ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೀರೋ’ ರಿಷಬ್‌ ಶೆಟ್ಟಿ ಸಂದರ್ಶನ ‌

Last Updated 4 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ರಿಕ್ಕಿ, ಕಿರಿಕ್‌ ಪಾರ್ಟಿ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಕಾಲಿಟ್ಟ ರಿಷಬ್‌ ಶೆಟ್ಟಿ, ಬೆಲ್‌ಬಾಟಂನಲ್ಲಿ ನಾಯಕರಾಗಿ ತೆರೆ ಮೇಲೆ ಬಂದರು. ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ‘ಹೀರೋ’ ಆದ ಇವರು ಇಂದು ತೆರೆ ಮೇಲೆ ಅನ್‌ಲಾಕ್‌ ಆಗುತ್ತಿದ್ದಾರೆ.

***

*ನೀವು ‘ಹೀರೋ’ ಆಗಿದ್ದು ಹೇಗೆ?

ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಎಲ್ಲಿಗೂ ಹೋಗಲು ಆಗುತ್ತಿಲ್ಲ, ಸಿದ್ಧವಾಗಿದ್ದ ಚಿತ್ರಕಥೆಗಳ ಚಿತ್ರೀಕರಣ ಸಾಧ್ಯವಿಲ್ಲ ಎನ್ನುವ ವೇಳೆ ಜನರಿಗೆ ಹೊಸ ಕಂಟೆಂಟ್‌ ನೀಡಬೇಕು ಎನ್ನುವ ಆಲೋಚನೆ ಹುಟ್ಟಿಕೊಂಡಿತು. ಕಳೆದ ಜೂನ್‌ನಲ್ಲಿ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿ, ಚಿತ್ರೀಕರಣಕ್ಕೆ ಅವಕಾಶ ನೀಡಿದ್ದರು. ರಾತ್ರಿ ಬೆಳಗಾಗುವುದರೊಳಗೆ ಹುಟ್ಟಿಕೊಂಡ ಕಥೆ ಇದು. ಒಂದು ದಿನದಲ್ಲೇ ನಡೆಯುವ ಕಥೆ. ಐದು ದಿನದಲ್ಲಿ ಚಿತ್ರದ ಸಂಭಾಷಣೆ ಬರೆದಾಗಿತ್ತು. ಹೀಗೆ ‘ಹೀರೋ’ ಹುಟ್ಟಿಕೊಂಡ. ನಮ್ಮ ವೃತ್ತಿಧರ್ಮ ಜನರಿಗೆ ಮನರಂಜನೆ ನೀಡುವುದು. ಹಿಂದಿನ ನನ್ನ ಚಿತ್ರಗಳಲ್ಲಿ ಸಾಮಾಜಿಕ ಸಂದೇಶವಿತ್ತು, ಲೈಟ್ ಹ್ಯೂಮರ್‌ ಇತ್ತು. ಈ ಬಾರಿ ಸಣ್ಣ ತಂಡದೊಂದಿದೆ, ಸಣ್ಣ ಎಳೆಯ ಕಥೆಯನ್ನು ಇಟ್ಟುಕೊಂಡು ಜನರಿಗೆ ಭರ್ಜರಿ ಮನರಂಜನೆ ನೀಡುತ್ತಿದ್ದೇವೆ.

*ಲಾಕ್‌ಡೌನ್‌ನಲ್ಲಿ ಚಿತ್ರೀಕರಣದ ಜಾಗ ಹುಡುಕುವ ಸವಾಲು ಹೇಗಿತ್ತು?

ರುದ್ರಪ್ರಯಾಗ ಸಿನಿಮಾಗಾಗಿ ಸಂಭಾಷಣೆ ಬರೆಯಲು ನನ್ನ ಸ್ನೇಹಿತರು ಹಾಸನದ ಸಮೀಪ ಒಂದು ಜಾಗವನ್ನು ಹೇಳಿದ್ದರು. ಬೆಂಗಳೂರಿನಲ್ಲಿದ್ದು ಕಥೆ ಬರೆಯಲು ಸಾಧ್ಯವಿರಲಿಲ್ಲ. ನಾನು ಹಾಗೂ ರಾಜ್‌ ಬಿ.ಶೆಟ್ಟಿ ಅವರು ಸಂಭಾಷಣೆ ಬರೆಯಲು ಅಲ್ಲಿಗೆ ಹೋಗಬೇಕಾಗಿತ್ತು. ಆ ಸಂದರ್ಭದಲ್ಲಿ ನನಗೆ ಅಲ್ಲಿಗೆ ಹೋಗಲು ಆಗಲಿಲ್ಲ.ಹೀರೋ ಕಥೆ ಹುಟ್ಟಿಕೊಂಡಾಗ ನಿರ್ದೇಶಕರಿಗೆ ಈ ಜಾಗದ ಬಗ್ಗೆ ಹೇಳಿ, ಚಿತ್ರ ತೋರಿಸಿದ್ದೆ. 200–300 ಎಕರೆಯ ಸಿರುಗೂರು ಎಸ್ಟೇಟ್‌ ಅದು. ಅವರಿಗೆ ಇಷ್ಟವಾಯಿತು. ಮಾರ್ಗಸೂಚಿ ಪ್ರಕಾರ ಚಿತ್ರೀಕರಣ ಸಂದರ್ಭದಲ್ಲಿ 50 ಜನರಿಗಿಂತ ಹೆಚ್ಚು ಇರಬಾರದು ಎಂಬ ನಿರ್ಬಂಧವಿತ್ತು. ಬೆಂಗಳೂರಿನಲ್ಲಿ ಇದು ಸಾಧ್ಯವಿಲ್ಲ. ಹೀಗಾಗಿ ಈ ಎಸ್ಟೇಟ್‌ ಒಳಗೆ 24 ಜನರ ಪಾಳೆಯಗಾರರನ್ನು ಇಟ್ಟುಕೊಂಡು ಚಿತ್ರೀಕರಣ ಮಾಡಿದೆವು. ಇಲ್ಲಿ ಹೀರೋ ನಾನೊಬ್ಬನೇ ಅಲ್ಲ. ಪೋಸ್ಟರ್‌ನಲ್ಲಿ ನಾನೊಬ್ಬ ಇರಬಹುದು. ಆದರೆ ಎಲ್ಲರೂ ಹೀರೋಗಳೇ. 100 ಜನರ ಕೆಲಸವನ್ನು 24 ಜನರು ಮಾಡಿದ್ದೇವೆ. ಒಬ್ಬನೂ ಫ್ರೀಯಾಗಿ ಕುಳಿತುಕೊಂಡಿಲ್ಲ. ಊಟ ತರುವುದರಿಂದ ಹಿಡಿದು ಎಲ್ಲ ಕೆಲಸವನ್ನೂ ಮಾಡಿದ್ದೇವೆ. ಇನ್ನು ಆ ಲಾಕ್‌ಡೌನ್‌ ಅವಧಿಯಲ್ಲಿ ಶೈನಿ ಶೆಟ್ಟಿ ಅವರು ನಮಗೆ ಬೆಂಗಳೂರಿನಿಂದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬರುತ್ತಿದ್ದರು.

*ಚಿತ್ರದಲ್ಲಿನ ಪಾತ್ರಗಳ ಆಯ್ಕೆ ಹೇಗಿತ್ತು?

ಇಲ್ಲಿ ಯಾವ ಪಾತ್ರವನ್ನೂ ನಿರ್ದೇಶಕರು ಆಯ್ಕೆ ಮಾಡಿಲ್ಲ. ಮನುಷ್ಯರನ್ನು ಇಟ್ಟುಕೊಂಡು ಬರೆದ ಕಥೆ ಇದು. ನಾನು, ಪ್ರಮೋದ್‌ ಶೆಟ್ಟಿ, ಹಾಗೂ ನಾಯಕಿ. ಮೊದಲಿಗೆ ಇಷ್ಟೇ ಜನರನ್ನು ಇಟ್ಟು ಕಥೆ ಹೆಣೆಯಲಾಗಿತ್ತು. ನಂತರ ಪ್ರಮೋದ್‌ ಶೆಟ್ಟಿ ಅವರ ಪಾತ್ರಕ್ಕೆ ಹಿನ್ನೆಲೆ ಕೊಟ್ಟಾಗ ಮಂಜುನಾಥ ಗೌಡ ಅವರು ಸೇರ್ಪಡೆಯಾದರು. ಹೀಗೆ ಕಥೆ ಬೆಳೆಯಿತು. ಇದು ಪ್ರಯೋಗಾತ್ಮಕ ಚಿತ್ರ. ಕಳೆದ ಜೂನ್‌ 23ಕ್ಕೆ ಕಥೆ ಯೋಚನೆ ಹುಟ್ಟಿಕೊಂಡಿತು, ಮುಂದಿನ 5 ದಿನದಲ್ಲಿ 40 ಪುಟ ಸಂಭಾಷಣೆ ಸಿದ್ಧವಾಯಿತು. ಜುಲೈ 7ರಿಂದ ಚಿತ್ರೀಕರಣ ಆರಂಭಿಸಿದ್ದೆವು. ಎಲ್ಲವೂ ಫಟಾಫಟ್‌. ಆದರೆ, ಎಲ್ಲ ಕಥೆಗಳಿಗೆ ಹಾಗೂ ಸಿನಿಮಾಗಳಿಗೆ ಈ ಮಾದರಿ ಅನ್ವಯವಾಗುವುದಿಲ್ಲ. ಇದೇ ‘ಹೀರೋ’ ಚಿತ್ರವನ್ನು ಸಾಮಾನ್ಯ ಸಂದರ್ಭದಲ್ಲಿ ಮಾಡಿದ್ದರೆ ಆರು ತಿಂಗಳು ಪ್ರಿಪ್ರೊಡಕ್ಷನ್‌ಗೆ ಬೇಕಿತ್ತು. ಲಾಕ್‌ಡೌನ್‌ ಇದ್ದ ಕಾರಣ, ತಲೆಯೊಳಗಿನ ಬಂಧಿಯಾಗಿದ್ದ ಐಡಿಯಾಗಳು ಲಾಕ್‌ಡೌನ್‌ನಿಂದ ಹೊರಬಂದವು. ಚಿತ್ರದಲ್ಲಿ ನನ್ನ ತಮ್ಮನೂ ಇದ್ದಾನೆ. ಅವನು ಅಡುಗೆ ಮಾಡಲು ಬಂದಿದ್ದ. ಆದರೆ ಹೋಂಸ್ಟೇನಲ್ಲಿ ಅಡುಗೆಯವರು ಇದ್ದ ಕಾರಣ, ಅವನಿಗೂ ಒಂದು ಪಾತ್ರ ಹಾಕಿದೆವು.

*ಚಿತ್ರದಲ್ಲಿ ಸಾಹಸ ದೃಶ್ಯಗಳು, ಹೊಡೆದಾಟ ಹೆಚ್ಚಿದೆ?

ಚಿತ್ರದಲ್ಲಿ ರಕ್ತದಾನ, ಮಹಾದಾನ ಆಗಿದೆ. ನಮ್ಮ ಪ್ರೊಡಕ್ಷನ್‌ನಲ್ಲೂ ಹಾಗೂ ನಾನು ಇಲ್ಲಿಯವರೆಗೂ ನಟಿಸಿರುವ ಚಿತ್ರಗಳಲ್ಲಿ ಇಷ್ಟು ರಕ್ತ ಹರಿಸಿಲ್ಲ. ಕಥೆಯೇ ಇದನ್ನು ಬಯಸುತ್ತದೆ. ನಿಜ ಜೀವನದಲ್ಲಿ ಆ್ಯಕ್ಷನ್‌ ಹೊಸತಲ್ಲ, ಆದರೆ ರೀಲ್‌ನಲ್ಲಿ ಹೊಸತು. ಮೊದಲಾರ್ಧದಲ್ಲಿ ಕೆಲವು ಆ್ಯಕ್ಷನ್‌ ದೃಶ್ಯಗಳನ್ನು ನಾನೇ ನಿರ್ದೇಶಿಸಿದ್ದೆ. ಮುಖ್ಯವಾದ ದೃಶ್ಯಗಳನ್ನು ವಿಕ್ರಮ್‌ ಅವರು ಬಂದ ನಂತರ ಚಿತ್ರೀಕರಿಸಲಾಯಿತು. ಹೆಚ್ಚಿನ ದೃಶ್ಯಗಳಲ್ಲಿ ನಿಜವಾಗೇ ಒದ್ದರು. ಆದರೆ, ಆ ಮಳೆ, ಕಲ್ಲುಮುಳ್ಳಲ್ಲಿ ಎದ್ದು ಬಿದ್ದು ಚಿತ್ರೀಕರಣ ಮಾಡುವುದು ಖುಷಿಯಾಗಿತ್ತು. ಹಾಗೆ ನೋಡಿದರೆ, ರೌಡಿ ಪಾತ್ರದಲ್ಲಿದ್ದ ಪ್ರಮೋದ್‌ ಶೆಟ್ರು ಒಬ್ಬರೇ ಸುರಕ್ಷಿತವಾಗಿದ್ದರು.

*ಬತ್ತಳಿಕೆಯಲ್ಲಿ ಉಳಿದ ಬಾಣಗಳು?

ಬೆಲ್‌ಬಾಟಂ–2 ಬಿಗ್‌ಬಜೆಟ್‌ ಸಿನಿಮಾ. ಹಾಗೇ ಈಗಿನ ‘ಹೀರೋ’ ಕೂಡಾ ಪೂರ್ಣ ಕಮರ್ಷಿಯಲ್‌ ಚಿತ್ರ. ಹರಿಕಥೆ ಅಲ್ಲ ಗಿರಿಕಥೆ ಒಂದು ಹ್ಯೂಮರಸ್‌ ರೈಡ್‌. ಅದರಲ್ಲಿ ಕಲಾವಿದರ ಬಳಗವೇ ಇದೆ. ಆ ಪಾತ್ರಗಳೇ ಅದ್ಭುತ. ಗರುಡಗಮನ, ರುದ್ರಪ್ರಯಾಗ, ಕಿರಿಕ್‌ ಪಾರ್ಟಿ–2 ಹಲವು ಚಿತ್ರಗಳು ಸೆಟ್ಟೇರಬೇಕು. ಈ ವರ್ಷ ನಾಲ್ಕು ಸಿನಿಮಾ ರಿಲೀಸ್‌ ಮಾಡುತ್ತೇವೆ. ಕಳೆದ ಮಾರ್ಚ್‌ಗೆ ಮೂರು ಸಿನಿಮಾ ಶುರುವಾಗಬೇಕಿತ್ತು. ಲಾಫಿಂಗ್‌ ಬುದ್ಧ, ಹರಿಕಥೆ ಅಲ್ಲ ಗಿರಿಕಥೆ ಹಾಗೂ ರುದ್ರಪ್ರಯಾಗ್‌ ಪ್ರಾರಂಭವಾಗಬೇಕಿತ್ತು. ಬೆಲ್‌ಬಾಟಂ–2 ಇದೀಗ ಮುಗಿಸಬೇಕು. ಕಳೆದ ವರ್ಷ ಕಳೆದುಕೊಂಡಿದ್ದನ್ನು ಈ ವರ್ಷ ಡಬಲ್‌ ವಸೂಲ್‌ ಮಾಡಬೇಕು ಎನ್ನುವುದೇ ಗುರಿ.

*ನಿರ್ದೇಶನ ಅಥವಾ ನಟನೆ. ಯಾವುದು ಮುಂದುವರಿಸುತ್ತೀರಾ?

ನಾನು ನಟನಾಗಬೇಕು ಎಂದೇ ಚಂದನವನಕ್ಕೆ ಬಂದವನು. ಆದರೆ ನಿರ್ದೇಶನ ನನ್ನನ್ನು ಸೆಳೆಯಿತು. ಅದೇ ಕಿಕ್‌ ಕೊಡಲು ಶುರು ಮಾಡಿತು. ಹಲವು ಕಥೆಗಳು ಹುಟ್ಟಿಕೊಂಡಿತು. ನಟನೆ ಎನ್ನುವುದು ಖಂಡಿತವಾಗಿಯೂ ಸವಾಲು. ಬೆಲ್‌ಬಾಟಂನಲ್ಲಿ ಮೊದಲು ನಾಯಕನಾಗಿ ಮಾಡುವಾಗ, ಕಥೆಯ, ಪಾತ್ರದ ಆ ಆಳಕ್ಕೆ ಹೋಗಲು ಸಾಧ್ಯವೇ ಎನ್ನುವ ಸಂಶಯ ಹುಟ್ಟಿಕೊಂಡಿತ್ತು. ನಿರ್ದೇಶಕನಾಗಿ ಕಥೆಯನ್ನು ಹೇಳಬೇಕು ಎನ್ನುವ ತುಡಿತ ಹೆಚ್ಚಿದೆ. ಹೀಗಾಗಿ ನಿರ್ದೇಶನವೇ ನನ್ನ ಮೊದಲ ಆಯ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT