ಕೊಡಗಿನೋಳುಬೆಡಗಿನೋಳು...

7

ಕೊಡಗಿನೋಳುಬೆಡಗಿನೋಳು...

Published:
Updated:
Deccan Herald

ಮುದ್ದು ಮೊಗದ ಚೆಲುವೆ ರಶ್ಮಿತಾ ಚೆಂಗಪ್ಪ ತುಳು ಚಿತ್ರರಂಗದ ಹೊಸ ಫಸಲು. ಕಳೆದವಾರ ತೆರೆಕಂಡ ‘ಏರಾ ಉಲ್ಲೆರ್‌ ಗೆ’ ಚಿತ್ರದಲ್ಲಿ ಉತ್ತಮವಾಗಿ ಅಭಿನಯಿಸಿ, ಎಲ್ಲರ ಮೆಚ್ಚುಗೆ ಗಳಿಸಿರುವ ಕೊಡಗಿನ ಬೆಡಗಿ. ಚಿಕ್ಕಂದಿನಿಂದಲೂ ಎದೆಯೊಳಗೆ ಹಬೆಯಾಡುತ್ತಿದ್ದ ‘ಅಭಿನೇತ್ರಿ’ ಕನಸನ್ನು ನನಸಾಗಿಸಿಕೊಂಡಿರುವ ರಶ್ಮಿತಾ ಅವರಿಗೆ ಈಗ ಸ್ಯಾಂಡಲ್‌ವುಡ್‌ ಮತ್ತು ಕೋಸ್ಟಲ್‌ವುಡ್‌ನಲ್ಲಿ ಅವಕಾಶಗಳ ದಿಡ್ಡಿ ಬಾಗಿಲು ತೆರೆದುಕೊಂಡಿದೆ.

‘ನಾನು ವೃತ್ತಿಯಿಂದ ವಾಸ್ತುಶಿಲ್ಪಿ. ಆದರೆ, ಮೊದಲಿನಿಂದಲೂ ಸಿನಿಮಾ ಜಗತ್ತಿನ ಬಗ್ಗೆ ಪ್ಯಾಷನ್‌ ಬೆಳೆಸಿಕೊಂಡಿದ್ದೆ. ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವುದಕ್ಕೆ ತುಂಬ ಆಸಕ್ತಿ ಇತ್ತು. ಚಿಕ್ಕವಳಿದ್ದಾಗ ಶಾಲಾ ವಾರ್ಷಿಕೋತ್ಸವದಲ್ಲಿ ನಾಟಕಗಳಿಗೆ ಬಣ್ಣ ಹಚ್ಚಿದ್ದೆ. ಕಾಲೇಜಿಗೆ ಬಂದ ನಂತರ, ಬೀದಿನಾಟಕಗಳಲ್ಲಿ ಕಾಣಿಸಿಕೊಂಡಿದ್ದಿದೆ. ಮನೆಯಲ್ಲಿದ್ದಾಗ ಕನ್ನಡಿ ಮುಂದೆ ನಿಂತುಕೊಂಡು ನಟ–ನಟಿಯರ ಸಿನಿಮಾ ದೃಶ್ಯಗಳನ್ನು ಮಿಮಿಕ್ರಿ ಮಾಡಿ ಖುಷಿ ಪಡುತ್ತಿದ್ದೆ. ನಟಿಯಾಗಬೇಕು ಎಂಬ ಕನಸಿತ್ತು. ಆದರೆ, ಅವಕಾಶಗಳನ್ನು ಹುಡುಕಿಕೊಂಡು ಹೋಗಲಿಲ್ಲ. ಪದವಿ ಮುಗಿಸಿದ ನಂತರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ‘ಕಂಬಳಬೆಟ್ಟು ಭಟ್ರೆನ ಮಗಲ್‌’ ನನ್ನ ಮೊದಲ ತುಳು ಚಿತ್ರ. ಆನಂತರ, ಬೊಳ್ಳಿ ಮೂವಿಸ್‌ನ ‘ಏರಾ ಉಲ್ಲೆರ್ ಗೆ’ ಚಿತ್ರದ ಆಡಿಷನ್‌ನಲ್ಲಿ ಪಾಲ್ಗೊಳ್ಳುವಂತೆ ಕರೆಬಂತು. ಭಾಗವಹಿಸಿದೆ, ಅಲ್ಲೂ ಆಯ್ಕೆಯಾದೆ’ ಎನ್ನುವ ರಶ್ಮಿತಾ ಈಗ ಕನ್ನಡದ ಮೂರು ಸಿನಿಮಾಗಳಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ತುಳು ಭಾಷೆಯನ್ನು ತುಂಬ ಚೆನ್ನಾಗಿ ಮಾತನಾಡುವ ರಶ್ಮಿತಾ ಚಂಗಪ್ಪ ಅವರ ಮೂಲ ಕೊಡಗು. ಆದರೆ, ಅವರು ಓದಿದ್ದು, ಬೆಳೆದಿದ್ದೆಲ್ಲವೂ ಮಂಗಳೂರಿನಲ್ಲೇ. ಅವರ ಅಪ್ಪ–ಅಮ್ಮ ಮಂಗಳೂರಿನಲ್ಲೇ ನೆಲೆಸಿದ್ದರಿಂದ ಕರಾವಳಿಯ ದೇಸಿ ಶ್ರೀಮಂತಿಕೆಯ ಸೊಗಡು ಅವರ ವ್ಯಕ್ತಿತ್ವದಲ್ಲಿ ಬೆರೆತಿದೆ.

‘ಅಪ್ಪ ಕೊಡಗಿನವರು. ಆದರೆ, ನಾನು ಕರಾವಳಿಯ ಹೆಣ್ಣು ಮಗಳು ಎಂದು ಹೇಳಿಕೊಳ್ಳುವುದಕ್ಕೆ ತುಂಬ ಖುಷಿ ಇದೆ. ‘ಏರಾ ಉಲ್ಲೆರ್‌ ಗೆ’ ಸಿನಿಮಾ ನನ್ನ ಕನಸಿಗೆ ರೆಕ್ಕೆ ಕಟ್ಟಿತು. ಒಳ್ಳೆ ಹೆಸರು ತಂದುಕೊಟ್ಟಿತು. ಈ ಚಿತ್ರದಲ್ಲಿ ನನಗೆ ಸಿಕ್ಕಂತಹ ಪಾತ್ರ, ತುಳು ಚಿತ್ರರಂಗದಲ್ಲಿ ಈವರೆಗೆ ಯಾವ ನಟಿಯರಿಗೂ ಸಿಕ್ಕಿಲ್ಲ ಅಂತಲೇ ಹೇಳಬಹುದು. ‘ಏರಾ ಉಲ್ಲೆರ್‌ ಗೆ’ ಚಿತ್ರದಲ್ಲಿ ನಾನು ನಿರ್ವಹಿಸಿದ ಪಾತ್ರ ಅಷ್ಟು ವಿಭಿನ್ನವಾಗಿದೆ. ಅದಕ್ಕೆ ಬೊಳ್ಳಿ ಮೂವೀಸ್‌ಗೆ ಮತ್ತು ನನ್ನ ಪಾತ್ರವನ್ನು ಕಣ್ತುಂಬಿಕೊಂಡು, ಒಪ್ಪಿ ಮೆಚ್ಚಿ ಕೊಂಡಿರುವ ಪ್ರೇಕ್ಷಕರಿಗೂ ಧನ್ಯವಾದ ಅರ್ಪಿಸುತ್ತೇನೆ. ‘ಕಂಬಳಬೆಟ್ಟು ...’ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ. ಇದರ ಜತೆಗೆ ಮೂರು ಕನ್ನಡ ಸಿನಿಮಾ
ಗಳಲ್ಲಿ ನಟಿಸುತ್ತಿದ್ದೇನೆ. ‘ಎಡವಟ್ ನನ್ಮಗ’ ಎಂಬುದು ಒಂದು ಚಿತ್ರದ ಹೆಸರು, ಇನ್ನೆರಡು ಚಿತ್ರಗಳಿಗೆ ಶೀರ್ಷಿಕೆ ನಿಕ್ಕಿಯಾಗಿಲ್ಲ. ಇನ್ನೂ ಎರಡು ತುಳು ಸಿನಿಮಾಗಳಿಂದ ಅವಕಾಶ ಬಂದಿದೆ. ಆದರೆ, ಇನ್ನೂ ಯಾವ ಪ್ರಾಜೆಕ್ಟ್‌ ಕೂಡ ಅಂತಿಮಗೊಂಡಿಲ್ಲ’ ಎನ್ನುತ್ತಾರೆ ರಶ್ಮಿತಾ.

ಎತ್ತರಕ್ಕೆ ತಕ್ಕಂತೆ ಮೈಕಟ್ಟು ಕಾಪಿಟ್ಟುಕೊಂಡಿರುವ ರಶ್ಮಿತಾ ಅವರು ತಮ್ಮ ದೇಹಾಕಾರವನ್ನು ಕಾಯ್ದುಕೊಳ್ಳಲು ವಿಶೇಷ ಕಾಳಜಿ ವಹಿಸಿದವರಲ್ಲ. ‘ಯೋಗ’ವೇ ಅವರ ಫಿಟ್‌ನೆಸ್‌ಗೆ ಸಾಥ್‌ ನೀಡಿದೆ. ‘ಆರಂಭದಲ್ಲಿ ನಾನು ಕೂಡ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದೆ. ಆದರೆ, ಆನಂತರದ ದಿನಗಳಲ್ಲಿ ಜಿಮ್‌ನಲ್ಲಿ ಬೆವಳಿಸುವುದನ್ನು ಬಿಟ್ಟುಬಿಟ್ಟೆ. ಈಗ ಮನೆಯಲ್ಲೇ ಯೋಗ ಮಾಡುತ್ತೇನೆ. ಬಿಡುವಿದ್ದಾಗ ಜಾಗಿಂಗ್‌ಗೆ ಹೋಗುತ್ತೇನೆ. ಇವೆರಡು ಸಂಗತಿಗಳೇ ನನ್ನ ದೇಹ ಮತ್ತು ಮನಸ್ಸನ್ನು ಫಿಟ್‌ ಆಗಿ ಇರಿಸಿವೆ. ಮನೆ ಊಟ ನನಗೆ ತುಂಬ ಇಷ್ಟ. ಹೊರಗೆ ಹೋದಾಗಲೂ ಮನೆಯಿಂದಲೇತಿನಿಸುಗಳನ್ನು ಕೊಂಡೊಯ್ಯುತ್ತೇನೆ. 

ಪಿಜ್ಜಾ, ಬರ್ಗರ್, ಡೀಪ್ ಫ್ರೈ ತಿನಿಸುಗಳೆಂದರೆ ಮೊದಲಿನಿಂದಲೂ ಇಷ್ಟವಿಲ್ಲ. ನನ್ನ ಊಟದ ಮೆನುವಿನಲ್ಲಿ ಸಾಗರ ಖಾದ್ಯಗಳಿಗೆ ವಿಶೇಷ ಮಹತ್ವ ಇದೆ. ಮೀನಿನ ತಿನಿಸುಗಳೆಂದರೆ ತುಂಬ ಇಷ್ಟ. ಜ್ಯೂಸ್, ಹಣ್ಣು, ಮೊಟ್ಟೆ, ತರಕಾರಿಗಳನ್ನು ಹೆಚ್ಚು ಸೇವಿಸುತ್ತೇನೆ’ ಎನ್ನುವ ರಶ್ಮಿತಾ ಅವರಿಗೆ ದೇಹಕ್ಕೆ ಆರಾಮ ಎನಿಸುವಂತಹ ದಿರಿಸುಗಳನ್ನು ಧರಿಸುವುದು ಇಷ್ಟವಂತೆ.

‘ಬರ್ಫಿ’ ಸಿನಿಮಾದಲ್ಲಿ ಪ್ರಿಯಾಂಕ ಚೋಪ್ರಾ ಮಾಡಿರುವಂತಹ ಪಾತ್ರ ನಿರ್ವಹಿಸಬೇಕು ಎಂಬುದು ನನ್ನಕನಸು. ಏಕೆಂದರೆ, ಬಬ್ಲಿ, ಲವ್ಲಿ, ರೊಮ್ಯಾಂಟಿಕ್ ಪಾತ್ರಗಳನ್ನು ಯಾರು ಬೇಕಾದರೂ ನಿರ್ವಹಿಸಬಹುದು. ಆದರೆ, ಅಂತಹ ಪಾತ್ರ ನಿರ್ವಹಿಸುವುದಕ್ಕೆ ಪ್ರತಿಭೆ ಇರಬೇಕು. ಜೀವನದಲ್ಲಿ ಒಮ್ಮೆಯಾದರೂ ಅಂತಹ ಸವಾಲಿನ ಪಾತ್ರವನ್ನು ನಿರ್ವಹಿಸಬೇಕು ಎನ್ನುತ್ತಾರೆ ರಶ್ಮಿತಾ ಚೆಂಗಪ್ಪ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !