ಬುಧವಾರ, ಆಗಸ್ಟ್ 21, 2019
22 °C

ಮತ್ತೆ ನಿರ್ದೇಶನಕ್ಕಿಳಿದ ರವಿಚಂದ್ರನ್

Published:
Updated:
Prajavani

‘ಪ್ರೇಕ್ಷಕರು ನನ್ನ ಕೈ ಹಿಡಿದು ಹೆಗಲ ಮೇಲೆ ಕೈ ಹಾಕಿ ಆಪ್ತತೆಯಿಂದ ನೋಡಿದಾಗ ಮಾತ್ರ ಇಷ್ಟವಾಗುವ ಸಿನಿಮಾ ಇದು’

ಇದು, ತಾವೇ ನಟಿಸಿ, ನಿರ್ದೇಶಿಸಿದ್ದ ‘ಅಪೂರ್ವ’ ಸಿನಿಮಾ ಸೋತಾಗ ನಟ ರವಿಚಂದ್ರನ್‌ ಹೇಳಿದ್ದ ಮಾತು. ಆ ಚಿತ್ರದ ಬಳಿಕ ಅವರು ಹೆಚ್ಚಾಗಿ ತೊಡಗಿಸಿಕೊಂಡಿದ್ದು ನಟನೆಯಲ್ಲಿಯೇ. ಅಪ್ಪಿತಪ್ಪಿಯೂ ನಿರ್ದೇಶನಕ್ಕೆ ಇಳಿದಿರಲಿಲ್ಲ. ಈಗ ‘ರವಿ ಬೋಪಣ್ಣ’ ಚಿತ್ರದ ಮೂಲಕ ಮತ್ತೆ ಆ್ಯಕ್ಷನ್‌ ಕಟ್‌ ಹೇಳಲು ಸಜ್ಜಾಗಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. 

‘ರವಿ ಬೋಪಣ್ಣ’ ಚಿತ್ರದಲ್ಲಿ ನಟನೆಯ ಜೊತೆಗೆ ನಿರ್ದೇಶನ, ಸಾಹಿತ್ಯ ಮತ್ತು ಮೂರು ಹಾಡುಗಳಿಗೆ ರವಿಚಂದ್ರನ್‌ ಸಂಗೀತವನ್ನೂ  ಸಂಯೋಜಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ‘ರವಿ’ ಹೆಸರಿನ ಸಿನಿಮಾಕ್ಕೆ ಒಂದು ವಾರದ ಶೂಟಿಂಗ್‌ ನಡೆದಿತ್ತು. ಒಮ್ಮೆ ನಿರ್ಮಾಪಕರು ಕ್ರೇಜಿಸ್ಟಾರ್‌ ಅವರ ಗಡ್ಡ ನೋಡಿ ಚೆನ್ನಾಗಿದೆ ಎಂದರಂತೆ. ನನಗೊಂದು ಸಿನಿಮಾ ಮಾಡಿಕೊಡಿ ಎಂದು ಅವರ ಮುಂದೆ ಬೇಡಿಕೆ ಇಟ್ಟರಂತೆ. ಅವರ ಕೋರಿಕೆಗೆ ಸ್ಪಂದಿಸಿದ ರವಿಚಂದ್ರನ್‌ ಅವರು ‘ರವಿ’ ಚಿತ್ರದ ಕೆಲಸವನ್ನು ಬದಿಗಿಟ್ಟು ತಮ್ಮ ಸಾರಥ್ಯದಡಿ ‘ರವಿ ಬೋಪಣ್ಣ’ನಿಗೆ ಹೊಸ ರೂಪ ನೀಡುತ್ತಿದ್ದಾರೆ.

ಚಿತ್ರದಲ್ಲಿ ರವಿಚಂದ್ರನ್‌ ಸೈಬರ್ ಕ್ರೈಂ ವಿಭಾಗದ ಪೊಲೀಸ್‌ ಅಧಿಕಾರಿಯಾಗಿ ಎರಡು ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ಗೆ‍ಟಪ್‌ನಲ್ಲಿ ದಾಡಿ ಇಲ್ಲದೆ ನಟಿಸಲಿದ್ದಾರೆ. ಕಾವ್ಯ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದು, ಮತ್ತೊಬ್ಬ ನಾಯಕಿಯ ಪಾತ್ರಕ್ಕೆ ಹುಡುಕಾಟ ನಡೆದಿದೆ. ನಟ ಸುದೀಪ್ ಮೊದಲ ಬಾರಿಗೆ ಇದರಲ್ಲಿ ಲಾಯರ್ ಆಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ನಟ ಮೋಹನ್ ಅವರು ಹನ್ನೆರಡು ವರ್ಷದ ಬಳಿಕ ಮತ್ತೆ ರವಿಚಂದ್ರನ್‌ ಬಳಗಕ್ಕೆ ಸೇರಿಕೊಳ್ಳುತ್ತಿರುವ ಖುಷಿಯಲ್ಲಿದ್ದಾರೆ. ಗೆಳೆಯನ ಪಾತ್ರದ ಜೊತೆಗೆ ಸಂಭಾಷಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಛಾಯಾಗ್ರಹಣ ಜಿ.ವಿ. ಸೀತಾರಾಂ ಅವರದು. ಅಜಿತ್‌ ಬಂಡವಾಳ ಹೂಡುತ್ತಿದ್ದಾರೆ. 

ಕೊಡಗಿನಲ್ಲಿ ಈ ಸಿನಿಮಾದ ಕಥೆ ನಡೆಯಲಿದೆ. ಹಾಗಾಗಿ, ಸುಂಟಿಕೊಪ್ಪದ ಸುತ್ತಮುತ್ತ ಶೂಟಿಂಗ್‌ ನಡೆಸಲು ಚಿತ್ರತಂಡ ಯೋಚಿಸಿದೆ. 

Post Comments (+)