಹೃದಯದಲ್ಲಿ ಗಟ್ಟಿಯಾದ ಸ್ಥಾನಗಿಟ್ಟಿಸಿಕೊಂಡ ರಶ್ಮಿಕಾ ಮೆಲ್ಲನೆ ಮಂದಹಾಸ ಬೀರಿದರು.

ಪ್ರಸ್ತುತ ಆಕೆ ತೆಲುಗಿನ ಸ್ಟಾರ್‌ನಟರ ಸಿನಿಮಾಗಳಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅವೆಲ್ಲವೂ ಬಿಗ್‌ ಬಜೆಟ್‌ ಸಿನಿಮಾಗಳೆಂಬುದು ವಿಶೇಷ. ಈ ಖುಷಿಯಲ್ಲಿರುವ ಅವರು ಮಾಧ್ಯಮದವರೊಟ್ಟಿಗೆ ತನಗೆ ಯಾವುದರ ಮೇಲೆ ಪ್ರೀತಿ ಇದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಹಾಗೆಂದು ಅವರು ತನ್ನ ‘ಬಾಯ್‌ಫ್ರೆಂಡ್‌’ ಬಗ್ಗೆ ಹೇಳಿಕೊಂಡಿಲ್ಲ. ತನಗೆ ಇಷ್ಟವಾದ ವಿಷಯಗಳ ಕುರಿತು ಹೇಳಿಕೊಂಡಿದ್ದಾರೆ.

ಥ್ರಿಲ್ಲರ್‌ ಸಿನಿಮಾಗಳನ್ನೂ ನೋಡುವುದರಲ್ಲಿ ರಶ್ಮಿಕಾಗೆ ಆಸಕ್ತಿ ಹೆಚ್ಚಂತೆ. ಅದರಲ್ಲೂ ಸೂಪರ್‌ಸ್ಟಾರ್‌ಗಳು ನಟಿಸಿರುವ ಫ್ಯಾಂಟಸಿ ಚಿತ್ರಗಳನ್ನು ಅವರು ಹೆಚ್ಚಾಗಿ ನೋಡುತ್ತಾರಂತೆ. ‘ನನಗೆ ಮೇಕಪ್‌ ಅಂದರೆ ಇಷ್ಟವಾಗುವುದಿಲ್ಲ. ಸಿನಿಮಾಕ್ಕಾಗಿ ಮಾತ್ರವೇ ನಾನು ಮೇಕಪ್‌ ಮಾಡಿಕೊಳ್ಳುವುದು. ಮೇಕಪ್‌ ನನ್ನ ದೈನಂದಿನ ಬದುಕಿನ ಭಾಗವೂ ಅಲ್ಲ’ ಎಂದು ಹೇಳಿದ್ದಾರೆ ರಶ್ಮಿಕಾ.

‘ನನಗೆ ಬೈಕ್‌ ಓಡಿಸಲು ಭಯವಾಗುತ್ತದೆ. ನಿರ್ಜನ ರಸ್ತೆಗಳಲ್ಲಿ ಕಾರು ಚಾಲನೆ ಮಾಡುವುದಕ್ಕೂ ಭಯಪಡುತ್ತೇನೆ. ಜನರ ಮುಂದೆ ಮಾತನಾಡಲು ನನಗೆ ಆಗುವುದಿಲ್ಲ. ನಾನೆಲ್ಲಿ ಅವರ ಮುಂದೆ ತಪ್ಪು ಮಾತನಾಡಿಬಿಡುತ್ತೇನೆಯೋ ಎಂಬ ಭಯ ಸದಾ ನನಗೆ ಕಾಡುತ್ತಿರುತ್ತದೆ. ಹಾಗಾಗಿ, ಜನರ ಎದುರು ಮಾತನಾಡಲು ಹೋಗುವುದಿಲ್ಲ’ ಎಂದು ಹೇಳಿದ್ದಾರೆ.

ಪ್ರಸ್ತುತ ರಶ್ಮಿಕಾ ಅವರು ‘ಟಾಲಿವುಡ್‌ ಪ್ರಿನ್ಸ್‌’ ಮಹೇಶ್‌ ಬಾಬು ನಟನೆಯ ‘ಸರಿಲೇರು ನೀಕೆವ್ವರು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅನಿಲ್‌ ರವಿಪುರಿ ನಿರ್ದೇಶನದ ಈ ಚಿತ್ರ 2020ರ ಜನವರಿ 12ರಂದು ಬಿಡುಗಡೆಯಾಗಲಿದೆ. ಜೊತೆಗೆ, ನಿತಿನ್ ನಾಯಕನಾಗಿರುವ ತೆಲುಗಿನ ‘ಭೀಷ್ಮ’ ಚಿತ್ರಕ್ಕೂ ರಶ್ಮಿಕಾ ಅವರೇ ನಾಯಕಿ. ಈ ನಡುವೆಯೇ ‘ಸುಲ್ತಾನ್‌’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಅಡಿ ಇಡುತ್ತಿದ್ದಾರೆ. ಕನ್ನಡದಲ್ಲಿಯೂ ಧ್ರುವ ಸರ್ಜಾ ನಾಯಕನಾಗಿರುವ ‘ಪೊಗರು’ ಚಿತ್ರಕ್ಕೂ ಆಕೆಯೇ ನಾಯಕಿ. ಈ ಸಿನಿಮಾ ಡಿಸೆಂಬರ್‌ ಅಥವಾ ಜನವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು