ಗುರುವಾರ , ಫೆಬ್ರವರಿ 27, 2020
19 °C

ರಕ್ಷಿತ್‌ ಶೆಟ್ಟಿ ಒಳ್ಳೆಯ ಹುಡುಗ ಎಂದ ರಶ್ಮಿಕಾ ಮಂದಣ್ಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ನಟ ರಕ್ಷಿತ್‌ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ಪ್ರೇಮವೈಫಲ್ಯ ಹಳೆಯ ಸುದ್ದಿ. ‘ಕಿರಿಕ್‌ ಪಾರ್ಟಿ’ ಚಿತ್ರದ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು. 2017ರಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ‘ಚಲೊ’ ಚಿತ್ರದಲ್ಲಿ ನಟಿಸಲು ರಶ್ಮಿಕಾ ಟಾಲಿವುಡ್‌ ಅಂಗಳಕ್ಕೆ ಕಾಲಿಟ್ಟ ಮರುವರ್ಷವೇ ಇದು ಮುರಿದುಬಿತ್ತು. ಆ ನಂತರವೂ ಇಬ್ಬರ ನಡುವೆ ಪರಸ್ಪರ ಗೌರವ ಉಳಿದುಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮದವರ ಮುಂದೆ ಪ್ರೀತಿ ವೈಫಲ್ಯದ ಪ್ರಶ್ನೆ ಎದುರಾದಾಗ ಸಂಯಮದಿಂದಲೇ ನಡೆದುಕೊಳ್ಳುತ್ತಿದ್ದಾರೆ.

‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಪ್ರಚಾರದ ಸುದ್ದಿಗೋಷ್ಠಿಯಲ್ಲೂ ರಶ್ಮಿಕಾ ಅವರ ಸಾಧನೆ ಬಗ್ಗೆ ರಕ್ಷಿತ್‌ ಶೆಟ್ಟಿ ಒಳ್ಳೆಯ ಮಾತುಗಳನ್ನೇ ಆಡಿದ್ದರು. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಸಂದರ್ಶನವೊಂದರಲ್ಲಿ ರಶ್ಮಿಕಾ ತನ್ನ ಮಾಜಿ ಪ್ರಿಯಕರನ ಬಗ್ಗೆ ಹೇಳಿರುವ ಮಾತು ಅಚ್ಚರಿಗೆ ಕಾರಣವಾಗಿದೆ. ರಕ್ಷಿತ್‌ ಬಗ್ಗೆ ಒಂದೇ ಸಾಲಿನಲ್ಲಿ ಉತ್ತರಿಸುವಂತೆ ಕೇಳಿದ ಪ್ರಶ್ನೆಗೆ, ‘ರಕ್ಷಿತ್‌ ಶೆಟ್ಟಿ ಒಳ್ಳೆಯ ಹುಡುಗ’ ಎಂದು ಕಣ್ಣರಳಿಸಿ ಹೇಳಿರುವುದು ಆಕೆಯ ಅಭಿಮಾನಿಗಳು ಹುಬ್ಬೇರಿಸುವಂತಾಗಿದೆ.

ವಿಜಯ ದೇವರಕೊಂಡ ಜೊತೆಗೆ ನಟಿಸಿದ ‘ಗೀತ ಗೋವಿಂದ’ ಚಿತ್ರದ ಯಶಸ್ಸು ಆಕೆಗೆ ತೆಲುಗಿನಲ್ಲಿ ಭದ್ರ ನೆಲೆ ಒದಗಿಸಿತು. ಬಳಿಕ ಈ ಇಬ್ಬರು ಒಟ್ಟಾಗಿ ನಟಿಸಿದ ‘ಡಿಯರ್‌ ಕಾಮ್ರೇಡ್‌’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತು. ಆದರೂ, ಟಾಲಿವುಡ್‌ನಲ್ಲಿ ಆಕೆಯ ಯಶಸ್ಸಿನ ನಾಗಾಲೋಟ ನಿಂತಿಲ್ಲ.

ಇತ್ತೀಚೆಗೆ ಮಹೇಶ್‌ಬಾಬು ಜೊತೆಗೆ ನಟಿಸಿದ ‘ಸರಿಲೇರು ನೀಕೆವ್ವರು’ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ₹200 ಕೋಟಿ ಗಳಿಕೆ ಕಂಡಿದೆ. ಅಲ್ಲು ಅರ್ಜುನ್‌ ನಾಯಕನಾಗಿರುವ ಹೊಸ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇದಕ್ಕೆ ಸುಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ‘ಸುಲ್ತಾನ್‌’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಆಕೆ ಕಾಲಿಟ್ಟಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು