ಶನಿವಾರ, ಮಾರ್ಚ್ 6, 2021
32 °C

ಬಾಲಿವುಡ್‌ಗೆ ಜಿಗಿದ ರಶ್ಮಿಕಾ ಮಂದಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಶ್ಮಿಕಾ ಮಂದಣ್ಣ (ಟ್ವಿಟರ್‌ ಚಿತ್ರ)

‘ಕನ್ನಡಿಗರ ಕ್ರಶ್‌’ ರಶ್ಮಿಕಾ ಮಂದಣ್ಣ ಅವರು ಕ್ರಿಸ್‌ಮಸ್‌ಗೂ ಮುನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಈ ಸ್ಟಾರ್‌ ನಟಿ ಬಾಲಿವುಡ್‌ಗೆ ಜಿಗಿಯುವ ಮೂಲಕ ಅವರ ಬಹುದಿನಗಳ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವ ಕೊಡಗಿನ ಈ ನಟಿ, ಸಂತನು ಬಗ್ಚಿ ನಿರ್ದೇಶನದ ‘ಮಿಷನ್‌ ಮಜ್ನು’ ಚಿತ್ರದಲ್ಲಿ ಬಾಲಿವುಡ್‌ ಸ್ಟಾರ್‌ ನಟ ಸಿದ್ಧಾರ್ಥ ಮಲ್ಹೋತ್ರಾ ಜತೆಗೆ ತೆರೆ ಹಂಚಿಕೊಳ್ಳಲಿದ್ದಾರೆ.

ಕನ್ನಡ, ತೆಲುಗು ಹಾಗೂ ತಮಿಳು ಚಿತ್ರದಲ್ಲಿ ರಂಗದಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ ಬಾಲಿವುಡ್‌ ಅಂಗಳಕ್ಕೆ ಕಾಲಿಡುವ ಕನಸು ಕಂಡಿದ್ದರು. ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದ ರಶ್ಮಿಕಾ ಒಳ್ಳೆಯ ಸ್ಕ್ರಿಪ್ಟ್‌ ಮತ್ತು ಬ್ಯಾನರ್‌ಗಾಗಿ ಎದುರು ನೋಡುತ್ತಿದ್ದರು. ಈಗ ಅವರ ಕನಸು ಈಡೇರಿದೆ.

ಭಾರತದ ಅತ್ಯಂತ ಧೈರ್ಯಶಾಲಿ ಗುಪ್ತದಳ ‘ರಾ’ ಸಂಸ್ಥೆ ಪಾಕಿಸ್ತಾನದ ನೆಲದಲ್ಲಿ ನಡೆಸಿದ ರಹಸ್ಯ ಕಾರ್ಯಾಚರಣೆಯ ನೈಜ ಘಟನೆಗಳನ್ನು ಆಧರಿಸಿದ ಕಥೆಯ ಚಿತ್ರವಿದು. ಈ ಚಿತ್ರದ ಭಾಗವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಹಾಗೆಯೇ ತುಂಬ ಉತ್ಸುಕಳೂ ಆಗಿದ್ದೇನೆ ಎಂದು ನಟಿ ರಶ್ಮಿಕಾ ಟ್ವೀಟ್‌ ಮಾಡಿದ್ದಾರೆ.

ಚಿತ್ರದ ಶೀರ್ಷಿಕೆ ಮತ್ತು ಫಸ್ಟ್‌ಲುಕ್‌ ಪೋಸ್ಟರ್‌ ಅನ್ನು ರಶ್ಮಿಕಾ ಮಂದಣ್ಣ ಮತ್ತು ಸಿದ್ಧಾರ್ಥ್‌ ಮಲ್ಹೋತ್ರಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

 

 

‘ಕಿರಿಕ್‌ ಪಾರ್ಟಿ’ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ಈ ನಟಿ, ಸದ್ಯ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹುಬೇಡಿಕೆಯಲ್ಲಿರುವ ಬಹುಭಾಷಾ ನಟಿ.

 

ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಧ್ರುವ ಸರ್ಜಾ ನಾಯಕನಾಗಿರುವ ‘ಪೊಗರು’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಈ ಚಿತ್ರ ಇನ್ನಷ್ಟೇ ತೆರೆಕಾಣಬೇಕಿದೆ. ಈ ಚಿತ್ರದ ‘ಖರಾಬು’ ಹಾಡು ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ.

ಇನ್ನು ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾ ‘ಪುಷ್ಪ’ದಲ್ಲಿ ರಶ್ಮಿಕಾ ಅಲ್ಲು ಅರ್ಜುನ್‌ ಜತೆಗೆ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಕಾರ್ತಿ ಜತೆಗೆ ‘ಸುಲ್ತಾನ್‌’ ಚಿತ್ರ, ಶರ್ವಾನಂದ ಜತೆಗೆ ‘ಆದಲ್ಲೂ ಮೀಕು ಜೋಹಾರ್ಲು’ ಹಾಗೂ ನಿತಿನ್‌ ಜತೆಗೆ ‘ಭೀಷ್ಮ’ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಎಲ್ಲ ಚಿತ್ರಗಳು 2021ರಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಈ ಚಿತ್ರಗಳು ಈಗ ಬಾಲಿವುಡ್‌ಗೆ ಹಾರಿರುವ ರಶ್ಮಿಕಾ ಮಂದಣ್ಣ ಅವರನ್ನು ಅವರ ವೃತ್ತಿ ಬದುಕಿನಲ್ಲಿ ಇನ್ನಷ್ಟು ಎತ್ತರಕ್ಕೆ ಏರಿಸುವ ನಿರೀಕ್ಷೆ ಹುಟ್ಟು ಹಾಕಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು