ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವರಿಸಿಕೊಂಡಿದ್ದಾರೆ ರಿಷಿ ಕಪೂರ್: ಬಾಲಿವುಡ್ ‘ಪ್ರಣಯರಾಜ’ನ ನೆನಪು

Last Updated 30 ಏಪ್ರಿಲ್ 2020, 6:17 IST
ಅಕ್ಷರ ಗಾತ್ರ

ಬಾಲಿವುಡ್ ನಟ ರಿಷಿ ಕಪೂರ್ (67) ಅವರ ಸಾಕಷ್ಟು ಸಿನಿಮಾಗಳನ್ನು ನೋಡುತ್ತಿದ್ದೆ. ಹಳ್ಳಿಯಲ್ಲಿದ್ದ ನಾನು 87ರ ನಂತರವೇ ಹಿಂದಿ ಸಿನಿಮಾ ನೋಡಲು ಆರಂಭಿಸಿದ್ದು. 91ರಲ್ಲಿ ಕಾಲೇಜಿಗೆ ಪ್ರವೇಶವಾದ ಮೇಲೆ ಹಿಂದಿ ಸಿನಿಮಾ ಪ್ರೀತಿ ಹೆಚ್ಚಿತು. ಒಂದರ್ಥದಲ್ಲಿ ಹಿಂದಿ ಭಾಷೆ ಅರ್ಥ ಮಾಡಿಕೊಳ್ಳುವುದು ಮತ್ತು ಮಾತಾಡುವುದನ್ನು, ಕಲಿಸಿದ್ದು ಹಿಂದಿ ಸಿನಿಮಾಗಳೇ. ಅದರಲ್ಲೂ ರಿಷಿ ಕಪೂರ್ ಅವರಂಥ ಹಿರಿಯ ನಟರ ಹಿಂದಿ ಸಿನಿಮಾಗಳು.

ರಿಷಿ ಕಪೂರ್ ಅವರ ಬಾಬಿ, ಅಮರ್ ಅಕ್ಬರ್ ಆಂಟೋನಿ, ಕರ್ಜ್, ಚಾಂದನಿ, ಸಾಗರ್, ಬೋಲ್ ರಾಧಾ ಬೋಲ್, ದಿವಾನಾ... ಇತ್ಯಾದಿ ಸಿನಿಮಾಗಳು ಅವತ್ತು ನನ್ನನ್ನು ಇಡಿಯಾಗಿ ಆವರಿಸಿದ್ದವು. ಇವತ್ತಿಗೂ ಆ ಸಿನಿಮಾಗಳಲ್ಲಿನ ರಿಷಿಕಪೂರ್ ನಟನೆ ನನ್ನನ್ನು ಕಾಡುತ್ತದೆ.

ರಿಷಿ ಕಪೂರ್‌ ನಟನೆ ನೋಡುವಾಗಲೆಲ್ಲ ನನಗೆ ನಮ್ಮ ‘ಪ್ರಣಯ ರಾಜ’ ಶ್ರೀನಾಥ್ ನೆನಪಿಗೆ ಬರುತ್ತಿದ್ದರು. 50ರ ಹರೆಯದಲ್ಲಿ ಜೂಹಿ ಚಾವ್ಲಾಜತೆ ನಟಿಸಿದ ‘ಬೋಲ್ ರಾಧಾ ಬೋಲ್’ (1992)ಸಿನಿಮಾ ನೋಡಿದ ಮೇಲಂತೂ, ಇವರು ಪಕ್ಕಾ ‘ಬಾಲಿವುಡ್ ಪ್ರಣಯ ರಾಜನೇ’ಎನ್ನಿಸಿತ್ತು. ‘ಚಾಂದಿನಿ’ಯಲ್ಲಿ ಶ್ರೀದೇವಿ, ‘ಸಾಗರ್’ನಲ್ಲಿ ಕಮಲ್ ಜತೆಗಿನ ರಿಷಿ ಕಪೂರ್ ಅವರ ನಟನೆ ನೆನಪಿನಲ್ಲಿ ಉಳಿಯುವಂಥದ್ದು.

ದೇಹ ಸ್ವಲ್ಪ ಭಾರ ಎನ್ನಿಸಿದ್ದರೂ ರಿಷಿ ಕಪೂರ್ ಅವರ ನಟನೆಯಲ್ಲಿ ಎಲ್ಲೂ ಸೋಮಾರಿತನ ಕಂಡು ಬರುತ್ತಿರಲಿಲ್ಲ. ಡಾನ್ಸ್, ಭಾವಾಭಿನಯ, ಆಕ್ಷನ್ ದೃಶ್ಯಗಳಲ್ಲೂ ರಿಷಿಯವರದ್ದು ನೆನಪಿನಲ್ಲಿ ಉಳಿಯುವ ನಟನೆ. ಪ್ರಣಯದ ದೃಶ್ಯಗಳಲ್ಲಂತೂ ರಿಷಿ ಮೀರಿಸುವರಿರಲಿಲ್ಲ ಎನ್ನಿಸಿತ್ತು.

ಚಾಂದಿನಿ, ಬೋಲ್ ರಾಧಾ ಬೋಲ್, ದಿವಾನಾದಂತಹ ಸಿನಿಮಾಗಳು ನನ್ನನ್ನು ಆಕರ್ಷಿಸಿತ್ತು.ಈ ಸಿನಿಮಾಗಳಲ್ಲಿ ನವ ನಟರಿಗೆ ಸ್ಪರ್ಧೆ ನೀಡುವಂತೆ ರಿಷಿ ನಟಿಸಿದ್ದರು.

ಇವರ ಹೊಸ ಸಿನಿಮಾಗಳಲ್ಲಿನ ನಟನೆ ನೋಡಿ, ‘ಈಗಲೇ ಹಿಂಗೆ, ಹಳೇ ಸಿನಿಮಾದಲ್ಲಿ ಹೆಂಗೆ?’ ಅಂದುಕೊಳ್ಳುತ್ತಿದ್ದೆ. ನನ್ನ ಮನಸ್ಸಿನ ಮಾತು ದೂರದರ್ಶನದವರಿಗೆ ಕೇಳಿಸಿತ್ತೋ ಏನೋ, ಡಿಡಿ 1ರ ಚಾನೆಲ್‌ನಲ್ಲಿ ರಾತ್ರಿ 10ರ ನಂತರ ಒಂದು ವಾರ ಹಿಂದಿ ಸಿನಿಮಾಗಳನ್ನು ಪ್ರಸಾರ ಮಾಡಲು ಶುರುಮಾಡಿದರು. ಆ ಸರಣಿಯಲ್ಲೇ ರಿಷಿ ಕಪೂರ್ ನಟನೆಯ ಬಾಬಿ, ಮೇರಾ ನಾಮ್ ಜೋಕರ್, ಸಾಗರ್, ಕರ್ಜ್‌, ಚಾಂದಿನಿಯಂತಹ ಸಿನಿಮಾಗಳನ್ನು ನೋಡಲು ಸಾಧ್ಯವಾಯಿತು.

‘ಬಾಬಿ’ಯಲ್ಲಿ ಡಿಂಪಲ್ ಕಪಾಡಿಯಾ ಜತೆಗಿನ ಪ್ರಣಯದ ದೃಶ್ಯಗಳಂತೂಎವರ್‌ಗ್ರೀನ್‌. ‘ಹಮ್ ತುಮ್ ಏಕ್ ಕಮ್ರೇಮೆ ಬಂದ್ ಹೋ...’ ಹಾಡು ಯಾಕೆ ಅಷ್ಟು ಪ್ರಸಿದ್ಧಿಯಾಗಿತ್ತು, ಅಂತ ಆ ಸಿನಿಮಾ ನೋಡಿದ ಮೇಲೆ ಗೊತ್ತಾಗಿದ್ದು.

ಅಗ್ನಿಪಥ್, ಬೇವಕೂಫಿಯಾಂ, ಕಪೂರ್ ಅಂಡ್ ಸನ್ಸ್, ಮುಲ್ಕ್ ಇವು 2012ರ ನಂತರ ಬಂದ ಅವರ ಅಭಿನಯದ ಪ್ರಮುಖ ಸಿನಿಮಾಗಳು.ಅನುಭವ್ ಸಿನ್ಹ ನಿರ್ದೇಶನದ‘ಮುಲ್ಕ್’ ಸಮಾಜಕ್ಕೆ ಕೊಟ್ಟ ಸಂದೇಶ ದೊಡ್ಡದು. ಈ ಸಿನಿಮಾದಲ್ಲಿ ಅವರದು ಬಹುಕಾಲ ನೆನಪಿನಲ್ಲಿ ಉಳಿಯುವ ನಟನೆ. ‘ಮೇರಾ ನಾಮ್ ಜೋಕರ್‌’ನಲ್ಲಿ ಅವರು ಪುಟ್ಟ ಪ್ರೇಮಿಯಾಗಿ ನಟಿಸಿದ್ದನ್ನು ಮರೆಯುವ ಹಾಗಿಲ್ಲ.
ಅವರ ಮಗ ರಣಬೀರ್ ಕಪೂರ್, ಅಪ್ಪನ ಮೀರಿಸಿದ ನಟ.

ಕನ್ನಡದಲ್ಲಿ ರಾಜ್‌ ನಟಿಸಿದಂತೆ, ತನ್ನ 50ನೇ ವಯಸ್ಸಿನಲ್ಲೂ, ಸಿನಿಮಾದಲ್ಲಿ ಕ್ರಿಯಾಶೀಲವಾಗಿದ್ದವರು ರಿಷಿ ಕಪೂರ್‌. ಪ್ರಣಯದ ದೃಶ್ಯಗಳ ಜತೆಗೆ, ಹಾಸ್ಯ ದೃಶ್ಯದಲ್ಲೂ ಎತ್ತಿದ ಕೈ ಅವರದ್ದು. ಹೀಗೆ ಅಭಿಮಾನಿಗಳನ್ನು ರಂಜಿಸುತ್ತಿದ್ದ ರಿಷಿ ಕಪೂರ್‌ಗೆ ಕ್ಯಾನ್ಸರ್‌ ಇದೆ ಎಂದು ಕೇಳಿದಾಗ ಬೇಸರವಾಗಿತ್ತು. ಒಂದು ಹಂತದಲ್ಲಿ ಗುಣಮುಖರಾಗಿದ್ದರೆಂಬ ಸುದ್ದಿ ಇತ್ತು. ಈಗ ದಿಢೀರನೆ ಅವರ ಸಾವಿನ ಸುದ್ದಿ ತಿಳಿದು ಮನಸ್ಸು ಹಳೆ ಸಿನಿಮಾಗಳ ನೆನಪಿನಲ್ಲಿ ಮುಳುಗಿ ಹೋಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT