ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50ನೇ ದಿನದತ್ತ ರಿಷಬ್‌ ಶೆಟ್ಟಿ ‘ಕಾಂತಾರ’

Last Updated 14 ನವೆಂಬರ್ 2022, 10:19 IST
ಅಕ್ಷರ ಗಾತ್ರ

ದಿನ ಉರುಳಿದಂತೆ ಬಾಕ್ಸ್‌ ಆಫೀಸ್‌ನಲ್ಲಿ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಕಲೆಕ್ಷನ್‌ ಮುಗಿಲೇರುತ್ತಿದೆ. ಕಳೆದ ಸೆ.30ರಂದು ಈ ಸಿನಿಮಾ ಬಿಡುಗಡೆಯಾಗಿತ್ತು. ನ.18ರಂದು ಮುನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರವು 50 ದಿನ ಪೂರೈಸಲಿದೆ.

ಬಿಡುಗಡೆಯಾದ ದಿನದಿಂದ ಹಿಡಿದು ಸತತ 50 ದಿನ ಇಷ್ಟೊಂದು ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾವೊಂದು ಪ್ರದರ್ಶನ ಕಾಣುತ್ತಿರುವುದು ಇದೇ ಮೊದಲು ಎನ್ನುತ್ತಿದೆ ಗಾಂಧಿನಗರ. ಈ ಕುರಿತು ಟ್ವೀಟ್‌ ಮಾಡಿರುವ ಕೆಆರ್‌ಜಿ ಸ್ಟುಡಿಯೋಸ್‌ ನಿರ್ಮಾಪಕ ಕಾರ್ತಿಕ್‌ ಗೌಡ, ‘ಈ ವಾರದಲ್ಲಿ ಕಾಂತಾರ ಸಿನಿಮಾ 50 ದಿನ ಪೂರೈಸಲಿದೆ. ಜಿಲ್ಲಾ ಕೇಂದ್ರಗಳಲ್ಲಿ ಸಿನಿಮಾ ಇಂದಿಗೂ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ’ ಎಂದು ಉಲ್ಲೇಖಿಸಿದ್ದಾರೆ.

ಹಿಂದಿ ಬೆಲ್ಟ್‌ನಲ್ಲಿ ‘ಕಾಂತಾರ’ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ.ಅ.14ಕ್ಕೆ ಹಿಂದಿಯಲ್ಲಿ ಡಬ್‌ ಆದ ‘ಕಾಂತಾರ’ ಬಿಡುಗಡೆಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಸಿನಿಮಾ ಸುಮಾರು ₹75 ಕೋಟಿ ಬಾಚಿದೆ. ತೆಲುಗಿನಲ್ಲೂ ‘ಕಾಂತಾರ’ ಕಲೆಕ್ಷನ್‌ ₹50 ಕೋಟಿ ದಾಟಿದೆ. ರಾಜ್ಯದಲ್ಲಿ ‘ಕಾಂತಾರ’ ಸಿನಿಮಾದ 1 ಕೋಟಿಗೂ ಅಧಿಕ ಟಿಕೆಟ್‌ ಮಾರಾಟವಾಗಿದೆ ಎಂದು ಚಿತ್ರತಂಡವೇ ಅಧಿಕೃತವಾಗಿ ತಿಳಿಸಿದೆ. ಇದನ್ನು ಲೆಕ್ಕ ಹಾಕಿ ಇಲ್ಲಾದ ಕಲೆಕ್ಷನ್‌ ಅನ್ನು ನೀವೇ ಊಹಿಸಬಹುದು. ತಮಿಳುನಾಡು ಮತ್ತು ಕೇರಳದಲ್ಲೂ ಸಿನಿಮಾ ಸದ್ದು ಮಾಡುತ್ತಿದೆ. ಈ ರಾಜ್ಯಗಳಲ್ಲೂ ಸುಮಾರು ನೂರಕ್ಕೂ ಅಧಿಕ ಪರದೆಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.

ಚಿತ್ರಮಂದಿರಗಳಲ್ಲೇ ಸಿನಿಮಾ ಭರ್ಜರಿಯಾಗಿ ಓಡುತ್ತಿರುವ ಕಾರಣ ಒಟಿಟಿಯಲ್ಲಿ ಸಿನಿಮಾ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ. ಇಲ್ಲಿಯವರೆಗೂ ಚಿತ್ರತಂಡ ಅಧಿಕೃತವಾಗಿ ಒಟಿಟಿ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT